ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ನ 4ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಪಂಜಾಬ್ ಕಿಂಗ್ಸ್ 222 ರನ್ಗಳ ಟಾರ್ಗೆಟ್ ನೀಡಿದೆ. ಇದಕ್ಕೂ ಮುನ್ನ ಟಾಸ್ ಗೆದ್ದ ಆರ್ಆರ್ ತಂಡದ ನಾಯಕ ಸಂಜು ಸ್ಯಾಮ್ಸನ್ ಬೌಲಿಂಗ್ ಆಯ್ದುಕೊಂಡರು.
ಅದರಂತೆ ಇನಿಂಗ್ಸ್ ಆರಂಭಿಸಿದ ಪಂಜಾಬ್ ಆರಂಭಿಕರಾದ ಕೆಎಲ್ ರಾಹುಲ್ ಹಾಗೂ ಮಯಾಂಕ್ ಅಗರ್ವಾಲ್ ಮೊದಲ ಓವರ್ನಲ್ಲೇ 10 ರನ್ ಕಲೆಹಾಕುವ ಮೂಲಕ ಉತ್ತಮ ಆರಂಭ ಪಡೆದುಕೊಂಡರು. ಇನ್ನು 2ನೇ ಓವರ್ ಮುಕ್ತಾಯದ ವೇಳೆ 21 ರನ್ ಪೇರಿಸಿದ್ದ ಈ ಜೋಡಿಯನ್ನು 3ನೇ ಓವರ್ನಲ್ಲಿ ಬೇರ್ಪಡಿಸಲು ಯುವ ವೇಗಿ ಚೇತನ್ ಸಕರಿಯಾ ಯಶಸ್ಸಿಯಾದರು.
ಸಕರಿಯಾ ಎಸೆದ ಮೂರನೇ ಓವರ್ನ 4ನೇ ಎಸೆತದಲ್ಲಿ ಮಯಾಂಕ್ ಅರ್ಗವಾಲ್ (14) ಕೀಪರ್ ಸಂಜು ಸ್ಯಾಮ್ಸನ್ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಇನ್ನು 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಕ್ರಿಸ್ ಗೇಲ್ ಎಚ್ಚರಿಕೆಯ ಆಟಕ್ಕೆ ಒತ್ತು ನೀಡಿದರು. ಪರಿಣಾಮ ಪವರ್ಪ್ಲೇ ಮುಕ್ತಾಯದ ವೇಳೆ ಪಂಜಾಬ್ ಕಿಂಗ್ಸ್ ಗಳಿಸಿದ್ದು 46 ರನ್ಗಳು.
ಪವರ್ಪ್ಲೇ ಬಳಿಕ ಬ್ಯಾಟಿಂಗ್ ಗೇರ್ ಬದಲಿಸಿದ ಕ್ರಿಸ್ ಗೇಲ್ ತಮ್ಮ ಹಿಂದಿನ ಆಟದತ್ತ ವಾಲಿದರು. ಪರಿಣಾಮ 2 ಸಿಕ್ಸ್ ಹಾಗೂ 4 ಭರ್ಜರಿಗಳು ಮೂಡಿಬಂದವು. ಅತ್ತ ಗೇಲ್ಗೆ ಸಾಥ್ ನೀಡಿದ ಕೆಎಲ್ ರಾಹುಲ್ ಕೂಡ 5 ಭರ್ಜರಿ ಬೌಂಡರಿ ಬಾರಿಸಿದರು. ಅದರಂತೆ 10 ಓವರ್ ಮುಕ್ತಾಯದ ವೇಳೆಗೆ ಪಂಜಾಬ್ ಕಿಂಗ್ಸ್ ತಂಡದ ಮೊತ್ತವು 89ಕ್ಕೆ ಬಂದು ನಿಂತಿತು. ಆದರೆ ಇದೇ ಓವರ್ನ 5ನೇ ಎಸೆತದಲ್ಲಿ ಬೆನ್ ಸ್ಟೋಕ್ಸ್ ಹಿಡಿದ ಅದ್ಭುತ ಕ್ಯಾಚ್ಗೆ ಕ್ರಿಸ್ ಗೇಲ್ ಬಲಿಯಾದರು. ಇದರೊಂದಿಗೆ 28 ಎಸೆತಗಳಲ್ಲಿ 40 ರನ್ಗಳ ಗೇಲ್ ಇನಿಂಗ್ಸ್ ಅಂತ್ಯವಾಯಿತು.
ಆದರೆ ಮತ್ತೊಂದೆಡೆ ಅಬ್ಬರಿಸಲಾರಂಭಿಸಿದ ಕೆಎಲ್ ರಾಹುಲ್ ಭರ್ಜರಿ ಸಿಕ್ಸ್ ಸಿಡಿಸುವ ಮೂಲಕ 11ನೇ ಓವರ್ನಲ್ಲಿ ತಂಡದ ಮೊತ್ತವನ್ನು 100ರ ಗಡಿದಾಟಿಸಿದರು. ಅಲ್ಲದೆ ಕೇವಲ 30 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ದೀಪಕ್ ಹೂಡಾ ರಾಹುಲ್ ಜೊತೆಗೂಡಿ ಕೇವಲ 22 ಎಸೆತಗಳಲ್ಲಿ ಅರ್ಧಶತಕಗಳ ಜೊತೆಯಾಟವಾಡಿದರು. ಈ ಮೂಲಕ 14 ಓವರ್ ಮುಕ್ತಾಯದ ವೇಳೆಗೆ ತಂಡದ ಮೊತ್ತವನ್ನು 150ಕ್ಕೇರಿಸಿದರು.
ಅಲ್ಲದೆ 6 ಭರ್ಜರಿ ಸಿಕ್ಸರ್ಗಳೊಂದಿಗೆ ದೀಪಕ್ ಹೂಡಾ ಕೇವಲ 20 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಇದರೊಂದಿಗೆ ಪಂಜಾಬ್ ಮೊತ್ತವು 16 ಓವರ್ ಮುಕ್ತಾಯದ ವೇಳೆಗೆ 172 ಆಗಿತ್ತು. ಇನ್ನು ಹೂಡಾ-ರಾಹುಲ್ ಸಿಡಿಲಬ್ಬರದಿಂದ ಕೇವಲ 47 ಎಸೆತಗಳಲ್ಲಿ 105 ರನ್ಗಳು ಮೂಡಿಬಂದವು. ಈ ಹಂತದಲ್ಲಿ 28 ಎಸೆತಗಳಲ್ಲಿ 6 ಸಿಕ್ಸರ್, 4 ಬೌಂಡರಿಗಳೊಂದಿಗೆ 64 ರನ್ ಬಾರಿಸಿದ್ದ ಹೂಡಾ ಬೌಂಡರಿ ಲೈನ್ನಲ್ಲಿ ಕ್ಯಾಚ್ ನೀಡಿ ನಿರ್ಗಮಿಸಿದರು.
ಆದರೆ ಮತ್ತೊಂದೆಡೆ ರಾಹುಲ್ ಅಬ್ಬರ ಶುರುವಾಗಿತ್ತು. ಪರಿಣಾಮ 18ನೇ ಓವರ್ ವೇಳೆಗೆ ಪಂಜಾಬ್ ಕಿಂಗ್ಸ್ ತಂಡದ ಮೊತ್ತವು 200ರ ಗಡಿದಾಟಿತು. ಈ ವೇಳೆ ಕ್ರೀಸ್ಗಿಳಿದ ನಿಕೋಲಸ್ ಪೂರನ್ ಶೂನ್ಯಕ್ಕೆ ಔಟಾಗುವ ಮೂಲಕ ನಿರಾಸೆ ಮೂಡಿಸಿದರು.
ಕೊನೆಯ ಎರಡು ಓವರ್ಗಳಿರುವಾಗ ರಾಹುಲ್ ಜೊತೆಗೂಡಿದ ಶಾರುಖ್ ಖಾನ್ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. ಈ ಜೋಡಿ 19ನೇ ಓವರ್ನಲ್ಲಿ 15 ರನ್ ಕಲೆಹಾಕಿತು. ಚೇತನ್ ಸಕರಿಯಾ ಎಸೆದ ಅಂತಿಮ ಓವರ್ನ ಮೊದಲ ಎಸೆತದಲ್ಲಿ ರಾಹುಲ್ ಬೌಂಡರಿ ಬಾರಿಸಿದರು. 2ನೇ ಎಸೆತದಲ್ಲಿ ಬೌಂಡರಿ ಲೈನ್ನಲ್ಲಿ ರಾಹುಲ್ ತೆವಾಠಿಯಾ ಹಿಡಿದ ಅತ್ಯುತ್ತಮ ಕ್ಯಾಚ್ನಿಂದ ಕೆಎಲ್ ರಾಹುಲ್ ಔಟಾದರು. 50 ಎಸೆತಗಳನ್ನು ಎದುರಿಸಿದ್ದ ರಾಹುಲ್ 5 ಭರ್ಜರಿ ಸಿಕ್ಸ್ ಹಾಗೂ 7 ಬೌಂಡರಿಗಳೊಂದಿಗೆ 91 ರನ್ ಬಾರಿಸಿ ಮಿಂಚಿದರು.
ಕೊನೆಯ ಓವರ್ನಲ್ಲಿ ಕೇವಲ 5 ರನ್ಗಳಿಸುವುದರೊಂದಿಗೆ ಪಂಜಾಬ್ ಕಿಂಗ್ಸ್ ತಂಡವು ನಿಗದಿತ 20 ಓವರ್ನಲ್ಲಿ 6 ವಿಕೆಟ್ ನಷ್ಟಕ್ಕೆ 221 ರನ್ಗಳನ್ನು ಪೇರಿಸಿತು. RR ಪರ 4 ಓವರ್ನಲ್ಲಿ 31 ರನ್ ನೀಡಿ 3 ವಿಕೆಟ್ ಕಬಳಿಸಿದ ಯುವ ವೇಗಿ ಚೇತನ್ ಸಕರಿಯಾ ಯಶಸ್ವಿ ಬೌಲರ್ ಎನಿಸಿಕೊಂಡರು.
ಉಭಯ ತಂಡಗಳು 21 ಬಾರಿ ಮುಖಾಮುಖಿಯಾಗಿದ್ದು, ಇದರಲ್ಲಿ ರಾಜಸ್ಥಾನ್ ರಾಯಲ್ಸ್ 12 ರಲ್ಲಿ ಗೆದ್ದರೆ, ಪಂಜಾಬ್ ಕಿಂಗ್ಸ್ ಇಲೆವೆನ್ 9 ರಲ್ಲಿ ಜಯ ಸಾಧಿಸಿದೆ. ಹಾಗೆಯೇ ಕಳೆದ ಸೀಸನ್ನಲ್ಲಿ ಆಡಿದ 2 ಪಂದ್ಯಗಳಲ್ಲೂ ರಾಜಸ್ಥಾನ್ ಗೆದ್ದು ಬೀಗಿತ್ತು. ಇದೇ ಆತ್ಮ ವಿಶ್ವಾಸದಲ್ಲಿ ಇಂದು ಕೂಡ ರಾಜಸ್ಥಾನ್ ರಾಯಲ್ಸ್ ಕಣಕ್ಕಿಳಿಯಲಿದೆ.
RR vs PBKS Playing 11: ಬಲಿಷ್ಠ ಪಂಜಾಬ್ ಪಡೆ: ಇಂದು ಕಣಕ್ಕಿಳಿಯುವ ಉಭಯ ತಂಡಗಳು ಹೀಗಿವೆ
ಇತ್ತ ಪಂಜಾಬ್ ತಂಡದ ಬ್ಯಾಟಿಂಗ್ ಬೆನ್ನೆಲುಬಾಗಿ ಕೆಎಲ್ ರಾಹುಲ್, ಕ್ರಿಸ್ ಗೇಲ್, ಪೂರನ್ ಇದ್ದರೆ, ಅತ್ತ ಸಂಜು ಸ್ಯಾಮ್ಸನ್ ಜೊತೆ ಬೆನ್ ಸ್ಟೋಕ್ಸ್ ಹಾಗೂ ಜೋಸ್ ಬಟ್ಲರ್ ಇರುವುದು ವಿಶೇಷ. ಹೀಗಾಗಿ ಉಭಯ ತಂಡಗಳಿಂದಲೂ ಭರ್ಜರಿ ಬ್ಯಾಟಿಂಗ್ ಪ್ರದರ್ಶನವನ್ನು ನಿರೀಕ್ಷಿಸಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ