ಭಾರತ-ಆಸ್ಟ್ರೇಲಿಯಾ ನಡುವಣ ಸರಣಿ ಮಧ್ಯೆ ಹಲವು ಆಟಗಾರರು ಗಾಯಗೊಂಡಿದ್ದಾರೆ. ಅದರಲ್ಲೂ ಟೀಮ್ ಇಂಡಿಯಾದ ಪ್ರಮುಖ 6 ಆಟಗಾರರು ಗಾಯಗೊಂಡು ಸರಣಿಯಿಂದ ಹೊರನಡೆದಿದ್ದಾರೆ. ಸರಣಿ ಆರಂಭಕ್ಕೂ ಮುನ್ನ ಇಶಾಂತ್ ಶರ್ಮಾ ಹಾಗೂ ರೋಹಿತ್ ಶರ್ಮಾ ಸೀಮಿತ ಓವರ್ಗಳಿಂದ ಹೊರಗುಳಿದಿದ್ದರು. ಇದಾದ ಬಳಿಕ ಟೆಸ್ಟ್ ಸರಣಿಯಲ್ಲಿ ಮೊಹಮ್ಮದ್ ಶಮಿ ಹಾಗೂ ಉಮೇಶ್ ಯಾದವ್ ಗಾಯಗೊಂಡು ಹೊರನಡೆದಿದ್ದರು. ಇನ್ನು ಅಭ್ಯಾಸದ ಪಂದ್ಯದ ವೇಳೆ ಕೆಎಲ್ ರಾಹುಲ್ ಸಹ ಗಾಯಗೊಂಡು ಭಾರತಕ್ಕೆ ವಾಪಾಸಾಗಿದ್ದರು.
ಇನ್ನು 3ನೇ ಟೆಸ್ಟ್ ಪಂದ್ಯದ ವೇಳೆ ರವೀಂದ್ರ ಜಡೇಜಾ ಗಾಯಗೊಂಡು 4ನೇ ಟೆಸ್ಟ್ಗೆ ಅಲಭ್ಯರಾಗಿದ್ದಾರೆ. ಇನ್ನು ಹನುಮ ವಿಹಾರಿ ಕೂಡ ಸ್ನಾಯು ಸೆಳೆತದ ಸಮಸ್ಯೆಯಿಂದ ಬಳಲುತ್ತಿದ್ದು, ಹೀಗಾಗಿ ಅವರು ಕೂಡ ಮುಂದಿನ ಪಂದ್ಯಕ್ಕೆ ಡೌಟ್ ಎನ್ನಲಾಗುತ್ತಿದೆ. ಹಾಗೆಯೇ ಬೌಲಿಂಗ್ ವಿಭಾಗವನ್ನು ಮುನ್ನಡೆಸುತ್ತಿರುವ ಯಾರ್ಕರ್ ಕಿಂಗ್ ಜಸ್ಪ್ರೀತ್ ಬುಮ್ರಾ ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದಿಂದ ಹೊರಬಿದ್ದಿದ್ದಾರೆ. ಕಿಬ್ಬೊಟ್ಟೆಯ ಒತ್ತಡದಿಂದ ಬುಮ್ರಾ ಬಳಲುತ್ತಿದ್ದಾರೆ. ಹೀಗಾಗಿ ಇವರು ಮುಂದಿನ ಟೆಸ್ಟ್ಗೆ ಲಭ್ಯರಿಲ್ಲ ಎಂದು ಪಿಟಿಐಗೆ ಬಿಸಿಸಿಐ ಮೂಲಗಳು ತಿಳಿಸಿವೆ.
ಇನ್ನು ಆಸ್ಟ್ರೇಲಿಯಾ ತಂಡದಲ್ಲಿ ಡೇವಿಡ್ ವಾರ್ನರ್ ಹಾಗೂ ಸ್ಟೀವ್ ಸ್ಮಿತ್ ಗಾಯಗೊಂಡು ಬಳಿಕ ಚೇತರಿಸಿಕೊಂಡಿದ್ದರು. ಹೀಗೆ ಒಂದು ಸರಣಿಯಲ್ಲಿ ಅನೇಕ ಆಟಗಾರರು ಗಾಯಗೊಳ್ಳಲು ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಕಾರಣ ಎಂದು ಆಸ್ಟ್ರೇಲಿಯಾ ಕೋಚ್ ಜಸ್ಟಿನ್ ಲ್ಯಾಂಗರ್ ದೂರಿದ್ದಾರೆ. ನನಗೂ ಐಪಿಎಲ್ ಟೂರ್ನಿ ಇಷ್ಟ. ನಾನು ಕೂಡ ಪಂದ್ಯಾವಳಿಯನ್ನು ನೋಡುತ್ತೇನೆ. ಆದರೆ ಈ ಬಾರಿ ಟೂರ್ನಿಯನ್ನು ಆಯೋಜಿಸಿದ ಸಮಯ ಸರಿಯಿರಲಿಲ್ಲ ಎಂದು ಲ್ಯಾಂಗರ್ ಹೇಳಿದರು.
ದೊಡ್ಡ ಸರಣಿಗಳು ಇರುವ ವೇಳೆ ಐಪಿಎಲ್ನಂತಹ ಟೂರ್ನಿ ಆಯೋಜಿಸಿದ್ದು ಸರಿಯಲ್ಲ. ಬೇಸಿಗೆಯ ಉದ್ದಕ್ಕೂ ಇಷ್ಟೊಂದು ಆಟಗಾರರು ಗಾಯಕ್ಕೀಡಾಗಿರುವುದು ಅಚ್ಚರಿ. ಐಪಿಎಲ್ ಟೂರ್ನಿ ಆಯೋಜನೆಗೆ ಅದು ಸೂಕ್ತ ಸಮಯವಾಗಿರಲಿಲ್ಲ. ಇದು ಈಗ ಎರಡೂ ತಂಡಗಳ ಆಟಗಾರ ಗಾಯಗಳ ಮೇಲೆ ಅದು ಪರಿಣಾಮ ಬೀರುತ್ತದೆಯೇ ಎಂದೆನಿಸುತ್ತಿದೆ. ಹೀಗಾಗಿ ಈ ಬಗ್ಗೆ ಪರಿಶೀಲಿಸಬೇಕು ಎಂದು ಲ್ಯಾಂಗರ್ ತಿಳಿಸಿದರು.
ಇನ್ನು ಸಾಮಾನ್ಯವಾಗಿ ಏಪ್ರಿಲ್ನಲ್ಲಿ ಆರಂಭಗೊಳ್ಳುವ ಐಪಿಎಲ್ ಟೂರ್ನಿ ಕೊರೋನಾ ಕಾರಣದಿಂದ ಯುಎಇನಲ್ಲಿ ಆಯೋಜಿಸಲಾಗಿತ್ತು. ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡು ಸೆಪ್ಟೆಂಬರ್ನಲ್ಲಿ ಯುಎಇನ 3 ಮೈದಾನದಲ್ಲಿ ಟೂರ್ನಿಯನ್ನು ನಡೆಸಲಾಗಿತ್ತು. ಈ ಟೂರ್ನಿಯ ಬಳಿಕ ಟೀಮ್ ಇಂಡಿಯಾ ಆಟಗಾರರು ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ