T20 World Cup: ವಿಶ್ವಕಪ್​ಗೆ ಅಂಪೈರ್, ರೆಫರಿಗಳ ಘೋಷಣೆ; ಶ್ರೀನಾಥ್ ಸೇರಿ ಇಬ್ಬರು ಭಾರತೀಯರು

ICC Elite Panel- ಅ. 17ರಿಂದ ನ. 14ರವರೆಗೆ ನಡೆಯಲಿರುವ ಟಿ20 ವಿಶ್ವಕಪ್​ಗೆ ಐಸಿಸಿ 20 ಮಂದಿ ಅಂಪೈರ್ಸ್ ಹಾಗು ರೆಫರಿಗಳ ಹೆಸರು ಪ್ರಕಟಿಸಿದೆ. ಜಾವಗಲ್ ಶ್ರೀನಾಥ್ ರೆಫರಿಯಾದರೆ, ನಿತಿನ್ ಮೆನನ್ ಅಂಪೈರಿಂಗ್ ಮಾಡಲಿದ್ದಾರೆ.

ಜಾವಗಲ್ ಶ್ರೀನಾಥ್

ಜಾವಗಲ್ ಶ್ರೀನಾಥ್

 • Share this:
  ನವದೆಹಲಿ, ಅ. 07: ಕೆಲವೇ ದಿನಗಳಲ್ಲಿ ಪ್ರಾರಂಭವಾಗಲಿರುವ ಟಿ20 ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಗೆ 20 ಅಂಪೈರ್ಸ್ ಮತ್ತು ರೆಫರಿಗಳ ಪಟ್ಟಿಯನ್ನು ಐಸಿಸಿ ಬಿಡುಗಡೆ ಮಾಡಿದೆ. ಇದರಲ್ಲಿ 16 ಅಂಪೈರ್​ಗಳು ಹಾಗೂ ನಾಲ್ವರು ಮ್ಯಾಚ್ ರೆಫರಿಗಳ ಹೆಸರು ಇವೆ. ನಾಲ್ವರು ರೆಫರಿಗಳ ಪೈಕಿ ಕನ್ನಡಿಗ ಜಾವಗಲ್ ಶ್ರೀನಾಥ್ ಅವರೂ ಇದ್ದಾರೆ. 16 ಅಂಪೈರ್​ಗಳಲ್ಲಿ ಭಾರತೀಯ ಅಂಪೈರ್ ನಿತಿನ್ ಮೆನನ್ ಅವರು ಸ್ಥಾನ ಪಡೆದಿದ್ಧಾರೆ. ಈ ಮೂಲಕ 20 ಮಂದಿಯ ಪಟ್ಟಿಯಲ್ಲಿ ಇಬ್ಬರು ಭಾರತೀಯರಿಗೂ ಜವಾಬ್ದಾರಿ ಕೊಡಲಾಗಿದೆ.

  ಭಾರತದ ಅತ್ಯಂತ ಶ್ರೇಷ್ಠ ವೇಗದ ಬೌಲರ್​ಗಳಲ್ಲಿ ಒಬ್ಬರೆನಿಸಿರುವ ಜಾವಗಲ್ ಶ್ರೀನಾಥ್ ಅವರು ಆಟಗಾರನಾಗಿ ನಿವೃತ್ತರಾದ ಬಳಿಕ ಮ್ಯಾಚ್ ರೆಫರಿಯಾಗಿ ಸೆಕೆಂಡ್ ಇನ್ನಿಂಗ್ಸ್ ಆಡುತ್ತಿದ್ಧಾರೆ. 2006ರಿಂದಲೂ ಅವರು ಐಸಿಸಿಯ ಮ್ಯಾಚ್ ರೆಫರಿಯಾಗಿ ಕರ್ತವ್ಯ ನಿಭಾಯಿಸುತ್ತಿದ್ಧಾರೆ. 35 ಟೆಸ್ಟ್ ಪಂದ್ಯ, 194 ಏಕದಿನ ಪಂದ್ಯ ಹಾಗೂ 60 ಅಂತರರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಮ್ಯಾಚ್ ರೆಫರಿಯಾಗಿ ಯಶಸ್ವಿಯಾಗಿ ಜವಾಬ್ದಾರಿ ನಿಭಾಯಿಸಿದ್ಧಾರೆ. 2007ರ ವಿಶ್ವಕಪ್​ನಲ್ಲೂ ಅವರು ಮ್ಯಾಚ್ ರೆಫರಿಯಾಗಿದ್ದರು.

  ಇನ್ನು, ನಿತಿನ್ ಮೆನನ್ ಅವರೂ ಮಾಜಿ ಕ್ರಿಕೆಟಿಗರು. ಇನ್ನೂ 37 ವರ್ಷದ ಯುವಕರಾಗಿರುವ ಮೆನನ್ ಅವರು ಮಧ್ಯ ಪ್ರದೇಶದ ಕ್ರಿಕೆಟಿಗರಾಗಿ ಆಡಿ ನಿವೃತ್ತರಾಗಿದ್ದಾರೆ. ನಂತರ ಅಂಪೈರ್ ಆಗಿ ಸೆಕೆಂಡ್ ಇನ್ನಿಂಗ್ಸ್ ಆಡುತ್ತಿದ್ಧಾರೆ. ಒಂದು ವರ್ಷದ ಹಿಂದಷ್ಟೇ ಅವರು ಐಸಿಸಿಯ ಉಚ್ಚ ಅಂಪೈರ್​ಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಅವರ ತಂದೆ ನರೇಂದ್ರ ಮೆನನ್ ಅವರೂ ಅಂಪೈರ್ ಆಗಿದ್ದವರು. ನಿತಿನ್ ಮೆನನ್ ತಮ್ಮ ಅಲ್ಪಾವಧಿಯಲ್ಲೇ 7 ಟೆಸ್ಟ್, 27 ಏಕದಿನ ಮತ್ತು 19 ಟಿ20 ಪಂದ್ಯಗಳಲ್ಲಿ ಅಂಪೈರಿಂಗ್ ಮಾಡಿದ್ದಾರೆ. ಭಾರತದ ರಣಜಿ ಟೂರ್ನಿ ಹಾಗೂ ಆಸ್ಟ್ರೇಲಿಯಾದ ಶೆಫೀಲ್ಡ್ ಶೀಲ್ಡ್ ಕ್ರಿಕೆಟ್ ಟೂರ್ನಿಗಳಲ್ಲೂ ಅವರು ಅಂಪೈರಿಂಗ್ ಮಾಡಿದ ಅನುಭವ ಹೊಂದಿದ್ದಾರೆ.

  ICC umpires and referees
  ಐಸಿಸಿ ಅಂಪೈರ್ ಮತ್ತು ರೆಫರಿಗಳು


  ಈಗ ಟಿ20 ವಿಶ್ವಕಪ್​ಗೆ ಐಸಿಸಿ ಬಿಡುಗಡೆ ಮಾಡಿರುವ ಅಫಿಷಿಯಲ್ಸ್ ಪಟ್ಟಿಯಲ್ಲಿ ಪಾಕಿಸ್ತಾನ ಮತ್ತು ಶ್ರೀಲಂಕಾದಿಂದಲೂ ಇಬ್ಬರಿಗೆ ಅವಕಾಶ ಕೊಡಲಾಗಿದೆ. ಪಾಕಿಸ್ತಾನದ ಅಲೀಮ್ ದರ್ ಮತ್ತು ಅಹ್ಸಾನ್ ರಾಜಾ ಅವರು ಅಂಪೈರ್​ಗಳಾಗಿ ಕರ್ತವ್ಯ ನಿಭಾಯಿಸಲಿದ್ದಾರೆ. ಶ್ರೀಲಂಕಾದ ರಂಜನ್ ಮುದುಗಲೆ ಮ್ಯಾಚ್ ರೆಫರಿಯಾದರೆ, ಮಾಜಿ ಲಂಕಾ ಕ್ರಿಕೆಟಿಗ ಕುಮಾರ್ ಧರ್ಮಸೇನಾ ಅಂಪೈರ್ ಆಗಿ ಆಯ್ಕೆಯಾಗಿದ್ದಾರೆ.

  2002ರಿಂದಲೂ ಐಸಿಸಿ ಅಂಪೈರ್ ಮತ್ತು ರೆಫರಿಗಳ ಆಯೋಗದ (Emirates Elite Panel of ICC Umpires and Referees) ವ್ಯವಸ್ಥೆ ಮಾಡಿದೆ. ಇದರಲ್ಲಿ ವಿಶ್ವಾದ್ಯಂತ ಸಮರ್ಥ ಅಂಪೈರ್ಸ್ ಮತ್ತು ರೆಫರಿಗಳನ್ನ ಒಳಗೊಳ್ಳಲಾಗುತ್ತದೆ. ಟೆಸ್ಟ್ ಪಂದ್ಯಗಳಲ್ಲಿ ಅತ್ಯುಚ್ಚ ಗುಣಮಟ್ಟದ ಅಂಪೈರಿಂಗ್ ನಡೆಸಲು ಮತ್ತು ಯಾವುದೇ ಲೋಪವಾಗದಂತೆ ಪಂದ್ಯ ನಡೆಯಲು ಈ ಪ್ಯಾನೆಲ್​ನಿಂದ ಆಯ್ದ ಅಂಪೈರ್​ಗಳನ್ನ ನಿಯೋಜಿಸಲಾಗುತ್ತದೆ. ಟೆಸ್ಟ್ ಪಂದ್ಯಗಳಷ್ಟೇ ಅಲ್ಲ, ಐಸಿಸಿಯ ಯಾವುದೇ ಟೂರ್ನಿ ಹಾಗೂ ಅಂತರರಾಷ್ಟ್ರೀಯ ಕ್ರಿಕೆಟ್ ಸರಣಿಗಳಿಗೂ ಇದೇ ಪ್ಯಾನಲ್​ನಿಂದ ಅಂಪೈರ್​ಗಳನ್ನ ಕಳುಹಿಸಲಾಗುತ್ತದೆ. ಟೆಸ್ಟ್ ಪಂದ್ಯಗಳಿಗೆ ತಟಸ್ಥ ದೇಶದ ಅಂಪೈರ್ಸ್ ಇರುತ್ತಾರೆ. ಈಗ ಟಿ20 ವಿಶ್ವಕಪ್​ನಲ್ಲೂ ಪ್ರತೀ ಪಂದ್ಯಗಳಿಗೂ ತಟಸ್ಥ ದೇಶದ ಅಂಪೈರ್ ಮತ್ತು ಮ್ಯಾಚ್ ರೆಫರಿಗಳನ್ನ ನಿಯೋಜಿಸಲಾಗುತ್ತದೆ.

  ಇದನ್ನೂ ಓದಿ: IPL 2021: ಕ್ರೀಡಾ ಪರಿಕರಗಳನ್ನು ಮಾರಿ ಹಣ ಗಳಿಸುತ್ತಿದ್ದಾಳೆ ಮುಂಬೈ ತಂಡದ ಈ ಆಟಗಾರನ ಪತ್ನಿ!

  ಮ್ಯಾಚ್ ರೆಫರಿಗಳ ಕೆಲಸವೇನು?

  ಒಂದು ಪಂದ್ಯ ಸುಗಮವಾಗಿ ಸಾಗಲು ಮತ್ತು ಐಸಿಸಿಯ ಎಲ್ಲಾ ನೀತಿ ನಿಯಮಗಳು ಈ ಪಂದ್ಯದಲ್ಲಿ ಸರಿಯಾಗಿ ಪಾಲನೆ ಆಗಿದೆಯಾ ಎಂದು ನೋಡಿಕೊಳ್ಳಲು ಹಾಗೂ ನಿಯಮ ಉಲ್ಲಂಘನೆಯಾಗಿದ್ದರೆ ಅದಕ್ಕೆ ಶಿಕ್ಷೆಯನ್ನ ನಿರ್ಧರಿಸುವುದು ಇವೆಲ್ಲಾ ಹೊಣೆಗಾರಿಕೆ ಮ್ಯಾಚ್ ರೆಫರಿಯದ್ದಾಗಿರುತ್ತದೆ.

  ಅಕ್ಟೋಬರ್ 17ರಂದು ಪ್ರಾರಂಭವಾಗಲಿರುವ ಐಸಿಸಿ ಟಿ20 ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿ ನವೆಂಬರ್ 14ರವರೆಗೂ ನಡೆಯಲಿದೆ. 16 ತಂಡಗಳು ಪಾಲ್ಗೊಳ್ಳಲಿರುವ ಈ ಟೂರ್ನಿಯಲ್ಲಿ ಒಟ್ಟು 45 ಪಂದ್ಯಗಳು ನಡೆಯಲಿವೆ. ಯಾವ್ಯಾವ ಪಂದ್ಯಗಳಿಗೆ ಜಾವಗಲ್ ಶ್ರೀನಾಥ್ ರೆಫರಿಯಾಗಿರುತ್ತಾರೆ, ನಿತಿನ್ ಮೆನನ್ ಅಂಪೈರಿಂಗ್ ಮಾಡುತ್ತಾರೆ ಎಂಬ ಮಾಹಿತಿ ಇನ್ನೂ ಹೊರಬರಬೇಕಿದೆ.

  ಮ್ಯಾಚ್ ರೆಫರಿ: ಡೇವಿಡ್ ಬೂನ್, ಜೆಫ್ ಕ್ರೌವ್, ರಂಜನ್ ಮದುಗಲೆ, ಜಾವಗಲ್ ಶ್ರೀನಾಥ್

  ಅಂಪೈರ್ಸ್: ಕ್ರಿಸ್ ಬ್ರೌನ್, ಅಲೀಮ್ ದರ್, ಕುಮಾರ್ ಧರ್ಮಸೇನಾ, ಮರಾಯ್ಸ್ ಎರಾಸ್ಮಸ್, ಕ್ರಿಸ್ ಜಾಫನೀ, ಮೈಕೇಲ್ ಗೋಗ್, ಅಡ್ರಿಯಾನ್ ಹೋಲ್ಡ್​ಸ್ಟಾಕ್, ರಿಚರ್ಡ್ ಇಲಿಂಗ್​ವರ್ತ್, ರಿಚರ್ಡ್ ಕೆಟಲ್​ಬೊರೋ, ನಿತಿನ್ ಮೆನನ್, ಅಹ್ಸಾನ್ ರಾಜಾ, ಪೌಲ್ ರೀಫೆಲ್, ಲ್ಯಾಂಗ್ಟನ್ ರುಸೆರೆ, ರಾಡ್ ಟಕರ್, ಜೋಯೆಲ್ ವಿಲ್ಸನ್, ಪೌಲ್ ವಿಲ್ಸನ್.
  Published by:Vijayasarthy SN
  First published: