ಶ್ರೀಲಂಕಾ ಕ್ರಿಕೆಟ್ ದಂತಕಥೆ, ಸನ್ ರೈಸರ್ಸ್ ತಂಡದ ಬೌಲಿಂಗ್ ಕೋಚ್ ಮುತ್ತಯ್ಯ ಮುರಳೀಧರನ್ ಅವರು ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹೃದಯ ಸಂಬಂಧಿ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಭಾನುವಾರ ಆಸ್ಪ್ರತೆಗೆ ದಾಖಲಾಗಿದ್ದಾರೆ. ಸನ್ರೈಸರ್ಸ್ ಹೈದರಾಬಾದ್ ತಂಡದ ಮೆಂಟರ್ ಆಗಿರುವ ಮುರಳೀಧರನ್ ಐಪಿಎಲ್ ನಿಮಿತ್ತ ಚೆನ್ನೈನಲ್ಲಿದ್ದರು. ಇದೇ ವೇಳೆ ಹೃದಯದ ಸಮಸ್ಯೆ ಕಾಣಿಸಿಕೊಂಡಿದೆ. ಹೀಗಾಗಿ ಚಿಕಿತ್ಸೆ ಪಡೆಯಲು ಮುಂದಾಗಿದ್ದಾರೆ.
ಈ ಹಿಂದೆ ಮಾರ್ಚ್ ವೇಳೆ ಮುತ್ತಯ್ಯ ಮುರಳೀಧರನ್ ಅವರಲ್ಲಿ ಈ ಸಮಸ್ಯೆ ಕಾಣಿಸಿಕೊಂಡಿತ್ತು. ಇದಾಗ್ಯೂ ಐಪಿಎಲ್ ತಂಡದೊಂದಿಗೆ ಮುಂದುವರೆದಿದ್ದರು. ಆದರೀಗ ಸಮಸ್ಯೆ ಬಿಗಡಾಯಿಸಿದ್ದರಿಂದ ಅವರ ಭಾನುವಾರ ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅಲ್ಲದೆ ಹೃದಯ ನಾಳಗಳ ಬ್ಲಾಕ್ ನೀಗಿಸಲು ಆಯಂಜಿಯೋಪ್ಲಾಸ್ಟಿ ಚಿಕಿತ್ಸೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ.
2015ರಿಂದ ಸನ್ರೈಸರ್ಸ್ ಹೈದರಾಬಾದ್ ತಂಡದ ಭಾಗವಾಗಿರುವ ಮುತ್ತಯ್ಯ ಮುರಳೀಧರನ್ ಈ ಬಾರಿ ಕೆಲ ದಿನಗಳ ಕಾಲ ತಂಡದಿಂದ ದೂರ ಉಳಿಯಲಿದ್ದಾರೆ. ಇದಾಗ್ಯೂ ಗುಣಮುಖರಾದ ಬಳಿಕ ಮತ್ತೆ ತಂಡ ಸೇರಲಿದ್ದಾರೆ ಎಂದು ವರದಿಯಾಗಿದೆ.
IPL ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕೊಚ್ಚಿ ಟಸ್ಕರ್ಸ್ ಪರ ಆಡಿರುವ ಮುರಳೀಧರನ್ 66 ಪಂದ್ಯಗಳಿಂದ 63 ವಿಕೆಟ್ ಕಬಳಿಸಿದ್ದಾರೆ. ಇನ್ನು ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತ್ಯಧಿಕ ವಿಕೆಟ್ ಪಡೆದ ಸಾಧನೆ ಲಂಕಾ ಸ್ಪಿನ್ನರ್ ಹೆಸರಿನಲ್ಲಿದೆ. ಏಕದಿನ ಕ್ರಿಕೆಟ್ನಲ್ಲಿ ಮುರಳೀಧರನ್ 534 ವಿಕೆಟ್ ಕಬಳಿಸಿದರೆ, ಟೆಸ್ಟ್ ಕ್ರಿಕೆಟ್ನಲ್ಲಿ 800 ವಿಕೆಟ್ಗಳ ಸರ್ವಶ್ರೇಷ್ಠ ದಾಖಲೆ ಬರೆದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ