Miracle- ಮೊಹಮ್ಮದ್ ರಿಜ್ವಾನ್ ಐಸಿಯುನಿಂದ ಚೇತರಿಸಿಕೊಂಡು ಬಂದಿದ್ದೇ ಪವಾಡ ಎಂದ ವೈದ್ಯರು

T20 World Cup- ಪಾಕಿಸ್ತಾನದ ವಿಶ್ವಕಪ್ ಹೀರೋ ಆಗಿದ್ದಾರೆ ಮೊಹಮ್ಮದ್ ರಿಜ್ವಾನ್. ಅನಾರೋಗ್ಯಕ್ಕೆ ತುತ್ತಾಗಿ ಎರಡು ದಿನ ಐಸಿಯುನಲ್ಲಿದ್ದ ರಿಜ್ವಾನ್ ಆಸ್ಟ್ರೇಲಿಯಾ ಪಂದ್ಯಕ್ಕೆ ಆಡಲು ಬರುತ್ತಾರೆ ಎಂದು ಯಾರಿಗೂ ನಂಬಿಕೆ ಇರಲಿಲ್ಲ. ಆದರೆ, ರಿಜ್ವಾನ್ ಎಲ್ಲರ ಎಣಿಕೆ ತಪ್ಪಿಸಿದರು.

ಐಸಿಯುನಲ್ಲಿ ಮೊಹಮ್ಮದ್ ರಿಜ್ವಾನ್

ಐಸಿಯುನಲ್ಲಿ ಮೊಹಮ್ಮದ್ ರಿಜ್ವಾನ್

 • Share this:
  ದುಬೈ: ಮೊಹಮ್ಮದ್ ರಿಜ್ವಾನ್ (Mohammad Rizwan) ಈ ವಿಶ್ವಕಪ್​ನಲ್ಲಿ ಬಾಬರ್ ಅಜಂ ಜೊತೆ ಪಾಕಿಸ್ತಾನದ ಬ್ಯಾಟಿಂಗ್ ಬೆನ್ನೆಲುಬಾಗಿದವರು. ಆಸ್ಟ್ರೇಲಿಯಾ ವಿರುದ್ಧ ಪಾಕಿಸ್ತಾನ ಒಳ್ಳೆಯ ಸ್ಕೋರ್ ಕಲೆಹಾಕಲು ರಿಜ್ವಾನ್ ಪ್ರಮುಖ ಕಾರಣರು. ಭಾರತ ವಿರುದ್ಧದ ಪಂದ್ಯದಲ್ಲೂ ಸುಲಭವಾಗಿ ಚೇಸಿಂಗ್ ಮಾಡಲು ಅವರ ಬ್ಯಾಟಿಂಗ್ ಕಾರಣವಾಗಿತ್ತು. ಆದರೆ, ಆಸ್ಟ್ರೇಲಿಯಾ ವಿರುದ್ಧದ ಸೆಮಿಫೈನಲ್​ನಲ್ಲಿ ಮೊಹಮ್ಮದ್ ರಿಜ್ವಾನ್ ಅವರು ಆಡುತ್ತಾರೆಂದು ಪಾಕ್ ತಂಡದಲ್ಲಿದ್ದವರು ಯಾರೂ ಅಂದುಕೊಂಡಿರಲಿಲ್ಲ. ಯಾಕೆಂದರೆ ರಿಜ್ವಾನ್ ಸೆಮಿಫೈನಲ್​ಗೆ ಮುಂಚೆ ಎರಡು ದಿನ ಐಸಿಯುನಲ್ಲಿ ದಾಖಲಾಗಿದ್ದರು. ಕನಿಷ್ಠ ಒಂದು ವಾರವಾದರೂ ಅವರು ಆಸ್ಪತ್ರೆಯಲ್ಲಿರಬೇಕಾಗಬಹುದು ಎಂದು ವೈದ್ಯರು ಭಾವಿಸಿದ್ದರು. ಆದರೆ, ರಿಜ್ವಾನ್ ಎರಡೇ ದಿನಕ್ಕೆ ಚೇತರಿಸಿಕೊಂಡು ತಂಡ ಸೇರಿಕೊಂಡಿದ್ದರು.

  ರಿಜ್ವಾನ್ ಅವರು ಇಷ್ಟು ಬೇಗ ಚೇತರಿಸಿಕೊಂಡಿದ್ದು ವೈದ್ಯರನ್ನೇ ದಂಗಾಗಿಸಿದೆ. ರಿಜ್ವಾನ್ ಅವರಿಗಿದ್ದ ಸೋಂಕು ಕಡಿಮೆಯಾಗಲು ಏನಿಲ್ಲವೆಂದರೂ ಐದು ದಿನವಾದರೂ ಬೇಕು. ಆದರೆ, ರಿಜ್ವಾನ್ ಅವರ ಮಾನಸಿಕ ಸ್ಥೈರ್ಯ, ದೇಶಕ್ಕಾಗಿ ಆಡಬೇಕೆಂಬ ಛಲ, ತಂಡಕ್ಕೆ ಬಲ ನೀಡಬೇಕೆಂಬ ತುಡಿತ, ಕ್ರೀಡಾಪಟುವಾಗಿ ಇರಿಸಿಕೊಂಡಿದ್ದ ದೈಹಿಕ ಕ್ಷಮತೆ ಹಾಗೂ ದೇವರ ಮೇಲಿನ ನಂಬಿಕೆ ಇವೆಲ್ಲವೂ ರಿಜ್ವಾನ್ ಅವರ ಶೀಘ್ರ ಚೇತರಿಕೆಗೆ ಅನುವು ಮಾಡಿಕೊಟ್ಟಿವೆ ಎಂಬುದು ವೈದ್ಯರ ಅನಿಸಿಕೆ.

  ಬಹಳ ಪ್ರಮುಖವಾದ ಸೆಮಿಫೈನಲ್ ಪಂದ್ಯದಲ್ಲಿ ದೇಶಕ್ಕಾಗಿ ಆಡಬೇಕೆಂಬ ಅದಮ್ಯ ಆಸೆ ರಿಜ್ವಾನ್ ಅವರಲ್ಲಿ ಇತ್ತು. ಅವರು ಚೇತರಿಸಿಕೊಂಡ ವೇಗ ನಿಜಕ್ಕೂ ಅಚ್ಚರಿ ತಂದಿದೆ ಎಂದು ರಿಜ್ವಾನ್ ಅವರಿಗೆ ಚಿಕಿತ್ಸೆ ನೀಡಿದ ದುಬೈನ ಮೆಡಿಯೋರ್ ಆಸ್ಪತ್ರೆಯ ವೈದ್ಯ ಡಾ. ಸಾಹೀರ್ ಸೈನಾಲಬ್ದೀನ್ ಹೇಳುತ್ತಾರೆ.

  ರಿಜ್ವಾನ್​ಗೆ ಏನಾಗಿತ್ತು?

  ನವಂಬರ್ 9ರಂದು ಮಧ್ಯರಾತ್ರಿ ಮೊಹಮ್ಮದ್ ರಿಜ್ವಾನ್ ಅವರಿಗೆ ಚೆಸ್ಟ್ ಇನ್ಫೆಕ್ಷನ್ ಆಗಿತ್ತು. ಎದೆ ನೋವು, ಉಸಿರಾಟ ತೊಂದರೆ ಕಾಣಿಸಿಕೊಂಡು ಮೆಡಿಯೋರ್ ಆಸ್ಪತ್ರೆಯ ತುರ್ತು ವಿಭಾಗಕ್ಕೆ ಕರೆದುಕೊಂಡು ಹೋಗಲಾಯಿತು. ಆದರೆ, ಇದಾಗುವುದಕ್ಕೆ ನಾಲ್ಕೈದು ದಿನ ಮುನ್ನವೇ ಪಾಕ್ ಆಟಗಾರನಿಗೆ ಬಿಟ್ಟು ಬಿಟ್ಟು ಜ್ವರ, ಕೆಮ್ಮು, ಎದೆ ನೋವು ಇತ್ತು. ನವೆಂಬರ್ 9ರಂದು ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದರಿಂದ ಎಮರ್ಜೆನ್ಸಿ ವಿಭಾಗಕ್ಕೆ ದಾಖಲಿಸಲಾಯಿತು. ಅಲ್ಲಿ ತುರ್ತಾಗಿ ಚಿಕಿತ್ಸೆಗಳನ್ನ ನೀಡಲಾಯಿತು.

  ಇದನ್ನೂ ಓದಿ: Hasan Ali- ಪಾಕ್ ಬೌಲರ್ ಹಸನ್ ಅಲಿ ಪತ್ನಿ ವಿರಾಟ್ ಕೊಹ್ಲಿಯ ಬಿಗ್ ಫ್ಯಾನ್; ಯಾರೀಕೆ?

  ರಿಜ್ವಾನ್ ಅವರಿಗೆ ಲ್ಯಾರಿನ್​ಜಿಯಲ್ (Laryngeal Infection) ಸೋಂಕು ಆಗಿರುವುದು ಲ್ಯಾಬ್ ಪರೀಕ್ಷೆಗಳಿಂದ ದೃಢಪಟ್ಟಿತು. ಇದು ತೀವ್ರ ಎದೆನೋವಿಗೆ ಕಾರಣವಾಗಿದೆ. ರಿಜ್ವಾನ್ ಅವರನ್ನ ಕೂಡಲೇ ಐಸಿಯುಗೆ ದಾಖಲಿಸಿ ನಿರಂತರವಾಗಿ ಅವರ ಆರೋಗ್ಯ ಮೇಲೆ ನಿಗಾ ಇರಿಸಲಾಯಿತು.

  “ರಿಜ್ವಾನ್ ಅವರಿಗೆ ತೀವ್ರತರದ ಸೋಂಕು ತಗುಲಿತ್ತು. ಸೆಮಿಫೈನಲ್ ಪಂದ್ಯಕ್ಕೆ ಮುಂಚೆ ರಿಕವರ್ ಆಗುವುದು ಮತ್ತೆ ಫಿಟ್ ಆಗುವುದು ಸಾಧ್ಯವೇ ಇಲ್ಲ ಎಂಬಂಥ ಸ್ಥಿತಿ ಇತ್ತು. ಆ ಸ್ಥಿತಿಯಿಂದ ಚೇತರಿಸಿಕೊಳ್ಳಲು ಯಾರಿಗಾದರೂ 5-7 ದಿನವಾದರೂ ಬೇಕಾಗುತ್ತದೆ” ಎಂದು ಆ ವೈದ್ಯರು ತಿಳಿಸುತ್ತಾರೆ.

  ತೀವ್ರ ಸೋಂಕಿದ್ದು ಇಷ್ಟು ಬೇಗ ರಿಕವರ್ ಆಗಿದ್ದು ಇದೇ ಮೊದಲು:

  ರಿಜ್ವಾನ್ ಅವರಿಗೆ ಅದ್ಭುತ ವಿಲ್ ಪವರ್ ಇದೆ. ಅವರಿಗೆ ತಾನಂದು ಕೊಂಡಿದ್ದು ಸಾಧಿಸುವುದರತ್ತ ಮಾತ್ರವೇ ಗಮನ. ದೇವರ ಮೇಲೆ ಅಪಾರವಾದ ನಂಬಿಕೆ. ಸೆಮಿಫೈನಲ್ ಬಗ್ಗೆಯೇ ಅವರಿಗೆ ಯೋಚನೆ ಇತ್ತು. ಎರಡು ರಾತ್ರಿ ಐಸಿಯುನಲ್ಲಿ ಕಳೆದ ಬಳಿಕ ರಿಜ್ವಾನ್ ಅವರ ದೇಹವು ಚಿಕಿತ್ಸೆಗೆ ಸ್ಪಂದಿಸತೊಡಗಿತು. ಆರೋಗ್ಯ ಗಮನಾರ್ಹ ರೀತಿಯಲ್ಲಿ ಸುಧಾರಿಸಿಕೊಂಡಿತು. ಅವರ ನೋವು ಕೂಡ ಬಹಳ ಕಡಿಮೆ ಆಯಿತು ಎಂದು ಡಾ. ಸಹೀರ್ ವಿವರ ನೀಡುತ್ತಾರೆ.

  ಇದನ್ನೂ ಓದಿ: Warner Shot- ಎರಡು ಬಾರಿ ಪಿಚ್ ಆದ ಚೆಂಡನ್ನು ಅಟ್ಟಾಡಿಸಿ ಹೊಡೆದ ವಾರ್ನರ್; ತಪ್ಪು ಅಂದ ಗಂಭೀರ್

  “ಕ್ರೀಡಾ ಪಂದ್ಯಾವಳಿಗಳಲ್ಲಿ ಆಟಗಾರರು ಗಾಯಗೊಂಡು ಆಸ್ಪತ್ರೆಗೆ ಬರುವುದನ್ನು ನೋಡಿದ್ದೇವೆ. ಆದರೆ, ಈ ಮಟ್ಟದ ತೀವ್ರ ಸೋಂಕು ಇದ್ದ ಆಟಗಾರ ಇಷ್ಟು ಬೇಗ ಚೇತರಿಸಿಕೊಂಡಿದ್ದು ಇದೇ ಮೊದಲು. ರಿಜ್ವಾನ್ ಸಿಕ್ಸರ್​ಗಳನ್ನ ಭಾರಿಸುತ್ತಿದ್ದರೆ ನಮಗೆಲ್ಲಾ ಖುಷಿ. ಅನಾರೋಗ್ಯದ ಬಳಿಕ ಅವರಿಗೆ ಮತ್ತೆ ಆ ಶಕ್ತಿ ಬಂದದ್ದು ನಿಜಕ್ಕೂ ಅದ್ಭುತ. ಅವರ ಶ್ರದ್ಧೆ, ನಂಬಿಕೆ, ಧೈರ್ಯಕ್ಕೆ ಶ್ಲಾಘನೆ ಮಾಡಲೇಬೇಕು” ಎಂದು ಮೆಡಿಯೋರ್ ಆಸ್ಪತ್ರೆಯ ಈ ವೈದ್ಯ ಅಭಿಪ್ರಾಯಪಟ್ಟಿದ್ದಾರೆ.

  ಮೊಹಮ್ಮದ್ ರಿಜ್ವಾನ್ ಆಸ್ಟ್ರೇಲಿಯಾ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ 67 ರನ್ ಭಾರಿಸಿದರು. ಆದರೆ, ಕೊನೆಯ ಕೆಲ ಓವರ್​ಗಳಲ್ಲಿ ಪಾಕ್ ಬೌಲರ್​ಗಳಿಂದ ಪಂದ್ಯದ ಹಿಡಿತ ತಪ್ಪಿ ಪಾಕಿಸ್ತಾನ ಸೋಲನುಭಿಸಬೇಕಾಯಿತು. ಇಲ್ಲದೇ ಹೋಗಿದ್ದರೆ ಮೊಹಮ್ಮದ್ ರಿಜ್ವಾನ್ ಅವರ ಪವಾಡಸದೃಶ ಆಟಕ್ಕೆ ಒಳ್ಳೆಯ ಪ್ರತಿಫಲ ಸಿಕ್ಕಂತಾಗುತ್ತಿತ್ತು. ಆದರೂ ತಮಗೆ ಸೆಮಿಫೈನಲ್​ನಲ್ಲಿ ಆಡಲು ಸಾಧ್ಯವಾಗುವಂತೆ ಮಾಡಿದ ವೈದ್ಯರಿಗೆ ಕೃತಜ್ಞತೆಯಾಗಿ ರಿಜ್ವಾನ್ ಅವರು ತಾವು ಸಹಿಹಾಕಿದ ಜೆರ್ಸಿಯನ್ನ ಉಡುಗೊರೆಯಾಗಿ ನೀಡಿದ್ದಾರೆ.
  Published by:Vijayasarthy SN
  First published: