ಜೆಮಿಮಾ ಅಮೋಘ ಆಟದ ಮಧ್ಯೆ ಮಳೆ ಕಾಟ; ಭಾರತ-ಆಸ್ಟ್ರೇಲಿಯಾ ಟಿ20 ಪಂದ್ಯ ಸ್ಥಗಿತ

ಟೆಸ್ಟ್ ಪಂದ್ಯದಲ್ಲಿ ಮೇಲುಗೈ ಸಾಧಿಸಿದ ಹುಮ್ಮಸ್ಸಿನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತೀಯ ಮಹಿಳೆಯರು ಪ್ರಾಬಲ್ಯ ಮುಂದುವರಿಸುತ್ತಿರುವಂತೆಯೇ ಮಳೆಯಿಂದಾಗಿ ಪಂದ್ಯ ಅರ್ಧಕ್ಕೆ ಸ್ಥಗಿತಗೊಂಡಿದೆ.

ಜೆಮಿಮಾ ರಾಡ್ರಿಗ್ಸ್

ಜೆಮಿಮಾ ರಾಡ್ರಿಗ್ಸ್

 • Share this:
  ಕರಾರ, ಅ. 7: ಆಸ್ಟ್ರೇಲಿಯಾದ ಕ್ವೀನ್ಸ್​ಲ್ಯಾಂಡ್ ರಾಜ್ಯದ ಕರಾರ ನಗರದಲ್ಲಿ ಇಂದು ಆರಂಭಗೊಂಡ ಆಸ್ಟ್ರೇಲಿಯಾ ಮತ್ತು ಭಾರತ ಮಹಿಳಾ ತಂಡಗಳ ನಡುವಿನ ಟಿ20 ಕ್ರಿಕೆಟ್ ಸರಣಿಯ ಮೊದಲ ಪಂದ್ಯ ಮಳೆಯ ಕಾರಣಕ್ಕೆ ಅರ್ಧದಲ್ಲೇ ನಿಂತುಹೋಗಿದೆ. ಕೆಲ ದಿನಗಳ ಹಿಂದೆ ಡ್ರಾನಲ್ಲಿ ಅಂತ್ಯಗೊಂಡ ಟೆಸ್ಟ್ ಪಂದ್ಯದಲ್ಲಿ ಕಾಂಗರೂಗಳ ಪಡೆಯ ಜುಟ್ಟು ಹಿಡಿದಿದ್ದ ಭಾರತೀಯ ಮಹಿಳೆಯರು ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಅದೇ ಶ್ರೇಷ್ಠ ಪ್ರದರ್ಶನ ಮುಂದುವರಿಸಿದ್ದರು. ಆದರೆ, ದುರದೃಷ್ಟಕ್ಕೆ ಭಾರತೀಯರ ಬ್ಯಾಟಿಂಗ್​ನ ಇನ್ನಿಂಗ್ಸ್ ಪೂರ್ಣಗೊಳ್ಳುವ ಮುನ್ನವೇ ಮಳೆ ಕಾಟವಾಗಿ ಆಟ ಮುಂದುವರಿಯಲೇ ಇಲ್ಲ. 16ನೇ ಓವರ್​ನಲ್ಲಿ ಮಳೆ ಶುರುವಾದಾಗ ಭಾರತ ತಂಡ 4 ವಿಕೆಟ್ ನಷ್ಟಕ್ಕೆ 131 ರನ್ ಗಳಿಸಿತ್ತು. ಜೆಮಿಮಾ ರಾಡ್ರಿಗ್ಸ್ ಅಜೇಯ 49 ರನ್ ಗಳಿಸಿ ತಂಡವನ್ನು ದೊಡ್ಡ ಮೊತ್ತದತ್ತ ಕೊಂಡೊಯ್ಯುತ್ತಿದ್ದರು.

  ಸ್ಮೃತಿ ಮಂಧನಾ, ಶಫಾಲಿ ವರ್ಮಾ ಅವರೂ ಉತ್ತಮ ಆಟವಾಡಿದರು. ಜೆಮಿಯಾ ರಾಡ್ರಿಗ್ಸ್ 36 ಬಾಲ್​ನಲ್ಲಿ ಅಜೇಯ 49 ರನ್ ಗಳಿಸಿದರು. ರಿಚಾ ಘೋಷ್ ಮತ್ತು ಜೆಮಿಯಾ ಇಬ ್ಬರೂ 5ನೇ ವಿಕೆಟ್​ಗೆ 25 ರನ್​ಗಳ ಮುರಿಯದ ಜೊತೆಯಾಟದಲ್ಲಿ ಭಾಗಿಯಾಗಿದ್ದರು. ಭಾರತದ ಇನ್ನಿಂಗ್ಸ್ 180 ರನ್​ವರೆಗೂ ಬೆಳೆಯುವ ನಿರೀಕ್ಷೆ ಇತ್ತು. ಆದರೆ, ಆಟ ಮುಂದುವರಿಯಲು ಮಳೆ ಬಿಡಲಿಲ್ಲ. ಬಹಳ ಹೊತ್ತು ಮಳೆ ಬಿಡದ ಹಿನ್ನೆಲೆಯಲ್ಲಿ ಪಂದ್ಯವನ್ನ ರದ್ದುಗೊಳಿಸಲು ತೀರ್ಮಾನಿಸಲಾಯಿತು. ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡದ ಎಂಟು ಮಂದಿ ಆಟಗಾರ್ತಿಯರು ಬೌಲಿಂಗ್ ಮಾಡಿದರು. ನಾಯಕಿ ಮೆಗ್ ಲೆನಿಂಗ್, ವಿಕೆಟ್ ಕೀಪರ್ ಆಲಿಸಾ ಹೀಲಿ ಮತ್ತು ಆರಂಭಿಕ ಆಟಗಾರ್ತಿ ಬೆತ್ ಮೂನೀ ಈ ಮೂವರು ಹೊರತುಪಡಿಸಿ ಉಳಿದ ಎಂಟು ಆಟಗಾರ್ತಿಯರು ಬೌಲಿಂಗ್ ಮಾಡಿದರು.

  ಇದನ್ನೂ ಓದಿ: T20 World Cup: ವಿಶ್ವಕಪ್​ಗೆ ಅಂಪೈರ್, ರೆಫರಿಗಳ ಘೋಷಣೆ; ಶ್ರೀನಾಥ್ ಸೇರಿ ಇಬ್ಬರು ಭಾರತೀಯರು

  ಈ ರದ್ದಾದ ಪಂದ್ಯದಿಂದ ಎರಡೂ ತಂಡಗಳು ತಲಾ ಒಂದೊಂದು ಅಂಕ ಪಡೆದವು. ಭಾರತದ ಈ ಆಸೀಸ್ ಕ್ರಿಕೆಟ್ ಪ್ರವಾಸದಲ್ಲಿ ಆಸ್ಟ್ರೇಲಿಯಾ ಮಹಿಳೆಯರು 7-5 ಅಂಕಗಳಿಂದ ಮುನ್ನಡೆ ಕಾಯ್ದುಕೊಂಡಿದ್ಧಾರೆ.

  ಇನ್ನೂ ಎರಡು ಟಿ20 ಪಂದ್ಯಗಳು ಬಾಕಿ ಇವೆ. ಅಕ್ಟೋಬರ್ 9 ಮತ್ತು 10 ರಂದು ಇನ್ನೆರಡು ಪಂದ್ಯಗಳು ನಡೆಯಲಿವೆ. ಈ ಕ್ರಿಕೆಟ್ ಪ್ರವಾಸದ ಆರಂಭದಲ್ಲಿ ಎರಡೂ ತಂಡಗಳ ಮಧ್ಯೆ ಏಕದಿನ ಕ್ರಿಕೆಟ್ ಸರಣಿ ನಡೆದಿತ್ತು. ಅದರಲ್ಲಿ ಆಸ್ಟ್ರೇಲಿಯನ್ನರು 2-1ರಿಂದ ಸರಣಿ ಗೆದ್ದರು. ಸರಣಿಯ ಕೊನೆಯ ಪಂದ್ಯದಲ್ಲಿ ಭಾರತ ಅಮೋಘ ಪ್ರದರ್ಶನದ ಮೂಲಕ ಗಮನ ಸೆಳೆದಿತ್ತು. ಬಳಿಕ ನಡೆದ ಏಕೈಕ ಟೆಸ್ಟ್ ಪಂದ್ಯ ಡ್ರಾನಲ್ಲಿ ಅಂತ್ಯವಾದರೂ ಭಾರತದ ಮಹಿಳೆಯರು ಎಲ್ಲಾ ವಿಭಾಗದಲ್ಲೂ ಪ್ರಾಬಲ್ಯ ಮೆರೆದಿದ್ದರು. ಆ ಟೆಸ್ಟ್ ಪಂದ್ಯದ ಮೊದಲೆರಡು ದಿನ ಮಳೆಯ ಕಾಟ ಇಲ್ಲದೇ ಇದ್ದಿದ್ದರೆ ಭಾರತ ಸುಲಭವಾಗಿ ಪಂದ್ಯ ಗೆಲ್ಲುತ್ತಿತ್ತು. ಆದರೆ, ಆತಿಥೇಯರ ಬಳಿ ಲಕ್ ಇದ್ದು ಬಚಾವಾದರು.

  ಇದನ್ನೂ ಓದಿ: Wasim Akram: ಪಾಕಿಸ್ತಾನ ಕ್ರಿಕೆಟ್‌ ಕೋಚ್ ಆಗಲು ಬಯಸುವುದಿಲ್ಲ ಎಂದು ವಾಸಿಂ ಅಕ್ರಂ ಹೇಳಿದ್ದೇಕೆ..?

  ಸ್ಕೋರು ವಿವರ (ಪಂದ್ಯ ರದ್ದಾಗುವ ಮುನ್ನ):

  ಭಾರತ ಮಹಿಳಾ ತಂಡ 15.2 ಓವರ್ 131/4
  (ಜೆಮಿಮಾ ರಾಡ್ರಿಗ್ಸ್ ಅಜೇಯ 49, ರಿಚಾ ಘೋಷ್ ಅಜೇಯ 17, ಸ್ಮೃತಿ ಮಂದನಾ 17, ಶಫಾಲಿ ವರ್ಮಾ 18, ಯಸ್ತಿಕಾ ಭಾಟಿಯಾ 15, ಹರ್ಮಾನ್​ಪ್ರೀತ್ ಕೌರ್ 12 ರನ್- ಆಷ್ಲೀಗ್ ಗಾರ್ಡ್ನರ್ 28/2)
  Published by:Vijayasarthy SN
  First published: