ತಿರುವನಂತಪುರಂ, ಡಿ. 14: ಕರ್ನಾಟಕ ಕ್ರಿಕೆಟ್ ತಂಡ (Karnataka Cricket Team) ವಿಜಯ್ ಹಜಾರೆ ಟ್ರೋಫಿಯಲ್ಲಿ (Vijay Hazare Trophy) ಪ್ರೀಕ್ವಾರ್ಟರ್ ಫೈನಲ್ ತಲುಪಿದೆ. ಮನೀಶ್ ಪಾಂಡೆ (Manish Pandey) ಅವರ ಅಮೋಘ ಬ್ಯಾಟಿಂಗ್ ನಡುವೆಯೂ ಬಂಗಾಳ ವಿರುದ್ಧ ಕರ್ನಾಟಕ 4 ವಿಕೆಟ್ಗಳಿಂದ ಸೋತಿದೆ. ಆದರೆ, ಎಲೈಟ್ ಬಿ ಗುಂಪಿನಲ್ಲಿ ಎರಡನೇ ಸ್ಥಾನ ಪಡೆಯುವ ಮೂಲಕ 16ರ ಹಂತ ಪ್ರವೇಶಿಸಲು ಸಾಧ್ಯವಾಗಿದೆ. ಇಂದು ಬಂಗಾಳ ವಿರುದ್ಧ ಗೆದ್ದಿದ್ದರೆ ಕರ್ನಾಟಕ ಗ್ರೂಪ್ ಟಾಪರ್ ಆಗಿ ನೇರ ಕ್ವಾರ್ಟರ್ ಫೈನಲ್ ತಲುಪುತ್ತಿತ್ತು. ಆದರೆ, ಬಂಗಾಳದ ಬ್ಯಾಟುಗಾರರು ಅಮೋಘ ಪ್ರದರ್ಶನ ನೀಡಿ ಕರ್ನಾಟಕಕ್ಕೆ ಎರಡನೇ ಸೋಲಿನ ರುಚಿ ಕೊಟ್ಟಿದ್ದಾರೆ.
ಇಂದು ನಡೆದ ಲೀಗ್ ಹಂತದ ಕೊನೆಯ ಸುತ್ತಿನ ಪಂದ್ಯದಲ್ಲಿ ಕರ್ನಾಟಕವೇ ಮೊದಲು ಬ್ಯಾಟ್ ಮಾಡಿ 8 ವಿಕೆಟ್ ನಷ್ಟಕ್ಕೆ 252 ರನ್ ಗಳಿಸಿತು. ನಾಯಕ ಮನೀಶ್ ಪಾಂಡೆ 90 ರನ್ ಗಳಿಸಿ 10 ರನ್ನಿಂದ ಶತಕವಂಚಿತರಾದರು. 85 ಎಸೆಗಳನ್ನ ಎದುರಿಸಿದ ಅವರು 4 ಸಿಕ್ಸರ್ 4 ಬೌಂಡರಿ ಭಾರಿಸಿದರು. ಅವರನ್ನ ಬಿಟ್ಟರೆ ಆರಂಭಿಕ ಬ್ಯಾಟರ್ ರೋಹನ್ ಕದಂ, ಕರುಣ್ ನಾಯರ್ ಮತ್ತು ಆಲ್ರೌಂಡರ್ ಪ್ರವೀಣ್ ದುಬೇ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಆದರೆ, ಅರ್ಧಶತಕ ಭಾರಿಸಲು ಸಾಧ್ಯವಾಗಿದ್ದು ಮನೀಶ್ ಪಾಂಡೆಗೆ ಮಾತ್ರವೇ. ಹೀಗಾಗಿ, ಕರ್ನಾಟಕ ತಂಡಕ್ಕೆ ದೊಡ್ಡ ಮೊತ್ತ ಕಲೆಹಾಕಲು ಸಾಧ್ಯವಾಗಲಿಲ್ಲ.
ಬಂಗಾಳದ ಆಕಾಶ್ ದೀಪ್, ಶಹಬಾಜ್ ಅಹ್ಮದ್ ಮತ್ತು ಪ್ರತೀಪ್ತಾ ಪ್ರಾಮಾಣಿಕ್ ಅವರು ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದರು. ಪ್ರದೀಪ್ತಾ 48 ರನ್ಗೆ 4 ವಿಕೆಟ್ ಪಡೆದು ಮಾರಕವಾಗಿ ಪರಿಣಿಸಿದರು.
ಕರ್ನಾಟಕ ಒಡ್ಡಿದ 253 ರನ್ ಗುರಿಯನ್ನ ಚೇಸ್ ಮಾಡಿದ ಬಂಗಾಳದ ತಂಡ ಒಂದು ಹಂತದಲ್ಲಿ ದಿಢೀರ್ ಮೂರು ವಿಕೆಟ್ ಕಳೆದುಕೊಂಡರೂ ಸುದೀಪ್ ಚಟರ್ಜಿ, ರಿತ್ವಿಕ್ ರಾಯ್ ಅವರಿಬ್ಬರ ಜೊತೆಯಾಟದಿಂದ ಚೇತರಿಸಿಕೊಂಡಿತು. ಕರ್ನಾಟಕದ ಬೌಲರ್ಗಳು ಕೊನೆಕೊನೆಯಲ್ಲಿ ಒತ್ತಡ ಹೇರಲು ಅವಿರತ ಪ್ರಯತ್ನ ಮಾಡಿದರೂ ಅಂತಿಮವಾಗಿ ಬಂಗಾಳಕ್ಕೆ ಗೆಲುವು ಸಿಕ್ಕಿತು.
ಇದನ್ನೂ ಓದಿ: ಹರ್ಷಿತ್ ಸೇಠ್, 6 ಬಾಲ್ಗೆ 6 ವಿಕೆಟ್ ಪಡೆದ 16 ವರ್ಷದ ಸ್ಪಿನ್ನರ್; ಪಾಕಿಸ್ತಾನೀ ತಂಡದ ವಿರುದ್ಧ ಸಾಧನೆ
ಕರ್ನಾಟಕ ಈ ಸೋಲಿನಿಂದಿಗೆ ತನ್ನ ಬಿ ಗುಂಪಿನಲ್ಲಿ ಎರಡನೇ ಸ್ಥಾನಕ್ಕೆ ಇಳಿಯಿತು. ಕರ್ನಾಟಕ, ತಮಿಳುನಾಡು, ಬಂಗಾಳ ಮತ್ತು ಪುದುಚೇರಿ ತಂಡಗಳು ತಲಾ 12 ಅಂಕಗಳನ್ನ ಗಳಿಸಿದವರಾದರೂ ತಮಿಳುನಾಡು ಮತ್ತು ಕರ್ನಾಟಕ ಉತ್ತಮ ರನ್ ರೇಟ್ನೊಂದಿಗೆ ಮೊದಲೆರಡು ಸ್ಥಾನ ಪಡೆದವು.
ಕ್ವಾರ್ಟರ್ ಫೈನಲ್ ತಲುಪಿದ ತಂಡಗಳು:
ಎ ಗುಂಪಿನಿಂದ ಹಿಮಾಚಲಪ್ರದೇಶ, ಬಿ ಗುಂಪಿನಿಂದ ತಮಿಳುನಾಡು, ಸಿ ಗುಂಪಿನಿಂದ ಸೌರಾಷ್ಟ್ರ, ಡಿ ಗುಂಪಿನಿಂದ ಕೇರಳ ಮತ್ತು ಇ ಗುಂಪಿನಿಂದ ರಾಜಸ್ಥಾನ್ ತಂಡಗಳು ಅಗ್ರಸ್ಥಾನದೊಂದಿಗೆ ಕ್ವಾರ್ಟರ್ ಫೈನಲ್ ತಲುಪಿವೆ.
ಪ್ರೀಕ್ವಾರ್ಟರ್ ಫೈನಲ್ ಪ್ರವೇಶಿಸಿದ ತಂಡಳು:
ಕರ್ನಾಟಕ, ವಿದರ್ಭ, ಉತ್ತರ ಪ್ರದೇಶ, ಮಧ್ಯ ಪ್ರದೇಶ, ಸರ್ವಿಸಸ್ ಮತ್ತು ತ್ರಿಪುರಾ ತಂಡಗಳು ಪ್ರೀಕ್ವಾರ್ಟರ್ಫೈನಲ್ ಹಂತಕ್ಕೆ ಏರಿವೆ. ಪ್ರೀಕ್ವಾರ್ಟರ್ಫೈನಲ್ ಹಂತದಿಂದ ಮೂರು ತಂಡಗಳು ಕ್ವಾರ್ಟರ್ ಫೈನಲ್ಗೆ ಅರ್ಹತೆ ಪಡೆಯಲಿವೆ.
ಇದನ್ನೂ ಓದಿ: ಟೀಮ್ ಇಂಡಿಯಾದಲ್ಲಿ ಬಿರುಕು?: ಸೌತ್ ಆಫ್ರಿಕಾ ಓಡಿಐ ಸರಣಿಯಿಂದ ಹಿಂದೆ ಸರಿದ ವಿರಾಟ್ ಕೊಹ್ಲಿ
ಕರ್ನಾಟಕ ತನ್ನ ಬಿ ಗುಂಪಿನಲ್ಲಿ ಎರಡು ಪಂದ್ಯಗಳನ್ನ ಸೋತಿದೆ. ಬಂಗಾಳಕ್ಕೆ ಮುಂಚೆ ತಮಿಳುನಾಡು ವಿರುದ್ಧವೂ ಕರ್ನಾಟಕ ಸೋತಿತ್ತು. ಆದರೆ, ಉಳಿದ ಮೂರು ಪಂದ್ಯಗಳಲ್ಲಿ ದೊಡ್ಡ ಅಂತರದ ಗೆಲುವು ಪಡೆದ ಕಾರಣಕ್ಕೆ ಪ್ಲೇ ಆಫ್ ಪ್ರವೇಶಿಸಲು ಸಾಧ್ಯವಾಗಿದೆ.
ಡಿ. 10ರಂದು ಪ್ರೀಕ್ವಾರ್ಟರ್ ಫೈನಲ್ ಪಂದ್ಯಗಳು ನಡೆಯಲಿವೆ. ಡಿ. 21 ಮತ್ತು 22 ರಂದು ಕ್ವಾರ್ಟರ್ ಫೈನಲ್ ಪಂದ್ಯಗಳು, ಡಿ. 24ರಂದು ಸೆಮಿಫೈನಲ್ ಹಾಗೂ ಡಿ. 26ರಂದು ಫೈನಲ್ ಪಂದ್ಯ ನಡೆಯಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ