ನವದೆಹಲಿ: ಕೊರೋನಾ ಎರಡನೇ ಅಲೆ ಭಾರತದಲ್ಲಿ ವ್ಯಾಪಕವಾಗಿ ಹರಡಿದ್ದ ಕಾರಣ ಅರ್ಧಕ್ಕೆ ಸ್ಥಗಿತಗೊಂಡು, ಅನಿರ್ಧಿಷ್ಟಾವಧಿಗೆ ಮುಂದೂಡಲ್ಪಟ್ಟಿದ್ದ ಐಪಿಎಲ್-14ನೇ ಆವೃತ್ತಿ ಪುನಾರಂಭಗೊಳ್ಳಲಿದೆ ಎಂದು ಬಿಸಿಸಿಐ ಶನಿವಾರ ಘೋಷಿಸಿದೆ. ಟಿ-20 ವಿಶ್ವಕಪ್ ಆರಂಭಕ್ಕೂ ಮುನ್ನ ಸೆಪ್ಟೆಂಬರ್ 18 ರಿಂದ ಅಕ್ಟೋಬರ್ 10ರವರೆಗೆ ಉಳಿದ ಪಂದ್ಯಗಳು ದುಬೈನಲ್ಲಿ ಜರುಗಲಿವೆ. ಮೂರು ವಾರಗಳ ಕಾಲ ನಡೆಯಲಿರುವ ಟೂರ್ನಿಯ ಸುಮಾರು 10 ದಿನ ಒಂದೇ ದಿನದಲ್ಲಿ ಎರಡು ಪಂದ್ಯಗಳನ್ನು ನಡೆಸುವ ಮೂಲಕ ಟೂರ್ನಿಯನ್ನು ಆದಷ್ಟು ಬೇಗ ಮುಗಿಸುವುದು ಬಿಸಿಸಿಐ ಯೋಜನೆಯಾಗಿದೆ. ಈ ಬಗ್ಗೆ ಬಿಸಿಸಿಐ ಅಧಿಕಾರಿ ಸಹ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಈ ಮೂಲಕ ಕ್ರಿಕೆಟ್ ಪ್ರೇಮಿಗಳಿಗೆ ಉಂಟಾಗಿದ್ದ ನಿರಾಸೆ ಕೊನೆಗೊಂಡಂತಾಗಿದೆ.
2021ರ ಐಪಿಎಲ್ನಲ್ಲಿ 31 ಪಂದ್ಯಗಳು ಇನ್ನು ಬಾಕಿ ಇವೆ. ಈ ಪಂದ್ಯಗಳು ಸೆಪ್ಟೆಂಬರ್ 18 ಮತ್ತು ಅಕ್ಟೋಬರ್ 10ರ ನಡುವೆ ನಡೆಯಲಿವೆ. ಅರ್ಧಕ್ಕೆ ನಿಂತಿದ್ದ ಐಪಿಎಲ್ ಪುನರಾರಂಭ ಸಂಬಂಧ ಇಂದು ಬಿಸಿಸಿಐ ಸ್ಪೆಷಲ್ ಜನರಲ್ ಮೀಟಿಂಗ್ (ಎಸ್ಜಿಎಂ) ನಡೆಯಿತು. ಈ ಸಭೆಯಲ್ಲಿ ಐಪಿಎಲ್ ಮರುಆರಂಭಕ್ಕೆ ಅವಿರೋಧವಾಗಿ ಸದಸ್ಯರು ಅನುಮತಿ ನೀಡಿದರು.
ಈ ವರ್ಷದಲ್ಲಿ ಭಾರತದಲ್ಲಿ ಮಾನ್ಸೂನ್ ಅವಧಿ ಎಂದು ಪರಿಗಣಿಸಲ್ಪಟ್ಟ ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳಿನಲ್ಲಿ ವಿವೋ ಐಪಿಎಲ್ 2021 ಸರಣಿ ಅರಬ್ ಸಂಯುಕ್ತ ಸಂಸ್ಥಾನದಲ್ಲಿ (ಯುಎಇ) ನಡೆಯಲಿದೆ ಎಂದು ಬಿಸಿಸಿಐ ಶನಿವಾರ ಘೋಷಿಸಿದೆ. ಈ ಸರಣಿಯ ಫೈನಲ್ ಪಂದ್ಯವನ್ನು ಅಕ್ಟೋಬರ್ 9 ಅಥವಾ 10ರಂದು ಆಡಿಸಲು ಬಿಸಿಸಿಐ ನಿರ್ಧರಿಸಿದೆ ಎಂಬುದು ಕೂಡ ಈ ಹಿಂದೆಯೇ ನಿರ್ಧರಿಸಲಾಗಿತ್ತು. ಅಲ್ಲದೇ, ಬಿಸಿಸಿಐ ಈಗಾಗಲೇ ಎಲ್ಲಾ ಫ್ರಾಂಚೈಸಿಗಳೊಂದಿಗೆ ನಿರ್ಧರಿಸಿದ್ದು ಬಾಕಿ ಉಳಿದಿರುವ ಪಂದ್ಯಾವಳಿಗಳನ್ನು ಸೆಪ್ಟೆಂಬರ್ 18ರ ಆಸುಪಾಸಿನಲ್ಲಿ ಆರಂಭಿಸುವುದಾಗಿ ಮಾಹಿತಿ ರವಾನಿಸಿತ್ತು.
ದುಬೈನಲ್ಲಿ ಐಪಿಎಲ್ ನಡೆಯುತ್ತಿರುವುದು ಇದೇ ಮೊದಲೆನಲ್ಲಾ. ಕಳೆದ ವರ್ಷ ಸಹ ಕೊರೋನಾ ವ್ಯಾಪಕವಾಗಿ ಹರಡಿದ್ದ ಕಾರಣ 2020ರ ಐಪಿಎಲ್ ಸರಣಿಯಲ್ಲಿ ದುಬೈನಲ್ಲಿ ಯಶಸ್ವಿಯಾಗಿ ನಡೆಸಲಾಗಿತ್ತು.
ಇದನ್ನು ಓದಿ: Rohit Sharma: ಹಿಟ್ಮ್ಯಾನ್ ಬಾರಿಸಿದ ಮೊದಲ ಶತಕವನ್ನು ನೆನೆಪಿಸಿದ ಅಭಿಮಾನಿಗಳು!
ಈ ನಡುವೆ ಭಾರತ ಕ್ರಿಕೆಟ್ ತಂಡ ಸಾಕಷ್ಟು ವಿವಾದಗಳ ನಡುವೆಯೂ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ನಲ್ಲಿ ಪಾಲ್ಗೊಳ್ಳುವ ಸಲುವಾಗಿ ಇಂಗ್ಲೆಂಡ್ಗೆ ಪ್ರವಾಸ ಬೆಳಸಿದೆ. ಅಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ತಂಡ ಕಣಕ್ಕೆ ಇಳಿಯಲಿದೆ. ಈ ಟೂರ್ನಿ ಸೆಪ್ಟೆಂಬರ್ 14ರಂದು ಅಂತ್ಯಗೊಳ್ಳಲಿದ್ದು ಅಲ್ಲಿಂದ ಭಾರತೀಯ ಆಟಗಾರರೆಲ್ಲರೂ ಅತ್ಯಂತ ಸುರಕ್ಷಿತ ರೀತಿಯಲ್ಲಿ ದುಬೈ ತಲುಪಲಿದ್ದಾರೆ. ಹಾಗೆಯೇ ಉಳಿದ ಆಟಗಾರರನ್ನೂ ಕರೆತರಲಾಗುವುದು ಎಂದು ಆಯೋಜಕರು ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ