ಸೆಂಚೂರಿಯನ್, ಡಿ. 25: ಕ್ರಿಕೆಟ್ ಮಂಡಳಿಗೇ ಸೆಡ್ಡು ಹೊಡೆದ ಅಪರೂಪದ ಕ್ರಿಕೆಟಿಗ ವಿರಾಟ್ ಕೊಹ್ಲಿ (Virat Kohli). ಅವರು ಮಾಡಿದ್ದು ತಪ್ಪೋ ಅಲ್ಲವೋ, ನಿಜವೋ ಸುಳ್ಳೋ ಎಂಬುದು ಕಾಲವೇ ಹೇಳಬೇಕು. ಆದರೆ, ತನ್ನ ಮನಸಿನ ಮಾತುಗಳನ್ನ ಹೇಳುವ ಮೂಲಕ ವಿರಾಟ್ ಕೊಹ್ಲಿ ಭಾರತೀಯ ಕ್ರಿಕೆಟ್ನಲ್ಲಿ ಸಂಚಲನ ಮೂಡಿಸಿದ್ದಾರೆ. ವಿವಾದಕ್ಕೂ ಕಾರಣವಾಗಿದ್ಧಾರೆ. ಇದು ಸೌತ್ ಆಫ್ರಿಕಾ ಪ್ರವಾಸದಲ್ಲಿರುವ ಟೀಮ್ ಇಂಡಿಯಾ (Indian team on South Africa Tour) ಮೇಲೆ ಪರಿಣಾಮ ಬೀಳುವ ಸಾಧ್ಯತೆ ಇಲ್ಲ ಎನ್ನುವಂತಿಲ್ಲ. ಈ ಹೊತ್ತಿನಲ್ಲಿ ಪಕ್ಕಾ ಜೆಂಟಲ್ಮ್ಯಾನ್ ಕ್ರಿಕೆಟಿಗರಾಗಿದ್ದ ರಾಹುಲ್ ದ್ರಾವಿಡ್ (Rahul Dravid) ಒಬ್ಬ ಕೋಚ್ ಆಗಿ ವಿವಾದವನ್ನು ಹೇಗೆ ನಿರ್ವಹಿಸುತ್ತಾರೆ ಎಂಬ ಕುತೂಹಲ ಸಹಜ. ಈ ಕುತೂಹಲ ತಣಿಸಲೋ ಎಂಬಂತೆ ನಾಳೆಯ ಪಂದ್ಯಕ್ಕೆ ಮುನ್ನ ಟೀಮ್ನಿಂದ ನಡೆಯುವ ಪತ್ರಿಕಾಗೋಷ್ಠಿಯನ್ನ ನಾಯಕ ವಿರಾಟ್ ಕೊಹ್ಲಿ ಬದಲು ರಾಹುಲ್ ದ್ರಾವಿಡ್ ಅವರೇ ನಡೆಸಿದ್ದು ವಿಶೇಷ.
ನಿರೀಕ್ಷೆಯಂತೆ ಪತ್ರಕರ್ತರು ನಾಳೆಯ ಪಂದ್ಯದ ಬಗ್ಗೆ ಪ್ರಶ್ನೆಗಳ ಜೊತೆಗೆ ವಿರಾಟ್ ಕೊಹ್ಲಿ ಕ್ಯಾಪ್ಟನ್ಸಿ ವಿವಾದದ ಬಗ್ಗೆಯೂ ಪ್ರಶ್ನೆಗಳನ್ನ ಹರಿಬಿಟ್ಟರು. ಟಿ20 ಮತ್ತು ಏಕದಿನ ಕ್ರಿಕೆಟ್ ತಂಡಗಳಿಗೆ ವಿರಾಟ್ ಕೊಹ್ಲಿ ಬದಲು ರೋಹಿತ್ ಶರ್ಮಾ ಅವರಿಗೆ ಕ್ಯಾಪ್ಟನ್ಸಿ ನೀಡಲಾಗಿರುವುದರ ಬಗ್ಗೆ ಕೋಚ್ ರಾಹುಲ್ ದ್ರಾವಿಡ್ ನೀಡಿದ ಉತ್ತರ ಅವರ ಘನತೆಗೆ ತಕ್ಕುದಾಗಿಯೇ ಇದೆ.
“ಅದರ ನಿರ್ಧಾರ ಆಯ್ಕೆಗಾರರದ್ದಾಗಿದೆ. ನನ್ನೊಂದಿಗೆ ಏನಾದರೂ ಸಲಹೆ ಪಡೆಯಲಾಗಿತ್ತಾ, ಅಥವಾ ಇಲ್ಲವಾ ಈ ವಿವರದ ಬಗ್ಗೆ ನಾನು ಏನೂ ಹೇಳುವುದಿಲ್ಲ” ಎಂದು ದಿ ವಾಲ್ ದ್ರಾವಿಡ್ ನೇರವಾಗಿ ಹೇಳಿದ್ಧಾರೆ.
“ಆ ಬಗ್ಗೆ ಚರ್ಚಿಸಲು ಇದು ಸೂಕ್ತ ಸ್ಥಳವೂ ಅಲ್ಲ, ಸಮಯವೂ ಅಲ್ಲ. ನಾನು ಆಂತರಿಕವಾಗಿ ಏನು ಮಾತನಾಡಿರುತ್ತೇನೋ ಅದು ಮಾಧ್ಯಮಗಳಿಗೆ ತಿಳಿಯುವುದಿಲ್ಲ. ನಾನು ಕೂಡ ಯಾರಿಗೂ ಏನೂ ಹೇಳುವುದಿಲ್ಲ” ಎಂದು ರಾಹುಲ್ ದ್ರಾವಿಡ್ ಸ್ಪಷ್ಟಪಡಿಸಿದ್ದಾರೆ.
ಕೊಹ್ಲಿ ಬದಲು ದ್ರಾವಿಡ್ ಪತ್ರಿಕಾಗೋಷ್ಠಿ ನಡೆಸಲು ಕಾರಣ ಇದು:
ಕೆಲ ದಿನಗಳ ಹಿಂದೆ ವಿರಾಟ್ ಕೊಹ್ಲಿ ಪತ್ರಿಕಾಗೋಷ್ಠಿ ನಡೆಸಿ ವಿವಾದಕ್ಕೆ ಎಡೆಯಾಗುವಂತೆ ಹೇಳಿಕೆ ನೀಡಿದ್ದರು. ವಿರಾಟ್ ಕೊಹ್ಲಿ ಅವರು ಬೇಡ ಬೇಡವೆಂದರೂ ಟಿ20 ಕ್ಯಾಪ್ಟನ್ಸಿ ತ್ಯಜಿಸಿದರು. ಹೀಗಾಗಿ, ಏಕದಿನ ತಂಡದ ನಾಯಕತ್ವವನ್ನ ಹಿಂಪಡೆಯಲಾಯಿತು ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅದಾಗಲೇ ಹೇಳಿಕೆ ಕೊಟ್ಟಿದ್ದರು. ಅದಕ್ಕೆ ಉತ್ತರವಾಗಿ ಮಾತನಾಡಿದ ವಿರಾಟ್ ಕೊಹ್ಲಿ, ತಾನು ಟಿ20 ಕ್ಯಾಪ್ಟನ್ಸಿ ಬಿಡಲು ಹೋದಾಗ ಯಾರೂ ತಡೆಯಲಿಲ್ಲ. ಏಕದಿನ ತಂಡದ ನಾಯಕತ್ವವನ್ನೂ ಮುಂಚಿತವಾಗಿ ಹೇಳದೇ ಹಿಂಪಡೆದರು ಎಂದು ಗಂಗೂಲಿ ಹೇಳಿಕೆಗೆ ಕೊಹ್ಲಿ ಕೌಂಟರ್ ಕೊಟ್ಟರು.
ಇದನ್ನೂ ಓದಿ: IND vs PAK U19: ಭಾರತದ ವಿರುದ್ಧ ಪಾಕಿಸ್ತಾನಕ್ಕೆ ಕೊನೆಯ ಎಸೆತದಲ್ಲಿ ರೋಚಕ ಗೆಲುವು
ಇದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿಗೆ ಕೊಹ್ಲಿ ನೇರವಾಗಿ ಹೊಡೆದ ಸೆಡ್ಡು ಎಂಬ ಮಾತು ಕೇಳಿಬರುತ್ತಿದೆ. ಮಾಜಿ ಕ್ರಿಕೆಟಿಗರಿಂದ ಈ ವಿವಾದದಲ್ಲಿ ಮಿಶ್ರ ಅಭಿಪ್ರಾಯ ವ್ಯಕ್ತವಾಗಿದೆ.
ಇತ್ತ, ಟೀಮ್ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಅವರು ಈ ವಿವಾದದಿಂದ ದೂರವೇ ಉಳಿದಿದ್ದು, ಸೌತ್ ಆಫ್ರಿಕಾ ಸರಣಿ ಬಗ್ಗೆ ಮಾತ್ರವೇ ಗಮನ ಹರಿಸಿದ್ಧಾರೆ. ಒಬ್ಬ ಆಟಗಾರನಾಗಿ ಮತ್ತು ನಾಯಕನಾಗಿ ವಿರಾಟ್ ಕೊಹ್ಲಿ ನೀಡಿರುವ ಕೊಡುಗೆಯನ್ನ ರಾಹುಲ್ ದ್ರಾವಿಡ್ ಕೊಂಡಾಡಿದ್ಧಾರೆ.
ಸೌತ್ ಆಫ್ರಿಕಾ ಬೌಲಿಂಗ್ ಬಗ್ಗೆ;
ಸೌತ್ ಆಫ್ರಿಕಾದ ಬೆಸ್ಟ್ ಬೌಲರ್ ಎನಿಸಿರುವ ಆನ್ರಿಕ್ ನೋರ್ಟಿಯಾ ಅವರು ಗಾಯದ ಕಾರಣ ಸರಣಿಯಲ್ಲಿ ಅಲಭ್ಯರಿದ್ದಾರೆ. ಅವರಿಲ್ಲದ ಬೌಲಿಂಗ್ ಪಡೆ ಹಲ್ಲು ಕಿತ್ತ ಹಾವಿನಂತೆ ಎಂಬಂತಹ ಅಭಿಪ್ರಾಯವಿದೆ. ಆದರೆ, ಕೋಚ್ ರಾಹುಲ್ ದ್ರಾವಿಡ್ ಈ ಅಭಿಪ್ರಾಯವನ್ನು ಸ್ಪಷ್ಟವಾಗಿ ನಿರಾಕರಿಸುತ್ತಾರೆ. ಈಗಿರುವ ಸೌತ್ ಆಫ್ರಿಕಾ ಬೌಲಿಂಗ್ ಪಡೆಯನ್ನ ಯಾವುದೇ ಕಾರಣಕ್ಕೂ ಹಗುರವಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದು ದ್ರಾವಿಡ್ ಹೇಳಿದ್ಧಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ