ಪಾಕ್ ವಿರುದ್ಧ ಕಾಶ್ಮೀರಿ ಯುವಕನ ಜಬರ್ದಸ್ತ್ ಬ್ಯಾಟಿಂಗ್: ಟ್ರೋಫಿ ಗೆದ್ದರೂ ಕೆಲಸದ ಚಿಂತೆಯಲ್ಲಿ ಯುವ ಕ್ರಿಕೆಟಿಗ

ಪಂದ್ಯದ ಬಳಿಕ ಮಾಡಿದ ಸಾಧನೆಯನ್ನು ಕುಟುಂಬದೊಂದಿಗೆ ಹಂಚಿಕೊಳ್ಳಲು ಬಯಸಿದ್ದೆ. ಆದರೆ ನನ್ನ ಅದೃಷ್ಟದ ದಿನವೇ ದುರಾದೃಷ್ಟವನ್ನು ತಂದೊಡ್ಡಿತು. ಏಕೆಂದರೆ ನಾನು ಪಾಕ್ ವಿರುದ್ಧ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಸ್ವೀಕರಿಸಿದ ದಿನ ಕಾಶ್ಮೀರದಲ್ಲಿ ಮೊಬೈಲ್ ನೆಟ್​ವರ್ಕ್​ಗಳು ಬಂದ್ ಆಗಿದ್ದವು.

zahir | news18-kannada
Updated:August 14, 2019, 6:05 PM IST
ಪಾಕ್ ವಿರುದ್ಧ ಕಾಶ್ಮೀರಿ ಯುವಕನ ಜಬರ್ದಸ್ತ್ ಬ್ಯಾಟಿಂಗ್: ಟ್ರೋಫಿ ಗೆದ್ದರೂ ಕೆಲಸದ ಚಿಂತೆಯಲ್ಲಿ ಯುವ ಕ್ರಿಕೆಟಿಗ
Wasim Iqbal
  • Share this:
ವಿಶೇಷಚೇತನರ ವಿಶ್ವ ಟಿ20 ಸರಣಿಯನ್ನು ಭಾರತ ತಂಡ ಗೆದ್ದು ಬೀಗಿದೆ. ಫೈನಲ್​ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು 36 ರನ್​ಗಳಿಂದ ಬಗ್ಗು ಬಡಿಯುವ ಮೂಲಕ ಟೀಂ ಇಂಡಿಯಾ ವಿಶೇಷಚೇತನರ ತಂಡ ಮಹತ್ವದ ಸಾಧನೆ ಮೆರೆದಿದೆ. ಇದಕ್ಕೂ ಮುನ್ನ ಭಾರತ ತಂಡವು ಸೆಮಿಫೈನಲ್​ನಲ್ಲಿ ಪಾಕಿಸ್ತಾನ ತಂಡವನ್ನು ಎದುರಿಸಿತ್ತು. ರೋಚಕತೆಯಿಂದ ಕೂಡಿದ ಸೆಮಿಯಲ್ಲಿ ಭಾರತಕ್ಕೆ ಗೆಲುವು ತಂದುಕೊಡುವಲ್ಲಿ ಪ್ರಮುಖ ಪಾತ್ರವಹಿಸಿದ್ದು ಕಾಶ್ಮೀರದ ಬ್ಯಾಟ್ಸ್​ಮನ್ ವಾಸಿಂ ಇಕ್ಬಾಲ್ ಎಂಬುದು ವಿಶೇಷ.

ವಿಶೇಷಚೇತನರ ಟೀಂ ಇಂಡಿಯಾ ತಂಡ


ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಪಾಕ್ ಬೌಲರುಗಳನ್ನು ಆತ್ಮ ವಿಶ್ವಾಸದಿಂದ ಎದುರಿಸಿದ ಕಣಿವೆ ರಾಜ್ಯದ ವಿಶೇಷಚೇತನ ಕ್ರಿಕೆಟಿಗ ಅರ್ಧಶತಕ ಬಾರಿಸುವ ಮೂಲಕ ಟೀಂ ಇಂಡಿಯಾ ಫೈನಲ್ ಪ್ರವೇಶಿಸುವಂತೆ ಮಾಡಿದ್ದರು.​ 43 ಎಸೆತಗಳಲ್ಲಿ 69 ರನ್​ ಚಚ್ಚಿದ ಇಕ್ಬಾಲ್ ತಮ್ಮ ಇನಿಂಗ್ಸ್​ನಲ್ಲಿ ನಾಲ್ಕು ಬೌಂಡರಿ ಹಾಗೂ ಆರು ಸಿಕ್ಸರ್​ಗಳನ್ನು ಸಿಡಿಸಿದ್ದರು. ಈ ಅಮೋಘ ಆಟದ ನೆರವಿನಿಂದ ಭಾರತವು ಪಾಕ್ ನೀಡಿದ 150 ರನ್​ಗಳ ಗುರಿಯನ್ನು ಬೆನ್ನತ್ತುವಲ್ಲಿ ಯಶಸ್ವಿಯಾಗಿದ್ದರು.

ಹಬ್ಬ ತಂದ ಹರುಷ:
ಈದ್ ಹಬ್ಬದಂದು( ಆ.12) ನಡೆದಿದ್ದ ಸೆಮಿಫೈನಲ್​ನಲ್ಲಿ ವಾಸಿಂ ಇಕ್ಬಾಲ್ ವೀರಾವೇಷದಿಂದಲೇ ಬ್ಯಾಟ್ ಬೀಸಿದ್ದರು. ಪರಿಣಾಮ ಫೈನಲ್ ಪ್ರವೇಶಿಸಲಿರುವ ಪಾಕ್​ ಕನಸು ಕಮರಿ ಹೋಯಿತು. ಇದೇ ಮೊದಲ ಬಾರಿಗೆ ಇಕ್ಬಾಲ್ ಹಬ್ಬದ ದಿನದಂದು ಕುಟುಂಬದಿಂದ ದೂರ ಉಳಿದಿದ್ದರು. ಒಂದೆಡೆ ಮನೆಯವರ ಜೊತೆಗಿನ ಹಬ್ಬ ಮರೆಯಾದರೆ, ಇಕ್ಬಾಲ್ ತಮ್ಮ ಖುಷಿಗೆ ಕಿಚ್ಚು ಹಚ್ಚುವಂತಹ ಇನಿಂಗ್ಸ್ ಕಟ್ಟಿ ಈದ್ ಸಂಭ್ರಮವನ್ನು ಹೆಚ್ಚಿಸಿದ್ದರು.

ಕುಟುಂಬದೊಂದಿಗಿನ ಕನೆಕ್ಷನ್ ಕಟ್:
ಕಾಶ್ಮೀರದ ಗೋಪಾಲ್​ಪೊರ ಗ್ರಾಮ ನಿವಾಸಿಯಾಗಿರುವ ವಾಸಿಂ ಇಕ್ಬಾಲ್ ಕೊನೆಯ ಬಾರಿ ಕುಟುಂಬದೊಂದಿಗೆ ಮಾತನಾಡಿದ್ದು ಆಗಸ್ಟ್ 3 ರಂದು. ಇದಾದ ಬಳಿಕ ಜಮ್ಮು-ಕಾಶ್ಮೀರಕ್ಕೆ ನೀಡಲಾದ ವಿಶೇಷ ಸ್ಥಾನಮಾನ ವಿಧಿ 370 ಅನ್ನು ರದ್ಧುಪಡಿಸಲಾಯಿತು. ಇದರಿಂದ ರಾಜ್ಯದಲ್ಲಿ ಅಹಿತಕರ ಘಟನೆ ನಡೆಯದಂತೆ ಮೊಬೈಲ್ ನೆಟ್​ವರ್ಕ್​ಗಳ ಮೇಲೆ ನಿರ್ಬಂಧ ಹೇರಲಾಗಿತ್ತು. ಹೀಗಾಗಿ ಯಾರೊಂದಿಗೂ ಮಾತನಾಡಲು ಸಾಧ್ಯವಾಗಿರಲಿಲ್ಲ. 'ಪಂದ್ಯಕ್ಕೂ ಮುನ್ನ ಒತ್ತಡಕ್ಕೊಳಗಾಗಿದ್ದೆ. ಸುಮಾರು 10 ದಿನಗಳಿಂದ ಯಾವುದೇ ಸಂಪರ್ಕ ಇರಲಿಲ್ಲ. ಒಂದೆಡೆ ಪಂದ್ಯದ ಒತ್ತಡ ಮತ್ತೊಂದೆಡೆ ಕುಟುಂಬದವರ ಚಿಂತೆ. ಇವೆರಡನ್ನೂ ಸಂಭಾಳಿಸುವುದು ಸುಲಭವಲ್ಲ. ಅದು ಕೂಡ ಪಾಕಿಸ್ತಾನದಂತಹ ತಂಡದ ವಿರುದ್ಧ ಸೆಮಿಫೈನಲ್ ಆಡುವ ವೇಳೆ' ಎಂದು ಇಕ್ಬಾಲ್ ತಮ್ಮ ಅಭಿಪ್ರಾಯಪಟ್ಟಿದ್ದಾರೆ.ಇಂಜಿನಿಯರಿಂಗ್ ಪದವೀಧರ:
ವಾಸಿಂ ಇಕ್ಬಾಲ್ ಇಂಜಿನಿಯರಿಂಗ್ ಪದವೀಧರ. 25ರ ಹರೆಯದ ಈ ಯುವ ಕ್ರಿಕೆಟಿಗ ಉತ್ತಮ ಉದ್ಯೋಗ ಹುಡುಕಾಟದಲ್ಲಿದ್ದಾರೆ. ತಮ್ಮ ಸ್ವಂತ ಕಾಲ ಮೇಲೆ ನಿಲ್ಲಬೇಕೆಂಬ ಛಲದಲ್ಲಿರುವ ವಾಸಿಂ ವಿಶೇಷಚೇತನರ ವಿಶ್ವ ಟಿ20 ಸರಣಿಯ ಖುಷಿಯೊಂದಿಗೆ ಇದೀಗ ಉತ್ತಮ ಉದ್ಯೋಗದ ಅವಕಾಶವನ್ನು ಎದುರು ನೋಡುತ್ತಿದ್ದಾರೆ. ಬಾಲ್ಯದಲ್ಲಿ ಅಪಘಾತವಾಗಿರುವುದರಿಂದ ವಿಶೇಷಚೇತನ ಆಗುವಂತಾಯಿತು ಎಂದು ಸ್ಮರಿಸುತ್ತಾರೆ ಇಕ್ಬಾಲ್. ಅಪಘಾತದಲ್ಲಿ ಗಾಯಗೊಂಡು ಕಾಲಿಗೆ ಶಸ್ತ್ರ ಚಿಕಿತ್ಸೆ ನಡೆಸಲಾಗಿತ್ತು. ಆದರೆ ಈ ಶಸ್ತ್ರಚಿಕಿತ್ಸೆ ವೇಳೆ ಡಾಕ್ಟರ್ ಮಾಡಿದ ಎಡವಟ್ಟಿನಿಂದಾಗಿ ವಿಶೇಷಚೇತನನಾದೆ. ಆ ಬಳಿಕ ಸ್ಥಳೀಯ ಕ್ಲಬ್ ಖಾನ್ ಸುಲ್ತಾನ್ಸ್‌ಗೆ ಸೇರಿ ಅಲ್ಲಿ ಕಾಶ್ಮೀರ ಕ್ರಿಕೆಟಿಗ ಪರ್ವೇಜ್ ರಸೂಲ್ ಅವರ ಮಾರ್ಗದರ್ಶನದಿಂದ ಕ್ರಿಕೆಟ್ ಕಲಿತಿರುವುದಾಗಿ ಇಕ್ಬಾಲ್ ತಮ್ಮ ಸಾಧನೆಯ ಹಿಂದಿನ ಕಹಾನಿಯನ್ನು ಬಿಚ್ಚಿಟ್ಟರು.

ಅದೃಷ್ಟ ಮತ್ತು ದುರಾದೃಷ್ಟ:
ಪಂದ್ಯದ ಬಳಿಕ ಮಾಡಿದ ಸಾಧನೆಯನ್ನು ಕುಟುಂಬದೊಂದಿಗೆ ಹಂಚಿಕೊಳ್ಳಲು ಬಯಸಿದ್ದೆ. ಆದರೆ ನನ್ನ ಅದೃಷ್ಟದ ದಿನವೇ ದುರಾದೃಷ್ಟವನ್ನು ತಂದೊಡ್ಡಿತು. ಏಕೆಂದರೆ ನಾನು ಪಾಕ್ ವಿರುದ್ಧ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಸ್ವೀಕರಿಸಿದ ದಿನ ಕಾಶ್ಮೀರದಲ್ಲಿ ಮೊಬೈಲ್ ನೆಟ್​ವರ್ಕ್​ಗಳು ಬಂದ್ ಆಗಿದ್ದವು. ಇದರಿಂದ ನನ್ನ ಸಾಧನೆ ಕೂಡ ಕುಟುಂಬದವರಿಗೆ ತಿಳಿಯದಂದಾಯಿತು. ಈಗ ಪುನಃ ಕುಟುಂಬವನ್ನು ಸೇರಲು ಉತ್ಸುಕನಾಗಿದ್ದೇನೆ. ನಾವು ಪಡೆದಿರುವ ಟ್ರೋಫಿಯ ಬಗ್ಗೆ ತಿಳಿಸಲು ಕಾತುರನಾಗಿದ್ದೇನೆ ಎಂದು ವಾಸಿಂ ಇಕ್ಬಾಲ್ ಹೇಳಿದರು.
First published:August 14, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ