ವಿಜಯ ಹಝಾರೆ ಕ್ರಿಕೆಟ್ನಲ್ಲಿ ಟೂರ್ನಿಯಲ್ಲಿ ಜಾರ್ಖಂಡ್ ತಂಡವು ಹೊಸ ಇತಿಹಾಸ ನಿರ್ಮಿಸಿದೆ. ಶನಿವಾರ ಮಧ್ಯಪ್ರದೇಶದ ವಿರುದ್ಧದ ಪಂದ್ಯದಲ್ಲಿ ಮೊಲದು ಬ್ಯಾಟಿಂಗ್ ಮಾಡಿದ ಜಾರ್ಖಂಡ್ 422 ರನ್ ಪೇರಿಸುವ ಮೂಲಕ ದೇಶೀಯ ಏಕದಿನ ಟೂರ್ನಿಯಲ್ಲಿ ಅತೀ ಹೆಚ್ಚು ರನ್ ಕಲೆಹಾಕಿದ ದಾಖಲೆ ಬರೆಯಿತು.
ಇದಕ್ಕೂ ಮುನ್ನ ಟಾಸ್ ಗೆದ್ದ ಮಧ್ಯಪ್ರದೇಶ ಬೌಲಿಂಗ್ ಆಯ್ದುಕೊಂಡಿತು. ಅದರಂತೆ ಆರಂಭಿಕರಾಗಿ ಕಣಕ್ಕಿಳಿದ ಜಾರ್ಖಂಡ್ ನಾಯಕ ಇಶಾನ್ ಕಿಶನ್ ಮೊದಲ ಓವರ್ನಿಂದಲೇ ಅಬ್ಬರಿಸಲಾರಂಭಿಸಿದರು. ಮಧ್ಯ ಪ್ರದೇಶದ ಬೌಲರುಗಳನ್ನು ಮನಸೋ ಇಚ್ಛೆ ದಂಡಿಸಿದ ಕಿಶನ್, ಕೇವಲ 74 ಎಸೆತಗಳಲ್ಲಿ 5 ಸಿಕ್ಸರ್ ಹಾಗೂ 12 ಬೌಂಡರಿಗಳ ನೆರವಿನಿಂದ ಶತಕವನ್ನು ಪೂರೈಸಿದರು. ಅಲ್ಲದೆ 26ನೇ ಓವರ್ನಲ್ಲೇ ತಂಡದ ಮೊತ್ತವನ್ನು 200ರ ಗಡಿದಾಟಿಸಿದರು. ಅಂತಿಮವಾಗಿ 94 ಎಸೆತಗಳಲ್ಲಿ 19 ಬೌಂಡರಿ, 11 ಸಿಕ್ಸರ್‌ಗಳೊಂದಿಗೆ 173 ರನ್ ಸಿಡಿಸಿ ಅಬ್ಬರಿಸಿದರು.
ಇನ್ನು ನಾಯಕನ ಈ ಸ್ಪೋಟಕ ಇನಿಂಗ್ಸ್ಗೆ ಸಾಥ್ ನೀಡಿದ ಅನ್ಕುಲ್ ರಾಯ್ 72 ರನ್, ವಿರಾಟ್ ಸಿಂಗ್ (68) ಹಾಗೂ ಸುಮಿತ್ ಕುಮಾರ್ 52 ರನ್ ಅರ್ಧಶತಕಗಳ ಕಾಣಿಕೆ ನೀಡಿದರು. ಅಲ್ಲದೆ ಜಾರ್ಖಂಡ್ ತಂಡದ ಮೊತ್ತವನ್ನು ನಿಗದಿತ 50 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 422 ರನ್‌ಗೆ ತಂದು ನಿಲ್ಲಿಸಿದರು. ಇದು ವಿಜಯ ಹಝಾರೆ ಟೂರ್ನಿಯ ಅತ್ಯಧಿಕ ಮೊತ್ತವಾಗಿದೆ.
ಇದಕ್ಕೂ ಮುನ್ನ 2010ರಲ್ಲಿ ರೈಲ್ವೇಸ್ ವಿರುದ್ಧ ಮಧ್ಯಪ್ರದೇಶ ತಂಡ 6 ವಿಕೆಟ್ ನಷ್ಟಕ್ಕೆ 412 ರನ್ ಗಳಿಸಿರುವುದು ದಾಖಲೆಯಾಗಿತ್ತು. ಇದೀಗ ಮಧ್ಯಪ್ರದೇಶದ ವಿರುದ್ಧವೇ ಜಾರ್ಖಂಡ್ ಹೊಸ ದಾಖಲೆ ಬರೆದಿರುವುದು ವಿಶೇಷ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ