ಭಾರತ ಮೂಲದ ಜಸ್ಕರಣ್ ಮಲ್ಹೋತ್ರಾ (Jaskaran Malhotra) ಹೊಸ ಇತಿಹಾಸ ನಿರ್ಮಿಸಿದ್ಧಾರೆ. ನಿನ್ನೆ ನಡೆದ ಪಪುವಾ ನ್ಯೂ ಗಿನಿಯಾ (Papua New Guinea Cricket Team) ಮತ್ತು ಅಮೆರಿಕ (USA cricket Team) ನಡುವಿನ ಏಕದಿನ ಪಂದ್ಯದಲ್ಲಿ ಅಮೆರಿಕದ ಜಸ್ಕರಣ್ ಮಲ್ಹೋತ್ರಾ ಒಂದೇ ಓವರ್ನಲ್ಲಿ 6 ಸಿಕ್ಸರ್ ಸಿಡಿಸಿ ವಿಶ್ವದಾಖಲೆ ಸರಿಗಟ್ಟಿದ್ದಾರೆ. ಏಕದಿನ ಕ್ರಿಕೆಟ್ (ODI Cricket) ಇತಿಹಾಸದಲ್ಲಿ ಒಂದು ಓವರ್ನಲ್ಲಿ ಆರು ಸಿಕ್ಸ್ (6 Sixes in an Over) ಭಾರಿಸಿದ ವಿಶ್ವದ ಎರಡನೇ ಆಟಗಾರರೆನಿಸಿದ್ದಾರೆ. ದಕ್ಷಿಣ ಆಫ್ರಿಕಾದ ಹರ್ಷಲ್ ಗಿಬ್ಸ್ (Harshelle Gibbs) ಅವರನ್ನ ಬಿಟ್ಟರೆ ಏಕದಿನ ಅಂತರರಾಷ್ಟ್ರೀಯ ಪಂದ್ಯದಲ್ಲಿ ಯಾರೂ ಕೂಡ ಒಂದು ಓವರ್ನಲ್ಲಿ ಆರು ಸಿಕ್ಸ್ ಭಾರಿಸಿದ್ದಿರಲಿಲ್ಲ. ಭಾರತದ ಯುವರಾಜ್ ಸಿಂಗ್ (Yuvraj Singh) ಮತ್ತು ವೆಸ್ಟ್ ಇಂಡೀಸ್ನ ಕೀರಾನ್ ಪೊಲಾರ್ಡ್ (Kieron Pollard) ಅವರು ಟಿ20 ಕ್ರಿಕೆಟ್ನಲ್ಲಿ ಆರು ಬಾಲ್ಗೆ ಆರು ಸಿಕ್ಸರ್ ಭಾರಿಸಿದ್ದರು. ಈ ದಿಗ್ಗಜರ ಸಾಲಿಗೆ 31 ವರ್ಷದ ಜಸ್ಕರಣ್ ಮಲ್ಹೋತ್ರಾ ಸೇರ್ಪಡೆಯಾಗಿದ್ದಾರೆ. ಆತಿಥೇಯ ಪಪುವಾ ತಂಡದ ವೇಗದ ಬೌಲರ್ ಗೌಡಿ ಟೋಕಾ ಅವರ ಒಂದು ಓವರ್ನಲ್ಲಿ ಮಲ್ಹೋತ್ರಾ ಆರು ಸಿಕ್ಸರ್ ಸಿಡಿಸಿದ ದಾಖಲೆ ಬರೆದಿದ್ದಾರೆ.
ಪಪುವಾ ನ್ಯೂ ಗಿನಿಯಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಮಲ್ಹೋತ್ರಾ ಅವರ ಅಮೋಘ ಬ್ಯಾಟಿಂಗ್ ಪ್ರದರ್ಶನದ ನೆರವಿನಿಂದ ಅಮೆರಿಕ ತಂಡ 134 ರನ್ಗಳಿಂದ ಭರ್ಜರಿ ಗೆಲುವು ಸಾಧಿಸಿತು. ಚಂಡೀಗಡ ಸಂಜಾತರಾದ ಮಲ್ಹೋತ್ರಾ 124 ಬಾಲ್ನಲ್ಲಿ ಅಜೇಯ 173 ರನ್ ಗಳಿಸಿದರು. ಗೆಲ್ಲಲು ಅಮೆರಿಕ ಒಡ್ಡಿದ 271 ರನ್ಗೆ ಪ್ರತಿಯಾಗಿ ಪಪುವಾ ತಂಡ 137 ರನ್ಗೆ ಆಲೌಟ್ ಆಯಿತು. ಮಲ್ಹೋತ್ರಾ ಈ ಪಂದ್ಯದಲ್ಲಿ ಗಳಿಸಿದ ಶತಕ ಐತಿಹಾಸಿಕವಾಗಿತ್ತು. ಇದು ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಅಮೆರಿಕ ತಂಡದ ಆಟಗಾರನೊಬ್ಬ ಗಳಿಸಿದ ಚೊಚ್ಚಲ ಶತಕವಾಗಿದೆ.
ಈ ಗೆಲುವಿನ ಮೂಲಕ ಅಮೆರಿಕ ತಂಡ ಪಪುವಾ ನ್ಯೂಗಿನಿಯಾ ವಿರುದ್ಧದ ಎರಡೂ ಪಂದ್ಯಗಳನ್ನ ಗೆದ್ದು ಸರಣಿ ಕ್ಲೀನ್ ಸ್ವೀಪ್ ಮಾಡಿದೆ. ಸೆಪ್ಟೆಂಬರ್ 13ರಂದು ನೇಪಾಳ ಮತ್ತು ಓಮನ್ ದೇಶ ತಂಡಗಳ ವಿರುದ್ಧ ಅಮೆರಿಕ ತಂಡ ಆಡಲಿದೆ. ಇದೇ ವೇಳೆ, ಜಸ್ಕರಣ್ ಮಲ್ಹೋತ್ರಾ ಅವರ ದಾಖಲೆಯ ಆಟವನ್ನು ಹರ್ಷಲ್ ಗಿಬ್ಸ್, ಎಬಿ ಡೀವಿಲಿಯರ್ಸ್ ಮೊದಲಾದವರು ಪ್ರಶಂಸಿಸಿದ್ಧಾರೆ.
ಇದನ್ನೂ ಓದಿ: HBD Shubman Gill: 22ನೇ ವರ್ಷಕ್ಕೆ ಕಾಲಿಟ್ಟ ಶುಭಮನ್ ಗಿಲ್ಗೆ ಕೊಹ್ಲಿ, ಯುವರಾಜ್ ಸಿಂಗ್ ಸೇರಿ ಹಲವರಿಂದ ಶುಭಾಶಯ
ಜಸ್ಕರಣ್ ಮಲ್ಹೋತ್ರಾ ದಾಖಲೆಗಳು (Jaskaran Malhotra Records):
* ಪಪುವಾ ನ್ಯೂ ಗಿನಿಯಾ ವಿರುದ್ಧದ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಜಸ್ಕರಣ್ ಭಾರಿಸಿದ ಅಜೇಯ 173 ರನ್ ಅಮೆರಿಕದ ಚೊಚ್ಚಲ ಏಕದಿನ ಶತಕ.
* ಆರು ಎಸೆತದಲ್ಲಿ ಜಸ್ಕರಣ್ ಆರು ಸಿಕ್ಸರ್ ಭಾರಿಸಿದರು. ಏಕದಿನ ಕ್ರಿಕೆಟ್ನಲ್ಲಿ ಈ ಸಾಧನೆ ಮಾಡಿದ ವಿಶ್ವದ ಎರಡನೇ ಆಟಗಾರ ಅವರು. ದಕ್ಷಿಣ ಆಫ್ರಿಕಾದ ಹರ್ಷಲ್ ಗಿಬ್ಸ್ ಈ ಮುಂಚೆ ಈ ದಾಖಲೆ ಬರೆದಿದ್ದರು.
* ಏಕದಿನ ಮತ್ತು ಟಿ20 ಕ್ರಿಕೆಟ್ ಎರಡೂ ಸೇರಿ ಆರು ಬಾಲ್ಗೆ ಆರು ಸಿಕ್ಸರ್ ಭಾರಿಸಿದ ವಿಶ್ವದ ನಾಲ್ಕನೇ ಆಟಗಾರ ಜಸ್ಕರಣ್. ಹರ್ಷಲ್ ಗಿಬ್ಸ್, ಯುವರಾಜ್ ಸಿಂಗ್ ಮತ್ತು ಕೀರಾನ್ ಪೊಲಾರ್ಡ್ ಅವರ ಸಾಲಿಗೆ ಮಲ್ಹೋತ್ರಾ ಸೇರಿದ್ಧಾರೆ.
* ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಐದನೇ ಕ್ರಮಾಂಕದಲ್ಲಿ ಬಂದು ಅತಿ ಹೆಚ್ಚು ರನ್ ಗಳಿಸಿದ ದಾಖಲೆ ಮಲ್ಹೋತ್ರಾ ಹೆಸರಿಗೆ ಬಂದಿದೆ. ಅವರು ಎಬಿ ಡೀವಿಲಿಯರ್ಸ್ ದಾಖಲೆಯನ್ನ ಮುರಿದ್ದಾರೆ.
* ಸೌರಭ್ ನೇತ್ರಾವಲ್ಕರ್ ಅವರ ಜೊತೆ ಜಸ್ಕರಣ್ ಮಲ್ಹೋತ್ರಾ 10ನೇ ವಿಕೆಟ್ಗೆ 17 ಬಾಲ್ನಲ್ಲಿ 55 ರನ್ ಮುರಿಯದ ಜೊತೆಯಾಟದಲ್ಲಿ ಭಾಗಿಯಾದರು. ಇದು 10ನೇ ವಿಕೆಟ್ಗೆ ಅಮೆರಿಕದ ಹೊಸ ದಾಖಲೆಯಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ