ಜನವರಿ 10 ರಿಂದ ಆರಂಭಗೊಳ್ಳಲಿರುವ ಸಯ್ಯದ್ ಮುಷ್ತಾಕ್ ಅಲಿ ಟಿ20 ಕ್ರಿಕೆಟ್ ಟೂರ್ನಿಗೆ ಕರ್ನಾಟಕ ತಂಡವನ್ನು ಪ್ರಕಟಿಸಲಾಗಿದೆ. 20 ಮಂದಿಯ ಈ ಬಳಗದಿಂದ ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಮನೀಷ್ ಪಾಂಡೆ ಹೊರಗುಳಿದಿದ್ದಾರೆ. ಅವರ ಬದಲಾಗಿ ತಂಡವನ್ನು ಕರುಣ್ ನಾಯರ್ ಮುನ್ನಡೆಸಲಿದ್ದಾರೆ. ಇನ್ನು ಉಪನಾಯಕನ ಜವಾಬ್ದಾರಿ ಪವನ್ ದೇಶಪಾಂಡೆ ಅವರಿಗೆ ವಹಿಸಲಾಗಿದೆ.
2019ರ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದ ಮನೀಷ್ ಪಾಂಡೆ ಸದ್ಯ ಮೊಣಕೈ ಗಾಯದಿಂದ ಬಳಲುತ್ತಿದ್ದಾರೆ. ಅತ್ತ ಕೆಎಲ್ ರಾಹುಲ್ ಹಾಗೂ ಮಯಾಂಕ್ ಅಗರ್ವಾಲ್ ಕೂಡ ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದಾರೆ. ಹೀಗಾಗಿ ಈ ಬಾರಿ ಅನುಭವಿ ಆಟಗಾರರ ಕೊರತೆ ಕರ್ನಾಟಕ ತಂಡವನ್ನು ಕಾಡಲಿದೆ.
ಇನ್ನು ಜನವರಿ 10 ರಿಂದ ಟೂರ್ನಿ ಆರಂಭವಾಗಲಿದ್ದು, ಕರ್ನಾಟಕ ತಂಡ ತನ್ನ ಮೊದಲ ಪಂದ್ಯವನ್ನ ಜಮ್ಮು-ಕಾಶ್ಮೀರ ವಿರುದ್ಧ ಆಡಲಿದೆ. ಹಾಗೆಯೇ ಎ ಗುಂಪಿನಲ್ಲಿರುವ ಪಂಜಾಬ್, ಉತ್ತರ ಪ್ರದೇಶ, ರೈಲ್ವೇಸ್ ಮತ್ತು ತ್ರಿಪುರಾ ರಾಜ್ಯ ತಂಡಗಳ ವಿರುದ್ಧ ಕರುಣ್ ನಾಯರ್ ಪಡೆ ಹೋರಾಟ ನಡೆಸಲಿದೆ. ಒಟ್ಟು ಆರು ಗುಂಪುಗಳನ್ನ ರಚಿಸಲಾಗಿದೆ. ಮೇಲಿನ ಹಂತದ ಐದು ಇಲೈಟ್ ಗುಂಪು ಹಾಗೂ ಕೆಳಗಿನ ಹಂತದ ಒಂದು ಪ್ಲೇಟ್ ಗುಂಪು. ಕರ್ನಾಟಕ ತಂಡ ಇಲೈಟ್ ವಿಭಾಗದ ಎ ಗುಂಪಿನಲ್ಲಿದೆ. ಎ ಗುಂಪಿನ ಎಲ್ಲಾ ಪಂದ್ಯಗಳು ಬೆಂಗಳೂರಿನಲ್ಲೇ ನಡೆಯುತ್ತವೆ.
ಬೆಂಗಳೂರು ಅಲ್ಲದೆ ಕೋಲ್ಕತಾ, ವಡೋದರಾ, ಇಂದೋರ್, ಮುಂಬೈ ಮತ್ತು ಚೆನ್ನೈನಲ್ಲಿಯೂ ಪ್ರತ್ಯೇಕ ಗುಂಪುಗಳ ಪಂದ್ಯಗಳು ನಡೆಯುತ್ತವೆ. ಪ್ಲೇಟ್ ವಿಭಾಗದ ಪಂದ್ಯಗಳು ಚೆನ್ನೈನಲ್ಲಿಯೇ ನಡೆಯಲಿವೆ. ಆದರೆ, ತಮಿಳುನಾಡು ಇರುವ ಬಿ ಗುಂಪಿನ ಎಲ್ಲಾ ಪಂದ್ಯಗಳು ಕೋಲ್ಕತಾದಲ್ಲಿ ನಡೆಯಲಿವೆ. ಹೀಗಾಗಿ ತಮಿಳುನಾಡಿಗೆ ತವರಿನಲ್ಲಿ ಆಡುವ ಅವಕಾಶ ಕೈತಪ್ಪಿದೆ. ಫೈನಲ್ ಸೇರಿದಂತೆ ನಾಕೌಟ್ ಪಂದ್ಯಗಳು ಅಹ್ಮದಾಬಾದ್ನ ಮೊಟೇರಾದಲ್ಲಿ ನಡೆಯುತ್ತವೆ.
ಎಲ್ಲಾ 38 ತಂಡಗಳ ಆಟಗಾರರು ಮತ್ತು ಸಿಬ್ಬಂದಿಗೆ ಟೂರ್ನಿ ಆರಂಭಕ್ಕೆ ಮುನ್ನ ಮೂರು ಸುತ್ತುಗಳ ಕೋವಿಡ್ ಪರೀಕ್ಷೆ ಇರುತ್ತದೆ. ಜನವರಿ 2, 4 ಮತ್ತು 6ರಂದು ಕೋವಿಡ್ ಪರೀಕ್ಷೆ ನಡೆಸಲಾಗುತ್ತದೆ. ಆ ನಂತರವಷ್ಟೇ ಟ್ರೈನಿಂಗ್ ಪ್ರಕ್ರಿಯೆ ಆರಂಭವಾಗುತ್ತದೆ. ಗ್ರೂಪ್ ಹಂತದ ಪಂದ್ಯಗಳು ಮುಗಿದ ಬಳಿಕ ನಾಕೌಟ್ ಶುರುವಾಗುವ ಮುನ್ನ ಜನವರಿ 20 ಮತ್ತು 22ರಂದು ಇನ್ನೆರಡು ಬಾರಿ ಕೋವಿಡ್ ಪರೀಕ್ಷೆ ಮಾಡಲಾಗುತ್ತದೆ. ಸೆಮಿ ಫೈನಲ್ ಪಂದ್ಯವು ಜನವರಿ 29 ರಂದು ನಡೆಯಲಿದ್ದು, ಜನವರಿ 31 ರಂದು ಫೈನಲ್ ಪಂದ್ಯವು ಜರುಗಲಿದೆ.
ಕರ್ನಾಟಕ ತಂಡ ಇಂತಿದೆ:
ಕರುಣ್ ನಾಯರ್ (ನಾಯಕ), ಪವನ್ ದೇಶಪಾಂಡೆ (ಉಪನಾಯಕ), ದೇವದತ್ ಪಡಿಕ್ಕಲ್, ರೋಹನ್ ಕದಮ್, ಸಿದ್ಧಾರ್ಥ್ ಕೆವಿ, ಶ್ರೀಜಿತ್ ಕೆಎಲ್ (ವಿಕೆಟ್ ಕೀಪರ್), ಶರತ್ ಬಿಆರ್ (ವಿಕೆಟ್ ಕೀಪರ್), ಪ್ರವೀಣ್ ದುಬೆ, ಮಿಥುನ್ ಎ, ಪ್ರಸಿದ್ಧ್ ಎಂ ಕೃಷ್ಣ, ಪ್ರತೀಕ್ ಜೈನ್, ಕೌಶಿಕ್ ವಿ, ರೋನಿತ್ ಮೋರೆ, ದರ್ಶನ್ ಎಂಬಿ, ಮನೋಜ್ ಭಂಡಾಜೆ, ಶುಭಾಂಗ್ ಹೆಗ್ಡೆ, ಅನಿರುದ್ಧ್ ಜೋಶಿ, ಶ್ರೇಯಸ್ ಗೋಪಾಲ್, ಗೌತಮ್ ಕೆ, ಸುಚಿತ್ ಜೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ