T20 Cricket- ಸೂಪರ್ ಓವರ್​ನಲ್ಲಿ ಬಂಗಾಳ ಮಣಿಸಿ ಕರ್ನಾಟಕ ಸೆಮಿಫೈನಲ್​ ಪ್ರವೇಶ

Karnataka, Tamil Nadu, Vidarbha, Hyderabad in SMA T20 Semifinals- ಸೂಪರ್ ಓವರ್​ವರೆಗೂ ಹೋದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಬಂಗಾಳ ವಿರುದ್ಧ ಕರ್ನಾಟಕ ಗೆಲುವು ಸಾಧಿಸಿ ಸೆಮಿಫೈನಲ್ ತಲುಪಿದೆ.

ಕರ್ನಾಟಕ ಕ್ರಿಕೆಟ್ ತಂಡದ ಫೈಲ್ ಚಿತ್ರ

ಕರ್ನಾಟಕ ಕ್ರಿಕೆಟ್ ತಂಡದ ಫೈಲ್ ಚಿತ್ರ

 • Share this:
  ದೆಹಲಿ, ನ. 18: ಕರ್ನಾಟಕ, ತಮಿಳುನಾಡು, ವಿದರ್ಭ ಮತ್ತು ಹೈದರಾಬಾದ್ ತಂಡಗಳು ಸಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಪಂದ್ಯಾವಳಿಯ (Syed Mushtaq Ali Trophy T20 Tournament) ಸೆಮಿಫೈನಲ್ ಹಂತ ಪ್ರವೇಶಿಸಿವೆ. ಕರುಣ್ ನಾಯರ್ (Karun Nair) ಅವರ ಸ್ಫೋಟಕ ಆಟದ ನೆರವಿನಿಂದ ಕರ್ನಾಟಕ ತಂಡ (Karnataka Crcket Team) ಇಂದು ನಡೆದ ರೋಚಕ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಬಂಗಾಳ (Bengal) ಅನ್ನು ಮಣಿಸಿತು. ಪಂದ್ಯ ಟೈ ಆಗಿ ಸೂಪರ್ ಓವರ್​ವರೆಗೂ ಹೋದ ಹಣಾಹಣಿಯಲ್ಲಿ ಕರ್ನಾಟಕ ಗೆಲುವಿನ ನಗೆ ಬೀರಿತು.

  ಇದಕ್ಕೆ ಮುನ್ನ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಕರ್ನಾಟಕ ತಂಡ 20 ಓವರ್​ನಲ್ಲಿ 160 ರನ್ ಗಳಿಸಿತು. ಕರ್ನಾಟಕ ನೀರಸ ಆರಂಭ ಪಡೆದರೂ ರೋಹನ್ ಕದಮ್, ಮನೀಶ್ ಪಾಂಡೆ, ಕರುಣ್ ನಾಯರ್, ಅಭಿನವ್ ಮನೋಹರ್ ಮತ್ತು ಅನಿರುದ್ಧ ಜೋಷಿ ಉತ್ತಮ ಬ್ಯಾಟಿಂಗ್ ನಡೆಸಿ ಒಳ್ಳೆಯ ಮೊತ್ತ ಕಲೆಹಾಕಿದರು. ಕರುಣ್ ನಾಯರ್ 29 ಬಾಲ್​ನಲ್ಲಿ ಅಜೇಯ 55 ರನ್ ಗಳಿಸಿ ಕರ್ನಾಟಕ ಇನ್ನಿಂಗ್ಸ್​ನ ಹೈಲೈಟ್ ಎನಿಸಿದರು. ಅವರ ಆಟದಲ್ಲಿ 3 ಸಿಕ್ಸರ್, 4 ಬೌಂಡರಿ ಒಳಗೊಂಡಿದ್ದವು. ಪ್ರೀಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮಿಂಚಿನ ಆಟವಾಡಿದ್ದ ಯುವ ಪ್ರತಿಭೆ ಅಭಿನವ್ ಮನೋಹರ್ 9 ಬಾಲ್​ನಲ್ಲಿ 19 ರನ್ ಗಳಿಸಿ ತಂಡದ ಇನ್ನಿಂಗ್ಸ್ ಹಿಗ್ಗುವಂತೆ ಮಾಡಿದರು.

  ಮ್ಯಾಚ್ ಟೈ; ಸೂಪರ್ ಓವರ್​ನಲ್ಲಿ ಕರ್ನಾಟಕ ಜಯಭೇರಿ:

  ನಂತರ ಬ್ಯಾಟ್ ಮಾಡಿದ ಬಂಗಾಳ ತಂಡದ ಇನ್ನಿಂಗ್ಸ್ ಕೂಡ 160 ರನ್​ಗೆ ಅಂತ್ಯಗೊಂಡು ಪಂದ್ಯ ಟೈ ಆಯಿತು. ಬಳಿಕ 4 ಎಸೆಗಳ ಸೂಪರ್ ಓವರ್ ಆಡಿಸಲಾಯಿತು. ಬಂಗಾಳದ ಪರ ಸುದಿಪ್ ಚಟರ್ಜಿ ಮತ್ತು ಕೈಫ್ ಅಹ್ಮದ್ ಬ್ಯಾಟ್ ಮಾಡಿದರು. ಕರ್ನಾಟದ ಕಾರ್ಯಪ್ಪ ಉತ್ತಮ ಬೌಲಿಂಗ್ ಮಾಡಿ 4 ಬಾಲ್​ನಲ್ಲಿ 5 ರನ್ನಿತ್ತು 2 ವಿಕೆಟ್ ಪಡೆದರು. ನಂತರ ಕರ್ನಾಟಕ ಎರಡೇ ಬಾಲ್​ನಲ್ಲಿ ಚೇಸ್ ಮಾಡಿತು. ಮನೀಶ್ ಪಾಂಡೆ ಒಂದು ಸಿಕ್ಸರ್ ಒಳಗೊಂಡಂತೆ 8 ರನ್ ಗಳಿಸಿ ತಂಡಕ್ಕ ರೋಚಕ ಗೆಲುವು ತಂದಿತ್ತರು. ಈ ಮೂಲಕ ಗ್ರೂಪ್ ಹಂತದಲ್ಲಿ ಇದೇ ಬಂಗಾಳ ವಿರುದ್ಧ ಅನುಭವಿಸಿದ್ದ ಸೋಲಿಗೆ ಕರ್ನಾಟಕ ಸೇಡು ತೀರಿಸಿಕೊಂಡಿತು.

  ಸೆಮಿಫೈನಲ್​ಗೆ ತಮಿಳುನಾಡು, ವಿದರ್ಭ ಮತ್ತು ಹೈದರಾಬಾದ್:

  ಇತರ ಕ್ವಾರ್ಟರ್​ಫೈನಲ್ ಹಣಾಹಣಿಯಲ್ಲಿ ಕೇರಳ ವಿರುದ್ಧ ಹಾಲಿ ಚಾಂಪಿಯನ್ಸ್ ತಮಿಳುನಾಡು 5 ವಿಕೆಟ್​ಗಳಿಂದ ಜಯಭೇರಿ ಭಾರಿಸಿತು. ಕೇರಳದ ವಿಷ್ಣು ವಿನೋದ್ ಕೇವಲ 26 ಬಾಲ್​ನಲ್ಲಿ ಗಳಿಸಿದ ಅಜೇಯ 65 ರನ್​ಗಳ ಸ್ಫೋಟಕ ಇನ್ನಿಂಗ್ಸ್ ಸೋಲಿನಲ್ಲಿ ಅಂತ್ಯಗೊಂಡಿತು. ತಮಿಳುನಾಡಿನ ಆಟಗಾರರು ಕೇರಳದ 181 ರನ್ ಸವಾಲನ್ನು ಸುಲಭವಾಗಿ ಚೇಸ್ ಮಾಡಿದರು.

  ಇದನ್ನೂ ಓದಿ: Video- ದೀಪಕ್ ಚಾಹರ್ ಕಣ್ಣ ನೋಟಕ್ಕೆ ಸಿಕ್ತು 1 ಲಕ್ಷ ಬಹುಮಾನ; ಅದು ಅಂತಿಂಥ ನೋಟ ಅಲ್ಲ

  ಮತ್ತೊಂದು ಕ್ವಾರ್ಟರ್​ಫೈನಲ್​ನಲ್ಲಿ ರಾಜಸ್ಥಾನ ವಿರುದ್ಧ ವಿದರ್ಭ ಜಯಭೇರಿ ಭಾರಿಸಿತು. ಪ್ಲೇಟ್ ಗ್ರೂಪ್​ನಿಂದ ಎಲ್ಲಾ ಪಂದ್ಯಗಳನ್ನೂ ಗೆಲ್ಲುತ್ತಾ ಬಂದಿರುವ ವಿದರ್ಭದ ನಾಗಾಲೋಟ ಸೆಮಿಫೈನಲ್​ವರೆಗೂ ನಡೆದಿದೆ. ರಾಜಸ್ತಾನದ 85 ರನ್​ಗಳ ಅಲ್ಪ ಮೊತ್ತವನ್ನು ವಿದರ್ಭ 15ನೇ ಓವರ್​ನಲ್ಲಿ ಚೇಸ್ ಮಾಡಿತು.

  ಮಗದೊಂದು ಕ್ವಾರ್ಟರ್​ಫೈನಲ್ ಪಂದ್ಯದಲ್ಲಿ ಗುಜರಾತ್ ವಿರುದ್ಧ ಹೈದರಾಬಾದ್ 30 ರನ್​ಗಳಿಂದ ಮಣಿಸಿತು. ಹೈದರಾಬಾದ್​ನ 158 ರನ್ ಸ್ಕೋರ್​ಗ ಪ್ರತಿಯಾಗಿ ಗುಜರಾತ್ ಇನ್ನಿಂಗ್ಸ್ 128 ರನ್​ಗೆ ಅಂತ್ಯಗೊಂಡಿತು.

  ಇದನ್ನೂ ಓದಿ: HBD Rachin- ನ್ಯೂಜಿಲೆಂಡ್ ಆಲ್​ರೌಂಡರ್ ರಚಿನ್ ರವೀಂದ್ರ ಯಾರು? ದ್ರಾವಿಡ್, ಸಚಿನ್​ಗೂ ಇವರಿಗೂ ಇದೆ ಸಂಬಂಧ

  ನವೆಂಬರ್ 20ರಂದು ದೆಹಲಿಯಲ್ಲೇ ಎರಡು ಸೆಮಿಫೈನಲ್ ಪಂದ್ಯಗಳು ನಡೆಯಲಿವೆ. ನ. 22ರಂದು ಫೈನಲ್ ಹಣಾಹಣಿ ಇದೆ. ಈ ಟೂರ್ನಿಯಲ್ಲಿ ತಮಿಳುನಾಡು ಡಿಫೆಂಡಿಂಗ್ ಚಾಂಪಿಯನ್ ಆಗಿದೆ.

  ಸ್ಕೋರು ವಿವರ:

  ಕರ್ನಾಟಕ 20 ಓವರ್ 160/5
  (ಕರುಣ್ ನಾಯರ್ ಅಜೇಯ 55, ರೋಹನ್ ಕದಂ 30, ಮನೀಶ್ ಪಾಂಡೆ 29, ಅಭಿನವ್ ಮನೋಹರ್ 19, ಅನಿರುದ್ಧ ಜೋಶಿ 16 ರನ್)

  ಬಂಗಾಳ 20 ಓವರ್ 160/8
  (ವೃತ್ತಿಕ್ ಚಟರ್ಜಿ 51, ರಿತ್ವಿಕ್ ರಾಯ್ ಚೌಧುರಿ ಅಜೇಯ 36, ಶ್ರೀವತ್ಸ್ ಗೋಸ್ವಾಮಿ 22, ಕೈಫ್ ಅಹ್ಮದ್ 20 ರನ್ – ಎಂಬಿ ದರ್ಶನ್ 26/3, ಜೆ ಸುಚಿತ್ 24/2)
  Published by:Vijayasarthy SN
  First published: