ಐಪಿಎಲ್ ಅಂದರೇ ಹಾಗೆ! ಒಂದಲ್ಲ ಒಂದು ಚಿತ್ರವಿಚಿತ್ರ ಘಟನೆಗಳು ನಡೆಯುತ್ತಲೆ ಇರುತ್ತವೆ. ಇಂತಹುದೇ ಒಂದು ವಿಚಿತ್ರ ಆದರೆ ಪಾಪ ಅಂತನಿಸುವ ಘಟನೆಯೊಂದು ಇತ್ತೀಚಿಗೆ ಐಪಿಎಲ್ 2022ರಲ್ಲಿ (IPL 2022) ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಪಂಜಾಬ್ ಕಿಂಗ್ಸ್ (RCB vs PBKS) ಪಂದ್ಯದ ವೇಳೆ ನಡೆದಿರುವುದು ಬೆಳಕಿಗೆ ಬಂದಿದೆ. ಏನದು ಅವಾಂತರ ಅಂದಿರಾ? ಆರ್ಸಿಬಿ ವಿರುದ್ಧ ಪಂಜಾಬ್ ಪಂದ್ಯದ ಸಮಯದಲ್ಲಿ RCB ಬ್ಯಾಟರ್ ರಜತ್ ಪಾಟಿದಾರ್ (Rajat Patidar) ಅವರು ಹರ್ಪ್ರೀತ್ ಬ್ರಾರ್ ಅವರ ಬೌಲಿಂಗ್ನಲ್ಲಿ ಬೃಹತ್ ಸಿಕ್ಸರ್ ಬಾರಿಸಿದರು. ಪ್ರೇಕ್ಷಕರ ಗ್ಯಾಲರಿಯತ್ತ ವೇಗವಾಗಿ ಹಾರಿದ ಸಿಕ್ಸರ್ ಅಭಿಮಾನಿಯೋರ್ವರ ತಲೆಗೆ ಬಡಿದಿದೆ! ಅದೃಷ್ಟವಶಾತ್, ಸಾಕಷ್ಟು ವಯಸ್ಸಾಗಿದ್ದರೂ, ಆ ಅಭಿಮಾನಿಗೆ ಪೆಟ್ಟೇನೂ ಆಗಲಿಲ್ಲ.
ಶುಕ್ರವಾರ ಪಂಜಾಬ್ ಕಿಂಗ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೋಲಿನ ಸಂದರ್ಭದಲ್ಲಿ, ರಜತ್ ಪಾಟಿದಾರ್ ಒಂದು ಬೃಹತ್ ಸಿಕ್ಸರ್ ಅನ್ನು ಹೊಡೆದರು. ಅದು ದುರದೃಷ್ಟಕರ ಅಭಿಮಾನಿಯೊಬ್ಬರ ತಲೆಮೇಲೆ ಬಿದ್ದಿದೆ.
ಅಯ್ಯೋ! ನೋವಾಯ್ತಾ? ಆರ್ಸಿಬಿ 210 ರನ್ಗಳ ಚೇಸ್ ಮಾಡುವಾಗ ಒಂಬತ್ತನೇ ಓವರ್ನಲ್ಲಿ, ಪಾಟಿದಾರ್ ಅವರು ಹರ್ಪ್ರೀತ್ ಬ್ರಾರ್ ಅವರು ಎಸೆದ ಬೌಲ್ಸಿಕ್ಸರ್ ಹೊಡೆದರು. ಚೆಂಡು ಬಹಳ ದೂರ ಸಾಗಿ ಅಭಿಮಾನಿಯೋರ್ವರ ತಲೆಮೇಲೆ ಬಿದ್ದಿದೆ. ಮಹಿಳೆಯೊಬ್ಬರು ಅಸ್ವಸ್ಥರಾಗಿರುವಂತೆ ಕಾಣುತ್ತಿದ್ದ ಆ ವಯಸ್ಸಾದ ಅಭಿಮಾನಿಯ ಆರೈಕೆ ಮಾಡುತ್ತಿರುವುದು ಚಿಕ್ಕ ವಿಡಿಯೋ ತುಣುಕೊಂದರಲ್ಲಿ ದಾಖಲಾಗಿದೆ.
ಗುರಿ ಮುಟ್ಟುವಲ್ಲ ವಿಫಲವಾದ ಆರ್ಸಿಬಿ! ಪ್ಲೇ ಆಫ್ (Play Off) ಹಂತಕ್ಕೆ ತಲುಪುವ ನಿಟ್ಟಿನಲ್ಲಿ ಆರ್ಸಿಬಿ (RCB) ತಂಡಕ್ಕೆ ಈ ಪಂದ್ಯವನ್ನು ಗೆಲ್ಲಲೇ ಬೇಕಾದ ಅನಿವಾರ್ಯತೆ ಎದುರಾಗಿತ್ತು. ಈ ಟೆನ್ಶನ್ನಲ್ಲೇ ಸ್ಕ್ರೀಜ್ ಇಳಿದ ಆರ್ಸಿಬಿ ಆಟಗಾರರು ಗುರಿ ಮುಟ್ಟಲಾಗದೇ ಪಂಜಾಬ್ ಕಿಂಗ್ಸ್ಗೆ ಶರಣಾಗಿದ್ದಾರೆ.
ಮೊದಲು ಬ್ಯಾಟಿಂಗ್ಗೆ ಬಂದ ವಿರಾಟ್ ಹಾಗೂ ಫಾಫ್ ಜೋಡಿ 33 ರನ್ ಪೇರಿಸಿತ್ತು. ಈ ವೇಳೆ ವಿರಾಟ್ ಕೊಹ್ಲಿ ಸಿಂಪಲ್ ಕ್ಯಾಚ್ಗೆ ಬಲಿಯಾದರು. 14 ಬಾಲ್ಗಳಲ್ಲಿ 20 ರನ್ಗಳಿಸಿ ವಿರಾಟ್ ಔಟ್ ಆದ್ರೆ, ತಂಡಕ್ಕೆ ಒಂದು ರನ್ ಸೇರುವಷ್ಟರಲ್ಲಿ ನಾಯಕ ಫಾಫ್ ಕೂಡ ಔಟ್ ಆದರು. 8 ಬಾಲ್ಗಳಲ್ಲಿ 10 ರನ್ಗಳಿಸಿ ಕ್ಯಾಚ್ ನೀಡಿ ಫಾಫ್ ಪೆವಿಲಿಯನ್ ಸೇರಿಕೊಂಡರು.
ಬೋರ್ ಸ್ಟೋ-ಲಿವಿಂಗ್ ಸ್ಟೋನ್ ಅಬ್ಬರ! ಜಾನಿ ಬೇರ್ ಸ್ಟೋ ಹಾಗೂ ಲಿಯಾಮ್ ಲಿವಿಂಗ್ ಸ್ಟೋನ್ ಅವರ ಅಬ್ಬರದ ಬ್ಯಾಟಿಂಗ್ ನೆರವಿನಿಂದ ಪಂಜಾಬ್ ಕಿಂಗ್ಸ್ ಬೃಹತ್ ಮೊತ್ತ ಕಲೆಹಾಕಿದೆ. ನಿರೀಕ್ಷೆಯಂತೆ ಅಬ್ಬರದ ಬ್ಯಾಟಿಂಗ್ ನಡೆಸಿದ ಪಂಜಾಬ್ ಕಿಂಗ್ಸ್ ಜಾನಿ ಬೇರ್ ಸ್ಟೋ (66 ರನ್, 29 ಎಸೆತ, 4 ಬೌಂಡರಿ, 7 ಸಿಕ್ಸರ್) ಹಾಗೂ ಲಿಯಾಮ್ ಲಿವಿಂಗ್ ಸ್ಟೋನ್ (70 ರನ್, 42 ಎಎಸೆತ, 5 ಬೌಂಡರಿ, 4 ಸಿಕ್ಸರ್ ) ಸ್ಪೋಟಕ ಅರ್ಧಶತಕದ ನೆರವಿನಿಂದ 9 ವಿಕೆಟ್ ಗೆ 209 ರನ್ ಬಾರಿಸಿತು.
ಬೌಲಿಂಗ್ನಲ್ಲಿ ಎಡವಿದ ಆರ್ಸಿಬಿ ಬೌಲರ್ಸ್! ಪಂಜಾಬ್ ಕಿಂಗ್ಸ್ ತಂಡಕ್ಕೆ ಮೊದಲ ವಿಕೆಟ್ ಗೆ ಶಿಖರ್ ಧವನ್ ಹಾಗೂ ಜಾನಿ ಬೇರ್ ಸ್ಟೋ ಸ್ಪೋಟಕ ಆರಂಭ ನೀಡಿದರು. ಕೇವಲ 30 ಎಸೆತಗಳಲ್ಲಿ ಈ ಜೋಡಿ 60 ರನ್ ಕಲೆಹಾಕಿತ್. ಪವರ್ ಪ್ಲೇನಲ್ಲಿ ವಿಕೆಟ್ ಪಡೆಯುವಲ್ಲಿ ಆರ್ಸಿಬಿ ಬೌಲರ್ಗಳು ವಿಫಲವಾದರು. ನಾಲ್ಕು ಓವರ್ ಗಳಲ್ಲೇ ಅರ್ಧಶತಕದ ಗಡಿ ದಾಟಿದ್ದ ಈ ಜೋಡಿಗೆ 5ನೇ ಓವರ್ ನ ಕೊನೇ ಎಸೆತದಲ್ಲಿ ಗ್ಲೆನ್ ಮ್ಯಾಕ್ಸ್ ವೆಲ್ ಕಡಿವಾಣ ಹಾಕಿದರು.
5 ಎಸೆತಗಳಲ್ಲಿ 21 ರನ್ ಬಾರಿಸಿದ್ದ ಧವನ್, ಮ್ಯಾಕ್ಸ್ ವೆಲ್ ಗೆ ಬೌಲ್ಟ್ ಆಗಿ ನಿರ್ಗಮಿಸಿದಾಗ ಪಂಜಾಬ್ ತಂಡ 60 ರನ್ ಸಿಡಿಸಿತ್ತು. ಇದಾದ ಬಳಿಕ ಬೇರ್ ಸ್ಟೋ ಆಟಕ್ಕೆ ಮಿತಿ ಇರಲಿಲ್ಲ. ಮೊಹಮದ್ ಸಿರಾಜ್ ಎಸೆದ ಓವರ್ ನಲ್ಲಿ 3 ಸಿಕ್ಸರ್ ಹಾಗೂ 1 ಬೌಂಡರಿ ಸಿಡಿಸಿದ ಬೇರ್ ಸ್ಟೋ ಕೇವಲ 21 ಎಸೆತಗಳಲ್ಲಿ ತಮ್ಮ ಅರ್ಧಶತಕ ಪೂರೈಸಿದರು.
Published by:guruganesh bhat
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ