ಶ್ರೀಲಂಕಾ ವಿರುದ್ಧದ ಟಿ20 ಪಂದ್ಯದಲ್ಲಿ ವೆಸ್ಟ್ ಇಂಡೀಸ್ನ ಕೀರಾನ್ ಪೊಲಾರ್ಡ್ ಒಂದೇ ಓವರ್ನಲ್ಲಿ 6 ಸಿಕ್ಸರ್ ಚಚ್ಚಿದ್ದಾರೆ. ಈ ಓವರ್ ಬೌಲ್ ಮಾಡಿದ್ದ ದನಂಜಯ್ ತಮ್ಮ ಹಿಂದಿನ ಓವರ್ನಲ್ಲಿ ಹ್ಯಾಟ್ರಿಕ್ ಪಡೆದ ಖುಷಿಯಲ್ಲಿದ್ದರು.
ಕೊಲಂಬೋ: ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡದ ನಾಯಕ ಕೀರಾನ್ ಪೊಲಾರ್ಡ್ ನಿನ್ನೆ ಶ್ರೀಲಂಕಾ ವಿರುದ್ಧದ ಟಿ20 ಪಂದ್ಯದಲ್ಲಿ ಒಂದೇ ಓವರ್ನಲ್ಲಿ ದಾಖಲೆಯ ಆರು ಸಿಕ್ಸರ್ ಸಿಡಿಸಿದ್ದಾರೆ. ಶ್ರೀಲಂಕಾ ವೆಸ್ಟ್ ಇಂಡೀಸ್ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಈ ದಾಖಲೆ ಸೃಷ್ಟಿಯಾಯಿತು. ಗೆಲ್ಲಲು ಶ್ರೀಲಂಕಾ ಒಡ್ಡಿದ 132 ರನ್ ಗುರಿಯನ್ನ ಬೆನ್ನತ್ತುವ ವೇಳೆ ಪೊಲಾರ್ಡ್ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದರು. ಅಕಿಲಾ ದನಂಜಯ ಅವರ ಕೊನೆಯ ಓವರ್ನಲ್ಲಿ ಅವರು ಆರೂ ಎಸೆತವನ್ನು ಬೌಂಡರಿ ಆಚೆ ಕಳುಹಿಸಿದರು. ಕುತೂಹಲದ ವಿಷಯ ಎಂದರೆ, ಅಕಿಲಾ ದನಂಜಯ ಅವರು ತಮ್ಮ ಹಿಂದಿನ ಓವರ್ನಲ್ಲಿ, ಅಂದರೆ ಅವರ ಮೂರನೇ ಓವರ್ನಲ್ಲಿ ಕ್ರಿಸ್ ಗೇಲ್ ವಿಕೆಟ್ ಸೇರಿದಂತೆ ಹ್ಯಾಟ್ರಿಕ್ ಪಡೆದು ತಂಡದ ಗೆಲುವಿನ ಆಸೆ ಚಿಗುರಿಸಿದ್ದರು.
ಆದರೆ, ಕೀರಾನ್ ಪೊಲಾರ್ಡ್ ದನಂಜಯ ಅವರನ್ನೇ ಟಾರ್ಗೆಟ್ ಮಾಡಿ ಆರಕ್ಕೆ ಆರು ಸಿಕ್ಸರ್ ಸಿಡಿಸಿದರು. ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಆರು ಬಾಲ್ಗೆ ಆರು ಸಿಕ್ಸರ್ ಸಿಡಿಸಿದ ಮೊದಲ ವೆಸ್ಟ್ ಇಂಡೀಸ್ ಕ್ರಿಕೆಟಿಗ ಅವರಾಗಿದ್ದಾರೆ. ಆ ಸಾಧನೆ ಮಾಡಿದ ಮೂರನೇ ಕ್ರಿಕೆಟಿಗ ಅವರು. ಈ ಹಿಂದೆ ದಕ್ಷಿಣ ಆಫ್ರಿಕಾದ ಹರ್ಷೆಲ್ ಗಿಬ್ಸ್ ಮತ್ತು ಭಾರತದ ಯುವರಾಜ್ ಸಿಂಗ್ ಅವರು ಈ ಸಾಧನೆ ಮಾಡಿದ್ದಾರೆ. ಟಿ20 ಕ್ರಿಕೆಟ್ನಲ್ಲಿ ಯುವರಾಜ್ ಸಿಂಗ್ ನಂತರ ಪೊಲಾರ್ಡ್ ಈ ದಾಖಲೆ ಸರಿಗಟ್ಟಿದ್ದಾರೆ.
ಶ್ರೀಲಂಕಾ ವೆಸ್ಟ್ ಇಂಡೀಸ್ ನಡುವಿನ ಈ ಟಿ20 ಕ್ರಿಕೆಟ್ ಸರಣಿಯ ಉಳಿದೆರಡು ಪಂದ್ಯಗಳು ಮಾರ್ಚ್ 5 ಮತ್ತು 7ರಂದು ನಡೆಯಲಿದೆ. ಈ ಸರಣಿ ಬಳಿಕ ಈ ತಂಡಗಳು ಮೂರು ಏಕದಿನ ಹಾಗೂ ಎರಡು ಟೆಸ್ಟ್ ಪಂದ್ಯಗಳನ್ನ ಆಡಲಿವೆ.
ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 6 ಬಾಲ್ಗೆ 6 ಸಿಕ್ಸರ್ ಸಿಡಿಸಿದವರು:
1) ಹರ್ಷಲ್ ಗಿಬ್ಸ್ – 2007ರಲ್ಲಿ (ಏಕದಿನ ಕ್ರಿಕೆಟ್)
2) ಯುವರಾಜ್ ಸಿಂಗ್ – 2007ರಲ್ಲಿ (ಟಿ20 ಕ್ರಿಕೆಟ್)
3) ಕೇರಾನ್ ಪೊಲಾರ್ಡ್ – 2021ರಲ್ಲಿ (ಟಿ20 ಕ್ರಿಕೆಟ್)
Published by:Vijayasarthy SN
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ