ದುಬೈ: ನಿನ್ನೆ
ಐಪಿಎಲ್ 2022ಗೆ ಎರಡು ಹೊಸ ಫ್ರಾಂಚೈಸಿಗಳಿಗೆ ಬಿಡ್ ಪ್ರಕ್ರಿಯೆಯನ್ನ ಬಿಸಿಸಿಐ ಪೂರ್ಣಗೊಳಿಸಿದೆ. ಅಹ್ಮದಾಬಾದ್ ಮತ್ತು ಲಕ್ನೋ ಫ್ರಾಂಚೈಸಿಗಳಿಗೆ ಅವಕಾಶ ಕೊಡಲಾಗಿದೆ. ಹಿಂದೆ ಪುಣೆ ಐಪಿಎಲ್ ತಂಡದ (Pune Raising Giants) ಮಾಲೀಕರಾಗಿದ್ದ ಸಂಜೀವ್ ಗೋಯೆಂಕಾ ಅವರ ಆರ್ಪಿಎಸ್ಜಿ ವೆಂಚರ್ಸ್ (RPSG) ಸಂಸ್ಥೆ 7,090 ಕೋಟಿಗೆ ಲಕ್ನೋ ಫ್ರಾಂಚೈಸಿಯನ್ನ ಖರೀದಿಸಿತು.
ಸಿವಿಸಿ ಕ್ಯಾಪಿಟಲ್ ಪಾರ್ಟ್ನರ್ಸ್ ಸಂಸ್ಥೆ (CVC Capitals Partners) 5,625 ರೂಗೆ ಬಿಡ್ ಮಾಡಿ ಅಹ್ಮದಾಬಾದ್ ಫ್ರಾಂಚೈಸಿಯನ್ನ ಪಡೆದುಕೊಂಡಿತು.
ಅಹ್ಮದಾಬಾದ್ ಫ್ರಾಂಚೈಸಿ ಪಡೆಯಲು ಗುಜರಾತ್ ಮೂಲದವರೇ ಆದ
ಗೌತಮ್ ಅದಾನಿ ಒಡೆತನದ ಅದಾನಿ ಗ್ರೂಪ್ (Adani Group) ಸಂಸ್ಥೆ ಬಹಳ ಪ್ರಯತ್ನ ಮಾಡಿತ್ತು. ಅದಾನಿಯ ರಾಜಕೀಯ ಪ್ರಭಾವದಿಂದ ಅಹ್ಮದಾಬಾದ್ ಫ್ರಾಂಚೈಸಿ ಒಲಿಯಬಹುದು ಎಂಬ ನಿರೀಕ್ಷೆಯೂ ಇತ್ತು. ಮ್ಯಾಂಚೆಸ್ಟರ್ ಯುನೈಟೆಡ್ ಎಂಬ ವಿಶ್ವಖ್ಯಾತ ಫುಟ್ಬಾಲ್ ಕ್ಲಬ್ನ ಮಾಲೀಕರಾದ ಗ್ಲೇಸರ್ಸ್ ಫ್ಯಾಮಿಲಿ (Glazers Family) ಕೂಡ ಬಿಡ್ ಸಲ್ಲಿಸಿತ್ತು. ಆದರೆ, ಅಂತಿಮವಾಗಿ ಸಿವಿಸಿ ಕ್ಯಾಪಿಟಲ್ಸ್ ಕಂಪನಿಗೆ ಅಹ್ಮದಾಬಾದ್ ಬಿಡ್ ಒಲಿದಿದೆ.
ಸಿವಿಸಿ ಕ್ಯಾಪಿಟಲ್ಸ್ ಒಂದು ಹೂಡಿಕೆ ಸಂಸ್ಥೆ. ವಿವಿಧ ಕಂಪನಿ, ಯೋಜನೆಗಳಲ್ಲಿ ಹಣ ಹೂಡಿಕೆ ಮಾಡುತ್ತದೆ. ಇದು ನೇರವಾಗಿ ಯಾವ ಉತ್ಪಾದನೆ ಮಾಡುವುದಿಲ್ಲ. ಬಂಡವಾಳ ಹಾಕಿ ಲಾಭ ಹೆಕ್ಕಿ ತೆಗೆಯುವ ಸಂಸ್ಥೆ.
ಸಿವಿಸಿ ಕ್ಯಾಪಿಟಲ್ಸ್ ಕಂಪನಿಯ ವಿವರ:
ಸ್ಥಾಪನೆ: 1981ರಲ್ಲಿ ಸಿಟಿಕಾರ್ಪ್ ಸಂಸ್ಥೆಯ ಅಂಗವಾಗಿ ಸ್ಥಾಪನೆಯಾದ ಸಿವಿಸಿ ಕ್ಯಾಪಟಲ್ ಪಾರ್ಟ್ನರ್ಸ್ ಸಂಸ್ಥೆ ವಿಶ್ವದಲ್ಲೇ ಪ್ರಮುಖವಾದ ಬಂಡವಾಳ ಹೂಡಿಕೆ ಮಾಡುವ ಕಂಪನಿಯಾಗಿ ಬೆಳೆದಿದೆ.
ವಿವಿಧೆಡೆ ಹೂಡಿಕೆ: ವಿಶ್ವಾದ್ಯಂತ 73 ಕಂಪನಿಗಳಲ್ಲಿ ಸಿವಿಸಿ ಕ್ಯಾಪಿಟಲ್ಸ್ ಹೂಡಿಕೆ ಮಾಡಿದೆ. 5 ಲಕ್ಷಕ್ಕೂ ಹೆಚ್ಚು ಯೋಜನೆಗಳಲ್ಲಿ ಈ ಕಂಪನಿ ಹಣ ತೊಡಗಿಸಿಕೊಂಡಿದೆ.
ಮುಖ್ಯ ಕಚೇರಿ: ಲಂಡನ್ನಲ್ಲಿ ಇದರ ಮುಖ್ಯ ಕಚೇರಿ (Main Office) ಇದೆ. ಲಕ್ಸಂಬರ್ಗ್ ದೇಶದಲ್ಲಿ ಇದರ ಹೆಡ್ ಕ್ವಾರ್ಟರ್ಸ್ (Headquarters) ಇದೆ.
ಸಿವಿಸಿ ಕ್ಯಾಪಿಟಲ್ಸ್ ಆಸ್ತಿ ವಿವರ:
ಸಿವಿಸಿ ಕ್ಯಾಪಿಟಲ್ ಸಂಸ್ಥೆ ಒಟ್ಟು ಆಸ್ತಿ ಮೌಲ್ಯ 125 ಬಿಲಿಯನ್ ಡಾಲರ್ ಎಂಬ ಅಂದಾಜು ಇದೆ. ಅಂದರೆ ಭಾರತೀಯ ಕರೆನ್ಸಿ ಲೆಕ್ಕದಲ್ಲಿ 94 ಲಕ್ಷ ಕೋಟಿ ರೂಪಾಯಿ. ಇಷ್ಟು ಮೌಲ್ಯದ ಹಣ ಮತ್ತು ಆಸ್ತಿಯನ್ನು ಸಿವಿಸಿ ಕ್ಯಾಪಿಟಲ್ಸ್ ಹೊಂದಿದೆ ಅಥವಾ ನಿರ್ವಹಣೆ ಮಾಡುತ್ತದೆ.
ಜಿಡಿಪಿ ಲೆಕ್ಕದಲ್ಲಿ: 125 ಬಿಲಿಯನ್ ಡಾಲರ್ ಎಂದರೆ ಸಾಮಾನ್ಯ ಮೊತ್ತವಲ್ಲ. ವಿಶ್ವದಲ್ಲೇ ಅತಿ ಹೆಚ್ಚು ಜಿಡಿಪಿ ಹೊಂದಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಸಿವಿಸಿ ಕ್ಯಾಪಿಟಲ್ಸ್ ಅನ್ನು ಸೇರಿಸುವುದಾದರೆ 60ನೇ ಸ್ಥಾನ ಪಡೆಯುತ್ತದೆ. ಇದರ ಪ್ರಧಾನ ಕಚೇರಿ ಇರುವ ಲಕ್ಸಂಬರ್ಗ್ ದೇಶದ ಜಿಡಿಪಿಗಿಂತಲೂ ಒಂದೂವರೆ ಪಟ್ಟು ಹೆಚ್ಚು ಶ್ರೀಮಂತವಾಗಿದೆ ಈ ಕಂಪನಿ. 150ಕ್ಕೂ ಹೆಚ್ಚು ದೇಶಗಳ ಜಿಡಿಪಿಗಿಂತಲೂ ಸಿವಿಸಿ ಬಳಿ ಹೆಚ್ಚು ಹಣ ಇದೆ.
ಭಾರತಕ್ಕೆ ಹೋಲಿಸಿದರೆ..: ಜಿಡಿಪಿಯಲ್ಲಿ ಭಾರತ ವಿಶ್ವದಲ್ಲೇ 6ನೇ ಸ್ಥಾನದಲ್ಲಿದೆ. ಭಾರತದ ಜಿಡಿಪಿ ಸುಮಾರು 3 ಟ್ರಿಲಿಯನ್ ಡಾಲರ್ ಇದೆ. ಅಂದರೆ 3 ಸಾವಿರ ಬಿಲಿಯನ್ ಡಾಲರ್. ಅಂದರೆ ಭಾರತದ ಜಿಡಿಪಿಯ ಶೇ 5ರಷ್ಟು ಹಣ ಸಿವಿಸಿ ಬಳಿ ಇದೆ.
ಇದನ್ನೂ ಓದಿ: IPL 2022- ಐಪಿಎಲ್ಗೆ ಎರಡು ಹೊಸ ತಂಡಗಳು; ಬಿಡ್ ಆದ ಹಣ ಎಷ್ಟು, ಬಿಸಿಸಿಐಗೆ ಬಂದ ಲಾಭವೆಷ್ಟು?
ಸಿವಿಸಿ ಕ್ಯಾಪಿಟಲ್ಸ್ ಮತ್ತು ಕ್ರೀಡೆ:
ಸಿವಿಸಿ ಕ್ಯಾಪಿಟಲ್ಸ್ ಸಂಸ್ಥೆ ಐಪಿಎಲ್ನಲ್ಲಿ ಹಣ ತೊಡಗಿಸಿಕೊಂಡಿದ್ದು ಇದೇ ಮೊದಲು. ಆದರೆ, ವಿಶ್ವದ ಇತರ ಕೆಲ ಪ್ರಮುಖ ಕ್ರೀಡೆಗಳಲ್ಲಿ ಇದು ಹೂಡಿಕೆ ಮಾಡಿದೆ.
ಫಾ1: ಫಾರ್ಮುಲಾ ಒನ್ ಕಾರ್ ರೇಸ್ನಲ್ಲಿ 2006ರಿಂದ 2-217ರವರೆಗೆ ಇದು 1.4 ಬಿಲಿಯನ್ ಯೂರೋ ಹಣವನ್ನು ಹೂಡಿಕೆ ಮಾಡಿತ್ತು. ಅಂದರೆ ಸುಮಾರು 1.2 ಲಕ್ಷ ಕೋಟಿ ರೂಪಾಯಿ. ಆ ಹತ್ತು ವರ್ಷದಲ್ಲಿ ಇದು 3 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಆದಾಯ ಮಾಡಿಕೊಂಡಿತೆನ್ನಲಾಗಿದೆ.
ಫುಟ್ಬಾಲ್: ವಿಶ್ವದ ಅತ್ಯಂತ ಪ್ರಮುಖ ಕ್ಲಬ್ ಫುಟ್ಬಾಲ್ ಲೀಗ್ ಎನಿಸಿರುವ ಸ್ಪೇನ್ ದೇಶದ ಲಾ ಲಿಗಾ (La Liga) ದಲ್ಲಿ 3.2 ಬಿಲಿಯನ್ ಡಾಲರ್ ಹೂಡಿಕೆ ಮಾಡಿದೆ.
ರಬ್ಬಿ: ವಿಶ್ವದ ವಿವಿಧ ರಗ್ಬೀ (Rugby) ಟೂರ್ನಿಗಳಲ್ಲೂ ಸಿವಿಸಿಯ ಬಂಡವಾಳ ಇದೆ.
ವಾಲಿಬಾಲ್: ಅಂತರರಾಷ್ಟ್ರೀಯ ವಾಲಿಬಾಲ್ ಒಕ್ಕೂಟ (FIVB) ಜೊತೆ ಸೇರಿಕೊಂಡು ವಾಲಿಬಾಲ್ ವರ್ಲ್ಡ್ (Volley Ball World) ಅನ್ನು ಪ್ರಾರಂಭಿಸಿದೆ. ಇದು ವಾಲಿಬಾನ್ ಅನ್ನು ಜನಪ್ರಿಯಗೊಳಿಸಿ ಅದರ ವಾಣಿಜ್ಯಾತ್ಮ ಲಾಭವನ್ನ ಹೆಕ್ಕುವುದು ಉದ್ದೇಶ.
ಐಪಿಎಲ್ಗೆ ಎಂಟ್ರಿ ಕೊಡುವ ಹೆಜ್ಜೆ ಹಿಂದಿದೆಯಾ ಬೇರೆ ಉದ್ದೇಶ?
ಕೆಲ ವರದಿಗಳ ಪ್ರಕಾರ ಸಿವಿಸಿ ಕ್ಯಾಪಿಟಲ್ಸ್ ಸಂಸ್ಥೆ ಅಮೆರಿಕದಲ್ಲಿ ಕ್ರಿಕೆಟ್ಗಿರುವ ಜನಪ್ರಿಯತೆಯನ್ನ ಹೆಚ್ಚಿಸುವ ಇರಾದೆಯಲ್ಲಿದೆ. ಅಮೆರಿಕದಲ್ಲಿ ಕ್ರಿಕೆಟ್ ಮೇಲೆ ತನ್ನ ಹಿಡಿತವನ್ನ ಬಿಗಿಗೊಳಿಸುವ ಉದ್ದೇಶದಿಂದ ಭಾರತದ ಐಪಿಎಲ್ನಲ್ಲಿ ಹೂಡಿಕೆ ಮಾಡಿದೆ ಎಂಬಂತಹ ಸುದ್ದಿಗಳಿವೆ.
ಭಾರತದಲ್ಲಿ ಕ್ರೀಡೆಯ ಮೇಲೆ ಸಿವಿಸಿ ಹೂಡಿಕೆ ಮಾಡಿದ್ದು ಇದೇ ಮೊದಲು. ಆದರೆ, ಹೆಲ್ತ್ಕೇರ್ ಗ್ಲೋಬಲ್ ಎಂಟರ್ಪ್ರೈಸಸ್, ಯುನೈಟೆಡ್ಲೆಕ್ಸ್ ಕಾರ್ಪೊರೇಶನ್ ಸಂಸ್ಥೆಗಳಲ್ಲಿ ಇದು ಹೆಚ್ಚಿನ ಪಾಲನ್ನು ಹೊಂದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ