T20 World Cup- ವಿಶ್ವಕಪ್​ನಲ್ಲಿ ಭಾರತದ ಮುನ್ನಡೆಗೆ ಕೆಎಲ್ ರಾಹುಲ್ ಪಾತ್ರ ಮುಖ್ಯ ಎಂದ ಬ್ರೆಟ್ ಲೀ

KL Rahul the Pillar- ಟಿ20 ವಿಶ್ವಕಪ್​ನಲ್ಲಿ ಭಾರತ ತಂಡಕ್ಕೆ ಕೆಎಲ್ ರಾಹುಲ್ ಆಧಾರಸ್ತಂಭವಾಗಬೇಕು. ಅವರ ಸುತ್ತ ಇತರರು ಇನ್ನಿಂಗ್ಸ್ ಕಟ್ಟಬೇಕು. ಆಗ ಕೊಹ್ಲಿ ಮೇಲಿನ ಒತ್ತಡ ಕಡಿಮೆ ಆಗುತ್ತದೆ ಎಂದು ಬ್ರೆಟ್ ಲೀ ಹೇಳಿದ್ಧಾರೆ.

ಕೆಎಲ್ ರಾಹುಲ್

ಕೆಎಲ್ ರಾಹುಲ್

  • Share this:
    ದುಬೈ, ಅ. 14: ಯುಎಇಯಲ್ಲಿ ಸದ್ಯದಲ್ಲೇ ಆರಂಭಗೊಳ್ಳಲಿರುವ ಐಸಿಸಿ ಟಿ20 ವರ್ಲ್ಡ್ ಕಪ್ ಟೂರ್ನಿ (ICC T20 World Cup 2021) ಗೆಲ್ಲಲು ಭಾರತ ಸಮರ್ಥವಾಗಿದೆ ಎಂದು ಆಸ್ಟ್ರೇಲಿಯಾದ ಮಾಜಿ ವೇಗಿ ಹಾಗೂ ವಿಶ್ವದ ಅತ್ಯಂತ ವೇಗದ ಇಬ್ಬರು ಬೌಲರ್​ಗಳಲ್ಲಿ ಒಬ್ಬರೆನಿಸಿರುವ ಬ್ರೆಟ್ ಲೀ (Brett Lee) ಅಭಿಪ್ರಾಯಪಟ್ಟಿದ್ದಾರೆ. ಈ ವಿಶ್ವಕಪ್​ನಲ್ಲಿ ಇಂಗ್ಲೆಂಡ್ ತಂಡ ಬಹಳ ಪ್ರಬಲವಾಗಿದೆ. ಆದರೆ, ಭಾರತವೇ ನನ್ನ ಫೇವರಿಟ್ ಎಂದು ಹೇಳಿದ ಅವರು, ಈ ವಿಶ್ವಕಪ್​ನಲ್ಲಿ ಕೆಎಲ್ ರಾಹುಲ್ (KL Rahul) ಅವರ ಪಾತ್ರ ಬಹಳ ಮುಖ್ಯವಾಗಿರುತ್ತದೆ. ಅವರ ಸುತ್ತ ಭಾರತ ಇನ್ನಿಂಗ್ಸ್ ಕಟ್ಟಿದರೆ ನಾಯಕ ವಿರಾಟ್ ಕೊಹ್ಲಿ ಮೇಲಿನ ಒತ್ತಡ ಕಡಿಮೆ ಆಗುತ್ತದೆ ಎಂದು ಸಲಹೆ ನೀಡಿದ್ದಾರೆ. ಭಾರತ ತಂಡ ಈ ವಿಶ್ವಕಪ್ ಗೆಲ್ಲಲು ತಮ್ಮ ಫೇವರಿಟ್ ಯಾಕೆ ಎಂಬುದಕ್ಕೆ ಬ್ರೆಟ್ ಲೀ ಕಾರಣವನ್ನೂ ಕೊಟ್ಟಿದ್ಧಾರೆ.

    “ಭಾರತ ಎಲ್ಲಾ ಮಾದರಿಯ ಕ್ರಿಕೆಟ್​ನಲ್ಲೂ ಪ್ರಾಬಲ್ಯ ತೋರುತ್ತಿದೆ. ಇದಕ್ಕೆ ಕಾರಣ ಐಪಿಎಲ್ ಮೂಲಕ ಹೊಸ ಪ್ರತಿಭೆಗಳ ಅನಾವರಣಗೊಳ್ಳುತ್ತಿರುವುದು. ಈ ಯುವ ಬೌಲರ್​ಗಳಲ್ಲಿ ನಿಜಕ್ಕೂ ಒಳ್ಳೆಯ ವೇಗ ಇದೆ. ಅವರ ಟಾಪ್ ಆರ್ಡರ್ ಬ್ಯಾಟರ್ಸ್ ಅದ್ಭುತ ಪ್ರದರ್ಶನ ನೀಡುತ್ತಿದ್ಧಾರೆ” ಎಂದು ಬ್ರೆಟ್ ಲೀಗ್ ಹೇಳಿದ್ಧಾರೆ.

    ಕೆಎಲ್ ರಾಹುಲ್ ಭಾರತಕ್ಕೆ ಪಿಲ್ಲರ್:

    ಈ ಟಿ20 ವಿಶ್ವಕಪ್​ನಲ್ಲಿ ಅತಿ ಹೆಚ್ಚು ರನ್ ಗಳಿಸುವುದು ಕೆಎಲ್ ರಾಹುಲ್ ಎಂದೂ ಲೀ ಭವಿಷ್ಯ ನುಡಿದಿದ್ದಾರೆ. “ಟಿ20 ವಿಶ್ವಕಪ್​ನಲ್ಲಿ ಕೆಎಲ್ ರಾಹುಲ್ ಅತಿ ಹೆಚ್ಚು ರನ್ ಗಳಿಸುತ್ತಾರೆಂಬುದು ನನ್ನ ಭಾವನೆ. ಐಪಿಎಲ್​ನಲ್ಲಿ ಈಗಷ್ಟೇ ಅವರು ಶ್ರೇಷ್ಠ ಪ್ರದರ್ಶನ ನೀಡಿದ್ದಾರೆ. ಕೆಎಲ್ ರಾಹುಲ್ ಅವರನ್ನ ಪಿಲ್ಲರ್​ನಂತೆ ಇರಿಸಿ ಉಳಿದವರು ಇನ್ನಿಂಗ್ಸ್ ಕಟ್ಟಬೇಕು. ರಾಹುಲ್ ರನ್ ಗಳಿಸಿದರೆ ಕೊಹ್ಲಿ ಮೇಲಿನ ಒತ್ತಡ ಕಡಿಮೆ ಆಗುತ್ತದೆ. ಕೊಹ್ಲಿ ತಮ್ಮ ಸ್ವಾಭಾವಿಕ ಆಟ ಆಡಲು ಸಾಧ್ಯವಾಗುತ್ತದೆ. ಕೊಹ್ಲಿಗೆ ಇದು ಕೊನೆಯ ಟಿ20 ಕ್ಯಾಪ್ಟನ್ಸಿ ಆಗುವುದರಿಂದ ಅವರು ಪ್ರಶಸ್ತಿ ಗೆಲ್ಲುವ ಛಲ ಹೆಚ್ಚೇ ಇರುತ್ತದೆ” ಎಂದು ಆಸ್ಟ್ರೇಲಿಯಾದ ಮಾಜಿ ವೇಗದ ಬೌಲರ್ ಆದ ಅವರು ತಿಳಿಸಿದ್ದಾರೆ.

    ಕೆಎಲ್ ರಾಹುಲ್ ಅವರು ಯುಎಇಯಲ್ಲಿ ನಡೆದ ಐಪಿಎಲ್ ಪಂದ್ಯಗಳಲ್ಲಿ ಕ್ಯಾಪ್ಟನ್ಸಿಯ ಒತ್ತಡದ ನಡುವೆಯೂ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. ಪಂಜಾಬ್ ಕಿಂಗ್ಸ್ ತಂಡದ ಪರ ಇಲ್ಲಿ ನಡೆದ 6 ಪಂದ್ಯಗಳಲ್ಲಿ ರಾಹುಲ್ 295 ರನ್ ಗಳಿಸಿದ್ದಾರೆ. ಅವರು ಮತ್ತು ಮಯಂಕ್ ಅಗರ್ವಾಲ್ ಇಬ್ಬರೂ ಪಂಜಾಬ್ ಕಿಂಗ್ಸ್ ತಂಡದ ಬ್ಯಾಟಿಂಗ್​ಗೆ ಪ್ರಮುಖ ಸ್ತಂಭಗಳಾಗಿ ನಿಂತಿದ್ದರು. ಹೀಗಾಗಿ, ಪಂಜಾಬ್ ತಂಡ ಕೊನೆಯವರೆಗೂ ಪ್ಲೇ ಆಫ್ ಸಾಧ್ಯತೆಯನ್ನ ಜೀವಂತವಾಗಿರಿಸಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು.

    ಇದನ್ನೂ ಓದಿ: IPL Qualifier 2021| KKR ವಿರುದ್ಧ DC ರೋಚಕ ಸೋಲು; ಬಿಕ್ಕಿ ಬಿಕ್ಕಿ ಕಣ್ಣೀರಿಟ್ಟ ರಿಷಬ್ ಪಂತ್, ಪೃಥ್ವಿ ಶಾ!

    ಸೂರ್ಯಕುಮಾರ್ ಯಾದವ್ ಬಗ್ಗೆ:

    ಸೂರ್ಯಕುಮಾರ್ ಯಾದವ್ ಬಗ್ಗೆ ಮಾತನಾಡಿದ ಬ್ರೆಟ್ ಲೀ, ಮುಂಬೈ ಇಂಡಿಯನ್ಸ್ ತಂಡದ ಈ ಬ್ಯಾಟರ್ ಭಾರತಕ್ಕೆ ಕೀರ್ತಿ ತರಬಲ್ಲ ಉಜ್ವಲ ಪ್ರತಿಭೆ. ಮುಂದಿನ ದಿನಗಳಲ್ಲಿ ಇವರು ಭಾರತದ ಸ್ಟಾರ್ ಆಗಲಿದ್ಧಾರೆ ಎಂದು ಹೇಳಿದ್ದಾರೆ.

    ಆಸ್ಟ್ರೇಲಿಯಾ ಚಾಂಪಿಯನ್ ಆಗುತ್ತೆ ಎಂದ ಲೀ:

    ಭಾರತ ಈ ವಿಶ್ವಕಪ್ ಗೆಲ್ಲಲು ತನ್ನ ಫೇವರಿಟ್ ಎಂದು ಹೇಳಿದ್ದ ಬ್ರೆಟ್ ಲೀ, ಅದೇ ಉಸುರಿನಲ್ಲಿ ಆಸ್ಟ್ರೇಲಿಯಾ ಚಾಂಪಿಯನ್ ಆಗುತ್ತೆ ಎಂದಿದ್ಧಾರೆ. ತಾನು ದೇಶಪ್ರೇಮಿಯಾದ್ದರಿಂದ ಆಸ್ಟ್ರೇಲಿಯಾವೇ ಚಾಂಪಿಯನ್ ಆಗುತ್ತದೆಂದು ಭಾವಿಸುತ್ತೇನೆ. ಭಾರತ ಫೈನಲ್ ಪ್ರವೇಶಿಸುವುದು ನಿಶ್ಚಿತ. ಆದರೆ, ಪ್ರಶಸ್ತಿ ಆಸ್ಟ್ರೇಲಿಯಾಗೆ ಹೋಗುತ್ತದೆ. ಆಸ್ಟ್ರೇಲಿಯಾ ಈ ಬಾರಿ ಅತ್ಯುತ್ತಮ ತಂಡವನ್ನ ಆಯ್ಕೆ ಮಾಡಿದೆ. ಪ್ರಶಸ್ತಿಗೆ ಭಾರತದ ಜೊತೆ ಆಸ್ಟ್ರೇಲಿಯಾ ಕಠಿಣ ಪೈಪೋಟಿ ನೀಡಲು ಸಮರ್ಥವಾಗಿದೆ ಎಂಬುದು ಬ್ರೆಟ್ ಲೀ ಅನಿಸಿಕೆ.

    ಟಿ20 ವಿಶ್ವಕಪ್​ನ ಸೂಪರ್-12 ಹಂತದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ಬೇರೆ ಗುಂಪುಗಳಲ್ಲಿವೆ. ಆದರೆ, ಅ. 20ರಂದು ದುಬೈನಲ್ಲಿ ನಡೆಯಲಿರುವ ಅಭ್ಯಾಸ ಪಂದ್ಯದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ಮುಖಾಮುಖಿಯಾಗುತ್ತಿದೆ. ಈ ಪಂದ್ಯಕ್ಕೆ ಮುನ್ನ ಸೌಥ್ ಆಫ್ರಿಕಾ ವಿರುದ್ಧ ಭಾರತ ಒಂದು ಅಭ್ಯಾಸ ಪಂದ್ಯ ಆಡಲಿದೆ.
    Published by:Vijayasarthy SN
    First published: