ಬೆಂಗಳೂರು, ಜ. 18: ಐಪಿಎಲ್ ಟೂರ್ನಿಗೆ ಇನ್ನೆರಡು ತಿಂಗಳು ಬಾಕಿ ಇದೆ. ಹರಾಜಿಗೆ ತಿಂಗಳೂ ಕೂಡ ಇಲ್ಲ. ಈ ಬಾರಿ ಆಟಗಾರರ ಆಯ್ಕೆ ಜೊತೆಗೆ ನಾಯಕನ ಆಯ್ಕೆಯಲ್ಲೂ ವಿವಿಧ ತಂಡಗಳು ತಲೆ ಕೆಡಿಸಿಕೊಂಡಿವೆ. ಡೆಲ್ಲಿ, ಮುಂಬೈ ಇತ್ಯಾದಿ ಕೆಲವೇ ತಂಡಗಳಿಗೆ ಮಾತ್ರ ಕ್ಯಾಪ್ಟನ್ಸ್ ನಿಶ್ಚಿತ ಇದೆ. ಆರ್ಸಿಬಿಯಿಂದ ಹಿಡಿದು ಈ ವರ್ಷ ಪದಾರ್ಪಣೆ ಮಾಡುತ್ತಿರುವ ಎರಡು ಹೊಸ ತಂಡಗಳವರೆಗೂ ಕ್ಯಾಪ್ಟನ್ಸ್ ಬೇಕಾಗಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡ ಎಂಎಸ್ ಧೋನಿಯನ್ನ ರೀಟೈನ್ ಮಾಡಿಕೊಂಡಿದ್ದರೂ ಕ್ಯಾಪ್ಟನ್ ಆಗಿ ರವೀಂದ್ರ ಜಡೇಜಾ ಅವರನ್ನ ಆರಿಸಿಕೊಳ್ಳುವ ಸಾಧ್ಯತೆ ಇದೆ ಎಂಬ ವರದಿಗಳು ಬಂದಿವೆ. ಆರ್ಸಿಬಿ ತಂಡ ವಿರಾಟ್ ಕೊಹ್ಲಿಯನ್ನ ರೀಟೈನ್ ಮಾಡಿಕೊಂಡಿದ್ದರೂ ಕ್ಯಾಪ್ಟನ್ಸಿಯನ್ನು ಅವರು ತ್ಯಜಿಸಿರುವುದರಿಂದ ಹೊಸ ಕ್ಯಾಪ್ಟನ್ ಅನ್ನು ಆರಿಸಬೇಕಾಗುತ್ತದೆ.
ಹಾರ್ದಿಕ್ ಪಾಂಡ್ಯ ನಾಯಕ?:
ಲಕ್ನೋ ತಂಡ ಕೆಎಲ್ ರಾಹುಲ್ ಅವರ ಮೇಲೆ ಕಣ್ಣಿಟ್ಟಿದೆ. ಇನ್ನು, ಅಹ್ಮದಾಬಾದ್ ಫ್ರಾಂಚೈಸಿಯವರು ಹಾರ್ದಿಕ್ ಪಾಂಡ್ಯ, ರಷೀದ್ ಖಾನ್ ಮತ್ತು ಶುಬ್ಮನ್ ಗಿಲ್ ಈ ಮೂವರನ್ನು ಸೇರಿಸಿಕೊಳ್ಳಲು ಹೊರಟಿದೆ ಎಂಬ ವರದಿ ನಿನ್ನೆ ಬಂದಿದೆ. ಇದರ ಪ್ರಕಾರ, ಗುಜರಾತ್ ರಾಜ್ಯದವರೇ ಆದ ಹಾರ್ದಿಕ್ ಪಾಂಡ್ಯ ಅವರು ಅಹ್ಮದಾಬಾದ್ ಫ್ರಾಂಚೈಸಿಯ ತಂಡಕ್ಕೆ ನಾಯಕರಾಗುವ ಸಾಧ್ಯತೆ ದಟ್ಟವಾಗಿದೆ. ಮುಂಬೈ ಇಂಡಿಯನ್ಸ್ ತಂಡದಲ್ಲಿದ್ದ ಹಾರ್ದಿಕ್ ಪಾಂಡ್ಯ ಒಳ್ಳೆಯ ಆಲ್ರೌಂಡರ್. ಸ್ಫೋಟಕ ಬ್ಯಾಟಿಂಗ್ ಜೊತೆಗೆ ಮಧ್ಯಮ ವೇಗದ ಬೌಲರ್ ಕೂಡ ಹೌದು. ಒಳ್ಳೆಯ ಕ್ರಿಕೆಟಿಂಗ್ ಬ್ರೇನ್ ಇರುವಂಥವರು.
ಇದನ್ನೂ ಓದಿ: Jasprit Bumrah: ಕ್ಯಾಪ್ಟನ್ಸಿ ಜವಾಬ್ದಾರಿ ಕೊಟ್ಟರೆ ಖುಷಿಯಿಂದ ಹೊರಲು ಸಿದ್ಧ: ಜಸ್ಪ್ರೀತ್ ಬುಮ್ರಾ
ಅಹ್ಮದಾಬಾದ್ ಐಪಿಎಲ್ ತಂಡಕ್ಕೆ ಇನ್ನೂ ಹೆಸರಿಟ್ಟಿಲ್ಲ. ಆದರೆ, ಆಟಗಾರರನ್ನ ಬಿಟ್ಟು ಉಳಿದ ಸಪೋರ್ಟಿಂಗ್ ಸ್ಥಾನಗಳಿಗೆ ಆಯ್ಕೆ ಭರಾಟೆ ಜೋರಾಗಿದೆ. ಟೀಮ್ ಇಂಡಿಯಾ ಮಾಜಿ ಕೋಚ್ ಗ್ಯಾರಿ ಕರ್ಸ್ಟನ್ ಮತ್ತು ಆಶಿಶ್ ನೆಹರಾ ಕೋಚಿಂಗ್ ಟೀಮ್ ನೇತೃತ್ವ ವಹಿಸುತ್ತಿದ್ದಾರೆ. ಮಾಜಿ ಇಂಗ್ಲೆಂಡ್ ಆಟಗಾರ ವಿಕ್ರಮ ಸೋಳಂಕಿ ಅವರು ಅಹ್ಮದಾಬಾದ್ ತಂಡದ ಟೀಮ್ ಡೈರೆಕ್ಟರ್ ಆಗಿದ್ಧಾರೆ. ಅತ್ತ, ಲಕ್ನೋ ಫ್ರಾಂಚೈಸಿ ತಂಡ ಜಿಂಬಾಬ್ವೆಯ ಮಾಜಿ ಕ್ಯಾಪ್ಟನ್ ಆಂಡಿ ಫ್ಲವರ್ ಅವರನ್ನ ಕೋಚ್ ಆಗಿ ನೇಮಿಸಿಕೊಂಡಿದೆ.
ಬೆಂಗಳೂರಿಗೆ ಅಯ್ಯರ್ ಕ್ಯಾಪ್ಟನ್?
ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮಾಜಿ ಕ್ಯಾಪ್ಟನ್ ಶ್ರೇಯಸ್ ಅಯ್ಯರ್ ಅವರು ಉಜ್ವಲ ಭವಿಷ್ಯ ಇರುವ ಕ್ರಿಕೆಟ್ ಪ್ರತಿಭೆ. ಈ ಬಾರಿ ಐಪಿಎಲ್ನಲ್ಲಿ ಅಯ್ಯರ್ ಅವರಿಗೆ ಸಿಕ್ಕಾಪಟ್ಟೆ ಬೇಡಿಕೆ ಇದೆ. ಇವರು ಅತ್ಯುತ್ತಮ ಬ್ಯಾಟರ್ ಜೊತೆಗೆ ಅಗ್ರೆಸಿವ್ ಕ್ಯಾಪ್ಟನ್ ಕೂಡ ಹೌದು. ಹೀಗಾಗಿ ಡಿಮ್ಯಾಂಡ್ ಅತಿ ಹೆಚ್ಚು. ಮೂಲಗಳ ಪ್ರಕಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಶ್ರೇಯಸ್ ಅಯ್ಯರ್ ಅವರನ್ನ ಶತಾಯಗತಾಯ ಪಡೆದುಕೊಳ್ಳಲು ಸ್ಕೆಚ್ ಹಾಕಿದೆ.
ಇದನ್ನೂ ಓದಿ: Virat Kohli: ವಿರಾಟ್ ಕೊಹ್ಲಿ ಟೆಸ್ಟ್ ನಾಯಕತ್ವಕ್ಕೆ ವಿದಾಯ; ಮಾಜಿ ಆಟಗಾರರ ರಿಯಾಕ್ಷನ್ಸ್ ಇವು
ಬೆಂಗಳೂರು ಮಾತ್ರವಲ್ಲ ಕೋಲ್ಕತಾ ನೈಟ್ ರೈಡರ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳೂ ಶ್ರೇಯಸ್ ಅಯ್ಯರ್ ಅವರನ್ನ ಪಡೆದುಕೊಳ್ಳಲು ಯೋಜಿಸಿವೆ. ಹೀಗಾಗಿ, ಮುಂದಿನ ತಿಂಗಳು ಫೆಬ್ರವರಿ 12-13ರಂದು ನಡೆಯುವ ಐಪಿಎಲ್ ಹರಾಜಿನಲ್ಲಿ ಶ್ರೇಯಸ್ ಅಯ್ಯರ್ ಅವರಿಗಾಗಿ ಸಖತ್ ಬಿಡ್ಡಿಂಗ್ ನಡೆಯುವ ಸಾಧ್ಯತೆ ಇದೆ. ಅರ್ಸಿಬಿ ಫ್ರಾಂಚೈಸಿಯವರು ಶ್ರೇಯಸ್ ಅಯ್ಯರ್ ಅವರನ್ನ ಪಡೆಯಲು ಗರಿಷ್ಠ ಮೊತ್ತ ಕೈಚೆಲ್ಲಲೂ ತಯಾರಾಗಿದೆ. ಹೀಗಾಗಿ, ಅಯ್ಯರ್ ಅವರು ಈ ಬಾರಿ ದಾಖಲೆ ಮೊತ್ತಕ್ಕೆ ಸೇಲ್ ಆಗುವ ಸಾಧ್ಯತೆ ಹೆಚ್ಚು.
ವಿರಾಟ್ ಕೊಹ್ಲಿ ಅವರಂತೆ ಶ್ರೇಯಸ್ ಅಯ್ಯರ್ ಕೂಡ ತೀಕ್ಷ್ಣ ಮತ್ತು ಅಗ್ರೆಸಿವ್ ವ್ಯಕ್ತಿತ್ವದವರು. ಹೀಗಾಗಿ ಆರ್ಸಿಬಿ ತಂಡಕ್ಕೆ ಅಯ್ಯರ್ ಸಹಜ ನಾಯಕರಾಗಬಲ್ಲರು ಎನ್ನಲಾಗುತ್ತಿದೆ. ಮುಂದಿನ ದಿನಗಳಲ್ಲಿ ಶ್ರೇಯಸ್ ಅಯ್ಯರ್ ಟೀಮ್ ಇಂಡಿಯಾದ ನಾಯಕರಾಗಬಲ್ಲಂಥವರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ