Kevin Pietersen - ಇಂಗ್ಲೆಂಡ್ ವಿರುದ್ಧ ಭಾರತದ ಗೆಲುವನ್ನ ವ್ಯಂಗ್ಯ ಮಾಡಿದ ಕೆವಿನ್ ಪೀಟರ್ಸನ್

ಬದಾಯಿ ಹೋ ಇಂಡಿಯಾ, ಇಂಗ್ಲೆಂಡ್ ಬಿ ಕೋ ಹರಾನೆ ಕೆ ಲಿಯೇ ಎಂದು ಇಂಗ್ಲೆಂಡ್ ಮಾಜಿ ಆಟಗಾರ ಕೆವಿನ್ ಪೀಟರ್ಸನ್ ನಿನ್ನೆ ಟ್ವೀಟ್ ಮಾಡಿದ್ದು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇಂಗ್ಲೆಂಡ್​ನ ಬಿ ತಂಡವನ್ನ ಮಣಿಸಿದ್ದು ದೊಡ್ಡ ಸಾಧನೆಯಲ್ಲ ಎಂಬುದು ಕೆವಿನ್ ಮಾಡಿದ ವ್ಯಂಗ್ಯವಾಗಿದೆ.

ಕೆವಿನ್ ಪೀಟರ್ಸನ್

ಕೆವಿನ್ ಪೀಟರ್ಸನ್

  • Share this:
    ಚೆನ್ನೈನ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನ ಟೀಮ್ ಇಂಡಿಯಾ 317 ರನ್​ಗಳ ಭಾರಿ ಅಂತರದಿಂದ ಇಂಗ್ಲೆಂಡ್ ಅನ್ನು ಮಣಿಸಿತು. ಈ ಗೆಲುವು ಆತಿಥೇಯರಿಗೆ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯನ್ನು 1-1ರಿಂದ ಸಮಗೊಳಿಸುವ ಅವಕಾಶವನ್ನು ನೀಡಿತು. ಟೀಮ್ ಇಂಡಿಯಾದ ಈ ಸ್ಮರಣೀಯ ಗೆಲುವನ್ನು ಶ್ಲಾಘಿಸಲು ಸಾಮಾಜಿಕ ಜಾಲತಾಣದಲ್ಲಿ ಅಭಿನಂದನಾ ಸಂದೇಶಗಳ ಸುರಿಮಳೆಯೇ ಆಗಿವೆ. ಈ ಪೈಕಿ ಇಂಗ್ಲೆಂಡ್ ತಂಡದ ಮಾಜಿ ನಾಯಕ - ನಿರೂಪಕ ಕೆವಿನ್ ಪೀಟರ್ಸನ್ ಹಿಂದಿಯಲ್ಲಿ ಟ್ವೀಟ್ ಮೂಲಕ ಭಾರತವನ್ನು ಅಭಿನಂದಿಸಿದರು. ಅದೂ ವ್ಯಂಗ್ಯಭರಿತ ಟ್ವೀಟ್ ಮೂಲಕ. ಚೆನ್ನೈನಲ್ಲಿ ನಡೆದ 2 ನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಅನ್ನು ಭಾರತ ಸುಲಭವಾಗಿ ಸೋಲಿಸಿದ ಬಳಿಕ ಪೀಟರ್ಸನ್, 'ಬದಾಯಿ ಹೋ ಇಂಡಿಯಾ - ಇಂಗ್ಲೆಂಡ್ ಬಿ ಕೋ ಹರಾನೆ ಕೇ ಲಿಯೇ' ಅಂದರೆ, 'ಇಂಗ್ಲೆಂಡ್ ಬಿ ತಂಡವನ್ನು ಸೋಲಿಸಿದ್ದಕ್ಕೆ ಅಭಿನಂದನೆಗಳು ಭಾರತ' ಎಂದು ಟ್ವೀಟ್ ಮಾಡಿದ್ದಾರೆ.

    ಇಂಗ್ಲೆಂಡ್ ಕ್ರಿಕೆಟ್ ತಂಡ ಕೆಲ ಪ್ರಮುಖ ಆಟಗಾರರಿಲ್ಲದೆಯೇ ಭಾರತದಲ್ಲಿ ಕ್ರಿಕೆಟ್ ಪ್ರವಾಸ ಮಾಡಿದೆ. ಇಂಗ್ಲೆಂಡ್​ನದ್ದು ಬಿ ಟೀಮ್ ಎಂದು ಈ ಸರಣಿಗೆ ಮುನ್ನವೇ ಹಲವರು ಅಚ್ಚರಿ ವ್ಯಕ್ತಪಡಿಸಿದ್ದರು. ಆದರೆ, ಮೊದಲ ಪಂದ್ಯದಲ್ಲಿ ಆಂಗ್ಲರ ಪಡೆ ಭರ್ಜರಿ ಗೆಲುವು ಸಾಧಿಸಿತ್ತು. ಇದೀಗ ಎರಡನೇ ಪಂದ್ಯದಲ್ಲಿ ಭಾರತ ಪುಟಿದೆದ್ದು ಸೋಲಿಗೆ ಸೇಡು ತೀರಿಸಿಕೊಂಡಿತು. ಈಗ ಸೋತ ಬಳಿಕ ಇಂಗ್ಲೆಂಡ್ ತಂಡದ ಬೆಂಬಲಿಗರಿಗೆ ಬಿ ಟೀಮ್ ನೆನಪಾದಂತಿದೆ.



    ಈ ರೀತಿ ಟ್ವೀಟ್ ಇದೇ ಮೊದಲಲ್ಲ..!

    ಇದಕ್ಕೂ ಮೊದಲು ಭಾರತ-ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯ ನಾಲ್ಕನೇ ಮತ್ತು ಅಂತಿಮ ಟೆಸ್ಟ್ ಪಂದ್ಯದಲ್ಲಿ ದಾಖಲೆಯ ರನ್-ಚೇಸ್ ಮೂಲಕ ಗೆದ್ದಿದ್ದಕ್ಕಾಗಿ ಮಾಜಿ ಇಂಗ್ಲಿಷ್ ಶ್ರೇಷ್ಠ ಪೀಟರ್ಸನ್ ಟೀಮ್ ಇಂಡಿಯಾವನ್ನು ಅಭಿನಂದಿಸಿದ್ದರು. ಆದರೂ, ಅದೇ ಟ್ವೀಟ್​ನಲ್ಲಿ ಅವರು ಇಂಗ್ಲೆಂಡ್ ತಂಡವನ್ನು ನಿಮ್ಮ ತವರಿನಲ್ಲೇ ಎದುರಿಸಬೇಕಾಗಿದೆ ಎಂದು ನೆನಪಿಸಿದ್ದರು.

    ಇದನ್ನೂ ಓದಿ: India vs Eng – ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್​ನಲ್ಲಿ ಭಾರತ ಜಯಭೇರಿ

    ಈ ತಿಂಗಳ ಆರಂಭದಲ್ಲಿ, ಪೀಟರ್ಸನ್ ಮತ್ತೊಮ್ಮೆ ಟಂಗ್ ಇನ್ ಚೀಕ್ (ವ್ಯಂಗ್ಯಾತ್ಮಕ) ಟ್ವೀಟ್ ಅನ್ನು ಪೋಸ್ಟ್ ಮಾಡಿದರು. ಅದೇ ಸ್ಥಳದಲ್ಲಿ 227 ರನ್​ಗಳಿಂದ ಮೊದಲ ಟೆಸ್ಟ್​ನಲ್ಲಿ ಸೋತ ನಂತರ ಆತಿಥೇಯ ಭಾರತದ ಗಾಯಕ್ಕೆ ಉಪ್ಪು ಸವರಿದ್ದರು. ತಮ್ಮ ವ್ಯಂಗ್ಯದ ಟ್ವೀಟ್​ನಲ್ಲಿ ಪೀಟರ್ಸನ್, ‘ಭಾರತವು ಆಸೀಸ್ ತವರಿನಲ್ಲಿ ಗೆದ್ದಾಗ ಅಷ್ಟೊಂದು ಸಂಭ್ರಮಿಸಬಾರದು ಎಂದು ನಾನು ಮೊದಲೇ ಎಚ್ಚರಿಸಿದ್ದೆ’ ಎಂದು ಹಿಂದಿಯಲ್ಲಿ ಠಕ್ಕರ್ ಕೊಟ್ಟಿದ್ದರು.

    ಇನ್ನು, ಭಾರತ – ಇಂಗ್ಲೆಂಡ್ ನಡುವಿನ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಬ್ರಿಟನ್ನರು ತಮ್ಮ ಮೊದಲ ಟೆಸ್ಟ್ ಪಂದ್ಯವನ್ನು ಚೆನ್ನೈನಲ್ಲಿ ಗೆದ್ದಿದ್ದರು. ಎರಡನೇ ಪಂದ್ಯ ಸಹ ಅದೇ ಸ್ಥಳದಲ್ಲಿ ನಡೆದಿದ್ದು, ಇಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಭಾರತ ತಂಡವು ಪ್ರಬಲ ಪ್ರದರ್ಶನದೊಂದಿಗೆ ಸರಣಿಯಲ್ಲಿ ಸಮಬಲ ಸಾಧಿಸಿದೆ. 482 ರನ್​ಗಳ ಗುರಿಯನ್ನು ಬೆನ್ನಟ್ಟಿದ ಇಂಗ್ಲೆಂಡ್ ತಂಡ ಎರಡನೇ ಇನ್ನಿಂಗ್ಸಲ್ಲಿ 164 ರನ್​ಗಳನ್ನಷ್ಟೇ ಗಳಿಸಿತು. ಆತಿಥೇಯರ ಬೌಲಿಂಗ್ ವಿಭಾಗವು ಇಂಗ್ಲೆಂಡ್ ಬ್ಯಾಟಿಂಗ್ ಕ್ರಮಾಂಕವನ್ನು ಕಟ್ಟಿಹಾಕಿ ತ್ವರಿತವಾಗಿ ವಿಕೆಟ್​ಗಳನ್ನು ಕಬಳಿಸಿತು.

    ತಮ್ಮ ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಅಕ್ಷರ್ ಪಟೇಲ್ ಐದು ವಿಕೆಟ್​ಗಳ ಸಾಧನೆಯ ಗರಿ ಪಡೆದರು. ಇನ್ನು, ರವಿಚಂದ್ರನ್ ಅಶ್ವಿನ್ ಎರಡು ಇನ್ನಿಂಗ್ಸ್ ಸೇರಿ 8 ವಿಕೆಟ್ ಪಡೆದರು. ಕುಲದೀಪ್ ಯಾದವ್ ಕೂಡ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದರು.

    ಫೆಬ್ರವರಿ 24 ರಿಂದ ಪ್ರಾರಂಭವಾಗಲಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಉಭಯ ತಂಡಗಳು ಮತ್ತೊಮ್ಮೆ ಮುಖಾಮುಖಿಯಾಗಲಿವೆ. ಇಂಗ್ಲೆಂಡ್ ತಂಡ ಗೆಲುವಿನ ಹಾದಿಗೆ ಮರಳುವ ಗುರಿಯನ್ನು ಹೊಂದಿದ್ದರೆ, ಆತಿಥೇಯರು ಸರಣಿಯಲ್ಲಿ ಮುನ್ನಡೆ ಸಾಧಿಸುವ ಆಶಯ ಹೊಂದಿದ್ದಾರೆ.
    Published by:Vijayasarthy SN
    First published: