T20 World Cup- ಭಾರತ ಮುಂದಿನ ಪಂದ್ಯಗಳನ್ನ ಎಷ್ಟು ಅಂತರದಿಂದ ಗೆಲ್ಲಬೇಕು? ಇಲ್ಲಿದೆ ಲೆಕ್ಕಾಚಾರ

India’s victory margin in next matches: ಭಾರತ ತನ್ನ ಮುಂದಿನ ಎರಡೂ ಪಂದ್ಯ ಗೆಲ್ಲಬೇಕು. ನ್ಯೂಜಿಲೆಂಡ್ ಕನಿಷ್ಠ ಒಂದರಲ್ಲಾದರೂ ಸೋಲಬೇಕು. ಇದು ಭಾರತದ ಸೆಮಿಫೈನಲ್ ಸಾಧ್ಯತೆಯನ್ನ ಸರಳಗೊಳಿಸಿದಾಗ ಕಾಣುವ ಅಂಶ. ಅಂತಿಮವಾಗಿ ನೆಟ್ ರನ್ ರೇಟ್ ಗಣನೆಗೆ ಬಂದೇ ಬರುತ್ತದೆ.

ಭಾರತ ಕ್ರಿಕೆಟ್ ತಂಡ

ಭಾರತ ಕ್ರಿಕೆಟ್ ತಂಡ

  • Share this:
    ದುಬೈ:ಟಿ20 ವಿಶ್ವಕಪ್​ನಲ್ಲಿ (T20 World Cup 2021) ಭಾರತ ಕೊನೆಗೂ ಗೆಲುವಿನ ಹಳಿಗೆ ಬಂದಿದೆ. ನಿನ್ನೆ ಅಫ್ಘಾನಿಸ್ತಾನ ವಿರುದ್ಧ ಭಾರತ 66 ರನ್​ಗಳ ಅಂತರದಿಂದ ಗೆಲುವು (India's big win over Afghanistan) ಸಾಧಿಸಿದ ಬಳಿಕ ಕ್ರಿಕೆಟ್ ಪ್ರೇಮಿಗಳ ಉತ್ಸಾಹ ಮತ್ತೆ ಗರಿಗೆದರಿದೆ. ಸೆಮಿಫೈನಲ್ ಅವಕಾಶ ತೀರಾ ಜಟಿಲವಾಗಿದ್ದರೂ ಲೆಕ್ಕಾಚಾರದ (Semifinal calculation) ಗುಂಗಿನಲ್ಲಿದ್ದಾರೆ. ಭಾರತಕ್ಕೆ ಇನ್ನೂ ಎರಡು ಪಂದ್ಯಗಳು ಬಾಕಿ ಇವೆ. ಸ್ಕಾಟ್ಲೆಂಡ್ ಮತ್ತು ನಮೀಬಿಯಾ ವಿರುದ್ಧ ಭಾರತ ಆಡಬೇಕಿದೆ. ಅಫ್ಘಾನಿಸ್ತಾನಕ್ಕೆ ಹೋಲಿಸಿದರೆ ಇವೆರಡು ತಂಡಗಳು ತುಸು ಸುಲಭದ ಎದುರಾಳಿಗಳು.

    ಭಾರತದ ನೆಟ್ ರನ್ ರೇಟ್ ಈಗ ಉತ್ತಮ: ಅಫ್ಘಾನಿಸ್ತಾನ ವಿರುದ್ಧ ದೊಡ್ಡ ಅಂತರದ ಗೆಲುವು ಸಿಕ್ಕಿದ್ದು ಭಾರತದ ಸೆಮಿಫೈನಲ್ ಸಾಧ್ಯತೆಯನ್ನ ಹಿಗ್ಗಿಸಿದೆ. ಮೈನಸ್ 1.609 ಇದ್ದ ನೆಟ್ ರನ್ ರೇಟ್ +0.073ಕ್ಕೆ ಹೆಚ್ಚಳವಾಗಿದೆ. ಅಫ್ಘಾನಿಸ್ತಾನದ ಎನ್​ಆರ್​ಆರ್ +3.097ರಿಂದ +1.481ಕ್ಕೆ ಇಳಿದಿದೆ. ಇದೇ ವೇಳೆ ನ್ಯೂಜಿಲೆಂಡ್​ನ ರನ್ ರೇಟ್ +0.816ರಲ್ಲಿದೆ.

    ಭಾರತ ಮತ್ತು ನ್ಯೂಜಿಲೆಂಡ್ ತಂಡಗಳಿಗೆ ಇನ್ನೂ ಎರಡು ಪಂದ್ಯಗಳು ಇರುವುದರಿಂದ ಏನು ಬೇಕಾದರೂ ಆಗಬಹುದು.

    ಭಾರತದ ಸಾಧ್ಯಾಸಾಧ್ಯತೆ ಏನು?

    ಎರಡೂ ಪಂದ್ಯ ಗೆಲ್ಲಲೇಬೇಕು: ಎಲ್ಲಕ್ಕಿಂತ ಮೊದಲು ಬಹಳ ಮೂಲಭೂತವಾದ ಅಂಶ ಎಂದರೆ ಭಾರತ ತನ್ನ ಮುಂದಿನ ಎರಡೂ ಪಂದ್ಯಗಳನ್ನ ಗೆಲ್ಲಲೇಬೇಕು. ಒಂದು ಪಂದ್ಯ ಸೋತರೂ ಸೆಮಿಫೈನಲ್ ಬಾಗಿಲು ಮುಚ್ಚಿದಂತೆಯೇ. ಸ್ಕಾಟ್ಲೆಂಡ್ ಮತ್ತು ನ್ಯೂಜಿಲೆಂಡ್ ಮೇಲ್ನೋಟಕ್ಕೆ ಸುಲಭ ಎದುರಾಳಿಗಳಂತೆ ಕಂಡರೂ ಬಹಳಷ್ಟು ಉತ್ತಮ ಆಟಗಾರರಿರುವ ತಂಡಗಳಾಗಿವೆ. ನ್ಯೂಜಿಲೆಂಡ್ ತಂಡಕ್ಕೆ ಸ್ಕಾಟ್ಲೆಂಡ್ ಕಳೆದ ಪಂದ್ಯದಲ್ಲಿ ತೀವ್ರ ಪೈಪೋಟಿ ಕೊಟ್ಟಿದ್ದು ನೆನಪಿರಲಿ.

    ನ್ಯೂಜಿಲೆಂಡ್ ಒಂದರಲ್ಲಾದರೂ ಸೋಲಬೇಕು:

    * ನ್ಯೂಜಿಲೆಂಡ್ ತಂಡ ತನ್ನ ಮುಂದಿನ ಎರಡೂ ಪಂದ್ಯಗಳನ್ನ ಗೆದ್ದರೆ ಸೆಮಿಫೈನಲ್ ಗಟ್ಟಿ. ಅದು ಕನಿಷ್ಠ ಒಂದು ಪಂದ್ಯವಾದರೂ ಸೋತರೆ ಭಾರತದ ಸೆಮಿಫೈನಲ್ ಅವಕಾಶ ಜೀವಂತವಾಗಿರುತ್ತದೆ.

    * ನ್ಯೂಜಿಲೆಂಡ್ ತಂಡ ತನ್ನ ಮುಂದಿನ ಎರಡೂ ಪಂದ್ಯಗಳನ್ನ ಸೋತರೆ ಆಗ ಸೆಮಿಫೈನಲ್ ಸ್ಥಾನಕ್ಕೆ ಅಫ್ಘಾನಿಸ್ತಾನ್ ಮತ್ತು ಭಾರತದ ಮಧ್ಯೆ ನೆಟ್ ರನ್ ರೇಟ್ ಲೆಕ್ಕಾಚಾರ ಬರುತ್ತದೆ.

    ಇದನ್ನೂ ಓದಿ: T20 World Cup 2021 Schedule | ಟಿ20 ವಿಶ್ವಕಪ್ ವೇಳಾಪಟ್ಟಿ; ಭಾರತದ ಪಂದ್ಯಗಳು ಇತ್ಯಾದಿ ಎಲ್ಲಾ ಮಾಹಿತಿ

    * ಒಂದು ವೇಳೆ ನ್ಯೂಜಿಲೆಂಡ್ ತಂಡ ನಮೀಬಿಯಾ ವಿರುದ್ಧ ಸೋತು ಅಫ್ಘಾನಿಸ್ತಾನ್ ವಿರುದ್ಧ ಗೆದ್ದರೆ ಭಾರತ ಮತ್ತು ನ್ಯೂಜಿಲೆಂಡ್ ಮಧ್ಯೆ ರನ್ ರೇಟ್ ಲೆಕ್ಕಾಚಾರ ಇರುತ್ತದೆ.

    * ಇನ್ನೊಂದು ವೇಳೆ, ನ್ಯೂಜಿಲೆಂಡ್ ತಂಡ ನಮೀಬಿಯಾ ವಿರುದ್ಧ ಗೆದ್ದು ಅಫ್ಘಾನಿಸ್ತಾನ್ ವಿರುದ್ಧ ಸೋತರೆ ಆಗ ಭಾರತ, ಅಫ್ಘಾನಿಸ್ತಾನ್ ಮತ್ತು ನ್ಯೂಜಿಲೆಂಡ್ ನಡುವೆ ನೆಟ್ ರನ್ ರೇಟ್ ಲೆಕ್ಕಾಚಾರ ನಡೆಯುತ್ತದೆ.

    ಭಾರತ ತನ್ನ ಮುಂದಿನ ಪಂದ್ಯಗಳನ್ನ ಗೆಲ್ಲುವ ಅಂತರ ಎಷ್ಟಿರಬೇಕು?

    * ಸ್ಕಾಟ್ಲೆಂಡ್ ಮತ್ತು ನಮೀಬಿಯಾ ವಿರುದ್ಧ ಭಾರತ ಮೊದಲು ಬ್ಯಾಟಿಂಗ್ ಮಾಡಿದಲ್ಲಿ ಗೆಲುವಿನ ಅಂತರ ಕನಿಷ್ಠ 60 ರನ್​ಗಳಾದರೂ ಇರಬೇಕು. ಒಂದು ವೇಳೆ ಚೇಸಿಂಗ್ ಮಾಡಿದಲ್ಲಿ 13 ಓವರ್​ನೊಳಗೆ ಗೇಮ್ ಫಿನಿಶ್ ಮಾಡಬೇಕು.

    * ಅಷ್ಟೇ ಅಲ್ಲ, ನ್ಯೂಜಿಲೆಂಡ್ ಮತ್ತು ಅಫ್ಘಾನಿಸ್ತಾನ್ ತಂಡಗಳು ತಮ್ಮ ಮುಂದಿನ ಪಂದ್ಯಗಳನ್ನ ದೊಡ್ಡ ಅಂತರದಿಂದ ಗೆಲ್ಲಬಾರದು. ಅಕಸ್ಮಾತ್ ಅಫ್ಘಾನಿಸ್ತಾನ್ ನ್ಯೂಜಿಲೆಂಡ್ ವಿರುದ್ಧ ಗೆದ್ದರೆ ಗೆಲುವಿನ ಅಂತರ 9 ರನ್​ಗೂ ಕಡಿಮೆ ಇರಬೇಕು.

    ನಾಳೆ ಮೊದಲ ಪಂದ್ಯದಲ್ಲಿ ನಮೀಬಿಯಾ ವಿರುದ್ಧ ನ್ಯೂಜಿಲೆಂಡ್ ಆಡಲಿದೆ. ನ್ಯೂಜಿಲೆಂಡ್ ಸೋತರೆ ಭಾರತ ತುಸು ನಿರಾಳವಾಗಿರಬಹುದು. ಒಂದು ವೇಳೆ ಗೆದ್ದರೆ ಅದು ಕಡಿಮೆ ಅಂತರದ್ದಾಗಿದ್ದರೂ ಭಾರತ ನಿಟ್ಟುಸಿರು ಬಿಡಬಹುದು.

    ಲೀಗ್ ಹಂತದ ಕೊನೆಯ ಪಂದ್ಯ ಭಾರತ ಮತ್ತು ನಮೀಬಿಯಾದ್ದಾಗಿರುತ್ತದೆ. ಭಾರತಕ್ಕೆ ರನ್ ರೇಟ್ ಲೆಕ್ಕಾಚಾರ ಆ ವೇಳೆಗೆ ಬಹಳ ಸ್ಪಷ್ಟವಾಗಿರುತ್ತದೆ. ಸೆಮಿಫೈನಲ್ ಸಾಧ್ಯತೆ ಇನ್ನೂ ಇದ್ದರೆ ಭಾರತ ಸರಿಯಾದ ಲೆಕ್ಕಾಚಾರದಲ್ಲಿ ಆಟ ಆಡುವ ಅವಕಾಶವಂತೂ ಒದಗಿಬರುತ್ತದೆ.
    Published by:Vijayasarthy SN
    First published: