ನವದೆಹಲಿ: ಟಿ20 ವಿಶ್ವಕಪ್ನಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಸೋತ ಬಳಿಕ ಕೆಲ ಅನಗತ್ಯ ವಿವಾದಗಳು ಉದ್ಭವವಾಗಿವೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ಹಿಂದೂ ಮುಸ್ಲಿಮ್ ನಡುವಿನ ಪಂದ್ಯವೆಂಬಂತೆ ಕೆಲವರು ಪರೋಕ್ಷವಾಗಿ ಬಿಂಬಿಸಿದ್ದು ಇದಕ್ಕೆ ಒಂದು ಕಾರಣ ಇರಬಹುದು. ಪಾಕಿಸ್ತಾನ ಸರ್ಕಾರದ ಒಬ್ಬ ಸಚಿವರೇ ಪಾಕಿಸ್ತಾನದ ಗೆಲುವನ್ನ ಇಸ್ಲಾಮ್ ಧರ್ಮಕ್ಕೆ ಸಂದ ಗೆಲುವು ಎಂದು ಬಣ್ಣಿಸಿದ್ದರು. ಪಾಕಿಸ್ತಾನದ ಆಟಗಾರ ಮೊಹಮ್ಮದ್ ರಿಜ್ವಾನ್ ಪಂದ್ಯ ವೇಳೆಯೇ ಕೂತು ನಮಾಜ್ ಮಾಡಿದ ಘಟನೆಗೆ ವಕಾರ್ ಯೂನಿಸ್ ಧರ್ಮದ ಲೇಪ ಕೊಟ್ಟರು. ಹಿಂದೂಗಳ ಮಧ್ಯೆ ಕೂತು ನಮಾಜ್ ಮಾಡಿದ್ದು ಬಹಳ ವಿಶೇಷ ಎಂದು ವಕಾರ್ ಹೊಗಳಿದರು. ಅದು ಪಾಕಿಸ್ತಾನದ ಕಥೆ ಆದರೆ, ಭಾರತದಲ್ಲೂ ಇಂಥ ಕೆಲ ಅನಗತ್ಯ ವಿವಾದಗಳು ಬಂದಿವೆ.
ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಮೊಹಮ್ಮದ್ ಶಮಿ ವಿಫಲರಾದರು. ಅದನ್ನಿಟ್ಟುಕೊಂಡು ಕೆಲ ವರ್ಗಗಳ ಜನರು ಶಮಿಯ ಮೇಲೆ ಟೀಕಾಸ್ತ್ರವನ್ನೇ ಮಾಡಿದರು. ಮೊಹಮ್ಮದ್ ಶಮಿ ಮುಸ್ಲಿಮ್ ಎಂಬ ಕಾರಣಕ್ಕೆ ಅವರನ್ನ ಟಾರ್ಗೆಟ್ ಮಾಡಿದ ಕಿಡಿಗೇಡಿಗಳು, ಶಮಿ ಪಾಕಿಸ್ತಾನಕ್ಕೆ ಹೋಗಬೇಕು ಎಂದು ಒತ್ತಾಯಿಸಿದರು. ಶಮಿ ಮೇಲೆ ವಾಗ್ದಾಳಿ ನಡೆಸಿದ ಕಿಡಿಗೇಡಿಗಳನ್ನ ವಿರೋಧಿಸಿದ ಇರ್ಫಾನ್ ಪಠಾಣ್ ಅವರನ್ನೂ ಹಲವರು ಟ್ರಾಲ್ ಮಾಡಿದ್ದಾರೆ.
2004ರ ಘಟನೆ…
ಈ ಟ್ರಾಲ್ಗಳಿಗೆ ಉತ್ತರ ಕೊಟ್ಟ ಇರ್ಫಾನ್ ಪಠಾಣ್, ದಶಕದ ಹಿಂದಿನ ಭಾರತವೇ ಬೇರೆ ಇತ್ತು, ಈಗಿರುವ ಭಾರತವೇ ಬೇರೆ ಇದೆ ಎಂದು ಅಲವತ್ತುಕೊಂಡಿದ್ದಾರೆ. 2004ರಲ್ಲಿ ಭಾರತ ತಂಡ ಪಾಕಿಸ್ತಾನಕ್ಕೆ ಕ್ರಿಕೆಟ್ ಪ್ರವಾಸ ಹೋಗಿತ್ತು. ಇರ್ಫಾನ್ ಪಠಾಣ್ ಕೂಡ ತಂಡದಲ್ಲಿದ್ದರು. ಅಲ್ಲದೇ ಭಾರತದ ಭರ್ಜರಿ ಗೆಲುವಿಗೆ ಅವರೂ ಪ್ರಮುಖ ಕಾರಣರಾಗಿದ್ದರು. ಆ ಸಂದರ್ಭದಲ್ಲಿ ತಮ್ಮ ಊರಿನಲ್ಲಿ ನಡೆದ ಘಟನೆಯನ್ನು ಮತ್ತು ಜನರ ಪ್ರತಿಕ್ರಿಯೆಯನ್ನ ಇರ್ಫಾನ್ ಪಠಾಣ್ ತಂದೆ ಸ್ಮರಿಸಿದ್ದಾರೆ. ಇದನ್ನ ಸ್ವತಃ ಇರ್ಫಾನ್ ಅವರೇ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.
“2004ರಲ್ಲಿ ನಾವು ಪಾಕಿಸ್ತಾನ ಪ್ರವಾಸದಿಂದ ಜಯಶಾಲಿಗಳಾಗಿ ವಾಪಸ್ ಬಂದ ಸಂದರ್ಭದಲ್ಲಿ ಅದ ಘಟನೆಯನ್ನ ನಮ್ಮ ತಂದೆ ಇಲ್ಲಿ ಹೇಳಿದ್ದಾರೆ. ನಾವು ಜಾಮಾ ಮಸೀದಿಯಲ್ಲಿ ವಾಸಿಸುತ್ತಿದ್ದೆವು. ಭಾರತದ ಗೆಲುವಿಗೆ ಸಂಭ್ರಮಾಚರಿಸಲು ಮೈದಾನಕ್ಕೆ ಬಂದ ಕ್ರಿಕೆಟ್ ಪ್ರೇಮಿಗಳಿಗೆ ಅಭಿನಂದಿಸಲು ನನ್ನ ತಂದೆ ತ್ರಿವರ್ಣ ಧ್ವಜ ಹಿಡಿದು ಮಸೀದಿಯ ಮಾಳಿಗೆಯ ಮೇಲೆ ಹತ್ತಿ ನಿಂತಿದ್ದರು” ಎಂದು ವಿಡಿಯೋ ಸಮೇತ ಇರ್ಫಾನ್ ಪಠಾಣ್ ಟ್ವೀಟ್ ಮಾಡಿದ್ದಾರೆ.
Here is a little story from my father, when we came back victorious from from the Pakistan tour in 2004. We use to live in jamma masjid, My father went to the terrace of masjid with proudly holding indian flag 🇮🇳 to greet all the fans who came to celebrate our victory on d field. pic.twitter.com/iirlYa0pGt
— Irfan Pathan (@IrfanPathan) October 26, 2021
ಇರ್ಫಾನ್ ತಂದೆ ಹೇಳಿದ್ದಿದು:
“ಮೈದಾನದಲ್ಲಿ ಇಡೀ ಬರೋಡಾ ಜನರೇ ಬಂದು ಸೇರಿದ್ದರು. ನಾನು ಮಸೀದಿ ಮೇಲೆ ಹತ್ತಿ ತ್ರಿವರ್ಣ ದ್ವಜ ಹಾರಿಸುತ್ತಾ ನಿಂತೆ. ಜನರು ಇರ್ಫಾನ್ ಪಠಾಣ್ ಜಿಂದಾಬಾದ್, ಭಾರತ್ ಜಿಂದಾಬಾದ್, ಜಾಮಾ ಮಸ್ಜಿದ್ ಜಿಂದಾಬಾದ್ ಎನ್ನುತ್ತಿದ್ದರು” ಎಂದು ಇರ್ಫಾನ್ ತಂದೆ ಈ ವಿಡಿಯೋದಲ್ಲಿ ಹೇಳಿದ್ದಾರೆ.
ಇದನ್ನೂ ಓದಿ: Jaffer, Venky- ‘ಹಿಂದೂಗಳ ಮಧ್ಯೆ ನಮಾಜ್’ ಹೇಳಿಕೆ ಕೊಟ್ಟ ವಕಾರ್ಗೆ ಝಾಡಿಸಿದ ವಾಸಿಂ, ವೆಂಕಿ ಮತ್ತಿತರರು
ಆಗಿನ ಭಾರತವೇ ಬೇರೆ ಇತ್ತು…
ಇದಕ್ಕೆ ಮುನ್ನ ಇರ್ಫಾನ್ ಪಠಾಣ್ ಮೊನ್ನೆ ಬಹಳ ನೋವಿನಿಂದ ಒಂದು ಪೋಸ್ಟ್ ಕೂಡ ಮಾಡಿದ್ದಾರೆ. ಅದು ಮೊಹಮ್ಮದ್ ಶಮಿಯನ್ನ ಟ್ರಾಲ್ ಮಾಡುತ್ತಿರುವ ವಿಚಾರವಾಗಿ… “ಪಾಕಿಸ್ತಾನ ವಿರುದ್ಧ ಭಾರತ ಸೋತ ಸಂದರ್ಭಗಳಲ್ಲಿ ನಾನೂ ತಂಡದ ಭಾಗವಾಗಿದ್ದೇನೆ. ಆದರೆ, ಯಾವತ್ತೂ ನನ್ನನ್ನ ಪಾಕಿಸ್ತಾನಕ್ಕೆ ಹೋಗಬೇಕೆಂದು ಯಾರೂ ಹೇಳಲಿಲ್ಲ. ಇದು ಕೆಲ ವರ್ಷಗಳ ಹಿಂದಿನ ಭಾರತದ ಬಗ್ಗೆ ನಾನು ಹೇಳಿದ್ದು. ಈಗ ಈ ಹೀನ ಮನಃಸ್ಥಿತಿಯನ್ನ ನಿಲ್ಲಿಸುವ ಅಗತ್ಯವಿದೆ” ಎಂದು ಇರ್ಫಾನ್ ಪಠಾಣ್ ಟ್ವೀಟ್ ಮಾಡಿದ್ದರು.
Even I was part of #IndvsPak battles on the field where we have lost but never been told to go to Pakistan! I’m talking about 🇮🇳 of few years back. THIS CRAP NEEDS TO STOP. #Shami
— Irfan Pathan (@IrfanPathan) October 25, 2021
ಯೂಸುಫ್ ಪಠಾಣ್ ಪ್ರತಿಕ್ರಿಯೆ:
ಇರ್ಫಾನ್ ಪಠಾಣ್ ಅಣ್ಣ ಯೂಸುಫ್ ಪಠಾಣ್ ಅವರೂ ಧ್ವನಿಗೂಡಿಸಿದ್ದು, ಪಾಕಿಸ್ತಾನ ವಿರುದ್ಧ ಸೋತಿದ್ದಕ್ಕೆ ಟೀಮ್ ಇಂಡಿಯಾ ಆಟಗಾರರನ್ನು ನಿಂದಿಸುವುದು ಸರಿಯಲ್ಲ. ಆವತ್ತಿನ ದಿನ ಉತ್ತಮವಾಗಿ ಆಡಿದ ತಂಡ ಗೆಲ್ಲುತ್ತದೆ. ಇದೇ ಕ್ರಿಕೆಟ್ ಆಟಗಾರರು ಈ ಹಿಂದೆ ಭಾರತಕ್ಕೆ ಹಲವು ಪಂದ್ಯಗಳನ್ನ ಗೆದ್ದುಕೊಟ್ಟಿದ್ದಾರೆ. ಸೋತು ಗೆಲ್ಲುವವರನ್ನೇ ಆಟಗಾರ ಎಂದು ಕರೆಯುತ್ತಾರೆ ಎಂದು ಯೂಸುಫ್ ಪಠಾಣ್ ಕೂಡ ಮಾರ್ಮಿಕವಾಗಿ ಟ್ವೀಟ್ ಮಾಡಿದ್ದಾರೆ.
Criticising is fine but khiladiyon ko abuse nahi karna chahiye. Ye game hai, better team on that day won. Inhi cricketers ne India ko bohot matches jitaye hain pichle kuch saalon mein. Aur haar kar jeetne wale ko hi baazigar kehte hai na! #indiaVsPakistan #INDvPAK #T20WorldCup21 pic.twitter.com/cLqNmbRQ9T
— Yusuf Pathan (@iamyusufpathan) October 25, 2021
ಇನ್ನು, ಟ್ರೋಲಿಗರ ನಿಂದನೆಗೆ ಸಿಲುಕಿದ ಮೊಹಮ್ಮದ್ ಶಮಿಗೆ ಭಾರತೀಯ ಕ್ರಿಕೆಟ್ ರಂಗದ ಹಲವು ದಿಗ್ಗಜರು ಬೆಂಬಲ ಕೊಟ್ಟಿದ್ದಾರೆ. ಸ್ವತಃ ಬಿಸಿಸಿಐ ಕೂಡ ಶಮಿಯ ನಿಂದಕರನ್ನ ಖಂಡಿಸಿದ್ದು, ಶಮಿಗೆ ತನ್ನ ಬೆಂಬಲ ಸದಾ ಇರುತ್ತದೆ ಎಂದು ಸ್ಪಷ್ಟಪಡಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ