Harbhajan Singh: ಇಂದಿನಿಂದ 3ನೇ ಟೆಸ್ಟ್: ಕೊಹ್ಲಿ, ಪೂಜಾರ, ರಹಾನೆ ಬಗ್ಗೆ ಹರ್ಭಜನ್ ಅನಿಸಿಕೆ ಇದು

India vs South Africa 3rd test match: ಕೇಪ್​ಟೌನ್​ನಲ್ಲಿ ನಡೆಯಲಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಹಿರಿಯ ಆಟಗಾರರಿಂದ ಬಿಗ್ ಸ್ಕೋರ್ ಬರುವ ನಿರೀಕ್ಷೆಯಲ್ಲಿ ಹರ್ಭಜನ್ ಸಿಂಗ್ ಇದ್ದಾರೆ.

ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿ

 • Share this:
  ಕೇಪ್​ಟೌನ್, ಜ. 11: ಇಂದಿನಿಂದ ಭಾರತ ಮತ್ತು ಸೌತ್ ಆಫ್ರಿಕಾ ಮಧ್ಯೆ 3ನೇ ಹಾಗೂ ಟೆಸ್ಟ್ ಸರಣಿಯ ಕೊನೆಯ ಪಂದ್ಯ ನಡೆಯಲಿದೆ. ಸರಣಿ ಒಂದು ಒಂದರಿಂದ ಸಮವಾಗಿದ್ದು ಈ ಪಂದ್ಯ ನಿರ್ಣಾಯಕವಾಗಿದೆ. ಸೌತ್ ಆಫ್ರಿಕಾ ನೆಲದಲ್ಲಿ ಒಮ್ಮೆಯೂ ಟೆಸ್ಟ್ ಸರಣಿ ಗೆಲ್ಲದ ಟೀಮ್ ಇಂಡಿಯಾಗೆ ಆ ಕೊರತೆ ನೀಗಿಸಿಕೊಳ್ಳಲು ಮತ್ತೊಂದು ಅವಕಾಶ ಸಿಕ್ಕಿದೆ. ಗಾಯದ ಕಾರಣ ಎರಡನೇ ಪಂದ್ಯದಲ್ಲಿ ಆಡದ ನಾಯಕ ವಿರಾಟ್ ಕೊಹ್ಲಿ ಈ ಪಂದ್ಯದಲ್ಲಿ ತಂಡವನ್ನ ಮುನ್ನಡೆಸಲಿದ್ದಾರೆ. ಕೊಹ್ಲಿ ಆಗಮನದಿಂದ ತಂಡಕ್ಕೆ ಮತ್ತೆ ಚೈತನ್ಯ ಬರುವ ನಿರೀಕ್ಷೆ ಇದೆ. ಇದೇ ವೇಳೆ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಸೆಂಚುರಿ ಹೊಡೆಯಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ.

  ಯೂಟ್ಯೂಬ್​ನಲ್ಲಿ ಅಪ್​ಲೋಡ್ ಮಾಡಿದ ವಿಡಿಯೋದಲ್ಲಿ ಟೀಮ್ ಇಂಡಿಯಾ ಬಗ್ಗೆ ಮಾತನಾಡಿರುವ ಹರ್ಭಜನ್ ಸಿಂಗ್, “ವಿರಾಟ್ ಕೊಹ್ಲಿ ಅವರ ಶತಕದ ಬರ ಈ ಪಂದ್ಯದಲ್ಲಿ ನಿಲ್ಲಬಹುದು. ಅವರಿಂದ ಶತಕ ಬಂದು ಬಹಳ ಕಾಲವಾಗಿ ಹೋಯಿತು” ಎಂದು ಹೇಳಿದ್ದಾರೆ.

  ವಿರಾಟ್ ಕೊಹ್ಲಿ ಸೀಮಿತ ಓವರ್​ಗಳ ಕ್ರಿಕೆಟ್​ನಲ್ಲಿ ಇತ್ತೀಚೆಗೆ ಒಳ್ಳೆಯ ಪ್ರದರ್ಶನ ನೀಡಿದ್ದಾರಾದರೂ ಟೆಸ್ಟ್ ಕ್ರಿಕೆಟ್​ನಲ್ಲಿ ಅವರಿಂದ ದೊಡ್ಡ ಸ್ಕೋರ್ ಬಂದಿಲ್ಲ. ಎರಡು ವರ್ಷಗಳ ಹಿಂದೆ, 2019ರ ನವೆಂಬರ್​ನಲ್ಲಿ ಬಾಂಗ್ಲಾದೇಶ ವಿರುದ್ಧ ಕೋಲ್ಕತಾದಲ್ಲಿ ಟೆಸ್ಟ್ ಶತಕ ಭಾರಿಸಿದ್ದೇ ಕೊನೆ ಆಗಿದೆ. ಈ ಹಿನ್ನೆಲೆಯಲ್ಲಿ ವಿರಾಟ್ ಕೊಹ್ಲಿ ಬಗ್ಗೆ ಕೆಲವರು ಟೀಕೆಗಳ ಸುರಿಮಳೆ ಹರಿಸಿದ್ದಾರೆ. ಆದರೆ ಕೊಹ್ಲಿ ಇದ್ಯಾವುದಕ್ಕೂ ತಲೆಕೆಡಿಸಿಕೊಂಡಂತಿಲ್ಲ.

  ಇದನ್ನೂ ಓದಿ: ODI ಕ್ರಿಕೆಟ್‌ ಶುರುವಾಗಿ 51 ವರ್ಷ ಆಗಿದೆ, ಮೊದಲ ಪಂದ್ಯ ಹೇಗಿತ್ತು ನೋಡಿ

  ತನ್ನ ವೃತ್ತಿಜೀವನದಲ್ಲಿ ಜನರು ನನ್ನ ಫಾರ್ಮ್ ಬಗ್ಗೆ ಟೀಕೆ ಮಾಡಿರುವುದು ಇದೇ ಮೊದಲಲ್ಲ. ಹೊರಗಿನ ಜನರಂತೆ ನನ್ನನ್ನ ನಾನು ನೋಡುವುದಿಲ್ಲ. ತಂಡಕ್ಕಾಗಿ ನನ್ನನ್ನು ಸಂಪೂರ್ಣವಾಗಿ ತೊಡಗಿಸಿಕೊಳ್ಳಲು ಖುಷಿ ಆಗುತ್ತದೆ ಎಂದು ವಿರಾಟ್ ಕೊಹ್ಲಿ ನಿನ್ನೆ ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟಪಡಿಸಿದ್ದಾರೆ.

  ರಹಾನೆ, ಪೂಜಾರ ಬಗ್ಗೆ ಹರ್ಭಜನ್ ವಿಶ್ವಾಸ:

  ಅನುಭವಿ ಆಟಗಾರರಾದ ಅಜಿಂಕ್ಯ ರಹಾನೆ ಮತ್ತು ಚೇತೇಶ್ವರ್ ಪೂಜಾರ ಇಬ್ಬರೂ ಕೂಡ ಎರಡನೇ ಟೆಸ್ಟ್ ಪಂದ್ಯದಲ್ಲಿ ತಂಡಕ್ಕೆ ಉಪಯುಕ್ತ ಕೊಡುಗೆ ನೀಡಿದ್ದರು. ನಿರುಪಯುಕ್ತ ಆಟಗಾರರು ಎಂದು ಬಣ್ಣಿಸಿದ್ದ ಟೀಕಾಕಾರರ ಬಾಯಿಯನ್ನ ತಾತ್ಕಾಲಿಕವಾಗಿ ಬಂದ್ ಮಾಡಿದ್ದಾರೆ. ಆದರೆ, ಅಜಿಂಕ್ಯ ರಹಾನೆ ಮತ್ತು ಚೇತೇಶ್ವರ್ ಪೂಜಾರ ಇಬ್ಬರೂ ಬಿಗ್ ಇನ್ನಿಂಗ್ಸ್ ಆಡಬಹುದು ಎಂದು ಹರ್ಭಜನ್ ಸಿಂಗ್ ನಿರೀಕ್ಷಿಸಿದ್ದಾರೆ.

  “ವಿರಾಟ್ ಕೊಹ್ಲಿ ಜೊತೆಗೆ ಚೇತೇಶ್ವರ್ ಪೂಜಾರ, ಅಜಿಂಕ್ಯ ರಹಾನೆ ಹಾಗೂ ಇತರ ಹಿರಿಯ ಆಟಗಾರರು ತಮ್ಮ ಶಕ್ತಿಯನ್ನ ಮತ್ತೊಮ್ಮೆ ತೋರ್ಪಡಿಸಬಹುದು. ಪೂಜಾರ ಮತ್ತು ರಜಾನೆ ಅರ್ಧಶತಕಗಳನ್ನೇನೋ ಗಳಿಸಿದ್ದಾರೆ. ಅವರು ಅದನ್ನ ಶತಕಗಳಾಗಿ ಪರಿವರ್ತಿಸುತ್ತಾರೆಂದು ನಿರೀಕ್ಷಿಸಿದ್ದೇವೆ” ಎಂದು ಹರ್ಭಜನ್ ಸಿಂಗ್ ಅಭಿಪ್ರಾಪಟ್ಟಿದ್ದಾರೆ.

  ಇದನ್ನೂ ಓದಿ: Neeraj Chopra: ಈ ರೇಂಜಿಗೆ ವರ್ಕೌಟ್ ಮಾಡೋದ್ರಿಂದಲೇ ನೀರಜ್ ಚೋಪ್ರಾ 'ಚಿನ್ನದ ಹುಡುಗ' ಆಗಿದ್ದು!

  “ಅವರಿಬ್ಬರೂ ಶತಕಗಳನ್ನ ಗಳಿಸದೇ ಹೋದರೂ ಅವರ ಇನ್ನಿಂಗ್ಸ್ ಬಹಳ ಮುಖ್ಯವಾಗಿತ್ತು. ಹೀಗಾಗಿ, ಅವರು ತಂಡದಿಂದ ಕೈಬಿಡುವ ಬಗ್ಗೆ ಚಿಂತೆ ಪಡಬೇಕಿಲ್ಲ. ಹಿರಿಯ ಆಟಗಾರರು ಒಳ್ಳೆಯ ಪ್ರದರ್ಶನ ನೀಡುವುದನ್ನ ಕಂಡರೆ ಖುಷಿ ಆಗುತ್ತದೆ” ಎಂದು ಮಾಜಿ ಸ್ಪಿನ್ನರ್ ಸಂತಸ ವ್ಯಕ್ತಪಡಿಸಿದ್ದಾರೆ.

  ಕೇಪ್​ಟೌನ್ ಪಿಚ್ ಹೇಗೆ?

  ಕೇಪ್​ಟೌನ್​ನ ನ್ಯೂಲೆಂಡ್ಸ್ ಪಿಚ್​ನಲ್ಲಿ ಭಾರತ ಒಮ್ಮೆಯೂ ಟೆಸ್ಟ್ ಪಂದ್ಯ ಗೆದ್ದಿಲ್ಲ. ಇಲ್ಲಿ ಆಡಿರುವ ಐದು ಪಂದ್ಯಗಳಲ್ಲಿ ಎರಡರಲ್ಲಿ ಸೋತಿರುವ ಟೀಮ್ ಇಂಡಿಯಾ ಉಳಿದ ಮೂರನ್ನು ಡ್ರಾ ಮಾಡಿಕೊಳ್ಳಲಷ್ಟೇ ಸಫಲವಾಗಿದೆ.

  ಕಳೆದ ಎರಡು ವರ್ಷಗಳಿಂದ ಇಲ್ಲಿ ಟೆಸ್ಟ್ ಪಂದ್ಯ ನಡೆದಿಲ್ಲ. 2020, ಜನವರಿಯಲ್ಲಿ ಇಲ್ಲಿ ಟೆಸ್ಟ್ ಪಂದ್ಯ ನಡೆದದ್ದೇ ಕೊನೆ. ಆದರೆ, ಅಲ್ಲಿಂದ ಇಲ್ಲಿಯವರೆಗೆ ಇಲ್ಲಿ ಸೌತ್ ಆಫ್ರಿಕಾದ ಪ್ರಥಮ ದರ್ಜೆ ಕ್ರಿಕೆಟ್ ಟೂರ್ನಿಗಳಲ್ಲಿ ಎಂಟು ಪಂದ್ಯಗಳು ಜರುಗಿವೆ. ಅವುಗಳ ಆಧಾರದ ಮೇಲೆ ನೋಡಿದರೆ ಈ ಪಿಚ್ ಬ್ಯಾಟುಗಾರರಿಗೆ ಸಹಕಾರಿ ಆದಂತಿದೆ. ಈ ಎಂಟು ಪಂದ್ಯಗಳಲ್ಲಿ ಮೊದಲ ಇನ್ನಿಂಗ್ಸ್ ಸರಾಸರಿ 361 ಇದೆ ಎಂದು ಕ್ರಿಕ್​ಇನ್ಫೋ ಮಾಹಿತಿ ನೀಡಿದೆ.

  ಇದನ್ನೂ ಓದಿ: Harshal patel: ಮತ್ತೆ IPL ನಲ್ಲಿ ಬೆಂಗಳೂರು ಪರ ಆಡಬೇಕು ಎಂದ ಸ್ಟಾರ್ ಬೌಲರ್

  ಭಾರತ ಮತ್ತು ಸೌತ್ ಆಫ್ರಿಕಾ ನಡುವಿನ ಈ ಮೂರನೇ ಪಂದ್ಯಕ್ಕೆ ಪಿಚ್ ತಯಾರಿಸಿರುವ ಬ್ರಾಮ್ ಮೋಂಗ್ ಅವರಿಗೆ ಇದು ಮೊದಲ ಅಂತರರಾಷ್ಟ್ರೀಯ ಅನುಭವ. ಮೂಲಗಳ ಪ್ರಕಾರ, ಪಿಚ್ ಬ್ಯಾಟುಗಾರರಿಗೆ ಹೆಚ್ಚು ಅನುಕೂಲಕರವಾಗುವ ನಿರೀಕ್ಷೆ ಇದೆ.

  ಹನುಮ ವಿಹಾರಿ, ಸಿರಾಜ್ ಇರಲ್ಲ:

  ಇನ್ನು ಇವತ್ತಿನ ಪಂದ್ಯದಲ್ಲಿ ಆಡುವ ತಂಡಗಳ ವಿಷಯಕ್ಕೆ ಬಂದರೆ ಎರಡನೇ ಟೆಸ್ಟ್​​ನಲ್ಲಿ ಆಡಿದ್ದ ತಂಡವನ್ನೇ ಸೌತ್ ಆಫ್ರಿಕಾ ಬಹುತೇಕ ಉಳಿಸಿಕೊಳ್ಳಲಿದೆ. ಭಾರತ ತಂಡದಲ್ಲಿ ಎರಡು ಬದಲಾವಣೆ ಆಗಬಹುದು. ಎರಡನೇ ಪಂದ್ಯದಲ್ಲಿ ಕೊಹ್ಲಿ ಸ್ಥಾನಕ್ಕೆ ಬಂದು ಉತ್ತಮ ಪ್ರದರ್ಶನ ನೀಡಿದ್ದ ಗಗನ ಹನುಮ ವಿಹಾರಿ ಅವರು ಮೂರನೇ ಪಂದ್ಯಕ್ಕೆ ಕೊಹ್ಲಿಗೆ ಜಾಗ ಬಿಟ್ಟುಕೊಡಬೇಕಾಗಬಹುದು.

  ಹಾಗೆಯೇ, ಆಂಧ್ರದ ಮತ್ತೊಮ್ಮೆ ಆಟಗಾರ ಮೊಹಮ್ಮದ್ ಸಿರಾಜ್ ಅವರು ಗಾಯದ ಕಾರಣ ಆಡುತ್ತಿಲ್ಲ. ಅವರ ಬದಲು ಇಶಾಂತ್ ಶರ್ಮಾ ಅಥವಾ ಉಮೇಶ್ ಯಾದವ್ ಅವರಲ್ಲೊಬ್ಬರು ಆಡುವ ನಿರೀಕ್ಷೆ ಇದೆ.
  Published by:Vijayasarthy SN
  First published: