Case Against Kashmir Students| ಭಾರತದ ವಿರುದ್ಧದ ಪಾಕ್​ ಗೆಲುವಿಗೆ ಸಂಭ್ರಮ ಅರೋಪ; ಜಮ್ಮು-ಕಾಶ್ಮೀರ ವಿದ್ಯಾರ್ಥಿಗಳ ವಿರುದ್ಧ UAPA ಕೇಸ್​!

ಪಾಕ್ ಗೆಲುವನ್ನು ಸಂಭ್ರಮಿಸುತ್ತಿರುವ ಕಾಶ್ಮೀರಿಗಳ ಮೇಲೆ ಇಷ್ಟೊಂದು ಕೋಪವೇಕೆ? ಕೆಲವರು ದೇಶದ್ರೋಹಿಗಳ ಮೇಲೆ ಗುಂಡು ಹಾರಿಸಿ ಎಂದು ಕೊಲೆಗಡುಕ ಘೋಷಣೆಗಳನ್ನೂ ಕೂಗುತ್ತಿದ್ದಾರೆ. ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಕಸಿದುಕೊಂಡಾಗ ಎಷ್ಟು ಮಂದಿ ಸಿಹಿ ಹಂಚಿ ಸಂಭ್ರಮಿಸಿದರು ಎಂದು ಮುಫ್ತಿ ಪ್ರಶ್ನಿಸಿದ್ದಾರೆ.

ಪ್ರಾತಿನಿಧಿಕ ಚಿತ್ರ.

ಪ್ರಾತಿನಿಧಿಕ ಚಿತ್ರ.

 • Share this:
  ಶ್ರೀನಗರ (ಅಕ್ಟೋಬರ್​ 26); ಭಾರತ ಮತ್ತು ಪಾಕಿಸ್ತಾನದ (India vs Pakistan) ವಿರುದ್ಧದ ವಿಶ್ವಕಪ್​ನ ಮೊದಲ ಟಿ20 (T20 world Cup) ಪಂದ್ಯಕ್ಕೆ ಇಡೀ ವಿಶ್ವವೇ ಕಾದಿತ್ತು. ಈ ಪಂದ್ಯದಲ್ಲೂ ಭಾರತವೇ ಗೆಲ್ಲುವ ಫೇವರಿಟ್ ಆಗಿತ್ತು. ಆದರೆ, ದುರಾದೃಷ್ಟವಶಾತ್​ ಈ ಪಂದ್ಯದಲ್ಲಿ ಭಾರತ ಸೋಲನುಭವಿಸಿತ್ತು. ಈ ವಿಚಾರ ಸಾಮಾನ್ಯವಾಗಿ ಕೋಟ್ಯಾಂತರ ಅಭಿಮಾನಿಗಳಿಗೆ ನಿರಾಸೆಗೆ ಕಾರಣವಾಗಿತ್ತು. ಈ ವೇಳೆ ಪಾಕ್ ಗೆದ್ದಾಗ ಸಂಭ್ರಮಿಸಿ ಪಾಕ್ ಪರ ಘೋಷಣೆ ಕೂಗಿದ ಆರೋಪದ ಮೇಲೆ ಶ್ರೀನಗರದ (Srinagara) ವೈದ್ಯಕೀಯ ವಿದ್ಯಾರ್ಥಿಗಳ (Medical Collage Students Booked under UAPA) ಮೇಲೆ ಬಾಹಿರ ಚಟುವಟಿಕೆಗಳ ತಡೆಗಟ್ಟುವಿಕೆ ಕಾಯ್ದೆ(UAPA)ಯ ಅಡಿಯಲ್ಲಿ ಎರಡು ಪ್ರಕರಣ ದಾಖಲಿಸಲಾಗಿದೆ ಎಂದು ವರದಿಯಾಗಿದೆ.

  ಶ್ರೀ ಕಾಶ್ಮೀರ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಮತ್ತು ಶ್ರೀನಗರದ ಮೆಡಿಕಲ್ ಕಾಲೇಜು ವಿದ್ಯಾರ್ಥಿನಿಯರ ಹಾಸ್ಟೆಲ್‌ನಲ್ಲಿ ಪಾಕ್ ಪರ ಘೋಷಣೆಗಳನ್ನು ಕೂಗಲಾಗಿದೆ ಎಂದು ಆರೋಪಿಸುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಅವುಗಳ ಆಧಾರದ ಮೇಲೆ ಶ್ರೀನಗರದ ಕರಣ್ ನಗರ್ ಮತ್ತು ಸೌರ ಪೊಲೀಸ್ ಠಾಣೆಗಳಲ್ಲಿ ಭಯೋತ್ಪಾದನಾ ವಿರೋಧಿ ಪ್ರಕರಣಗಳ ಅಡಿಯಲ್ಲಿ ಕೇಸು ದಾಖಲಾಗಿಸಲಾಗಿದೆ.

  ಈ ಘಟನೆಯ ಸತ್ಯಾಸತ್ಯತೆಯನ್ನು ತಿಳಿದುಕೊಳ್ಳುವ ಸಲುವಾಗಿ ಅಧಿಕಾರಿಗಳು ಈ ಕುರಿತು ಫ್ಯಾಕ್ಟ್ ಫೈಂಡಿಂಗ್ ಸಮಿತಿ ರಚಿಸಲಾಗಿದ್ದು, ಪ್ರಕರಣದ ಬಗ್ಗೆ ಮಾಹಿತಿ ಕಲೆ ಹಾಕುವುದು ಮತ್ತು ವಿಡಿಯೋ ವೈರಲ್ ಆಗಿದ್ದು ಹೇಗೆ ಎಂದು ತನಿಖೆ ನಡೆಸಲು ನಿರ್ಧರಿಸಿದ್ದಾರೆ. 48 ಗಂಟೆಗಳಲ್ಲಿ ವರದಿ ನೀಡುವಂತೆ ಸೂಚಿಸಲಾಗಿದೆ. “ನಮ್ಮ ಸಂಸ್ಥೆಯಲ್ಲಿ ಸಂಭ್ರಮಾಚರಣೆ ನಡೆದಿದೆ ಎನ್ನುವುದಕ್ಕೆ ಯಾವುದೇ ಸಾಕ್ಷಿಗಳಿಲ್ಲ. ಆಗಿದ್ದರೂ ಸತ್ಯಶೋಧನಾ ಸಮಿತಿ ತನಿಖೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ” ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

  ಪೊಲೀಸರು ವೈರಲ್ ಆಗಿರುವ ವಿಡಿಯೋಗಳನ್ನು ಮತ್ತು ಅವುಗಳಲ್ಲಿರುವ ಜನರನ್ನು ಪರಿಶೀಲಿಸುವಲ್ಲಿ ನಿರತರಾಗಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ಎನ್‌ಡಿಟಿವಿ ವರದಿ ಮಾಡಿದೆ. ವಿದ್ಯಾರ್ಥಿಗಳ ಮೇಲಿನ ಪೊಲೀಸರ ಶಿಸ್ತುಕ್ರಮವನ್ನು ಜಮ್ಮು ಕಾಶ್ಮೀರ ಪೀಪಲ್ಸ್ ಕಾನ್ಸರೆನ್ಸ್‌ನ ಮುಖಂಡ ಸಾಜಿದ್ ಲೋನ್ ಬಲವಾಗಿ ಖಂಡಿಸಿದ್ದಾರೆ.  "ಇದನ್ನು ನಾನು ಒಪ್ಪುವುದಿಲ್ಲ. ಅವರು ಬೇರೆ ತಂಡಕ್ಕೆ ಹುರಿದುಂಬಿಸಿದ ಕಾರಣ ಅವರು ದೇಶಭಕ್ತರಲ್ಲ ಎಂದು ನೀವು ಭಾವಿಸಿದರೆ- ಅವರು ದೇಶಭಕ್ತಿಯ ದಾರಿ ತಪ್ಪಿದ್ದಾರೆಂದು ನೀವು ಭಾವಿಸಿದರೆ ಅವರನ್ನು ಹಿಂದಕ್ಕೆ ಕರೆತರುವ ಧೈರ್ಯ ಮತ್ತು ನಂಬಿಕೆಯನ್ನು ನೀವು ಹೊಂದಿರಬೇಕು. ದಂಡನಾತ್ಮಕ ಕ್ರಮಗಳು ಸಹಾಯ ಮಾಡುವುದಿಲ್ಲ. ಈ ಹಿಂದೆಯೂ ಸಹಾಯ ಮಾಡಿಲ್ಲ" ಎಂದು ಅವರು ಟ್ವೀಟ್ ಮಾಡಿದ್ದಾರೆ.

  ಮೆಹಬೂಬ ಮುಫ್ತಿಯವರು ಟ್ವೀಟ್ ಮಾಡಿ, "ಗೃಹ ಸಚಿವರು ಕಾಶ್ಮೀರಿ ವೈದ್ಯಕೀಯ ವಿದ್ಯಾರ್ಥಿಗಳ ಮೇಲೆ ಯುಎಪಿಎ ಕೇಸು ಹಾಕುವ ಮೂಲಕ ತಮ್ಮ ಮನ್ ಕಿ ಬಾತ್ ಶುರು ಮಾಡಿದ್ದಾರೆ. ವಿದ್ಯಾವಂತ ಯುವಜನರು ಏಕೆ ಪಾಕಿಸ್ತಾನದೊಂದಿಗೆ ಗುರುತಿಸಿಕೊಳ್ಳಲು ಬಯಸುತ್ತಾರೆ ಎಂಬುದನ್ನು ಅರಿಯುವ ಬದಲು ಭಾರತ ಸರ್ಕಾರ ಅವರ ಮೇಲೆ ಪ್ರತೀಕಾರದ ಕ್ರಮಗಳನ್ನು ಕೈಗೊಳ್ಳುತ್ತಿದೆ. ಇಂತಹ ಕ್ರಮಗಳು ಅವರನ್ನು ಮತ್ತಷ್ಟು ದೂರ ತಳ್ಳುತ್ತವೆ" ಎಂದು ಆತಂಕ ವ್ಯಕ್ತಪಡಿಸಿದ್ದಾರೆ.  ಮುಂದುವರಿದು, "ಪಾಕ್ ಗೆಲುವನ್ನು ಸಂಭ್ರಮಿಸುತ್ತಿರುವ ಕಾಶ್ಮೀರಿಗಳ ಮೇಲೆ ಇಷ್ಟೊಂದು ಕೋಪ ಏಕೆ? ಕೆಲವರು ದೇಶದ್ರೋಹಿಗಳ ಮೇಲೆ ಗುಂಡು ಹಾರಿಸಿ ಎಂದು ಕೊಲೆಗಡುಕ ಘೋಷಣೆಗಳನ್ನೂ ಕೂಗುತ್ತಿದ್ದಾರೆ. ಜಮ್ಮು ಕಾಶ್ಮೀರ ಛಿದ್ರಗೊಂಡಾಗ ಮತ್ತು ವಿಶೇಷ ಸ್ಥಾನಮಾನವನ್ನು ಕಸಿದುಕೊಂಡಾಗ ಎಷ್ಟು ಮಂದಿ ಸಿಹಿ ಹಂಚಿ ಸಂಭ್ರಮಿಸಿದರು ಎಂಬುದನ್ನು ಯಾರೂ ಮರೆತಿಲ್ಲ. ನೀವು ಒಪ್ಪಬಹುದು ಅಥವಾ ಬಿಡಬಹುದು, ಪಾಕ್ ಗೆದ್ದಾಗ ಆ ತಂಡವನ್ನು ಮೊದಲು ಅಭಿನಂದಿಸಿದ ವಿರಾಟ್ ಕೊಹ್ಲಿಯವರ ಸರಿಯಾದ ಸ್ಫೂರ್ತಿಯನ್ನು ತೆಗೆದುಕೊಳ್ಳೋಣ" ಎಂದು ಮುಫ್ತಿ ಹೇಳಿದ್ದಾರೆ.  ಐಸಿಸಿ ಟಿಟ್ವೆಂಟಿ ವಿಶ್ವಕಪ್‌ನ ತನ್ನ ಆರಂಭಿಕ ಪಂದ್ಯದಲ್ಲಿ ಭಾರತವು ಪಾಕಿಸ್ತಾನದ ಎದರು 10 ವಿಕೆಟ್‌ಗಳ ಸೋಲು ಕಂಡಿತು. ಆದರೆ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಪಂದ್ಯ ಮುಗಿದ ವೇಳೆ ಪಾಕಿಸ್ತಾನದ ಆಟಗಾರ ಮೊಹಮ್ಮದ್ ರಿಜ್ವಾನ್‌ರನ್ನು ಅಪ್ಪಿಕೊಂಡು ಅಭಿನಂದಿಸಿದರು. ಮತ್ತೊಬ್ಬ ಆಟಗಾರ ಪಾಕ್ ನಾಯಕ ಬಾಬರ್ ಅಜಂರಿಗೆ ಅಭಿನಂದನೆ ತಿಳಿಸಿದರು.

  ಇದನ್ನೂ ಓದಿ: ಪಾಕಿಸ್ತಾನದ ಗಲ್ಲಿಗಲ್ಲಿಯಲ್ಲೂ ಇಂಥವರು ಇದ್ದಾರೆ: ಭಾರತೀಯ ಬೌಲರ್ ಅಣಕಿಸಿದ ಮಾಜಿ ಆಟಗಾರ

  ಈ ಫೋಟೊ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ “ನಿಜವಾದ ಕ್ರೀಡಾಸ್ಪೂರ್ತಿ” ಎಂಬ ಹೆಗ್ಗಳಿಕೆಗೆ ಪಾತ್ರವಾಗಿವೆ. ಅದೇ ರೀತಿ ಪಂದ್ಯದ ನಂತರ ಭಾರತದ ತಂಡದ ಮೆಂಟರ್ ಮಹೇಂದ್ರ ಸಿಂಗ್ ಧೋನಿ ಪಾಕಿಸ್ತಾನದ ಆಟಗಾರರ ಜೊತೆ ಮಾತುಕತೆ ನಡೆಸಿ ಕ್ರೀಡಾಭಿಮಾನಿಗಳ ಮನಗೆದ್ದಿದ್ದಾರೆ.
  Published by:MAshok Kumar
  First published: