• ಹೋಂ
 • »
 • ನ್ಯೂಸ್
 • »
 • ಕ್ರೀಡೆ
 • »
 • Syed Mushtaq Ali Trophy 2020; ಆಪತ್ಬಾಂಧವನ ಆಟ ಪ್ರದರ್ಶಿಸಿದ ಅನಿರುದ್ಧ್​ ಜೋಶಿ, ಮೂರನೇ ಗೆಲುವು ದಾಖಲಿಸಿದ ಕರ್ನಾಟಕ

Syed Mushtaq Ali Trophy 2020; ಆಪತ್ಬಾಂಧವನ ಆಟ ಪ್ರದರ್ಶಿಸಿದ ಅನಿರುದ್ಧ್​ ಜೋಶಿ, ಮೂರನೇ ಗೆಲುವು ದಾಖಲಿಸಿದ ಕರ್ನಾಟಕ

ಕರ್ನಾಟಕ ಕ್ರಿಕೆಟ್​ ತಂಡದ ನಾಯಕ ಕರುಣ್​ ನಾಯರ್​.

ಕರ್ನಾಟಕ ಕ್ರಿಕೆಟ್​ ತಂಡದ ನಾಯಕ ಕರುಣ್​ ನಾಯರ್​.

ಸೈಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಕರುಣ್ ನಾಯರ್ ನೇತೃತ್ವದ ಕರ್ನಾಟಕ ತಂಡ ಈವರೆಗೆ ಒಟ್ಟು 4 ಪಂದ್ಯಗಳನ್ನು ಆಡಿದ್ದು, ಈ ಪೈಕಿ 3 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಒಂದು ಪಂದ್ಯದಲ್ಲಿ ಸೋಲನುಭವಿಸಿದೆ. ಈ ಮೂಲಕ ಎಲೈಟ್ ಗ್ರೂಪ್ A ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ.

 • Share this:

  ಬೆಂಗಳೂರು (ಜನವರಿ 16); ಕರ್ನಾಟಕ ಕ್ರಿಕೆಟ್ ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸ್​ಮನ್​ ಅನಿರುದ್ಧ್ ಜೋಶಿ ಅವರ ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದಾಗಿ ಇಲ್ಲಿ ನಡೆಯುತ್ತಿರುವ ಸೈಯದ್ ಮುಷ್ತಾಕ್ ಅಲಿ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಕರ್ನಾಟಕ ತಂಡ ರೈಲ್ವೇಸ್ ತಂಡದ ಎದುರಿನ ಪಂದ್ಯದಲ್ಲಿ ಗೆಲುವು ಸಾಧಿಸಿದೆ. ಅಲ್ಲದೆ, ಈ ಮೂಲಕ ಕರ್ನಾಟಕ ತಂಡ ಈ ಟೂರ್ನಿಯಲ್ಲಿ ಮೂರನೇ ಗೆಲುವನ್ನು ದಾಖಲಿಸಿದೆ. ಗೆಲುವು ಅಷ್ಟೇನು ಸುಲಭವಲ್ಲ ಎಂಬಂತಹ ಪಂದ್ಯದಲ್ಲಿ ನಿರ್ಣಾಯಕ ಘಟ್ಟದ ಕೊನೆಯ ಓವರ್​ನಲ್ಲಿ ಸತತ ಎರಡು ಸಿಕ್ಸರ್ ಸಿಡಿಸುವ ಮೂಲಕ ಗೆಲುವನ್ನು ಖಚಿತಪಡಿಸಿರುವ ಅನಿರುದ್ಧ ಜೋಶಿ ಆಟಕ್ಕೆ ಇದೀಗ ಹಲವು ಹಿರಿಯ ಕ್ರಿಕೆಟ್ ಆಟಗಾರರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಈ ವರ್ಷದ ಟೂರ್ನಿಯಲ್ಲೇ ಅತ್ಯಂತ ರೋಚಕ ಪಂದ್ಯ ಎಂಬ ಹೆಗ್ಗಳಿಕೆಗೂ ಈ ಪಂದ್ಯ ಪಾತ್ರವಾಗಿದೆ.  ಬೆಂಗಳೂರಿನ ಆಲೂರು ಕ್ರಿಕೆಟ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್​ಗೆ ಇಳಿದ ರೈಲ್ವೇಸ್ ತಂಡ ಶಿವಮ್ ಚೌಧರಿ (48) ಅವರ ಜವಾಬ್ದಾರಿಯುತ ಆಟದ ನೆರವಿನಿಂದಾಗಿ ನಿಗದಿತ 20 ಓವರ್​ಗಳಲ್ಲಿ 5 ವಿಕೆಟ್​ಗಳನ್ನು ಕಳೆದುಕೊಂಡು 152 ರನ್ ಗಳಿಸಿತ್ತು. ಆದರೆ, ಸುಲಭದ ಗುರಿ ಬೆನ್ನಟ್ಟಿದ ಕರ್ನಾಟಕ ತಂಡಕ್ಕೆ ಉತ್ತಮ ಆರಂಭ ಲಭ್ಯವಾಗಲಿಲ್ಲ.


  ಗುರಿ ಬೆನ್ನಟ್ಟಿದ ಕರ್ನಾಟಕ ತಂಡ 25 ರನ್ ಗಳಿಸುವಷ್ಟರಲ್ಲಿ ಮೊದಲ ವಿಕೆಟ್ ಕಳೆದುಕೊಂಡಿತ್ತು. ಆರಂಭಿಕ ಆಟಗಾರ ರೋಹನ್ ಖದಮ್ ವಿಕೆಟ್ ಕಬಳಿಸುವಲ್ಲಿ ರೈಲ್ವೆಸ್ ಬೌಲರ್ ಪ್ರದೀಪ್ ಯಶಸ್ವಿಯಾಗಿದ್ದರು. ತದನಂತರ ಕರ್ನಾಟಕ ಆಟಗಾರರು ಪೆವಿಲಿಯನ್ ಪರೇಡ್ ನಡೆಸಲು ಆರಂಭಿಸಿದ್ದರು. ಒಂದು ಹಂತದಲ್ಲಿ ತಂಡದ ಮೊತ್ತ 93 ಆಗುವಷ್ಟರಲ್ಲಿ ಕರ್ನಾಟಕ ತಂಡ ಎಲ್ಲಾ ಪ್ರಮುಖ 6 ವಿಕೆಟ್​ಗಳನ್ನು ಕಳೆದುಕೊಂಡು ಸೋಲಿನ ಸುಳಿಯಲ್ಲಿ ಸಿಲುಕಿತ್ತು. ಗೆಲ್ಲಲು ಇನ್ನೂ 39 ಎಸೆತಗಳಲ್ಲಿ 60 ರನ್ಗಳ ಅಗತ್ಯತೆ ಇತ್ತು.


  ಇದನ್ನೂ ಓದಿ: ಭಾರತೀಯ ಕ್ರಿಕೆಟ್​ನ ಆಲ್​ರೌಂಡರ್​ಗಳಾದ ಹಾರ್ದಿಕ್-ಕ್ರುನಾಲ್ ಪಾಂಡ್ಯ ಅವರ ತಂದೆ ಹಿಮಾಂಶು ಪಾಂಡ್ಯ ನಿಧನ!


  ಒಂದೆಡೆ ವಿಕೆಟ್ ಉರುಳುತ್ತಿದ್ದರೂ ಮತ್ತೊಂದೆಡೆ ಜವಾಬ್ದಾರಿಯುತ ಆಟ ಪ್ರದರ್ಶಿಸಿದ ಅನಿರುದ್ಧ್ ತಂಡದ ಗೆಲುವಿಗಿದ್ದ ಕೊನೆಯ ಆಸರೆಯಾಗಿದ್ದರು. ಅದಕ್ಕೆ ತಕ್ಕಂತೆ ಬ್ಯಾಟ್ ಬೀಸಿದ ಅವರು ಕೇವಲ 40 ಎಸೆತಗಳಲ್ಲಿ 3 ಬೌಂಡರಿ 4 ಸಿಕ್ಸರ್ ಸಹಿತ 64 ರನ್ ಸಿಡಿಸುವ ಮೂಲಕ ತಂಡಕ್ಕೆ ಗೆಲುವನ್ನು ತಂದಿಟ್ಟರು. ಇನ್ನೂ ಕೊನೆಯ ಓವರ್​ನಲ್ಲಿ ಸತತ ಎರಡು ಸಿಕ್ಸರ್ ಸಿಡಿಸುವ ಮೂಲಕ ರೈಲ್ವೇಸ್ ತಂಡಕ್ಕೆ ಆಘಾತ ನೀಡುವಲ್ಲಿ ಅವರು ಸಫಲರಾದರು.


  ಸೈಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಕರುಣ್ ನಾಯರ್ ನೇತೃತ್ವದ ಕರ್ನಾಟಕ ತಂಡ ಈವರೆಗೆ ಒಟ್ಟು 4 ಪಂದ್ಯಗಳನ್ನು ಆಡಿದ್ದು, ಈ ಪೈಕಿ 3 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಒಂದು ಪಂದ್ಯದಲ್ಲಿ ಸೋಲನುಭವಿಸಿದೆ. ಈ ಮೂಲಕ ಎಲೈಟ್ ಗ್ರೂಪ್ A ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ನಾಲ್ಕು ಗೆಲುವುಗಳೊಂದಿಗೆ ಪಂಜಾಬ್ ತಂಡ ಮೊದಲ ಸ್ಥಾನದಲ್ಲಿದೆ.

  Published by:MAshok Kumar
  First published: