news18-kannada Updated:October 27, 2020, 3:29 PM IST
Suryakumar Yadav
ಇಂಡಿಯನ್ ಪ್ರೀಮಿಯರ್ ಲೀಗ್ 13ನೇ ಆವೃತ್ತಿಯ ಮುಕ್ತಾಯ ಹಂತಕ್ಕೆ ತಲುಪಿದೆ. ನವೆಂಬರ್ 10 ರಂದು ನಡೆಯುವ ಫೈನಲ್ ಪಂದ್ಯದೊಂದಿಗೆ ರಂಗು ರಂಗಿನ ಕ್ರಿಕೆಟ್ ಟೂರ್ನಿಗೆ ತೆರೆ ಬೀಳಲಿದೆ. ಇದರ ಬೆನ್ನಲ್ಲೇ ಟೀಮ್ ಇಂಡಿಯಾ ಆಸ್ಟ್ರೇಲಿಯಾ ಪ್ರವಾಸಕ್ಕೆ ಸಜ್ಜಾಗಲಿದೆ. ಈಗಾಗಲೇ ಆಸೀಸ್ ಸರಣಿಗಾಗಿ ಭಾರತ ತಂಡವನ್ನು ಪ್ರಕಟಿಸಲಾಗಿದ್ದು, ಐಪಿಎಲ್ನಲ್ಲಿ ಭರ್ಜರಿ ಪ್ರದರ್ಶನ ನೀಡಿದ ಆಟಗಾರರಿಗೆ ಅವಕಾಶ ನೀಡಲಾಗಿದೆ. ಹಾಗೆಯೇ ಫಿಟ್ನೆಸ್ ಸಮಸ್ಯೆ ಹೊಂದಿರುವ ರೋಹಿತ್ ಶರ್ಮಾ ಅವರನ್ನು ಕೈ ಬಿಡಲಾಗಿದ್ದು, ಟೀಮ್ ಇಂಡಿಯಾ ಉಪನಾಯಕ ಪಟ್ಟ ಕನ್ನಡಿಗ ಕೆಎಲ್ ರಾಹುಲ್ಗೆ ಒಲಿದಿದೆ.
ಇನ್ನು ಇದೇ ಮೊದಲ ಬಾರಿ ತಂಡದಲ್ಲಿ ವರುಣ್ ಚಕ್ರವರ್ತಿ, ಶುಭ್ಮನ್ ಗಿಲ್ ಆಯ್ಕೆಯಾಗಿದ್ದಾರೆ. ಇದರೊಂದಿಗೆ ವಿರಾಟ್ ಕೊಹ್ಲಿ ಯುವ ಪಡೆಯೊಂದಿಗೆ ಆಸೀಸ್ ವಿರುದ್ಧ 4 ಟೆಸ್ಟ್, 3 ಟಿ20 ಮತ್ತು 3 ಏಕದಿನ ಪಂದ್ಯಗಳನ್ನು ಆಡಲಿದೆ. ಆದರೆ ಓರ್ವ ಭಾರತೀಯ ಪ್ರತಿಭೆಯ ಬಗ್ಗೆ ಚರ್ಚೆ ಶುರುವಾಗಿದೆ. ಪ್ರಥಮ ದರ್ಜೆ ಕ್ರಿಕೆಟ್, ಐಪಿಎಲ್ನಲ್ಲಿ ಉತ್ತಮ ಪ್ರದರ್ಶನ ನೀಡಿದರೂ ತಂಡಕ್ಕೆ ಆಯ್ಕೆಯಾಗುತ್ತಿಲ್ಲ.
ಹೌದು, ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಪ್ರತಿನಿಧಿಸುತ್ತಿರುವ ಸೂರ್ಯಕುಮಾರ್ ಯಾದವ್ ಈ ಬಾರಿ ಕೂಡ ಆಯ್ಕೆಗಾರರ ಕಡೆಗಣನೆಗೆ ಒಳಗಾಗಿದ್ದಾರೆ. ಉತ್ತಮ ಫೀಲ್ಡರ್ ಹಾಗೂ ಯಾವುದೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಬಲ್ಲ ಆಟಗಾರನಾಗಿರುವ ಸೂರ್ಯ ಕುಮಾರ್ ಅವರಿಗೆ ಈ ಬಾರಿ ಕೂಡ ಅವಕಾಶ ದೊರೆತಿಲ್ಲ. ಪ್ರಸ್ತುತ ಐಪಿಎಲ್ನಲ್ಲಿ 2 ಅರ್ಧಶತಕದೊಂದಿಗೆ 148.94 ಸ್ಟ್ರೈಕ್ ರೇಟ್ನಲ್ಲಿ ಯಾದವ್ 283 ರನ್ ಕಲೆಹಾಕಿದ್ದಾರೆ. ಕಳೆದ ಸೀಸನ್ನಲ್ಲೂ 16 ಪಂದ್ಯಗಳಿಂದ 424 ರನ್ ಪೇರಿಸಿದ್ದರು.
ಇನ್ನು ಫಸ್ಟ್ ಕ್ಲಾಸ್ ಕ್ರಿಕೆಟ್ನಲ್ಲಿ 129 ಇನಿಂಗ್ಸ್ನಲ್ಲಿ 5326 ರನ್ ಕಲೆಹಾಕಿದ್ದಾರೆ. ಇದರಲ್ಲಿ 14 ಶತಕ ಹಾಗೂ 26 ಅರ್ಧಶತಕಗಳು ಮೂಡಿಬಂದಿವೆ. ಲೀಸ್ಟ್ ಎ ಕ್ರಿಕೆಟ್ನಲ್ಲಿ ಸೂರ್ಯ ಕುಮಾರ್ ಯಾದವ್ 82 ಇನಿಂಗ್ಸ್ಗಳಿಂದ ಪೇರಿಸಿದ್ದು 2447 ರನ್ಗಳು. ಇದರಲ್ಲಿ 2 ಶತಕ ಹಾಗೂ 15 ಅರ್ಧಶತಕಗಳಿವೆ. ಹಾಗೆಯೇ ಟಿ20 ಯಲ್ಲಿ 140 ಇನಿಂಗ್ಸ್ ಆಡಿರುವ ಸೂರ್ಯ 3295 ರನ್ ಬಾರಿಸಿದ್ದಾರೆ. ಇದರಲ್ಲಿ 35 ಬಾರಿ ನಾಟೌಟ್ ಬ್ಯಾಟ್ಸ್ಮನ್ ಆಗಿ ಮರಳಿದ್ದರು ಎಂಬುದು ಮತ್ತೊಂದು ವಿಶೇಷ.
ಹಾಗೆಯೇ ಈ ಬಾರಿ ಐಪಿಎಲ್ನಲ್ಲೂ ಮೂರನೇ ಕ್ರಮಾಂಕದಲ್ಲಿ ಭರ್ಜರಿಯಾಗಿ ಬ್ಯಾಟ್ ಬೀಸುತ್ತಿದ್ದಾರೆ. ಹೀಗಾಗಿ ಆಯ್ಕೆಗಾರರು ಟಿ20 ತಂಡಕ್ಕೆ 30ರ ಸೂರ್ಯಕುಮಾರ್ ಯಾದವ್ ಅವರನ್ನು ಆಯ್ಕೆ ಮಾಡಲಿದ್ದಾರೆ ಎಂದು ಎಲ್ಲರೂ ನಿರೀಕ್ಷಿಸಿದ್ದರು. ಆದರೆ ಈ ಬಾರಿ ಕೂಡ ನಿರೀಕ್ಷೆ ಸುಳ್ಳಾಗಿಸಿದೆ. ಮುಂಬೈ ತಂಡದ ಆಟಗಾರನ ಪರವಾಗಿ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಯಾಗುತ್ತಿದೆ. ಅದರಲ್ಲೂ ಜಸ್ಟೀಸ್ ಫರ್ ಸೂರ್ಯಕುಮಾರ್ ಯಾದವ್ ಎಂದು ಹಲವರು ಅಭಿಯಾನ ಶುರು ಮಾಡಿಕೊಂಡಿದ್ದಾರೆ. ಈ ಮೂಲಕ ಸೂರ್ಯ ಮತ್ತಷ್ಟು ರನ್ ಪೇರಸಬೇಕು. ಆಯ್ಕೆಗಾರರ ಮನವೊಲಿಸಲು ಯಾವ ರೀತಿಯ ಪ್ರದರ್ಶನ ನೀಡಬೇಕು ಎಂದು ಹಲವು ಕ್ರಿಕೆಟ್ ಅಭಿಮಾನಿಗಳು ಆಯ್ಕೆದಾರರನ್ನು ಪ್ರಶ್ನಿಸುತ್ತಿದ್ದಾರೆ.
ಪ್ರತಿ ಬಾರಿ ಟೀಮ್ ಇಂಡಿಯಾ ಎ ಘೋಷಣೆಯಾದಾಗ ನನ್ನ ತಂದೆ ಎಲ್ಲಾ ವೆಬ್ಸೈಟ್ಗಳನ್ನು ಪರಿಶೀಲಿಸುತ್ತಾರೆ. ಎಲ್ಲದರಲ್ಲೂ ಹುಡುಕಾಡಿದ ಮೇಲೆ ತಕ್ಷಣವೇ ನನಗೆ ಕರೆ ಮಾಡಿ ನಿನ್ನ ಹೆಸರು ಇಲ್ಲ ಎನ್ನುತ್ತಾರೆ. ಆಗ ನಾನು ಅದು ನಮ್ಮ ಸಮಸ್ಯೆಯಲ್ಲ ಎಂದು ಉತ್ತರಿಸುತ್ತೇನೆ. ಈ ಹಿಂದೊಮ್ಮೆ ಸಂದರ್ಶನವೊಂದರಲ್ಲಿ ಸೂರ್ಯಕುಮಾರ್ ಯಾದವ್ ಹೇಳಿದ ಮಾತಿದು.
ಆಸ್ಟ್ರೇಲಿಯಾ ಸರಣಿಗೆ ಆಯ್ಕೆಯಾದ ಟೀಮ್ ಇಂಡಿಯಾ:ಟಿ20 ತಂಡ: ವಿರಾಟ್ ಕೊಹ್ಲಿ (ಕ್ಯಾಪ್ಟನ್), ಶಿಖರ್ ಧವನ್, ಮಾಯಾಂಕ್ ಅಗರ್ವಾಲ್, ಕೆ.ಎಲ್ ರಾಹುಲ್, ಮೊಹಮ್ಮದ್ ಶಮಿ, ನವದೀಪ್ ಸೈನಿ, ದೀಪಕ್ ಚಹರ್, ವರುಣ್ ಚಕ್ರವರ್ತಿ, ಹಾರ್ದಿಕ್ ಪಾಂಡ್ಯ, ಸಂಜು ಸ್ಯಾಮ್ಸನ್, ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ಯಜುವೇಂದ್ರ ಚಹಲ್, ಜಸ್ಪ್ರೀತ್ ಬುಮ್ರಾ, ಶ್ರೇಯಸ್ ಅಯ್ಯರ್, ಮನೀಶ್ ಪಾಂಡೆ
ಏಕದಿನ ತಂಡ: ವಿರಾಟ್ ಕೊಹ್ಲಿ (ಕ್ಯಾಪ್ಟನ್), ಶಿಖರ್ ಧವನ್, ಶುಭ್ಮನ್ ಗಿಲ್, ಕೆ.ಎಲ್ ರಾಹುಲ್, ಶ್ರೇಯಸ್ ಅಯ್ಯರ್, ಮನೀಶ್ ಪಾಂಡೆ, ಹಾರ್ದಿಕ್ ಪಾಂಡ್ಯ, ಮಯಾಂಕ್ ಅಗರ್ವಾಲ್, ರವೀಂದ್ರ ಜಡೇಜಾ, ಯಜುವೇಂದ್ರ ಚಹಲ್, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ನವದೀಪ್ ಸೈನಿ, ಶಾರ್ದುಲ್ ಠಾಕೂರ್
ಟೆಸ್ಟ್ ತಂಡ: ವಿರಾಟ್ ಕೊಹ್ಲಿ (ಕ್ಯಾಪ್ಟನ್), ಮಾಯಾಂಕ್ ಅಗರ್ವಾಲ್, ಪೃಥ್ವಿ ಶಾ, ಕೆ.ಎಲ್ ರಾಹುಲ್, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ, ಹನುಮ ವಿಹಾರಿ, ಶುಭ್ಮನ್ ಗಿಲ್, ವೃದ್ಧಿಮಾನ್ ಸಾಹ, ರಿಷಭ್ ಪಂತ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಉಮೇಶ್ ಯಾದವ್, ನವದೀಪ್ ಸೈನಿ, ಕುಲದೀಪ್ ಯಾದವ್, ರವೀಂದ್ರ ಜಡೇಜಾ, ಆರ್.ಅಶ್ವಿನ್, ಮೊಹಮ್ಮದ್ ಸಿರಾಜ್
POINTS TABLE:
SCHEDULE TIME TABLE:
ORANGE CAP:
PURPLE CAP:
RESULT DATA:
MOST SIXES:
ಇದನ್ನೂ ಓದಿ: IPL 2020: ಬೆನ್ ಸ್ಟೋಕ್ಸ್ ಬೆರಳು ಮಡಚಿದ್ದರ ಹಿಂದಿದೆ ಮತ್ತೊಂದು ಕಹಾನಿ..!
Published by:
zahir
First published:
October 27, 2020, 3:24 PM IST