IND vs SA: ಬೆಂಕಿಯುಗುಳಿದ ರಬಡ; ಹೆಬ್ಬಂಡೆಯಾದ ಕೊಹ್ಲಿ; ಮೊದಲ ದಿನದ ಹೈಲೈಟ್

India vs South Africa 3rd Test Match: ಸೌತ್ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯ ಕೊನೆಯ ಹಾಗೂ ನಿರ್ಣಾಯಕ ಪಂದ್ಯದಲ್ಲಿ ಭಾರತ ಪ್ರಯಾಸಕರ ಹೆಜ್ಜೆ ಇರಿಸಿದೆ. ಭಾರತದ ಮೊದಲ ಇನ್ನಿಂಗ್ಸ್ 223 ರನ್​ಗೆ ಅಂತ್ಯಗೊಂಡಿದೆ.

ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿ

 • Share this:
  ಕೇಪ್​ಟೌನ್, ಜ. 11: ಸೌತ್ ಆಫ್ರಿಕಾ ವಿರುದ್ಧ ಐತಿಹಾಸಿಕ ಟೆಸ್ಟ್ ಸರಣಿ ಗೆಲ್ಲುವ ಅಪೂರ್ವ ಅವಕಾಶ ಹೊಂದಿರುವ ಟೀಮ್ ಇಂಡಿಯಾ ಆ ನಿಟ್ಟಿನಲ್ಲಿ ಇಂದು ತುಸು ನಿರಾಶೆಯ ಆರಂಭ ಪಡೆದಿದೆ. ಇಂದು ಆರಂಭವಾದ ಮೂರನೇ ಟೆಸ್ಟ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ತಂಡದ ಮೊದಲ ಇನ್ನಿಂಗ್ಸ್ 223 ರನ್​ಗೆ ಅಂತ್ಯಗೊಂಡಿದೆ. ಇದಕ್ಕೆ ಪ್ರತಿಯಾಗಿ ಸೌತ್ ಆಫ್ರಿಕಾ ದಿನಾಂತ್ಯದ ವೇಳೆ ಒಂದು ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತ ಅನುಭವಿಸಿತು.

  ಇಂದು ಮೊದಲ ದಿನ ವಿರಾಟ್ ಕೊಹ್ಲಿ ವರ್ಸಸ್ ಕಗಿಸೋ ರಬಡ ನಡುವಿನ ಯುದ್ಧದಂತಿತ್ತು. ಅದ್ಭುತವಾಗಿ ಆಡಿದ ವಿರಾಟ್ ಕೊಹ್ಲಿ ಎರಡು ವರ್ಷಗಳ ಬಳಿಕ ಟೆಸ್ಟ್ ಶತಕ ದಾಖಲಿಸುವ ಎಲ್ಲಾ ಸಾಧ್ಯತೆಯನ್ನ ತೋರ್ಪಡಿಸಿದ್ದರು. ಆದರೆ, ಅಂತಿಮವಾಗಿ ಅವರು 79 ರನ್​ಗೆ ಔಟಾಗಬೇಕಾಯಿತು. ಸೂಕ್ತ ಜೊತೆಗಾರರು ಸಿಗದೇ ಹೋದದ್ದು ವಿರಾಟ್ ಕೊಹ್ಲಿ ಇನ್ನಿಂಗ್ಸ್ ಮೂರಂಕಿ ಸ್ಕೋರ್ ಗಡಿ ಮುಟ್ಟದಿರಲು ಕಾರಣವೆಂದರೆ ತಪ್ಪಾಗಲಾರದು.

  ಆರಂಭಿಕ ಆಟಗಾರರಿಬ್ಬರು ಬೇಗನೇ ಔಟಾದ ಬಳಿಕ 13ನೇ ಓವರ್​ನಲ್ಲಿ ಕ್ರೀಸ್​ಗೆ ಬಂದ ವಿರಾಟ್ ಕೊಹ್ಲಿ ಎರಡು ಪ್ರಮುಖ ಜೊತೆಯಾಟಗಳಲ್ಲಿ ಭಾಗಿಯಾದರು. 9ನೇಯವರಾಗಿ ಔಟಾಗುವ ಮುನ್ನ ಅವರು ಸೌತ್ ಆಫ್ರಿಕಾದ ಬಲಿಷ್ಠ ಬೌಲಿಂಗ್ ದಾಳಿಯನ್ನ ಬಹಳ ಸಮರ್ಥವಾಗಿ ಎದುರಿಸಿದರು.

  ಮೊದಲಿಗೆ ಕೆಎಲ್ ರಾಹುಲ್ ಮತ್ತು ಮಯಂಕ್ ಅಗರ್ವಾಲ್ ಉತ್ತಮವಾಗಿ ಆಡಿ ಮತ್ತೊಮ್ಮೆ ಒಳ್ಳೆಯ ಜೊತೆಯಾಟ ಆಡುವ ಕುರುಹು ತೋರುತ್ತಿದ್ದಂತೆಯೇ ಒಂದು ಓವರ್ ಅಂತರದಲ್ಲಿ ಇಬ್ಬರೂ ಔಟಾದರು. ಅದಾದ ಬಳಿಕ ಚೇತೇಶ್ವರ್ ಪೂಜಾರ ಮತ್ತು ವಿರಾಟ್ ಕೊಹ್ಲಿ 3ನೇ ವಿಕೆಟ್​ಗೆ 62 ರನ್ ಜೊತೆಯಾಟ ಆಡಿದರು. ಕ್ಷಿಪ್ರಗತಿಯಲ್ಲಿ ಬ್ಯಾಟ್ ಮಾಡುತ್ತಿದ್ದ ಪೂಜಾರ ಅರ್ಧಶತಕ ಗಡಿ ದಾಟುವ ಮುನ್ನವೇ ಔಟಾಗಿ ಹೋದರು. ಅದಾಗಿ ಕೆಲ ಓವರ್​ಗಳಲ್ಲಿ ಅಜಿಂಕ್ಯ ರಹಾನೆ ಕೂಡ ಔಟಾದರು.

  ಇದನ್ನೂ ಓದಿ: IPL 2022: ಅಹ್ಮದಾಬಾದ್ ಫ್ರಾಂಚೈಸಿಗೆ ಗ್ರೀನ್ ಸಿಗ್ನಲ್; ಫೆ. 12-13ರಂದು ಐಪಿಎಲ್ ಹರಾಜು ಫಿಕ್ಸ್

  ಈ ವೇಳೆ ವಿರಾಟ್ ಕೊಹ್ಲಿ ಜೊತೆಗೂಡಿದ ರಿಷಭ್ ಪಂತ್ ಬಹಳ ಎಚ್ಚರಿಕೆಯಿಂದ ಬ್ಯಾಟ್ ಮಾಡಿದರು. ಇಬ್ಬರೂ ಕೂಡ 5ನೇ ವಿಕೆಟ್​ಗೆ 51 ರನ್ ಜೊತೆಯಾಟ ಆಡಿದರು. ಪಂತ್ 27 ರನ್ ಗಳಿಸಿ ಔಟಾದರು. ಆ ಬಳಿಕ ವಿರಾಟ್ ಕೊಹ್ಲಿಗೆ ಸೂಕ್ತ ಜೊತೆಗಾರ ಸಿಗಲಿಲ್ಲ. ಸಾಧ್ಯವಾದಷ್ಟು ರನ್ ಗಳಿಸುವ ತರಾತುರಿಯಲ್ಲಿ ವಿರಾಟ್ ಕೊಹ್ಲಿ ವಿಕೆಟ್ ಒಪ್ಪಿಸಬೇಕಾಯಿತು. 201 ಎಸೆತದಲ್ಲಿ ಅವರು 79 ರನ್ ಗಳಿಸಿದರು. ಇದು ಅವರ 28ನೇ ಟೆಸ್ಟ್ ಅರ್ಧಶತಕವಾಗಿದೆ. ಅಂತಿಮವಾಗಿ ಭಾರತದ ಇನ್ನಿಂಗ್ಸ್ 223 ರನ್​ಗೆ ಅಂತ್ಯಗೊಂಡಿತು.

  ಸೌತ್ ಆಫ್ರಿಕಾದ ಬೌಲರ್​ಗಳು ಇಂದು ವಿಜೃಂಬಿಸಿದರು. ಅದರಲ್ಲೂ ಕಗಿಸೊ ರಬಡ ಮಾರಕ ಬೌಲಿಂಗ್ ಪ್ರದರ್ಶನ ತೋರಿ 4 ವಿಕೆಟ್ ಕಬಳಿಸಿದರು. ಯುವ ಬೌಲಿಂಗ್ ಪ್ರತಿಭೆ ಮಾರ್ಕೊ ಜನ್ಸೆನ್ 3 ವಿಕೆಟ್ ಪಡೆದು ಸೌತ್ ಆಫ್ರಿಕಾದ ಭವಿಷ್ಯದ ಫಾಸ್ಟ್ ಬೌಲಿಂಗ್ ಸ್ಟಾರ್ ಆಗುವ ಸುಳಿವು ನೀಡಿದರು.

  ಸೌತ್ ಆಫ್ರಿಕಾಗೆ ಆರಂಭಿಕ ಆಘಾತ:

  ಅಲ್ಪ ಮೊತ್ತದ ಸ್ಕೋರ್ ಕಲೆಹಾಕಿದ ನಿರಾಸೆಯಲ್ಲಿದ್ದ ಟೀಮ್ ಇಂಡಿಯಾ ದಿನದ ಕೊನೆಯಲ್ಲಿ ಸೌತ್ ಆಫ್ರಿಕಾದ ನಾಯಕ ಡೀನ್ ಎಲ್ಗರ್ ವಿಕೆಟ್ ಪಡೆದ ಸಮಾಧಾನ ಸಿಕ್ಕಿತು. ಎರಡನೇ ಪಂದ್ಯದಲ್ಲಿ ಭಾರತಕ್ಕೆ ಬಹಳ ಡೇಂಜರಸ್ ಆಗಿದ್ದ ಎಲ್ಗಾರ್ ಅವರನ್ನ ಜಸ್​ಪ್ರೀತ್ ಬುಮ್ರಾ ಔಟ್ ಮಾಡಿದರು. ನಾಳೆ ಎರಡನೇ ದಿನ ಸೌತ್ ಆಫ್ರಿಕಾದ ಮೊದಲ ಇನ್ನಿಂಗ್ಸ್ ಎಷ್ಟು ದೂರ ಸಾಗುತ್ತದೆ ಕಾದುನೋಡಬೇಕು.

  ಇದನ್ನೂ ಓದಿ: Tata IPL: ಐಪಿಎಲ್ ಪ್ರಾಯೋಜಕತ್ವಕ್ಕೆ Vivo ಬದಲು ಟಾಟಾ; ಸ್ಪಾನ್ಸರ್​ಶಿಪ್ ದುಡ್ಡಲ್ಲಿ ತಂಡಗಳಿಗೆ ಸಿಗೋ ಹಣ ಇಷ್ಟು

  ತಂಡಗಳು:

  ಭಾರತ ತಂಡ: ಕೆಎಲ್ ರಾಹುಲ್, ಮಯಂಕ್ ಅಗರ್ವಾಲ್, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ರಿಷಭ್ ಪಂತ್, ಆರ್ ಅಶ್ವಿನ್, ಶಾರ್ದೂಲ್ ಠಾಕೂರ್, ಜಸ್​ಪ್ರೀತ್ ಬುಮ್ರಾ, ಉಮೇಶ್ ಯಾದವ್, ಮೊಹಮ್ಮದ್ ಶಮಿ.

  ಸೌತ್ ಆಫ್ರಿಕಾ ತಂಡ: ಡೀನ್ ಎಲ್ಗರ್, ಏಡನ್ ಮರ್ಕ್ರಂ, ಕೀಗನ್ ಪೀಟರ್ಸನ್, ರಸ್ಸೀ ವಾನ್ ಡರ್ ಡುಸೆನ್, ಟೆಂಬ ಬವುಮ, ಕೈಲ್ ವೆರೆಯ್ನೆ, ಮಾರ್ಕೊ ಜನ್ಸೆನ್, ಕೇಶವ್ ಮಹಾರಾಜ್, ಕಗಿಸೋ ರಬಡ, ಡುವಾನೆ ಒಲಿವಿಯರ್.

  ಸ್ಕೋರು ವಿವರ (ಮೊದಲ ದಿನಾಂತ್ಯಕ್ಕೆ):

  ಭಾರತ ಮೊದಲ ಇನ್ನಿಂಗ್ಸ್ 77.3 ಓವರ್ 223/10
  (ವಿರಾಟ್ ಕೊಹ್ಲಿ 79, ಚೇತೇಶ್ವರ್ ಪೂಜಾರ 43, ರಿಷಭ್ ಪಂತ್ 27, ಮಯಂಕ್ ಅಗರ್ವಾಲ್ 15 ರನ್- ಕಗಿಸೊ ರಬಡ 73/4, ಮಾರ್ಕೊ ಜನ್ಸೆನ್ 55/3)

  ಸೌತ್ ಆಫ್ರಿಕಾ ಮೊದಲ ಇನ್ನಿಂಗ್ಸ್ 8 ಓವರ್ 17/1
  Published by:Vijayasarthy SN
  First published: