Video: ಅಜರ್ ಸಿಡಿಲಬ್ಬರದ ಮುಂದೆ ಮಂಡಿಯೂರಿದ ಬಲಿಷ್ಠ ಮುಂಬೈ..!

ಕೇರಳ ತಂಡವನ್ನು ಗೆಲುವಿನ ದಡ ಸೇರಿಸಿದ ಮೊಹಮ್ಮದ್ ಅಜರುದ್ದೀನ್ ಕೇವಲ 54 ಎಸೆತಗಳಲ್ಲಿ ಅಜೇಯ 137 ರನ್​ ಚಚ್ಚಿದ್ದರು. ಈ ಭರ್ಜರಿ ಇನಿಂಗ್ಸ್​ನಲ್ಲಿ 9 ಬೌಂಡರಿಗಳು ಹಾಗೂ 11 ಸಿಕ್ಸರ್​ಗಳು ಮೂಡಿಬಂದಿತ್ತು.

Kerala Team

Kerala Team

  • Share this:
    ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಯುವ ಆಟಗಾರರ ಅಬ್ಬರ ಮುಂದುವರೆದಿದೆ. ಬುಧವಾರವಷ್ಟೇ ಮೇಘಾಲಯ ತಂಡದ ನಾಯಕ ಪುನೀತ್ ಬಿಶ್ತ್ ಮಿಜೋರಂ ವಿರುದ್ಧ ಕೇವಲ 51 ಎಸೆತಗಳಲ್ಲಿ ಅಜೇಯ 146 ರನ್ ಸಿಡಿಸುವ ಮೂಲಕ ಟಿ20 ಕ್ರಿಕೆಟ್​ನಲ್ಲಿ ಹೊಸ ದಾಖಲೆ ಬರೆದಿದ್ದರು. ಇದೀಗ ಕೇರಳ ತಂಡದ ಆರಂಭಿಕ ಆಟಗಾರ ಮೊಹಮ್ಮದ್ ಅಜರುದ್ದೀನ್ ಅಬ್ಬರಿಸಿ ಬೊಬ್ಬರಿದಿದ್ದಾನೆ.

    ಈ ಪಂದ್ಯದಲ್ಲಿ ಟಾಸ್ ಗೆದ್ದ ಕೇರಳ ತಂಡದ ನಾಯಕ ಸಂಜು ಸ್ಯಾಮ್ಸನ್ ಬೌಲಿಂಗ್ ಆಯ್ದುಕೊಂಡರು. ಅದರಂತೆ ಮೊದಲು ಬ್ಯಾಟ್ ಮಾಡಿದ ಮುಂಬೈ ಭರ್ಜರಿ ಆರಂಭ ಪಡೆಯಿತು. ಆರಂಭಿಕರಾಗಿ ಕಣಕ್ಕಿಳಿದ ಆದಿತ್ಯ ತಾರೆ ಹಾಗೂ ಯಶಸ್ವಿ ಜೈಸ್ವಾಲ್ ಮೊದಲ ವಿಕೆಟ್​ಗೆ 88 ರನ್ ಪೇರಿಸಿದ್ದರು. ಇದಾದ ಬಳಿಕ ಸೂರ್ಯಕುಮಾರ್ ಯಾದವ್ ಬಿರುಸಿನ 38 ರನ್ ಬಾರಿಸಿದ್ದರು. ಅಲ್ಲದೆ ಅಂತಿಮ ಹಂತದಲ್ಲಿ ಶಿವಂ ದುಬೆ ಕೇವಲ 13 ಎಸೆತಗಳಲ್ಲಿ 26 ರನ್ ಸಿಡಿಸುವ ಮೂಲಕ ತಂಡದ ಮೊತ್ತವನ್ನು 7 ವಿಕೆಟ್ ನಷ್ಟಕ್ಕೆ 196 ಕ್ಕೆ ತಂದು ನಿಲ್ಲಿಸಿದರು.

    ಈ ಬೃಹತ್ ಮೊತ್ತವನ್ನು ಬೆನ್ನತ್ತಲು ಆರಂಭಿಕರಾಗಿ ರಾಬಿನ್ ಉತ್ತಪ್ಪ ಹಾಗೂ ಮೊಹಮ್ಮದ್ ಅಜರುದ್ದೀನ್ ಕಣಕ್ಕಿಳಿದರು. ಧವಳ್ ಕುಲಕರ್ಣ್, ಶಮ್ಸ್ ಮುಲಾನಿ, ತುಷಾರ್ ದೇಶಪಾಂಡೆಯಂತಹ ಸ್ಟಾರ್ ಬೌಲರುಗಳ ವಿರುದ್ಧ ಕೇರಳದ ಓಪನರ್ಸ್ ಅಬ್ಬರಿಸಿದ್ದರು. ಒಂದೆಡೆ ಉತ್ತಪ್ಪ ಬಿರುಸಿನ ಆಟಕ್ಕೆ ಒತ್ತು ನೀಡಿದರೆ, ಮತ್ತೊಂದೆಡೆ ಅಜರ್ ಅಬ್ಬರಿಸಲಾರಂಭಿಸಿದರು.

    ಪರಿಣಾಮ 10 ಓವರ್​ಗೂ ಮುನ್ನವೇ ಕೇರಳ ತಂಡದ ಮೊತ್ತ 100ರ ಗಡಿ ದಾಟಿತು. ಈ ನಡುವೆ ಕೇವಲ 20 ಎಸೆತಗಳಲ್ಲಿ ಅರ್ಧಶತಕ ಪೂರೈಸಿ ಅಜರ್ ಮಿಂಚಿದರು. ಹಾಫ್ ಸೆಂಚುರಿ ಬಳಿಕ ಬ್ಯಾಟಿಂಗ್ ಬಿರುಸು ಹೆಚ್ಚಿಸಿದ ಅಜರ್ ಸಿಕ್ಸ್-ಫೋರ್​ಗಳ ಸುರಿಮಳೆಗೈದರು. ಅಲ್ಲದೆ ರಾಬಿನ್ ಉತ್ತಪ್ಪ ಜೊತೆಗೂಡಿ ಮೊದಲ ವಿಕೆಟ್​ಗೆ 129 ರನ್​ ಕಲೆಹಾಕಿದರು.

    ಈ ಹಂತದಲ್ಲಿ ಉತ್ತಪ್ಪ ನಿರ್ಗಮಿಸಿದರೆ ಅತ್ತ ಅಜರ್ ಅಬ್ಬರ ಮಾತ್ರ ಕೊನೆಯಾಗಿರಲಿಲ್ಲ. ಮುಂಬೈ ಬೌಲರುಗಳನ್ನು ಮನಸೋ ಇಚ್ಛೆ ದಂಡಿಸಿದ ಯುವ ಬಲಗೈ ಬ್ಯಾಟ್ಸ್​ಮನ್ ಕೇವಲ 37 ಎಸೆತಗಳಲ್ಲಿ ಶತಕ ಸಿಡಿಸಿದರು. ಈ ಮೂಲಕ ದೇಶೀಯ ಟಿ20 ಟೂರ್ನಿಯಲ್ಲಿ ಅತೀ ವೇಗದ ಶತಕ ಸಿಡಿಸಿದ 2ನೇ ಆಟಗಾರ ಎನಿಸಿಕೊಂಡರು.

    ಅಜರ್ ಅಬ್ಬರದ ಬ್ಯಾಟಿಂಗ್ ಮುಂದೆ ಲಯ ತಪ್ಪಿದ ಮುಂಬೈ ಬೌಲರ್ ತುಷಾರ್ ದೇಶಪಾಂಡೆ 3 ಓವರ್​ನಲ್ಲಿ ನೀಡಿದ್ದು ಬರೋಬ್ಬರಿ 55 ರನ್​ಗಳು. ಅತ್ತ ಕಠಿಣ ಗುರಿಯನ್ನು ಅಜರ್ ಸಾರಥ್ಯದಲ್ಲಿ ಕೇರಳ ತಂಡ 15.5 ಓವರ್​ನಲ್ಲಿ ಚೇಸ್ ಮಾಡಿತು. ಈ ಮೂಲಕ ಬಲಿಷ್ಠ ಮುಂಬೈಗೆ ಕೇರಳ 8 ವಿಕೆಟ್​ಗಳ ಸೋಲಿನ ರುಚಿ ತೋರಿಸಿತು.

    ಇನ್ನು ಕೇರಳ ತಂಡವನ್ನು ಗೆಲುವಿನ ದಡ ಸೇರಿಸಿದ ಮೊಹಮ್ಮದ್ ಅಜರುದ್ದೀನ್ ಕೇವಲ 54 ಎಸೆತಗಳಲ್ಲಿ ಅಜೇಯ 137 ರನ್​ ಚಚ್ಚಿದ್ದರು. ಈ ಭರ್ಜರಿ ಇನಿಂಗ್ಸ್​ನಲ್ಲಿ 9 ಬೌಂಡರಿಗಳು ಹಾಗೂ 11 ಸಿಕ್ಸರ್​ಗಳು ಮೂಡಿಬಂದಿತ್ತು. ಅದರಲ್ಲೂ ಅಜರ್ ಬ್ಯಾಟ್​ನಿಂದ ಸಿಡಿದ 2 ನಟರಾಜ್ ಸಿಕ್ಸರ್​ಗಳು ಮನಮೋಹಕವಾಗಿತ್ತು.



    ಕಾಸರಗೋಡು ಮೂಲದ 26 ವರ್ಷದ ಅಜರ್ ಅವರ ಸಿಡಿಲಬ್ಬರದ ಬ್ಯಾಟಿಂಗ್​ಗೆ ಟೀಮ್ ಇಂಡಿಯಾದ ಡ್ಯಾಶಿಂಗ್ ಓಪನರ್ ವೀರೇಂದ್ರ ಸೆಹ್ವಾಗ್ ಸೇರಿದಂತೆ ಅನೇಕ ಮಾಜಿ ಕ್ರಿಕೆಟರುಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
    Published by:zahir
    First published: