ರಾಜಸ್ಥಾನ್ ರಾಯಲ್ಸ್ ಇಂಡಿಯನ್ ಪ್ರೀಮಿಯರ್ ಲೀಗ್ ಚೊಚ್ಚಲ ಆವೃತ್ತಿಯಲ್ಲಿ ಪ್ರಶಸ್ತಿ ಗೆದ್ದಿದ್ದು ಬಿಟ್ಟರೆ ನಂತರದಲ್ಲಿ ಅಷ್ಟೇನು ಪರಿಣಾಮಕಾರಿ ತಂಡವಾಗಿ ಹೊರಹೊಮ್ಮಲಿಲ್ಲ. ವಿಶ್ವ ಶ್ರೇಷ್ಠ ಆಟಗಾರರು ತಂಡದಲ್ಲಿ ಆಡಿದ್ದರೂ ಸಂಘಟಿತ ಪ್ರದರ್ಶನ ಮೂಡಿ ಬಂದಿರಲಿಲ್ಲ. ಸದ್ಯ ಮುಂಬರುವ ಐಪಿಎಲ್ 2021 ರಲ್ಲಿ ಆರ್ಆರ್ ಫ್ರಾಂಚೈಸಿ ತಂಡದಲ್ಲಿ ಮಹತ್ವದ ಬದಲಾವಣೆ ಮಾಡಿದೆ.
ರಾಜಸ್ಥಾನ್ ರಾಯಲ್ಸ್ ತಂಡದ ನಾಯಕನಾಗಿರುವ ಆಸ್ಟ್ರೇಲಿಯಾ ಸ್ಟಾರ್ ಬ್ಯಾಟ್ಸ್ಮನ್ ಸ್ಟೀವ್ ಸ್ಮಿತ್ ಅವರನ್ನು ಫ್ರಾಂಚೈಸಿ ಕೈಬಿಟ್ಟಿದೆ. ಅವರ ಬದಲಿಗೆ ಯುವ ಆಟಗಾರ ಸಂಜು ಸ್ಯಾಮ್ಸನ್ಗೆ ನಾಯಕ ಪಟ್ಟ ನೀಡಲಾಗಿದೆ. ಕಳೆದ ಸೀಸನ್ನಲ್ಲಿನ ನಾಯಕತ್ವದ ವೈಫಲ್ಯ ಹಾಗೂ ಸಿಡ್ನಿ ಕ್ರಿಕೆಟ್ ಗ್ರೌಂಡ್ನಲ್ಲಿ ಮೋಸದಾಟ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ರಾಜಸ್ಥಾನ್ ತಂಡ ಈ ನಿರ್ಧಾರ ಮಾಡಿದೆ ಎನ್ನಲಾಗಿದೆ.
ಸ್ಮಿತ್ ಜೊತೆಗಿನ ರಾಜಸ್ಥಾನ್ ತಂಡದ ಒಪ್ಪಂದ ಕೂಡ ಕಳೆದ ಸೀಸನ್ಗೆ ಅಂತ್ಯವಾಗಿತ್ತು. ಹೀಗಾಗಿ ಮುಂದಿನ ಸೀಸನ್ ಹರಾಜಿಗೆ ಸ್ಟೀವ್ ಸ್ಮಿತ್ ಲಭ್ಯವಿರಲಿದ್ದಾರೆ. ಆರ್ಆರ್ ತಂಡದ ಮಾಜಿ ನಾಯಕನ ಜೊತೆಗೆ ಅಂಕಿತ್ ರಜಪೂತ್, ಓಶಾನೆ ಥಾಮಸ್, ಆಕಾಶ್ ಸಿಂಗ್, ವರುಣ್ ಆರೊನ್, ಟಾಮ್ ಕುರ್ರನ್, ಅನಿರುದ್ಧ್ ಜೋಶಿ, ಮತ್ತು ಶಶಾಂಕ್ ಸಿಂಗ್ ಅವರನ್ನು ಸಹ ರಾಜಸ್ಥಾನ್ ರಾಯಲ್ಸ್ ತಂಡ ಕೈ ಬಿಟ್ಟಿದೆ.