ಅದು 2011ರ ವಿಶ್ವಕಪ್ ಟೂರ್ನಿ. ಭಾರತದಲ್ಲಿ ನಡೆದಿದ್ದ ಐಸಿಸಿ ಟೂರ್ನಿಯ 15ನೇ ಪಂದ್ಯ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬಲಿಷ್ಠ ಇಂಗ್ಲೆಂಡ್ ಹಾಗೂ ಕ್ರಿಕೆಟ್ ಕೂಸು ಐರ್ಲೆಂಡ್ ಮುಖಾಮುಖಿಯಾಗಿತ್ತು. ಟಾಸ್ ಗೆದ್ದ ಇಂಗ್ಲೆಂಡ್ ನಾಯಕ ಆ್ಯಂಡ್ರೊ ಸ್ಟ್ರಾಸ್ ಬ್ಯಾಟಿಂಗ್ ಆಯ್ದುಕೊಂಡರು. ನಾಯಕನ ನಿರ್ಧಾರವನ್ನು ಸಮರ್ಥಿಸುವಂತೆ ಇಂಗ್ಲೆಂಡ್ ಬ್ಯಾಟ್ಸ್ಮನ್ಗಳು ಐರ್ಲೆಂಡ್ ಬೌಲರುಗಳ ಬೆಂಡೆತ್ತಿದರು. ಪರಿಣಾಮ ನಿಗದಿತ 50 ಓವರ್ಗಳಲ್ಲಿ ಇಂಗ್ಲೆಂಡ್ 8 ವಿಕೆಟ್ ನಷ್ಟಕ್ಕೆ 327 ರನ್ ಪೇರಿಸಿತು.
ಈ ಬೃಹತ್ ಮೊತ್ತ ನೋಡಿದ ಬಹುತೇಕರು ಇಂಗ್ಲೆಂಡ್ಗೆ ಜಯ ಎಂದು ಷರಾ ಬರೆದಿದ್ದರು. ಬೆಟ್ಟಿಂಗ್ ಲೋಕದಲ್ಲಂತು ಒನ್ಸೈಡ್ಗೆ ಹಣ ಹರಿದು ಹೋಗಿತ್ತು. ಆದರೆ ಎಲ್ಲರ ಲೆಕ್ಕಚಾರವನ್ನು ತಲೆಕೆಳಗಾಗಿಸುವಂತೆ 6ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಬ್ಯಾಟ್ಸ್ಮನ್ ಅಬ್ಬರಿಸಿದರು. ಹೀಗೆ ಚಿನ್ನಸ್ವಾಮಿ ಕ್ರೀಡಾಂಗಣದ ಮೂಲೆ ಮೂಲೆಗೆ ಬೌಂಡರಿ ಸಿಕ್ಸರ್ಗಳು ಸುರಿಮಳೆಗೈದು ಕೇವಲ 63 ಎಸೆತಗಳಲ್ಲಿ 113 ರನ್ ಚಚ್ಚಿದರು. ಪರಿಣಾಮ 5 ಎಸೆತಗಳು ಬಾಕಿ ಇರುವಂತೆಯೇ ಐರ್ಲೆಂಡ್ ತಂಡ 3 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು. ಹೀಗೆ ಐರ್ಲೆಂಡ್ ತಂಡದ ಪರ ಶತಕ ಸಿಡಿಸಿ ಐತಿಹಾಸಿಕ ಗೆಲುವು ತಂದುಕೊಟ್ಟ ಬ್ಯಾಟ್ಸ್ಮನ್ ಕೆವಿನ್ ಓಬ್ರಿಯೆನ್.
ಬೆಂಗಳೂರಿನ ಪಿಚ್ನಲ್ಲಿ 13 ಬೌಂಡರಿ 6 ಭರ್ಜರಿ ಸಿಕ್ಸರ್ ಸಿಡಿಸಿ ಮನೆಮಾತಾಗಿದ್ದ ಐರ್ಲೆಂಡ್ ಆಲ್ರೌಂಡರ್ ಕೆವಿನ್ ಓಬ್ರಿಯೆನ್ ಇದೀಗ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ. ಕಳೆದ 15 ವರ್ಷಗಳ ಕಾಲ ಐರ್ಲೆಂಡ್ ಪರ ಬ್ಯಾಟ್ ಬೀಸಿರುವ ಓಬ್ರಿಯೆನ್ 153 ಏಕದಿನ ಪಂದ್ಯಗಳಿಂದ 3,618 ರನ್ ಬಾರಿಸಿದ್ದಾರೆ. ಅಲ್ಲದೆ 114 ವಿಕೆಟ್ಗಳನ್ನು ಉರುಳಿಸಿ ಮಿಂಚಿದ್ದಾರೆ. ಇದರ ಜೊತೆ 68 ಕ್ಯಾಚ್ಗಳನ್ನು ಹಿಡಿಯುವ ಮೂಲಕ ಐರ್ಲೆಂಡ್ ಪರ ಏಕದಿನ ಕ್ರಿಕೆಟ್ನಲ್ಲಿ ಅತ್ಯಧಿಕ ಕ್ಯಾಚ್ ಹಿಡಿದ ಫೀಲ್ಡರ್ ಎನಿಸಿಕೊಂಡಿದ್ದಾರೆ.
ಸದ್ಯ 37 ವರ್ಷದ ಕೆವಿನ್ ಓಬ್ರಿಯೆನ್ ಏಕದಿನ ಕ್ರಿಕೆಟ್ಗೆ ವಿದಾಯ ಹೇಳುವ ನಿರ್ಧಾರ ಮಾಡಿದ್ದು, ಇದಾಗ್ಯೂ ಟೆಸ್ಟ್ ಕ್ರಿಕೆಟ್ ಹಾಗೂ ಟಿ20 ಕ್ರಿಕೆಟ್ನಲ್ಲಿ ಮುಂದುವರೆಯುವುದಾಗಿ ತಿಳಿಸಿದ್ದಾರೆ. ಅಲ್ಲದೆ ಮುಂದಿನ ಟಿ20 ವಿಶ್ವಕಪ್ನಲ್ಲೂ ಭಾಗವಹಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ