Ireland vs South Africa: ದಕ್ಷಿಣ ಆಫ್ರಿಕಾ ವಿರುದ್ದ ಭರ್ಜರಿ ಜಯ ಸಾಧಿಸಿದ ಐರ್ಲೆಂಡ್..!

ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಹ್ಯಾರಿ ಟೆಕ್ಟರ್ ದಕ್ಷಿಣ ಆಫ್ರಿಕಾ ಬೌಲರುಗಳ ಬೆಂಡೆತ್ತಿದ್ದರು. ಅಂತಿಮ ಓವರ್​ಗಳ ವೇಳೆ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಟೆಕ್ಟರ್ 68 ಎಸೆತಗಳಲ್ಲಿ 4 ಸಿಕ್ಸರ್, 6 ಬೌಂಡರಿಗಳೊಂದಿಗೆ 79 ರನ್ ಚಚ್ಚಿದ್ದರು.

Ireland

Ireland

 • Share this:
  ಕ್ರಿಕೆಟ್ ಜಗತ್ತಿನ ಶಿಶು ಎಂದು ಕರೆಸಿಕೊಳ್ಳುತ್ತಿರುವ ಐರ್ಲೆಂಡ್ ತಂಡವು ಇದೀಗ ಮತ್ತೊಮ್ಮೆ ಆರ್ಭಟಿಸಿದೆ. ಬಲಿಷ್ಠ ದಕ್ಷಿಣ ಆಫ್ರಿಕಾ ತಂಡಕ್ಕೆ ಸೋಲುಣಿಸುವ ಮೂಲಕ ತನ್ನ ಸಾಮರ್ಥ್ಯವನ್ನು ತೆರೆದಿಟ್ಟಿದೆ. ಹೌದು, ಡಬ್ಲಿನ್‌ನ ದ ವಿಲ್ಲೇಜ್ ಸ್ಟೇಡಿಯಂನಲ್ಲಿ ಮಂಗಳವಾರ ನಡೆದ ಐರ್ಲೆಂಡ್-ದಕ್ಷಿಣ ಆಫ್ರಿಕಾ ನಡುವಿನ ದ್ವಿತೀಯ ಏಕದಿನ ಪಂದ್ಯದಲ್ಲಿ ಆತಿಥೇಯ ಐರ್ಲೆಂಡ್ ತಂಡವು 43 ರನ್​ಗಳ ಭರ್ಜರಿ ಜಯ ಸಾಧಿಸಿದೆ.

  ಇದಕ್ಕೂ ಮುನ್ನ ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ನಾಯಕ ತೆಂಬ ಬಾವುಮ ಫೀಲ್ಡಿಂಗ್ ಆಯ್ದುಕೊಂಡರು. ಆದರೆ ಮೊದಲ ಹತ್ತು ಓವರ್​ನಲ್ಲೇ ದಕ್ಷಿಣ ಆಫ್ರಿಕಾ ಲೆಕ್ಕಚಾರಗಳನ್ನು ತಲೆಕೆಳಗಾಗಿಸಲಿದೆ ಎಂಬ ಸೂಚನೆಯನ್ನು ಐರ್ಲೆಂಡ್​ ಬ್ಯಾಟ್ಸ್​ಮನ್​ಗಳು ನೀಡಿದ್ದರು. ಆರಂಭಿಕರಾಗಿ ಕಣಕ್ಕಿಳಿದ ಪೌಲ್ ಸ್ಟಿರ್ಲಿಂಗ್ ಹಾಗೂ ನಾಯಕ ಆ್ಯಂಡಿ ಬಾಲ್ಬಿರ್ನಿ ಮೊದಲ ವಿಕೆಟ್​ಗೆ 64 ರನ್​ಗಳ ಜೊತೆಯಾಟವಾಡಿದರು. ಈ ವೇಳೆ ಸ್ಟಿರ್ಲಿಂಗ್ (27) ಕೇಶವ್ ಮಹಾರಾಜ್ ಎಸೆತದಲ್ಲಿ ವಿಕೆಟ್ ಒಪ್ಪಿಸಿ ಹೊರನಡೆದರು. ಆದರೆ ಮತ್ತೊಂದೆಡೆ ಕ್ರೀಸ್ ಕಚ್ಚಿ ನಿಂತಿದ್ದ ಬಾಲ್ಬಿರ್ನಿ ತಮ್ಮ ಮನಮೋಹಕ ಬ್ಯಾಟಿಂಗ್ ಮುಂದುವರೆಸಿದ್ದರು. ಅದರಂತೆ ಭರ್ಜರಿ ಶತಕ ಬಾರಿಸಿ ತಂಡದ ಮೊತ್ತವನ್ನು 200ರ ಗಡಿಗೆ ತಲುಪಿಸಿದ್ದರು. 117 ಎಸೆತಗಳನ್ನು ಎದುರಿಸಿದ ಬಾಲ್ಬಿರ್ನಿ 10 ಬೌಂಡರಿ ಹಾಗೂ 2 ಸಿಕ್ಸರ್​ಗಳನ್ನೊಳಗೊಂಡ 102 ರನ್​ ಬಾರಿಸಿ ರಬಾಡ ಎಸೆತದಲ್ಲಿ ಕ್ಯಾಚ್ ನೀಡಿ ನಿರ್ಗಮಿಸಿದರು.

  ಇನ್ನು ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಹ್ಯಾರಿ ಟೆಕ್ಟರ್ ದಕ್ಷಿಣ ಆಫ್ರಿಕಾ ಬೌಲರುಗಳ ಬೆಂಡೆತ್ತಿದ್ದರು. ಅಂತಿಮ ಓವರ್​ಗಳ ವೇಳೆ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಟೆಕ್ಟರ್ 68 ಎಸೆತಗಳಲ್ಲಿ 4 ಸಿಕ್ಸರ್, 6 ಬೌಂಡರಿಗಳೊಂದಿಗೆ 79 ರನ್ ಚಚ್ಚಿದ್ದರು. ಟೆಕ್ಟರ್​ ಅತ್ಯುತ್ತಮ ಸಾಥ್ ನೀಡಿದ ಜಾರ್ಜ್ ಡೊಕ್ರೆಲ್ ಕೇವಲ 23 ಎಸೆತಗಳಲ್ಲಿ 5 ಬೌಂಡರಿ ಹಾಗೂ 2 ಸಿಕ್ಸ್​ನೊಂದಿಗೆ 45 ರನ್‌ ಸಿಡಿಸಿದರು. ಪರಿಣಾಮ ನಿಗದಿತ 50 ಓವರ್​ಗಳಲ್ಲಿ ಐರ್ಲೆಂಡ್ ಮೊತ್ತವು 5 ವಿಕೆಟ್ ನಷ್ಟಕ್ಕೆ 290ಕ್ಕೆ ಬಂದು ನಿಂತಿತು.

  ಈ ಸವಾಲಿನ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾಗೆ ಆರಂಭಿಕ ಆಟಗಾರ ಜನ್ನೆಮನ್ ಮಲನ್ (84) ಉತ್ತಮ ಆರಂಭ ಒದಗಿಸಿದ್ದರು. ಆದರೆ ಐಡೆನ್ ಮಾರ್ಕರಂ (5) ಹಾಗೂ ನಾಯಕ ತೆಂಬ ಬಾವುಮ (10) ಬೇಗನೆ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದರು. ಇದರ ನಡುವೆ ರಾಸ್ಸಿ ವ್ಯಾನ್ ಡೆರ್ ಡುಸೆನ್ 49 ರನ್ ಬಾರಿಸಿ ಪ್ರತಿರೋಧ ತೋರುವ ಪ್ರಯತ್ನ ಮಾಡಿದ್ದರು. ಆದರೆ ಐರ್ಲೆಂಡ್ ಬೌಲರುಗಳ ಕರಾರುವಾಕ್ ದಾಳಿ ಮುಂದೆ ನೆಲೆಯೂರಲು ಕೈಲ್ ವೆರೆನ್ನೆ (13) ಡೇವಿಡ್ ಮಿಲ್ಲರ್ (24) ಸೇರಿದಂತೆ ಪ್ರಮುಖ ಆಟಗಾರರಿಗೆ ಕ್ರೀಸ್ ಕಚ್ಚಿ ನಿಲ್ಲಲು ಸಾಧ್ಯವಾಗಲಿಲ್ಲ. ಪರಿಣಾಮ 48.3 ಓವರ್‌ಗೆ ಎಲ್ಲಾ ವಿಕೆಟ್‌ ಕಳೆದು 247 ರನ್ ಗಳಿಸಿ ಸೋಲೊಪ್ಪಿಕೊಂಡಿತು. ಇದರೊಂದಿಗೆ ಐರ್ಲೆಂಡ್ ತಂಡವು 43 ರನ್​ಗಳ ಜಯ ಸಾಧಿಸಿತು. ಐರ್ಲೆಂಡ್ ಪರ ಮಾರ್ಕ್ ಅಡೈರ್ , ಜೋಶುವಾ ಲಿಟ್ಲ್ , ಹಾಗೂ ಆಂಡಿ ಮೆಕ್‌ಬ್ರೈನ್ ತಲಾ 2 ವಿಕೆಟ್‌ ಪಡೆದು ಗಮನ ಸೆಳೆದರು.

  ದಕ್ಷಿಣ ಆಫ್ರಿಕಾ-ಐರ್ಲೆಂಡ್ ನಡುವಣ 3 ಏಕದಿನ ಪಂದ್ಯಗಳ ಸರಣಿಯಲ್ಲಿ ಮೊದಲ ಪಂದ್ಯವು ಮಳೆಯಿಂದಾಗಿ ರದ್ದಾಗಿತ್ತು. ಎರಡನೇ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸುವ ಮೂಲಕ ಐರ್ಲೆಂಡ್ 1-0 ಮುನ್ನಡೆ ಸಾಧಿಸಿದೆ. ಇನ್ನು ಅಂತಿಮ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಗೆದ್ದರೆ ಮಾತ್ರ ಸರಣಿ ಸೋಲಿನಿಂದ ಪಾರಾಗಬಹುದು.

  (ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.)
  Published by:zahir
  First published: