ಕ್ರಿಕೆಟ್​ಗೆ ವಿದಾಯ ಹೇಳುವ ಮುನ್ನ ಕೊನೆ ಆಸೆ ತೋಡಿಕೊಂಡ ದೈತ್ಯ ವೇಗಿ ಝೂಲನ್ ಗೋಸ್ವಾಮಿ

Jhulan Goswami- ಸೆಪ್ಟೆಂಬರ್ 30ರಂದು ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಒಂದು ಟೆಸ್ಟ್ ಪಂದ್ಯ ನಡೆಯಲಿದೆ. ಅದಾದ ಬಳಿಕ ವೇಗದ ಬೌಲರ್ ಝೂಲನ್ ಗೋಸ್ವಾಮಿ ಕ್ರಿಕೆಟ್​ಗೆ ವಿದಾಯ ಹೇಳುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ತಮ್ಮ ಕೊನೆಯ ಕ್ರಿಕೆಟ್ ಆಸೆಯನ್ನ ಅವರು ತೋಡಿಕೊಂಡಿದ್ದಾರೆ.

ಝುಲನ್ ಗೋಸ್ವಾಮಿ

ಝುಲನ್ ಗೋಸ್ವಾಮಿ

 • Cricketnext
 • Last Updated :
 • Share this:
  ಕ್ವೀನ್ಸ್​ಲ್ಯಾಂಡ್: ಭಾರತದ ಝೂಲನ್ ಗೋಸ್ವಾಮಿ ಸದ್ಯ ವಿಶ್ವದ ಅತಿ ವೇಗದ ಮಹಿಳಾ ಬೌಲರ್. ಬಹಳ ಸೀನಿಯರ್ ಹಾಗು ಅನುಭವಿ ಆಟಗಾರ್ತಿ. ಅನೇಕ ದಾಖಲೆಗಳು, ಮೈಲಿಗಲ್ಲುಗಳ ಒಡತಿ. ಆಸ್ಟ್ರೇಲಿಯಾ ವಿರುದ್ಧದ ಏಕದಿನ ಕ್ರಿಕೆಟ್ ಸರಣಿಯಲ್ಲಿ ಅವರ ಭರ್ಜರಿ ಬೌಲಿಂಗ್​ಗೆ ಕಾಂಗರೂಗಳ ಪಡೆ ಆಟಗಾರ್ತಿಯರು ತತ್ತರಿಸಿಹೋಗಿದ್ಧಾರೆ. ಮೊದಲ ಪಂದ್ಯದಲ್ಲಿ ಭಾರತ ಸುಲಭವಾಗಿ ಸೋಲೊಪ್ಪಿದರೂ ಉಳಿದೆರಡು ಪಂದ್ಯಗಳಲ್ಲಿ ಭಾರತೀಯ ಮಹಿಳಾ ಕ್ರಿಕೆಟರ್​ಗಳದ್ದು ಅದ್ಭುತ ಪ್ರದರ್ಶನವಾಗಿತ್ತು. ಎರಡನೇ ಪಂದ್ಯದಲ್ಲಿ ಕೊನೆಯ ಎಸೆತದಲ್ಲಿ ಭಾರತ ವೀರೋಚಿತ ಸೋಲಪ್ಪಿತು. ಮೂರನೇ ಪಂದ್ಯದಲ್ಲಿ ದಾಖಲೆ ಮೊತ್ತವನ್ನು ಭಾರತೀಯರು ಚೇಸ್ ಮಾಡಿದ್ದರು. ಈ ಪಂದ್ಯಗಳಲ್ಲಿ ಝೂಲನ್ ಪಾತ್ರ ಬಹಳ ಮಹತ್ವದಿತ್ತು. ಎರಡನೇ ಪಂದ್ಯದಲ್ಲಿ ಕೊನೆಯ ಎಸೆತದಲ್ಲಿ ಇವರು ಆಕಸ್ಮಿಕವಾಗಿ ಎಸೆದ ನೋಬಾಲ್​ನಿಂದ ತಂಡ ಸೋತಿದಾದರೂ ಅದಕ್ಕೂ ಮುನ್ನ ಆ ಪಂದ್ಯದಲ್ಲಿ ಝೂಲನ್ ಗೋಸ್ವಾಮಿ ಅವರ ಬೌಲಿಂಗ್ ಸಾಧನೆ ಅಮೋಘವಾಗಿತ್ತು. ಈ ಸರಣಿಯನ್ನ ಆಸ್ಟ್ರೇಲಿಯಾ 2-1ರಿಂದ ಗೆದ್ದುಕೊಂಡರೂ ಭಾರತ ವನಿತೆಯರ ತಂಡದ ರೋಚಕ ಫೈಟ್ ಅವಿಸ್ಮರಣೀಯವಾದುದು.

  ಈ ಸರಣಿಯಲ್ಲಿ ವೇಗದ ಬೌಲರ್ ಝೂಲನ್ ಗೋಸ್ವಾಮಿ ತಮ್ಮ ಕ್ರಿಕೆಟ್ ವೃತ್ತಿ ಜೀವನದಲ್ಲಿ 600 ವಿಕೆಟ್ ಪಡೆದ ಮೈಲಿಗಲ್ಲು ಮುಟ್ಟಿದರು. ಟಿ20 ಕ್ರಿಕೆಟ್​ಗೆ ಮೂರು ವರ್ಷಗಳ ಹಿಂದೆಯೇ ವಿದಾಯ ಹೇಳಿರುವ ಝೂಲನ್ ಅವರು ಇದೀಗ ಎಲ್ಲಾ ಮಾದರಿಯ ಕ್ರಿಕೆಟ್​ಗೂ ನಿವೃತ್ತಿ ಘೋಷಿಸುವ ಆಲೋಚನೆಯಲ್ಲಿದ್ಧಾರೆ. ನಿವೃತ್ತಿಗೆ ಮುನ್ನ ಅವರು ತಮ್ಮ ಕೊನೆಯಾಸೆ ಹಂಚಿಕೊಂಡಿದ್ಧಾರೆ.

  ಅವರಿಗೆ ಪಿಂಕ್ ಬಾಲ್ ಟೆಸ್ಟ್ ಪಂದ್ಯ ಆಡಿದ ಬಳಿಕ ನಿವೃತ್ತರಾಗಬೇಕಂತೆ. ಪಿಂಕ್ ಬಾಲ್ ಟೆಸ್ಟ್ ಎಂದರೆ ಹೊನಲು ಬೆಳಕಿನಲ್ಲಿ ನಡೆಯುವ ಟೆಸ್ಟ್ ಪಂದ್ಯ. ಭಾರತ ಮತ್ತು ಆಸ್ಟ್ರೇಲಿಯಾ ಮಹಿಳಾ ತಂಡಗಳ ಮಧ್ಯೆ ಟಿ20 ಸರಣಿ ಶುರುವಾಗುವ ಮುನ್ನ ಏಕೈಕ ಟೆಸ್ಟ್ ಪಂದ್ಯ ನಡೆಯಲಿದೆ. ಅದು ಹಗಲು-ರಾತ್ರಿ ನಡೆಯುವ ಪಿಂಕ್ ಬಾಲ್ ಟೆಸ್ಟ್ ಪಂದ್ಯವಾಗಿದೆ. ಆ ಪಂದ್ಯದಲ್ಲಿ ಆಡಿ ಬಳಿಕ ನಿವೃತ್ತಿ ಘೋಷಿಸುವುದಾಗಿ ಸಂದರ್ಶನವೊಂದರಲ್ಲಿ ಝೂಲನ್ ಗೋಸ್ವಾಮಿ ಹೇಳಿಕೊಂಡಿದ್ದಾರೆ. ಸೆ. 30ರಂದು ಈ ಪಂದ್ಯ ಕ್ವೀನ್ಸ್​ಲ್ಯಾಂಡ್ ರಾಜ್ಯದ ಕರಾರ ಓವಲ್ ಮೈದಾನದಲ್ಲಿ ಆರಂಭವಾಗುತ್ತದೆ.

  ಭಾರತ ಇದೂವರೆಗೂ ಪಿಂಕ್ ಬಾಲ್ ಟೆಸ್ಟ್ ಪಂದ್ಯ ಆಡಿರುವುದು ಒಮ್ಮೆ ಮಾತ್ರ. ಈ ವರ್ಷದ ಆರಂಭದಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರ ತಂಡ ಡೇ-ನೈಟ್ ಟೆಸ್ಟ್ ಮ್ಯಾಚ್ ಆಡಿತ್ತು. ಅದು ಡ್ರಾನಲ್ಲಿ ಅಂತ್ಯವಾಯಿತು. ಈಗ ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವುದು ಭಾರತಕ್ಕೆ ಎರಡನೇ ಡೇ ನೈಟ್ ಟೆಸ್ಟ್ ಪಂದ್ಯವಾಗಿದೆ.

  ಪಿಂಕ್ ಬಾಲ್ ಟೆಸ್ಟ್ ಪಂದ್ಯ ಹೇಗಿದಿದ್ದೀತೆಂದು ಅನುಭವ ಪಡೆಯುವ ಆಸೆ ಝೂಲನ್ ಅವರಿಗೆ ಇದೆಯಂತೆ. ಪಿಂಕ್ ಬಾಲ್ ಪ್ರಯೋಗ ಈಗೀಗ ಮಾತ್ರ ನಡೆಯುತ್ತಿದೆ. ಪುರುಷರ ಕ್ರಿಕೆಟ್​ನಲ್ಲಿ ಹಲವು ಪಂದ್ಯಗಳು ನಡೆದಿವೆ. ಮಹಿಳಾ ಕ್ರಿಕೆಟ್​ನಲ್ಲಿ ಇತ್ತೀಚೆಗೆ ಮಾತ್ರ ನಿಧಾನವಾಗಿ ಡೇ ನೈಟ್ ಟೆಸ್ಟ್ ಪಂದ್ಯದ ಪ್ರಯೋಗ ಆಗುತ್ತಿದೆ.

  ಇದನ್ನೂ ಓದಿ: Jhulan Record- ಝೂಲನ್ ಗೋಸ್ವಾಮಿ 600 ವಿಕೆಟ್ ಸಾಧನೆ; ವಿಶ್ವದ ಅತಿವೇಗದ ಬೌಲರ್​ಳ ದಾಖಲೆ ಒಂದೇ ಎರಡೇ

  ವಿಶ್ವದ ಅತಿ ವೇಗದ ಮಹಿಳಾ ಬೌಲರ್ ಝೂಲನ್:

  38 ವರ್ಷದ ಝೂಲನ್ ಗೋಸ್ವಾಮಿ ಮಹಿಳಾ ಏಕದಿನ ಕ್ರಿಕೆಟ್​ನಲ್ಲಿ ಒಟ್ಟು 192 ಪಂದ್ಯಗಳಿಂದ 240 ವಿಕೆಟ್ ಸಂಪಾದಿಸಿದ್ದಾರೆ. ಇಡೀ ವಿಶ್ವದಲ್ಲಿ 200ಕ್ಕಿಂತ ಹೆಚ್ಚು ವಿಕೆಟ್ ಗಳಿಸಿದ ಏಕೈಕ ಮಹಿಳಾ ಬೌಲರ್ ಝೂಲನ್ ಅವರಾಗಿದ್ದಾರೆ. ಬೇರಾವ ಬೌಲರ್ ಕೂಡ 200 ವಿಕೆಟ್ ಸಮೀಪ ಬಂದಿಲ್ಲ. 68 ಟಿ20 ಪಂದ್ಯಗಳಿಂದ ಅವರು 56 ವಿಕೆಟ್ ಪಡೆದಿದ್ದಾರೆ. 11 ಟೆಸ್ಟ್ ಪಂದ್ಯಗಳನ್ನ ಆಡಿರುವ ಅವರು 41 ವಿಕೆಟ್ ಪಡೆದಿದ್ದಾರೆ. ದೇಶೀಯ ಕ್ರಿಕೆಟ್ ಪಂದ್ಯಾವಳಿಗಳಲ್ಲಿ ಅವರು ಬರೋಬ್ಬರಿ 264 ವಿಕೆಟ್ ಸಂಪಾದಿಸಿದ್ದಾರೆ. ಒಟ್ಟು 601 ವಿಕೆಟ್​ಗಳು ಅವರ ವೃತ್ತಿಪರ ಕ್ರಿಕೆಟ್​ನಲ್ಲಿ ಬಿದ್ದಿವೆ.

  ಚಾಕ್​ದಹ ಎಕ್ಸ್​ಪ್ರೆಸ್ ಎಂದು ಖ್ಯಾತರಾಗಿರುವ ಝೂಲನ್ ಗೋಸ್ವಾಮಿ ಅವರು ಪಶ್ಚಿಮ ಬಂಗಾಳದ ಚಾಕ್​ದಹದವರು. ಹೆಚ್ಚೂಕಡಿಮೆ ಆರು ಅಡಿಯಷ್ಟು ಎತ್ತರ ಕಾಯದ ಅವರು ವೇಗದ ಬೌಲಿಂಗ್​ಗೆ ಹೇಳಿಮಾಡಿಸಿದ ಶಾರೀರ ಹೊಂದಿದ್ದಾರೆ. ಬಾಲಕಿಯಾಗಿ ಫುಟ್ಬಾಲ್ ಫ್ಯಾನ್ ಆಗಿದ್ದ ಝೂಲನ್ ಗೋಸ್ವಾಮಿ 1992ರ ವಿಶ್ವಕಪ್ ಕ್ರಿಕೆಟ್ ವೀಕ್ಷಿಸಿದ ಬಳಿಕ ಕ್ರಿಕೆಟ್ ಆಟದಲ್ಲಿ ಆಸಕ್ತಿ ತೋರಿದರು. ಚಾಕ್​ದಹದಲ್ಲಿ ಕ್ರಿಕೆಟ್ ಅಭ್ಯಾಸಕ್ಕೆ ಸರಿಯಾದ ವ್ಯವಸ್ಥೆ ಇಲ್ಲದ ಕಾರಣ ದೂರದ ಕೋಲ್ಕತಾಗೆ ಹೋಗಿ ಇವರು ಕ್ರಿಕೆಟ್ ಆಡುತ್ತಾ ಬೆಳೆದವರು.

  ಇವರ ಬೌಲಿಂಗ್ ವೇಗ ಎಷ್ಟು?

  ಮಹಿಳಾ ಕ್ರಿಕೆಟ್​ನಲ್ಲಿ ವೇಗದ ಬೌಲಿಂಗ್ ಪುರುಷರ ಕ್ರಿಕೆಟ್​ನಷ್ಟಿರುವುದಿಲ್ಲ. ಪುರುಷರ ಕ್ರಿಕೆಟ್​ನಲ್ಲಿ ಗಂಟೆಗೆ 150 ಕಿಮೀವರೆಗೂ ವೇಗದಲ್ಲಿ ಬೌಲಿಂಗ್ ಮಾಡುತ್ತಾರೆ. ಝೂಲನ್ ಗೋಸ್ವಾಮಿ ಅವರು ಗಂಟೆಗೆ 150-120 ಕಿಮೀ ವೇಗದಲ್ಲಿ ಬೌಲಿಂಗ್ ಮಾಡಬಲ್ಲರು. ಸದ್ಯ ಇಷ್ಟು ವೇಗದಲ್ಲಿ ಬೌಲಿಂಗ್ ಮಾಡುವ ಆಟಗಾರ್ತಿಯರು ಝೂಲನ್ ಬಿಟ್ಟರೆ ವಿಶ್ವದಲ್ಲಿ ಬೇರೆ ಯಾರೂ ಇಲ್ಲ.

  ಅರ್ಜುನ ಪ್ರಶಸ್ತಿ, ಪದ್ಮ ಶ್ರೀ ಮೊದಲಾದ ಪ್ರಶಸ್ತಿಗಳನ್ನ ಗಳಿಸಿರುವ ಝೂಲನ್ ಗೋಸ್ವಾಮಿ ಅವರು ಈಗಿನ ಮಹಿಳಾ ಕ್ರಿಕೆಟ್ ತಂಡದ ಕೋಚಿಂಗ್ ಟೀಮ್​ನಲ್ಲೂ ಇದ್ದಾರೆ, ಆಟಗಾರ್ತಿಯೂ ಆಗಿದ್ದಾರೆ. ಇದು ವಿಶೇಷವಾದುದು. ಝೂಲನ್ ಗೋಸ್ವಾಮಿ ಅವರ ಕ್ರಿಕೆಟ್ ಜೀವನದ ಕುರಿತು ಹಿಂದಿ ಭಾಷೆಯಲ್ಲಿ “ಚಾಕ್​ದಹ ಎಕ್ಸ್​ಪ್ರೆಸ್” ಎಂಬ ಸಿನಿಮಾ ನಿರ್ಮಾಣ ಆಗುತ್ತಿದೆ. ಸುಶಾಂತ್ ದಾಸ್ ಅವರು ಈ ಚಿತ್ರದ ನಿರ್ದೇಶನ ಮಾಡಲಿದ್ಧಾರೆ.
  Published by:Vijayasarthy SN
  First published: