ಚೆನ್ನೈ (ಏ. 26): ಇಲ್ಲಿನ ಎಂ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹೀನಾಯ ಸೋಲು ಕಂಡಿದೆ. ಬೌಲರ್ಗಳ ಅದ್ಭುತ ಪ್ರದರ್ಶನ ನೆರವಿನಿಂದ ರೋಹಿತ್ ಪಡೆ 46 ರನ್ಗಳ ಭರ್ಜರಿ ಜಯ ಸಾಧಿಸಿದೆ.
ಮುಂಬೈ ನೀಡಿದ್ದ 156 ರನ್ಗಳ ಸಾಧಾರಣ ಮೊತ್ತ ಬೆನ್ನಟ್ಟಿದ ಚೆನ್ನೈ ಹಿಂದೆಂದೂ ಕಾಣದ ಕುಸಿತ ಕಂಡಿತು. ಮೊದಲ ಓವರ್ನಲ್ಲೇ ಶೇನ್ ವಾಟ್ಸನ್(8)ರನ್ನು ಮಲಿಂಗಾ ಔಟ್ ಮಾಡಿದರೆ, ಬಂದ ಬೆನ್ನಲ್ಲೆ ನಾಯಕ ಸುರೇಶ್ ರೈನಾ(2) ನಿರ್ಗಮಿಸಿದರು. ಅಂಬಟಿ ರಾಯುಡರನ್ನು ಶೂನ್ಯಕ್ಕೆ ಹಾಗೂ ಕೇದರ್ ಜಾಧವ್ರನ್ನು 6 ರನ್ ಗಳಿಸಿರುವಾಗ ಬೌಲ್ಡ್ ಮಾಡುವಲ್ಲಿ ಕ್ರುನಾಲ್ ಯಶಸ್ವಿಯಾದರು.
ಇದರ ಪರಿಣಾಮ 50 ರನ್ಗೂ ಮುನ್ನವೇ ಚೆನ್ನೈ ತನ್ನ ಪ್ರಮುಖ 5 ವಿಕೆಟ್ ಕಳೆದುಕೊಂಡಿತು. ಹೀಗೆ ಒಂದು ಕಡೆ ವಿಕೆಟ್ ಉರುಳುತ್ತಿದ್ದರೆ ಕ್ರಿಸ್ ಕಚ್ಚಿ ನಿಂತ ಓಪನರ್ ಮುರಳಿ ವಿಜಯ್ ಅವರು ಧೃವ್ ಶೋರೆ ಜೊತೆಗೂಡಿ ರನ್ ಕಲೆಹಾಕಲು ಹೊರಟರು. ಆದರೆ, ಶೋರೆ 5 ರನ್ಗೆ ರಾಹುಲ್ ಚಹಾರ್ ಬೌಲಿಂಗ್ನಲ್ಲಿ ನಿರ್ಗಮಿಸಿದರೆ, ವಿಜಯ್ ಆಟ 38ಕ್ಕೆ ನಿಂತಿತು. ಬಳಿಕ ಬಂದ ಬ್ಯಾಟ್ಸ್ಮನ್ಗಳ ಪೈಕಿ ಸ್ಯಾಂಟನರ್ 22 ಹಾಗೂ ಬ್ರಾವೋ 20 ರನ್ ಗಳಿಸಿದ್ದೇ ಹೆಚ್ಚು. ಪರಿಣಾಮ ಚೆನ್ನೈ 17.4 ಓವರ್ಗಳಲ್ಲಿ ಕೇವಲ 109 ರನ್ಗೆ ಸರ್ವಪತನ ಕಂಡಿತು. ಮುಂಬೈ ಪರ ಮಲಿಂಗಾ 4 ವಿಕೆಟ್ ಕಿತ್ತರೆ, ಕ್ರುನಾಲ್ ಹಾಗೂ ಬುಮ್ರಾ 2, ಹಾರ್ದಿಕ್ ಹಾಗೂ ಅನುಕುಲ್ ತಲಾ 1 ವಿಕೆಟ್ ಪಡೆದರು.
IPL 2019 Live Score, CSK vs MI: ಮುಂಬೈ ಬೌಲಿಂಗ್ ದಾಳಿಗೆ ಚೆನ್ನೈ ತತ್ತರ; ರೋಹಿತ್ ಪಡೆಗೆ 46 ರನ್ಗಳ ಜಯ
46 ರನ್ಗಳ ಭರ್ಜರಿ ಗೆಲುವಿನೊಂದಿಗೆ ಮುಂಬೈ 14 ಅಂಕ ಸಂಪಾದಿಸಿ 2ನೇ ಸ್ಥಾನಕ್ಕೇರಿದ್ದು, ಪ್ಲೇ ಆಫ್ ಹಾದಿಯನ್ನು ಸುಗಮಗೊಳಿಸಿದೆ. ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ರೋಹಿತ್ ಶರ್ಮಾ ಪಂದ್ಯಶ್ರೇಷ್ಠ ಪ್ರಶಸ್ತಿ ತಮ್ಮದಾಗಿಸಿದರು.
ಇದಕ್ಕೂ ಮೊದಲು ನಾಯಕ ಮಹೇಂದ್ರ ಸಿಂಗ್ ಧೋನಿಯ ಅಲಭ್ಯತೆಯ ನಡುವೆ ಟಾಸ್ ಗೆದ್ದ ಹಂಗಾಮಿ ನಾಯಕ ಸುರೇಶ್ ರೈನಾ ಮುಂಬೈಗೆ ಬ್ಯಾಟಿಂಗ್ ಅವಕಾಶ ನೀಡಿದರು.
ಅದರಂತೆ ಆರಂಭಿಕರಾಗಿ ಕಣಕ್ಕಿಳಿದ ರೋಹಿತ್ ಶರ್ಮಾ ಹಾಗೂ ಕ್ವಿಂಟನ್ ಡಿ ಕೊಕ್ ಜೋಡಿ ಈ ಬಾರಿ ಮಿಂಚಲಿಲ್ಲ. ತಂಡದ ಮೊತ್ತ 24 ಆಗಿದ್ದ ವೇಳೆ ಡಿ ಕೊಕ್(15) ದೀಪಕ್ ಚಾಹರ್ಗೆ ವಿಕೆಟ್ ಒಪ್ಪಿಸಿದರು. ಈ ವೇಳೆ ಸಮಯೋಚಿತ ಆಟವಾಡಿದ ರೋಹಿತ್ ಶರ್ಮಾ ಹಾಗೂ ಎವಿನ್ ಲೆವಿಸ್ ಆರಂಭಿಕ ಆಘಾತದಿಂದ ತಂಡವನ್ನು ಪಾರು ಮಾಡಿದರು.
ಇಬ್ಬರ ನಡುವೆ ಉತ್ತಮ ಹೊಂದಾಣಿಕೆ ಮೂಡುತ್ತಿದ್ದಂತೆ ಅಬ್ಬರಿಸಲು ಶುರು ಮಾಡಿದ ಜೋಡಿ ಚೆನ್ನೈ ಬೌಲರ್ಗಳ ಮೇಲೆ ಸವಾರಿ ಮಾಡಿದರು. ಪರಿಣಾಮ 12ನೇ ಓವರ್ ವೇಳೆ ತಂಡದ ಮೊತ್ತವನ್ನು 100ರ ಗಡಿಗೆ ಬಂದು ನಿಂತಿತು. ಆದರೆ ಇದೇ ವೇಳೆ ಈ ಜೋಡಿಯನ್ನು ಬೇರ್ಪಡಿಸಲು ಸ್ಪಿನ್ನರ್ ಸಾಂಟ್ನರ್ ಯಶಸ್ವಿಯಾದರು.
32 ರನ್ಗಳಿಸಿದ್ದ ಲೆವಿಸ್ ರನ್ನು ಔಟ್ ಮಾಡಿದ ಸಾಂಟ್ನರ್ ಚೆನ್ನೈಗೆ 2ನೇ ಯಶಸ್ಸು ತಂದುಕೊಟ್ಟರು. ಇದರ ಬೆನ್ನಲ್ಲೇ ಕೃನಾಲ್ ಪಾಂಡ್ಯ(1) ರನ್ನು ಇಮ್ರಾನ್ ತಾಹಿರ್ ಪೆವಿಲಿಯನ್ಗೆ ಕಳುಹಿಸಿ ಮುಂಬೈ ಪಾಳಯಕ್ಕೆ ಶಾಕ್ ನೀಡಿದರು. ಒಂದೆಡೆ ಗಟ್ಟಿಯಾಗಿ ನೆಲೆಯೂರಿದ್ದ ನಾಯಕ ರೋಹಿತ್ ಶರ್ಮಾ ಆಕರ್ಷಕ ಅರ್ಧಶತಕ ಗಳಿಸಿ ಗಮನ ಸೆಳೆದರು. 48 ಎಸೆತಗಳನ್ನು ಎದುರಿಸಿದ್ದ ರೋಹಿತ್ 67 ರನ್ಗಳನ್ನು ಬಾರಿಸಿದ್ದರು. ಇದರಲ್ಲಿ ಮೂರು ಅಮೋಘ ಸಿಕ್ಸರ್ ಹಾಗೂ 6 ಬೌಂಡರಿಗಳು ಒಳಗೊಂಡಿತ್ತು. ಆದರೆ ಅಂತಿಮ ಓವರ್ಗಳ ವೇಳೆಯಲ್ಲೇ ವಿಕೆಟ್ ಕೈ ಚೆಲ್ಲುವ ಮೂಲಕ ಮುಂಬೈ ನಾಯಕ ನಿರಾಸೆ ಮೂಡಿಸಿದರು.
ಬಳಿಕ ಜೊತೆಗೂಡಿದ ಹಾರ್ದಿಕ್ ಪಾಂಡ್ಯ(23) ಹಾಗೂ ಕೀರನ್ ಪೊಲಾರ್ಡ್(13) ಒಂದಷ್ಟು ಬಿರುಸಿನ ಹೊಡೆತಗಳನ್ನು ಬಾರಿಸಿ ರನ್ ಗತಿಯನ್ನು ಹೆಚ್ಚಿಸುವ ಪ್ರಯತ್ನ ಮಾಡಿದರು. ಪರಿಣಾಮ ನಿಗದಿತ 20 ಓವರ್ನಲ್ಲಿ 4 ವಿಕೆಟ್ ನಷ್ಟಕ್ಕೆ ತಂಡದ ಮೊತ್ತ 155ಕ್ಕೆ ಬಂದು ತಲುಪಿತು.
ಚೆನ್ನೈ ಪರ ಅತ್ಯುತ್ತಮ ಬೌಲಿಂಗ್ ಮಾಡಿದ ಮಿಚೆಲ್ ಸಾಂಟ್ನರ್ 2 ವಿಕೆಟ್ ಕಬಳಿಸಿದರೆ, ದೀಪಕ್ ಚಾಹರ್ ಹಾಗೂ ಇಮ್ರಾನ್ ತಾಹಿರ್ ತಲಾ ಒಂದು ವಿಕೆಟ್ ಪಡೆದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ