ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನೂತನ ಅಧ್ಯಕ್ಷರಾಗಿ ಪ್ರಥಮೇಶ್ ಮಿಶ್ರಾ ಆಯ್ಕೆಯಾಗಿದ್ದಾರೆ. ಡಿಯಾಗೋ ಇಂಡಿಯಾದ ಅಂಗ ಸಂಸ್ಥೆಯಾಗಿರುವ ರಾಯಲ್ ಚಾಲೆಂಜರ್ಸ್ ಸ್ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್, ಆರ್ಸಿಬಿ ತಂಡದ ಮಾಲೀಕತ್ವವನ್ನು ಹೊಂದಿದೆ. ಇದೀಗ ಡಿಯಾಗೋ ಇಂಡಿಯಾದಲ್ಲಿ ಮುಖ್ಯ ವ್ಯವಹಾರ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಪ್ರಥಮೇಶ್ ಮಿಶ್ರಾ ಅವರಿಗೆ ಹೊಸ ಜವಾಬ್ದಾರಿ ನೀಡಲಾಗಿದೆ.
ಡಿಯಾಗೋ ಇಂಡಿಯಾದ ನಿರ್ವಹಣಾ ನಿರ್ದೇಶಕ ಮತ್ತು ಸಿಇಒ ಆನಂದ್ ಕೃಪಾಲು ಅವರ ಕರ್ತವ್ಯ ಜೂನ್ 30ಕ್ಕೆ ಕೊನೆಗೊಂಡಿದ್ದು, ಹೀಗಾಗಿ ಪ್ರಥಮೇಶ್ ಮಿಶ್ರಾ ಅವರನ್ನು ಆರ್ಸಿಬಿಯ ನೂತ ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ. ಪ್ರಸ್ತುತ ಆರ್ಸಿಬಿ ತಂಡದ ನಿರ್ದೇಶಕರಾಗಿ ನ್ಯೂಜಿಲೆಂಡ್ ಮಾಜಿ ಕ್ರಿಕೆಟಿಗ ಮೈಕ್ ಹೆಸನ್ ಇದ್ದು, ಅವರೊಂದಿಗೆ ಆಸ್ಟ್ರೇಲಿಯಾದ ಮಾಜಿ ಆಟಗಾರ ಸೈಮನ್ ಕಾಟಿಚ್ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹಾಗೆಯೇ ಆರ್ಸಿಬಿ ತಂಡವನ್ನು ವಿರಾಟ್ ಕೊಹ್ಲಿ ಮುನ್ನಡೆಸುತ್ತಿದ್ದು, ಈ ಬಾರಿ ಕಪ್ ಗೆಲ್ಲುವ ವಿಶ್ವಾಸದಲ್ಲಿದೆ.
ಹೊಸ ಜವಾಬ್ದಾರಿ ಹಾಗೂ ಆರ್ಸಿಬಿ ತಂಡದ ಬಗ್ಗೆ ಮಾತನಾಡಿರುವ ಪ್ರಥಮೇಶ್ ಮಿಶ್ರಾ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಡಿಯಾಗೊ ಇಂಡಿಯಾದ ಅವಿಭಾಜ್ಯ ಅಂಗ. ನಮ್ಮ ತಂಡವು ಈ ಬಾರಿ ಹೆಚ್ಚಿನ ಉತ್ಸಾಹದಲ್ಲಿದ್ದು, ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಲು ಮೈಕ್ ಹೆಸನ್ ಹಾಗೂ ಸೈಮನ್ ಕಾಟಿಚ್ ಎಲ್ಲಾ ರೀತಿಯಲ್ಲೂ ಶ್ರಮಿಸುತ್ತಿದ್ದಾರೆ. ಅವರಿಗೆ ಮೈದಾನದ ಹೊರಗೂ ಹಾಗೂ ಒಳಗೂ ಹೆಗಲು ಕೊಡಲು ನಾನು ಕೂಡ ಉತ್ಸುಕನಾಗಿದ್ದೇನೆ ಎಂದು ಮಿಶ್ರಾ ತಿಳಿಸಿದ್ದಾರೆ.
ಐಪಿಎಲ್ನ ಉಳಿದ 31 ಪಂದ್ಯಗಳು ಯುಎಇನಲ್ಲಿ ನಡೆಯಲಿದ್ದು, ಆರ್ಸಿಬಿ ತಂಡದ ನೂತನ ಸಾರಥಿ ಆಗಮನ ವಿರಾಟ್ ಕೊಹ್ಲಿ ಪಡೆಯ ಅದೃಷ್ಟ ಬದಲಿಸಲಿದೆಯಾ ಕಾದು ನೋಡಬೇಕಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ