ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಐಪಿಎಲ್ನ 4ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವು ರಾಜಸ್ಥಾನ್ ರಾಯಲ್ಸ್ ತಂಡವನ್ನು ಎದುರಿಸಲಿದೆ. ಉಭಯ ತಂಡಗಳಲ್ಲೂ ಸ್ಟಾರ್ ಆಟಗಾರರ ದಂಡೇ ಇದ್ದು, ಹೀಗಾಗಿ ಭರ್ಜರಿ ಪೈಪೋಟಿಯನ್ನು ನಿರೀಕ್ಷಿಸಬಹುದು. ಆದರೆ ಎರಡೂ ತಂಡಗಳಲ್ಲಿ ಸ್ಟಾರ್ ಆಟಗಾರರೇ ತುಂಬಿರೋದು ಪ್ಲೇಯಿಂಗ್ ಇಲೆವೆನ್ ಆಯ್ಕೆಗೆ ಸವಾಲಾಗಲಿದೆ.
ಪಂಜಾಬ್ ಕಿಂಗ್ಸ್ ತಂಡದಿಂದ ನಾಯಕ ಕೆ.ಎಲ್. ರಾಹುಲ್, ಮಾಯಾಂಕ್ ಅಗರ್ವಾಲ್ ಆರಂಭಿಕರಾಗಿ ಕಣಕ್ಕಿಳಿಯುವುದು ಖಚಿತ. 3ನೇ ಕ್ರಮಾಂಕದಲ್ಲಿ ವಿದೇಶಿ ಆಟಗಾರನಾಗಿ ಕ್ರಿಸ್ ಗೇಲ್ ಹಾಗೂ 4ನೇ ಕ್ರಮಾಂಕದಲ್ಲಿ ನಿಕೋಲಸ್ ಪೂರನ್ ಸ್ಥಾನ ಪಡೆಯಲಿದ್ದಾರೆ. ಆದರೆ ಈ ಬಾರಿ ತಂಡದಲ್ಲಿ ಟಿ20 ಕ್ರಿಕೆಟ್ನ ನಂಬರ್ 1 ಬ್ಯಾಟ್ಸ್ಮನ್ ಡೇವಿಡ್ ಮಲಾನ್ ಆಗಮನವಾಗಿದೆ. ಹೀಗಾಗಿ ಅವರಿಗೆ ಅವಕಾಶ ನೀಡುವುದಾದರೆ ಪೂರನ್ ಕೆಳ ಕ್ರಮಾಂಕದಲ್ಲಿ ಬ್ಯಾಟ್ ಬೀಸಬೇಕಾಗಿ ಬರಬಹುದು. ಹಾಗೆಯೇ ಆಲ್ರೌಂಡರ್ ಆಯ್ಕೆಗೆ ಒತ್ತು ನೀಡಿದರೆ ಮೊಯಿಸಸ್ ಹೆನ್ರಿಕ್ಸ್ ಅಥವಾ ಕ್ರಿಸ್ ಜೋರ್ಡನ್ ಆಯ್ಕೆಯಾಗಬಹುದು. ಇದರಿಂದ ಮಲಾನ್ ಸ್ಥಾನ ಕಳೆದುಕೊಳ್ಳಬಹುದು. ಹಾಗೆಯೇ ವಿದೇಶಿ ವೇಗಿಯ ಆಯ್ಕೆಯಲ್ಲಿ ಜೇ ರಿಚರ್ಡ್ಸನ್ ಹಾಗೂ ರಿಲೆ ಮೆರೆಡಿತ್ ನಡುವೆ ಸ್ಪರ್ಧೆ ಇದೆ. ಹೀಗಾಗಿ ಪಂಜಾಬ್ ತಂಡಕ್ಕೆ ಪ್ಲೇಯಿಂಗ್ ಆಯ್ಕೆ ಎಂಬುದು ಸವಾಲಾಗಿ ಪರಿಣಮಿಸಿದೆ.
ಇನ್ನು ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ ಬೆನ್ ಸ್ಟೋಕ್ಸ್, ಜೋಸ್ ಬಟ್ಲರ್ ಖಾಯಂ ಸ್ಥಾನ ಪಡೆದಿದ್ದಾರೆ. ಈ ಬಾರಿ ತಂಡಕ್ಕೆ ಎಂಟ್ರಿ ಕೊಟ್ಟಿರುವ ಕ್ರಿಸ್ ಮೋರಿಸ್ ಕೂಡ ಮೊದಲ ಪಂದ್ಯಕ್ಕೆ ಆಯ್ಕೆಯಾಗಲಿದ್ದಾರೆ. ಆದರೆ ಜೋಫ್ರಾ ಆರ್ಚರ್ ಅಲಭ್ಯತೆಯಲ್ಲಿ ಅವರ ಸ್ಥಾನವನ್ನು ಯಾರು ಪಡೆಯಲಿದ್ದಾರೆ ಎಂಬುದು ಪ್ರಶ್ನೆಯಾಗಿದೆ. ಏಕೆಂದರೆ ತಂಡದಲ್ಲಿ ಲಿಯಾಮ್ ಲಿವಿಂಗ್ಸ್ಟೋನ್, ಆಂಡ್ರ್ಯೂ ಟೈ ಇದ್ದು, ಇವರಲ್ಲಿ ಒಬ್ಬರಿಗೆ ಸ್ಥಾನ ನೀಡಿದರೆ, ಈ ಬಾರಿ ಕೂಡ ಎಡಗೈ ದಾಂಡಿಗ ಡೇವಿಡ್ ಮಿಲ್ಲರ್ ಬೆಂಚ್ ಕಾಯಲಿದ್ದಾರೆ.
ಇನ್ನುಳಿದಂತೆ ಪಂಜಾಬ್ ಕಿಂಗ್ಸ್ ಬೌಲಿಂಗ್ ವಿಭಾಗವನ್ನು ಮೊಹಮ್ಮದ್ ಶಮಿ ಮುನ್ನಡೆಸಲಿದ್ದು, ಅವರೊಂದಿಗೆ ಅರ್ಷದೀಪ್ ಸಿಂಗ್ ಕೂಡ ಸ್ಥಾನ ಪಡೆಯಲಿದ್ದಾರೆ. ಹಾಗೆಯೇ ಪಂಜಾಬ್ ತಂಡಕ್ಕೆ ಹೊಸ ಎಂಟ್ರಿಯಾಗಿರುವ ಬಿಗ್ ಹಿಟ್ಟರ್ ಶಾರುಖ್ ಖಾನ್ ಸ್ಥಾನ ಪಡೆಯುವ ಸಾಧ್ಯತೆ ಹೆಚ್ಚಿದೆ. ಇತ್ತ ರಾಜಸ್ಥಾನ್ ತಂಡದ ಬೌಲಿಂಗ್ ಕ್ರಿಸ್ ಮೋರಿಸ್ ಹಾಗೂ ಬೆನ್ ಸ್ಟೋಕ್ಸ್ ಮುನ್ನಡೆಸಲಿದ್ದಾರೆ. ಇವರಿಗೆ ಸಾಥ್ ಆಗಿ ಕಾರ್ತಿಕ್ ತ್ಯಾಗಿ, ಶ್ರೇಯಸ್ ಗೋಪಾಲ್ ಇರಲಿದ್ದಾರೆ. ಹಾಗೆಯೇ ತಂಡಕ್ಕೆ ಹೊಸ ಎಂಟ್ರಿಯಾಗಿರುವ ಆಲ್ರೌಂಡರ್ ಶಿವಂ ದುಬೆ ಕೂಡ ಕಣಕ್ಕಿಳಿಯುವ ಸಾಧ್ಯತೆಯಿದೆ.
ಉಭಯ ತಂಡಗಳ ಸಂಭಾವ್ಯ ಇಲೆವೆನ್ ಹೀಗಿದೆ:-
ಪಂಜಾಬ್ ಕಿಂಗ್ಸ್: ಕೆ.ಎಲ್. ರಾಹುಲ್ (ನಾಯಕ), ಮಾಯಾಂಕ್ ಅಗರ್ವಾಲ್, ಕ್ರಿಸ್ ಗೇಲ್, ನಿಕೋಲಸ್ ಪೂರನ್, ಡೇವಿಡ್ ಮಲಾನ್, ಶಾರುಖ್ ಖಾನ್, ಮುರುಗನ್ ಅಶ್ವಿನ್, ಜೇ ರಿಚರ್ಡ್ಸನ್, ಮೊಹಮ್ಮದ್ ಶಮಿ, ರವಿ ಬಿಷ್ಣೋಯ್, ಅರ್ಷ್ದೀಪ್ ಸಿಂಗ್
ರಾಜಸ್ಥಾನ್ ರಾಯಲ್ಸ್: ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್, ಬೆನ್ ಸ್ಟೋಕ್ಸ್, ಸಂಜು ಸ್ಯಾಮ್ಸನ್, ರಿಯಾನ್ ಪರಾಗ್, ಶಿವಮ್ ದುಬೆ, ರಾಹುಲ್ ತೆವಾಟಿಯಾ, ಕ್ರಿಸ್ ಮೋರಿಸ್, ಶ್ರೇಯಾಸ್ ಗೋಪಾಲ್, ಆಂಡ್ರ್ಯೂ ಟೈ, ಕಾರ್ತಿಕ್ ತ್ಯಾಗಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ