ಮಂಗಲಪುರಂ: ಇಂದು ಆರಂಭಗೊಂಡಿರುವ ವಿಜಯ್ ಹಜಾರೆ ಏಕದಿನ ಕ್ರಿಕೆಟ್ ಪಂದ್ಯಾವಳಿಯಲ್ಲಿ ಕರ್ನಾಟಕ ಶುಭಾರಂಭ ಮಾಡಿತು. ಕೇರಳದ ಮಂಗಳಾಪುರಂನಲ್ಲಿ ಇಂದು ನಡೆದ ಗ್ರೂಪ್ ಬಿ ಪಂದ್ಯದಲ್ಲಿ ಪಾಂಡಿಚೆರಿ ವಿರುದ್ಧ ಕರ್ನಾಟಕ 236 ರನ್ಗಳಿಂದ ಭಾರೀ ಅಂತರದ ಗೆಲುವು ಸಾಧಿಸಿತು. ಕರ್ನಾಟಕದ 289 ರನ್ಗಳ ಬೃಹತ್ ಗುರಿಯನ್ನ ಬೆನ್ನತ್ತಿದ ಪಾಂಡಿಚೆರಿ ಕೇವಲ 53 ರನ್ಗೆ ಆಲೌಟ್ ಆಯಿತು. ಜಗದೀಶ ಸುಚಿತ್ ಸ್ಪಿನ್ ಗಾಳಕ್ಕೆ ಪಾಂಡಿಚೆರಿ ಬ್ಯಾಟರ್ಸ್ ತರಗೆಲೆಗಳಂತೆ ಉದುರಿದರು. ಸುಚಿತ್ 3 ಓವರ್ ಬೌಲ್ ಮಾಡಿ ಕೇವಲ 3 ರನ್ನಿತ್ತು 4 ವಿಕೆಟ್ ಕಬಳಿಸಿದರು. ನೂತನ ವೇಗದ ಬೌಲಿಂಗ್ ಪ್ರತಿಭೆ ವಾಸುಕಿ ಕೌಶಿಕ್ 19 ರನ್ನಿತ್ತು 3 ವಿಕೆಟ್ ಪಡೆದು ಗಮನ ಸೆಳೆದರು.
ಕರ್ನಾಟಕದ ಮಾಜಿ ಆಟಗಾರ ಪವನ್ ದೇಶಪಾಂಡೆ ಅವರು ಪಾಂಡಿಚೆರಿ ಪರ ಅತ್ಯಧಿಕ ಸ್ಕೋರ್ ಮಾಡಿದ ಬ್ಯಾಟರ್ ಎನಿಸಿದರು. ಅವರು 16 ರನ್ ಗಳಿಸಿದರು. ಅವರೂ ಒಳಗೊಂಡಂತೆ ಮೂವರು ಬ್ಯಾಟುಗಾರರು ಮಾತ್ರ ಎರಡಂಕಿ ಸ್ಕೋರ್ ಕಲೆಹಾಕಲು ಯಶಸ್ವಿಯಾಗಿದ್ದು.
ಟಾಸ್ ಸೋತ ಕರ್ನಾಟಕ ಮೊದಲು ಬ್ಯಾಟ್ ಮಾಡಿತು. ರೋಹನ್ ಕದಂ ಮೊದಲ ಓವರ್ನಲ್ಲೇ ಔಟಾದರೂ ರವಿಕುಮಾರ್ ಸಮರ್ಥ್ ಮತ್ತು ಕೆ ಸಿದ್ಧಾರ್ಥ್ ಅವರು 2ನೇ ವಿಕೆಟ್ಗೆ 153 ರನ್ ಜೊತೆಯಾಟ ನೀಡಿದರು. ಬಳಿಕ ಶ್ರೀನಿವಾಸ್ ಶರತ್ ಮತ್ತು ಮನೀಶ್ ಪಾಂಡೆ ಅವರು 5ನೇ ವಿಕೆಟ್ಗೆ 95 ರನ್ ಜೊತೆಯಾಟದಲ್ಲಿ ಭಾಗಿಯಾದರು. ಆರ್ ಸಮರ್ಥ್ ಕೇವಲ 5 ರನ್ನಿಂದ ಶತಕ ವಂಚಿತರಾದರು. ಕೆ ಸಿದ್ಧಾರ್ಥ್, ಮನೀಶ್ ಪಾಂಡೆ ಮತ್ತು ಎಸ್ ಶರತ್ ಅವರು ಅರ್ಧಶತಕಗಳನ್ನ ಭಾರಿಸಿದರು. ಪರಿಣಾಮವಾಗಿ ಕರ್ನಾಟಕ 6 ವಿಕೆಟ್ ನಷ್ಟಕ್ಕೆ 289 ರನ್ಗಳ ಬೃಹತ್ ಮೊತ್ತ ಕಲೆಹಾಕಲು ಸಾಧ್ಯವಾಯಿತು.
ಇದನ್ನೂ ಓದಿ: PKL 8- ಹಿಂದೆಂದಿಗಿಂತಲೂ ಬಲಿಷ್ಠವಾಗಿದೆ ಬೆಂಗಳೂರು ಬುಲ್ಸ್; ಇಲ್ಲಿದೆ ಅದರ ಬಲಾಬಲ
ಅನಿವಾಸಿ ಆಟಗಾರರೇ ಬಹುತೇಕ ತುಂಬಿರುವ ಪಾಂಡಿಚೆರಿ ತಂಡದ ಬ್ಯಾಟುಗಾರರಿಗೆ ಕರ್ನಾಟಕದ ಬೌಲಿಂಗ್ ದಾಳಿಯನ್ನ ಸಮರ್ಥವಾಗಿ ಎದುರಿಸಲು ಸಾಧ್ಯವಾಗಲಿಲ್ಲ. ಒಂದಿಷ್ಟೂ ಪ್ರತಿರೋಧ ಒಡ್ಡದೆ ಸೋಲಿಗೆ ಶರಣಾದರು. ಕರ್ನಾಟಕ ಈ ಗೆಲುವಿನೊಂದಿಗೆ 4 ಅಂಕ ಪಡೆಯಿತು. ಈ ಪಂದ್ಯದಲ್ಲಿ ಕರ್ನಾಟಕದ ಕೆ ಕಾರ್ಯಪ್ಪ, ಎಂ ವೆಂಕಟೇಶ್, ಎಸ್ ಶರತ್ ಮತ್ತು ವಿದ್ಯಾಧರ್ ಪಾಟೀಲ್ ಅವರು ವಿಜಯ್ ಹಜಾರೆ ಟ್ರೋಫಿಯಲ್ಲಿ ಮೊದಲ ಬಾರಿಗೆ ಆಡಿದರು.
ಇತರ ಪಂದ್ಯಗಳ ಫಲಿತಾಂಶ:
ಗುಜರಾತ್, ವಿದರ್ಭ, ಕೇರಳ, ಗೋವಾ, ಮಿಝೋರಾಮ್, ಮೇಘಾಲಯ ಮತ್ತು ನಾಗಾಲೆಂಡ್ ತಂಡಗಳು ಗೆಲುವು ಸಾಧಿಸಿ ಶುಭಾರಂಭ ಮಾಡಿವೆ.
ಕರ್ನಾಟಕ-ಪಾಂಡಿಚೆರಿ ಪಂದ್ಯದ ಸ್ಕೋರು ವಿವರ:
ಕರ್ನಾಟಕ 50 ಓವರ್ 289/6
(ರವಿಕುಮಾರ್ ಸಮರ್ಥ್ 95, ಮನೀಶ್ ಪಾಂಡೆ ಅಜೇಯ 64, ಕೆ ಸಿದ್ಧಾರ್ಥ್ 61, ಎಸ್ ಶರತ್ 55 ರನ್- ಸಾಗರ್ ತ್ರಿವೇದಿ 72/2, ಸುಬೋದ್ ಭಾಟಿ 62/2)
ಪಾಂಡಿಚೆರಿ 17.3 ಓವರ್ 53/10
(ಪವನ್ ದೇಶಪಾಂಡೆ 16 ರನ್- ಜಗದೀಶ ಸುಚಿತ್ ¾, ವಾಸುಕಿ ಕೌಶಿಕ್ 19/3)
ಇದನ್ನೂ ಓದಿ: IPL 2022- ಹರ್ಭಜನ್ ಸಿಂಗ್ ಸೆಕೆಂಡ್ ಇನ್ನಿಂಗ್ಸ್: ಐಪಿಎಲ್ನಲ್ಲಿ ಭಜ್ಜಿ ಕೋಚಿಂಗ್
ಟೂರ್ನಿ ಸ್ವರೂಪ ಹೇಗೆ?
ಒಟ್ಟು 38 ತಂಡಗಳು ಈ ಟೂರ್ನಿಯಲ್ಲಿ ಆಡುತ್ತಿದ್ದು, ಅವುಗಳನ್ನ ಆರು ಗುಂಪುಗಳಾಗಿ ವಿಭಾಗಿಸಲಾಗಿದೆ. ಐದು ಗುಂಪುಗಳು ಇಲೈಟ್ ಗುಂಪುಗಳಾಗಿದ್ದು ಇದರಲ್ಲಿ ತಲಾ 6 ತಂಡಗಳಿವೆ. ಕಡಿಮೆ ಶ್ರೇಯಾಂಕದ ಎಂಟು ತಂಡಗಳನ್ನ ಪ್ಲೇಟ್ ಗ್ರೂಪ್ನಲ್ಲಿ ಇರಿಸಲಾಗಿದೆ.
ಮುಷ್ತಾಕ್ ಅಲಿ ಟ್ರೋಫಿ ಟಿ20 ಪಂದ್ಯಾವಳಿಯಂತೆಯೇ ವಿಜಯ್ ಹಜಾರೆ ಟ್ರೋಫಿಯಲ್ಲೂ ಇಲೈಟ್ ಗುಂಪಿನಲ್ಲಿ ಅಗ್ರಸ್ಥಾನ ಪಡೆದ ತಂಡಗಳು ನೇರವಾಗಿ ಕ್ವಾರ್ಟರ್ ಫೈನಲ್ ಪ್ರವೇಶಿಸುತ್ತವೆ. ಆ ಗುಂಪುಗಳಲ್ಲಿ ಎರಡನೇ ಸ್ಥಾನ ಪಡೆದ 5 ತಂಡಗಳು ಹಾಗೂ ಪ್ಲೇಟ್ ಗುಂಪಿನಲ್ಲಿ ಅಗ್ರಸ್ಥಾನ ಪಡೆದ ತಂಡ ಪ್ರೀಕ್ವಾರ್ಟರ್ ಫೈನಲ್ ಪ್ರವೇಶಿಸುತ್ತವೆ.
ಇದನ್ನೂ ಓದಿ: ದಕ್ಷಿಣ ಆಫ್ರಿಕಾ-ಭಾರತ ಕ್ರಿಕೆಟ್ ಸರಣಿ: ಹೊಸ ವೇಳಾಪಟ್ಟಿ ಪ್ರಕಟ; ಡಿ. 26ರಿಂದ ಮೊದಲ ಟೆಸ್ಟ್
ಗ್ರೂಪ್ ಎ: ಗುಜರಾತ್, ವಿದರ್ಭ, ಹಿಮಾಚಲ ಪ್ರದೇಶ, ಜಮ್ಮು ಕಾಶ್ಮೀರ, ಒಡಿಶಾ, ಆಂಧ್ರ,
ಗ್ರೂಪ್ ಬಿ: ಕರ್ನಾಟಕ, ಪುದುಚೆರಿ, ತಮಿಳುನಾಡು, ಮುಂಬೈ, ಬಂಗಾಳ, ಬರೋಡಾ,
ಗ್ರೂಪ್ ಸಿ: ಜಾರ್ಖಂಡ್, ಡೆಲ್ಲಿ, ಹರ್ಯಾಣ, ಹೈದರಾಬಾದ್, ಸೌರಾಷ್ಟ್ರ, ಉತ್ತರ ಪ್ರದೇಶ,
ಗ್ರೂಪ್ ಡಿ: ಕೇರಳ, ಚಂಡೀಗಡ, ಮಧ್ಯಪ್ರದೇಶ, ಮಹಾರಾಷ್ಟ್ರ, ಛತ್ತೀಸ್ಗಡ, ಉತ್ತರಾಖಂಡ್
ಗ್ರೂಪ್ ಇ: ಗೋವಾ, ಅಸ್ಸಾಮ್, ಪಂಜಾಬ್, ರಾಜಸ್ಥಾನ್, ಸರ್ವಿಸಸ್, ರೈಲ್ವೇಸ್,
ಪ್ಲೇಟ್ ಗ್ರೂಪ್: ಮೇಘಾಲಯ, ನಾಗಾಲೆಂಡ್, ಮಣಿಪುರ, ಸಿಕ್ಕಿಂ, ಬಿಹಾರ್, ಮಿಝೋರಾಮ್, ತ್ರಿಪುರ, ಅರುಣಾಚಲ ಪ್ರದೇಶ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ