IPL 2021: ಐಪಿಎಲ್ ಹೇಗೆ ಆಡಲಿದ್ದಾರೆ..? ಆಸ್ಟ್ರೇಲಿಯಾ ಆಟಗಾರರಿಗೆ ಫಿಂಚ್ ಎಚ್ಚರಿಕೆ..!

ಫಿಂಚ್ ಕೂಡ ಐಪಿಎಲ್ ಆಡುವ ಆಟಗಾರರು ರಾಷ್ಟ್ರೀಯ ತಂಡಕ್ಕೆ ಆಡದೇ ಇಂಡಿಯನ್ ಪ್ರೀಮಿಯರ್​ ಲೀಗ್​ ಆಡುವುದನ್ನು ಹೇಗೆ ಸಮರ್ಥಿಸಿಕೊಳ್ಳುತ್ತಾರೆ ಎಂದಿರುವುದು ಹೊರಗುಳಿದಿರುವ ಆಟಗಾರರ ಚಿಂತೆಗೆ ಕಾರಣವಾಗಿದೆ.

Aaron Finch

Aaron Finch

  • Share this:
    ಆಸ್ಟ್ರೇಲಿಯಾ ತಂಡದಿಂದ ಸ್ಟಾರ್ ಆಟಗಾರರು ಹೊರಗುಳಿದಿರುವುದು ಇದೀಗ ಹೊಸ ಚರ್ಚೆಗೆ ಕಾರಣವಾಗಿದೆ. ವೆಸ್ಟ್ ಇಂಡೀಸ್, ಬಾಂಗ್ಲಾದೇಶದ ವಿರುದ್ದದ ಸರಣಿಯಿಂದ ಆಸ್ಟ್ರೇಲಿಯಾದ ಸ್ಟಾರ್ ಆಟಗಾರರಾದ ಪ್ಯಾಟ್ ಕಮ್ಮಿನ್ಸ್, ಗ್ಲೆನ್ ಮ್ಯಾಕ್ಸ್ ವೆಲ್, ಡೇವಿಡ್ ವಾರ್ನರ್, ಸ್ಟೀವ್ ಸ್ಮಿತ್, ಮಾರ್ಕಸ್ ಸ್ಟೊಯಿನಿಸ್, ಜೈ ರಿಚರ್ಡ್ಸನ್, ಡೇನಿಯಲ್ ಸ್ಯಾಮ್ಸ್​ ಮತ್ತು ಕೇನ್ ರಿಚರ್ಡ್ಸನ್ ಹೊರಗುಳಿದಿದ್ದರು. ಈ ಆಟಗಾರರು ಸರಣಿಯಿಂದ ಹೊರಗುಳಿಯಲು ಐಪಿಎಲ್ ಕಾರಣ ಎಂದು ಹೇಳಲಾಗುತ್ತಿದೆ.

    ಐಪಿಎಲ್​ನ ಉಳಿದ ಪಂದ್ಯಗಳನ್ನು ಆಡುವ ಸಲುವಾಗಿ ಪ್ರಮುಖ ಆಟಗಾರರು ಹಿಂದೆ ಸರಿದಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಈ ಬಗ್ಗೆ ಮಾತನಾಡಿರುವ ಆಸ್ಟ್ರೇಲಿಯಾ ತಂಡದ ನಾಯಕ ಆರೋನ್ ಫಿಂಚ್, ಪ್ರಮುಖ ಆಟಗಾರರು ಹೊರಗುಳಿದಿರುವುದನ್ನು ನೋಡಿ ನನಗೆ ನಿಜಕ್ಕೂ ಆಶ್ಚರ್ಯವಾಗಿದೆ. ಆಸೀಸ್​ ಆಟಗಾರರಿಂದ ಇಂತಹ ನಡೆಯನ್ನು ನಾನು ನಿರೀಕ್ಷಿಸಿರಲಿಲ್ಲ. ಒಂದು ವೇಳೆ ಆಸ್ಟ್ರೇಲಿಯಾ ಆಟಗಾರರು ಐಪಿಎಲ್​ನ ಉಳಿದ ಪಂದ್ಯಗಳನ್ನು ಆಡುವುದಾದರೆ, ಕ್ರಿಕೆಟ್ ಆಸ್ಟ್ರೇಲಿಯಾ ಮುಂದೆ ಅದನ್ನು ಸಮರ್ಥಿಸುವುದು ಕಷ್ಟಕರವಾಗಲಿದೆ ಎಂದು ಭಾವಿಸುವೆ ಎಂದು ಫಿಂಚ್ ಹೇಳಿದ್ದಾರೆ.

    ಈ ಮೂಲಕ ಕ್ರಿಕೆಟ್ ಆಸ್ಟ್ರೇಲಿಯಾ ತಂಡದಿಂದ ಹೊರಗುಳಿದಿರುವ ಆಟಗಾರರಿಗೆ ಐಪಿಎಲ್​ ಆಡಲು ಅವಕಾಶ ನೀಡುವುದು ಡೌಟ್ ಎನ್ನುವ ಸಣ್ಣ ಸೂಚನೆ ನೀಡಿದ್ದಾರೆ. ಏಕೆಂದರೆ ಟಿ20 ವಿಶ್ವಕಪ್‌ಗೆ ಮುಂಚಿತವಾಗಿ ಅಕ್ಟೋಬರ್‌ನಲ್ಲಿ ಆಸ್ಟ್ರೇಲಿಯಾ 3 ಪಂದ್ಯಗಳ ಏಕದಿನ ಮತ್ತು ಟಿ20 ಐ ಸರಣಿಗೆ ಶ್ರೀಲಂಕಾಗೆ ತೆರಳಲಿದೆ. ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯಂತೆ, ಕ್ರಿಕೆಟ್ ಆಸ್ಟ್ರೇಲಿಯಾ ತನ್ನ ಆಟಗಾರರಿಗೆ ಐಪಿಎಲ್‌ಗೆ ಅವಕಾಶವನ್ನು ತಡೆದು ಟಿ20 ವಿಶ್ವಕಪ್​ಗಾಗಿ ತಂಡ ರೂಪಿಸಲು ಮುಂದಾಗಲಿದೆ ಎಂದು ಹೇಳಲಾಗಿದೆ.

    ಇತ್ತ ಫಿಂಚ್ ಕೂಡ ಐಪಿಎಲ್ ಆಡುವ ಆಟಗಾರರು ರಾಷ್ಟ್ರೀಯ ತಂಡಕ್ಕೆ ಆಡದೇ ಇಂಡಿಯನ್ ಪ್ರೀಮಿಯರ್​ ಲೀಗ್​ ಆಡುವುದನ್ನು ಹೇಗೆ ಸಮರ್ಥಿಸಿಕೊಳ್ಳುತ್ತಾರೆ ಎಂದಿರುವುದು ಹೊರಗುಳಿದಿರುವ ಆಟಗಾರರ ಚಿಂತೆಗೆ ಕಾರಣವಾಗಿದೆ. ಏಕೆಂದರೆ ಈ ಆಟಗಾರರು ಕ್ರಿಕೆಟ್ ಆಸ್ಟ್ರೇಲಿಯಾಗೆ ಸತತ ಕ್ರಿಕೆಟ್​ ಆಡುತ್ತಿರುವ ಕಾರಣ ವಿರಾಮ ಬೇಕೆಂದು ಹೊರಗುಳಿದಿದ್ದಾರೆ. ಹೀಗಾಗಿ ಮುಂದೆ ಯಾವ ಕಾರಣ ನೀಡಿ ಐಪಿಎಲ್ ಆಡಲು ಕ್ರಿಕೆಟ್ ಆಸ್ಟ್ರೇಲಿಯಾದಿಂದ ಅನುಮತಿ ಪಡೆಯಲಿದ್ದಾರೆ ಎಂಬುದೇ ಕುತೂಹಲ.
    Published by:zahir
    First published: