Ind-Eng - ಕೆಎಲ್ ರಾಹುಲ್ ಶತಕ; ರೋಹಿತ್ ಅಮೋಘ ಆಟ; ಲಾರ್ಡ್ಸ್ ಟೆಸ್ಟ್ನ ಮೊದಲ ದಿನ ಭಾರತ ಪಾರಮ್ಯ
India vs England Lords Test- ಇಂಗ್ಲೆಂಡ್ ವಿರುದ್ಧ ಲಂಡನ್ನ ಲಾರ್ಡ್ಸ್ನಲ್ಲಿ ನಡೆಯುತ್ತಿರುವ ಎರಡನೇ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ ಭಾರತ ಮೊದಲ ದಿನದಂದು 3 ವಿಕೆಟ್ ನಷ್ಟಕ್ಕೆ 276 ರನ್ ಗಳಿಸಿದೆ. ಕೆಎಲ್ ರಾಹುಲ್ 126 ರನ್ ಗಳಿಸಿ ನಾಟ್ ಔಟ್ ಆಗಿದ್ದಾರೆ.
ಲಂಡನ್: ನಾಟಿಂಗ್ಹ್ಯಾಂನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಗೆಲುವಿನಿಂದ ವಂಚಿತವಾಗಿದ್ದ ಭಾರತ ಕ್ರಿಕೆಟ್ ತಂಡ ಎರಡನೇ ಟೆಸ್ಟ್ ಪಂದ್ಯದಲ್ಲಿ ಉತ್ತಮ ಆರಂಭ ಪಡೆದಿದೆ. ಲಂಡನ್ನ ಲಾರ್ಡ್ಸ್ ಅಂಗಳದಲ್ಲಿ ನಡೆಯುತ್ತಿರುವ ಎರಡನೇ ಕ್ರಿಕೆಟ್ ಟೆಸ್ಟ್ ಪಂದ್ಯದ ಮೊದಲ ದಿನದಾಟದಲ್ಲಿ ಭಾರತ 3 ವಿಕೆಟ್ ನಷ್ಟಕ್ಕೆ 276 ರನ್ ಗಳಿಸಿದೆ. ಕೆಎಲ್ ರಾಹುಲ್ ಭರ್ಜರಿ ಶತಕ ಭಾರಿಸಿದ್ದಾರೆ. ರೋಹಿತ್ ಶರ್ಮಾ ಅಮೋಘ ಅರ್ಧ ಶತಕ ಗಳಿಸಿದ್ದಾರೆ. ಇವರಿಬ್ಬರ ಬ್ಯಾಟಿಂಗ್ ಭಾರತದ ಮೊದಲ ದಿನದ ಆಟದ ಹೈಲೈಟ್ಸ್ ಎನಿಸಿವೆ. ವಿರಾಟ್ ಕೊಹ್ಲಿ ಕೂಡ ಉತ್ತಮ ಪ್ರದರ್ಶನ ನೀಡಿದರಾದರೂ ದಿನದಾಟದ ಅಂತಿಮ ಕ್ಷಣಗಳಲ್ಲಿ ವಿಕೆಟ್ ಒಪ್ಪಿಸಿ ನಿರಾಶೆಗೊಳಿಸಿದರು. ಚೇತೇಶ್ವರ್ ಪೂಜಾರ ಅವರ ಕಳಪೆ ಫಾರ್ಮ್ ಮುಂದುವರಿಯಿತು.
ಟಾಸ್ ಸೋತು ಮೊದಲು ಭಾರತ ಮೊದಲು ಬ್ಯಾಟಿಂಗ್ ಆರಂಭಿಸಿತು. ಕೆ ಎಲ್ ರಾಹುಲ್ ಮತ್ತು ರೋಹಿತ್ ಶರ್ಮಾ ಇಬ್ಬರೂ ಕೂಡ ಬಹಳ ಆತ್ಮವಿಶ್ವಾಸದಿಂದ ಇಂಗ್ಲೆಂಡ್ ಬೌಲರ್ಗಳ ದಾಳಿ ಎದುರಿಸಿದರು. ರೋಹಿತ್ ಶರ್ಮಾ ಶತಕ ಭಾರಿಸುವುದು ಖಚಿತ ಎಂದು ನಿರೀಕ್ಷೆ ಮೂಡಿಸುತ್ತಿರುವಂತೆಯೇ ಜೇಮ್ಸ್ ಆಂಡರ್ಸನ್ ಅವರಿಗೆ ವಿಕೆಟ್ ಒಪ್ಪಿಸಿದರು. 83 ರನ್ ಗಳಿಸಿ ರೋಹಿತ್ ಶರ್ಮಾ ಔಟಾದರು. ರೋಹಿತ್ ಮತ್ತು ರಾಹುಲ್ ಮೊದಲ ವಿಕೆಟ್ಗೆ 126 ರನ್ ಜೊತೆಯಾಟ ನೀಡಿದರು. ರೋಹಿತ್ ನಿರ್ಗಮನದ ಬಳಿಕ ಬಂದ ಚೇತೇಶ್ವರ್ ಪೂಜಾರ ಹೆಚ್ಚು ಹೊತ್ತು ನಿಲ್ಲಲಿಲ್ಲ. ಕೇವಲ 9 ರನ್ ಗಳಿಸಿ ಔಟಾದರು. ಬಳಿಕ ಕೆಎಲ್ ರಾಹುಲ್ ಮತ್ತು ವಿರಾಟ್ ಕೊಹ್ಲಿ ತಮ್ಮ ತಂಡದ ಇನ್ನಿಂಗ್ಸನ್ನ ಮತ್ತೊಮ್ಮೆ ಹಳಿಗೆ ತಂದರು. ಇಬ್ಬರೂ 3ನೇ ವಿಕೆಟ್ಗೆ 117 ರನ್ ಜೊತೆಯಾಟ ಆಡಿದರು. ಈ ವೇಳೆ ಕೆಎಲ್ ರಾಹುಲ್ ತಮ್ಮ ಆರನೇ ಟೆಸ್ಟ್ ಶತಕ ದಾಖಲಿಸಿದರು. ಒಂದೇ ಇನ್ನಿಂಗ್ಸಲ್ಲಿ ಎರಡು ಶತಕದ ಜೊತೆಯಾಟಗಳಲ್ಲಿ ಅವರು ಭಾಗಿಯಾಗಿದ್ದು ವಿಶೇಷ.
ಕೊಹ್ಲಿ ಮತ್ತು ರಾಹುಲ್ ಇಬ್ಬರೂ ಸುರಕ್ಷಿತವಾಗಿ ದಿನದಾಟ ಮುಗಿಸುತ್ತಾರೆಂದು ಅಂದುಕೊಳ್ಳುವಷ್ಟರಲ್ಲಿ ಕೊಹ್ಲಿ 42 ರನ್ಗೆ ಔಟಾದರು. ಇದೀಗ ರಾಹುಲ್ ಜೊತೆ ಅಜಿಂಕ್ಯ ರಹಾನೆ ಕ್ರೀಸ್ನಲ್ಲಿದ್ದಾರೆ. ಈ ಇನ್ನಿಂಗ್ಸಲ್ಲಿ ಇವರಿಬ್ಬರು ಬಿಟ್ಟರೆ ಸ್ಪೆಷಲಿಸ್ಟ್ ಬ್ಯಾಟುಗಾರರಿರುವುದು ರಿಷಭ್ ಪಂತ್ ಮತ್ತು ರವೀಂದ್ರ ಜಡೇಜಾ ಇಬ್ಬರೇ. ಹೀಗಾಗಿ, ಔಟ್ ಆಫ್ ಫಾರ್ಮ್ನಲ್ಲಿರುವ ಅಜಿಂಕ್ಯ ರಹಾನೆ ಇಂದು ಎರಡನೇ ದಿನದಾಟದ ವೇಳೆ ಫಾರ್ಮ್ ಕಂಡುಕೊಳ್ಳುವುದು ಭಾರತಕ್ಕೆ ಬಹಳ ಮುಖ್ಯ.
ಇಂಗ್ಲೆಂಡ್ ವಿರುದ್ಧದ ಐದು ಟೆಸ್ಟ್ ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ಬಹುತೇಕ ಭಾಗ ಮೇಲುಗೈ ಸಾಧಿಸಿತ್ತು. ಆದರೆ, ಮಳೆಯಿಂದಾಗಿ ಭಾರತಕ್ಕೆ ಗೆಲುವು ಸಿಗದೇ ಡ್ರಾನಲ್ಲಿ ಪಂದ್ಯ ಅಂತ್ಯಗೊಂಡಿತ್ತು. ಇದೀಗ ಎರಡನೇ ಟೆಸ್ಟ್ನಲ್ಲೂ ಭಾರತ ಮೊದಲ ದಿನ ಉತ್ತಮ ಪ್ರದರ್ಶನ ನೀಡಿದೆ. ಎರಡನೇ ದಿನವೂ ಭಾರತ ಮೇಲುಗೈ ಸಾಧಿಸುವ ನಿರೀಕ್ಷೆಯಲ್ಲಿದೆ.
ಸ್ಕೋರು ವಿವರ:
ಭಾರತ ಮೊದಲ ಇನ್ನಿಂಗ್ಸ್ 90 ಓವರ್ 276/3
(ಕೆ ಎಲ್ ರಾಹುಲ್ ಅಜೇಯ 127, ರೋಹಿತ್ ಶರ್ಮಾ 83, ವಿರಾಟ್ ಕೊಹ್ಲಿ 42 ರನ್ – ಜೇಮ್ಸ್ ಆಂಡರ್ಸನ್ 52/2)
(ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.)
Published by:Vijayasarthy SN
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ