HOME » NEWS » Sports » CRICKET IPL 2021 RR VS PBKS LIVE SCORE PUNJAB KING WON BY 4 RUNS ZP

RR vs PBKS: ಸಂಜು ಸ್ಯಾಮ್ಸನ್ ಶತಕ ವ್ಯರ್ಥ: ರೋಚಕ ಹೋರಾಟದಲ್ಲಿ ರಾಜಸ್ಥಾನ್ ರಾಯಲ್ಸ್​ ಮುಂದೆ ಪಂಜಾಬ್ ಕಿಂಗ್ಸ್

Rajasthan Royals vs Punjab Kings: ಉಭಯ ತಂಡಗಳು 22 ಬಾರಿ ಮುಖಾಮುಖಿಯಾಗಿದ್ದು, ಇದರಲ್ಲಿ ರಾಜಸ್ಥಾನ್ ರಾಯಲ್ಸ್ 12 ರಲ್ಲಿ ಗೆದ್ದರೆ, ಪಂಜಾಬ್ ಕಿಂಗ್ಸ್ ಇಲೆವೆನ್ 10 ರಲ್ಲಿ ಜಯ ಸಾಧಿಸಿದೆ.

news18-kannada
Updated:April 13, 2021, 12:09 AM IST
RR vs PBKS: ಸಂಜು ಸ್ಯಾಮ್ಸನ್ ಶತಕ ವ್ಯರ್ಥ: ರೋಚಕ ಹೋರಾಟದಲ್ಲಿ ರಾಜಸ್ಥಾನ್ ರಾಯಲ್ಸ್​ ಮುಂದೆ ಪಂಜಾಬ್ ಕಿಂಗ್ಸ್
Punjab kings
  • Share this:
ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್​​ನ 4ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ದ ಪಂಜಾಬ್ ಕಿಂಗ್ಸ್ 4 ರನ್​ಗಳ ರೋಚಕ ಜಯ ಸಾಧಿಸಿದೆ. ಇದಕ್ಕೂ ಮುನ್ನ ಪಂಜಾಬ್ ನೀಡಿದ 222 ರನ್​ಗಳ ಬೃಹತ್ ಗುರಿ ಬೆನ್ನತಿದ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಆರಂಭಿಕ ಆಘಾತ ನೀಡುವಲ್ಲಿ  ಮೊಹಮ್ಮದ್ ಶಮಿ ಯಶಸ್ವಿಯಾದರು. ಮೊದಲ ಓವರ್​ನ  4ನೇ ಎಸೆತದಲ್ಲಿ ಬೆನ್​ ಸ್ಟೋಕ್ಸ್​ರನ್ನು ಶೂನ್ಯಕ್ಕೆ ಔಟ್ ಮಾಡಿ ಪಂಜಾಬ್​ಗೆ ಮೊದಲ ಯಶಸ್ಸು ತಂದುಕೊಟ್ಟರು. ಇದರ ಬೆನ್ನಲ್ಲೇ ಅರ್ಷದೀಪ್ ಸಿಂಗ್ ಮನನ್ ವೊಹ್ರಾ (12) ವಿಕೆಟ್ ಪಡೆಯುವ ಮೂಲಕ 2ನೇ ವಿಕೆಟ್ ಪತನಕ್ಕೆ ಕಾರಣರಾದರು.

ಈ ಹಂತದಲ್ಲಿ ಜೊತೆಗೂಡಿದ ನಾಯಕ ಸಂಜು ಸ್ಯಾಮ್ಸನ್ ಹಾಗೂ ಜೋಸ್ ಬಟ್ಲರ್ ಬಿರುಸಿನ ಜೊತೆಯಾಟ ಪ್ರದರ್ಶಿಸಿದರು. ಅದರಲ್ಲೂ ಮೆರಿಡಿತ್ ಒವರ್​ನಲ್ಲಿ 4 ಬೌಂಡರಿಗಳನ್ನು ಬಾರಿಸುವ ಮೂಲಕ ಬಟ್ಲರ್ ಅಬ್ಬರಿಸಿದರು. ಪರಿಣಾಮ 6ನೇ ಓವರ್​ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಮೊತ್ತ 50ರ ಗಡಿದಾಟಿತು. ಇನ್ನು ಪವರ್​ಪ್ಲೇ ಮುಕ್ತಾಯದ ವೇಳೆ ಆರ್​ಆರ್​ 59 ರನ್ ಕಲೆಹಾಕಿತು.

ಆದರೆ 8ನೇ ಓವರ್​ನಲ್ಲಿ ಜೇ ರಿಚರ್ಡ್ಸನ್ ಎಸೆದ ಯಾರ್ಕರ್ ಗುರುತಿಸುವಲ್ಲಿ ಎಡವಿಡದ ಜೋಸ್ ಬಟ್ಲರ್ (25) ಕ್ಲೀನ್ ಬೌಲ್ಡ್ ಆದರು. ಇದಾಗ್ಯೂ ತಂಡದ ರನ್​ಗಳಿಕೆ ಜವಾಬ್ದಾರಿ ಹೊತ್ತುಕೊಂಡ ನಾಯಕ ಸಂಜು ಸ್ಯಾಮ್ಸನ್ ಉತ್ತಮ ಬ್ಯಾಟಿಂಗ್ ಮುಂದುವರೆಸಿದರು. ಪರಿಣಾಮ 10 ಓವರ್ ಮುಕ್ತಾಯದ ವೇಳೆಗೆ ತಂಡದ ಮೊತ್ತ 95ಕ್ಕೆ ಬಂದು ನಿಂತಿತು. ಅಲ್ಲದೆ 33 ಎಸೆತಗಳಲ್ಲಿ ಸ್ಯಾಮ್ಸನ್ ಅರ್ಧಶತಕ ಪೂರೈಸಿದರು.

4ನೇ ವಿಕೆಟ್​ಗೆ ಜೊತೆಯಾದ ಸಂಜು ಸ್ಯಾಮ್ಸನ್- ಶಿವಂ ದುಬೆ 31 ಎಸೆತಗಳಲ್ಲಿ ಅರ್ಧಶತಕದ ಜೊತೆಯಾಟವಾಡಿದರು. ಈ ಹಂತದಲ್ಲಿ ಮತ್ತೆ ದಾಳಿಗಿಳಿದ ಅರ್ಷದೀಪ್ ಸಿಂಗ್ ಶಿವಂ ದುಬೆ (23) ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.

ಕೊನೆಯ ಐದು ಓವರ್​ಗಳಲ್ಲಿ ರಾಜಸ್ಥಾನ್ ರಾಯಲ್ಸ್​ಗೆ ಗೆಲ್ಲಲು 68 ರನ್​ಗಳ ಅಗತ್ಯತೆಯಿತ್ತು. ಮುರುಗನ್ ಅಶ್ವಿನ್ ಎಸೆದ 16ನೇ ಓವರ್​ನಲ್ಲಿ ಮೂರು ಸಿಕ್ಸ್ ಸಿಡಿಸುವ ಮೂಲಕ ರಾಜಸ್ಥಾನ್ ಗೆಲುವಿನ ಅಂತರವನ್ನು ಕಡಿಮೆಗೊಳಿಸಿದರು. ಅದರಂತೆ ಕೊನೆಯ 4 ಓವರ್​ನಲ್ಲಿ 48 ರನ್​ ಬೇಕಿತ್ತು. ಈ ವೇಳೆ ಬೌಲಿಂಗ್ ಮಾಡಿದ ಮೊಹಮ್ಮದ್ ಶಮಿ ಕೇವಲ 8 ರನ್​ ನೀಡಿ ರಿಯಾನ್ ಪರಾಗ್ (25) ವಿಕೆಟ್ ಪಡೆದರು.

ಅದರಂತೆ ರಾಜಸ್ಥಾನ್ ಗೆಲ್ಲಲು ಅಂತಿಮ 3 ಓವರ್​ನಲ್ಲಿ 40 ರನ್​ಗಳನ್ನು ಬಾರಿಸಬೇಕಿತ್ತು. ಜೇ ರಿಚರ್ಡ್ಸನ್ ಎಸೆದ 17ನೇ ಓವರ್​ನ ಮೊದಲ ಎಸೆತದಲ್ಲಿ ಬೌಂಡರಿ, 2ನೇ ಎಸೆತದಲ್ಲಿ ಸಿಕ್ಸರ್, ಮೂರನೇ ಎಸೆತದಲ್ಲಿ ಬೌಂಡರಿ ಬಾರಿಸುವ ಮೂಲಕ ಸ್ಯಾಮ್ಸನ್ 54 ಎಸೆತಗಳಲ್ಲಿ ಶತಕ ಪೂರೈಸಿದರು.

ಕೊನೆಯ 2 ಓವರ್​ನಲ್ಲಿ 21 ರನ್​ಗಳ ಅವಶ್ಯಕತೆಯಿತ್ತು. 19ನೇ ಓವರ್ ಎಸೆದ ರ್ಯಾಲಿ ಮೆರಿಡಿತ್ ಮೊದಲ ಎಸೆತದಲ್ಲೇ ರಾಹುಲ್ ತೆವಾಠಿಯಾ (2) ಕೀಪರ್​ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. 2ನೇ ಎಸೆತದಲ್ಲಿ ಕ್ರಿಸ್ ಮೊರೀಸ್ ರನ್​ ಕಲೆಹಾಕಿಲ್ಲ. 3ನೇ ಎಸೆತದಲ್ಲಿ 1 ರನ್​. 4ನೇ ಎಸೆತದಲ್ಲಿ ಸಂಜು ಸ್ಯಾಮ್ಸನ್ ಭರ್ಜರಿ ಸಿಕ್ಸ್ ಸಿಡಿಸಿದರು. 5ನೇ ಎಸೆತದಲ್ಲಿ 1 ರನ್​. ಕೊನೆಯ ಎಸೆತದಲ್ಲಿ ಯಾವುದೇ ರನ್​ ಇಲ್ಲ.ರಾಜಸ್ಥಾನ್​ಗೆ ಗೆಲ್ಲಲು ಅಂತಿಮ ಓವರ್​ನಲ್ಲಿ 13 ರನ್​ಗಳ ಅಗತ್ಯತೆಯಿತ್ತು. ಅರ್ಷದೀಪ್ ಎಸೆದ ಈ ಓವರ್​ನ ಮೊದಲ ಎಸೆತದಲ್ಲಿ ಯಾವುದೇ ರನ್​ಗಳಿಸಲು ಸ್ಯಾಮ್ಸನ್​ಗೆ ಸಾಧ್ಯವಾಗಲಿಲ್ಲ. 2ನೇ ಎಸೆತದಲ್ಲಿ 1 ರನ್​. 3ನೇ ಎಸೆತದಲ್ಲಿ 1 ರನ್. ಕೊನೆಯ 3 ಎಸೆತಗಳಲ್ಲಿ 11 ರನ್​ ಬೇಕಿತ್ತು. 4ನೇ ಎಸೆತದಲ್ಲಿ ಸ್ಯಾಮ್ಸನ್ ಭರ್ಜರಿ ಸಿಕ್ಸರ್ ಸಿಡಿಸಿದರು. 5ನೇ ಎಸೆತದಲ್ಲಿ ಯಾವುದೇ ರನ್ ಓಡಲಿಲ್ಲ. ಕೊನೆಯ ಎಸೆತದಲ್ಲಿ 5 ರನ್​ಗಳ ಅವಶ್ಯಕತೆಯಿತ್ತು. ಆದರೆ ಕೊನೆಯ ಎಸೆತದಲ್ಲಿ ಕ್ಯಾಚ್ ನೀಡುವ ಮೂಲಕ ಸಂಜು ಸ್ಯಾಮ್ಸನ್ ವಿಕೆಟ್ ಒಪ್ಪಿಸಿದರು.

ಇದರೊಂದಿಗೆ ಪಂಜಾಬ್ ಕಿಂಗ್ಸ್ ತಂಡ 4 ರನ್​ಗಳ ರೋಚಕ ಜಯ ಸಾಧಿಸಿತು. ಕೊನೆಯವರೆಗೂ ಹೋರಾಟ ನಡೆಸಿದ ಸಂಜು ಸ್ಯಾಮ್ಸನ್​ 69 ಎಸೆತಗಳಲ್ಲಿ 119 ರನ್​ಗಳಿಸಿದರು. ಈ ಅಮೋಘ ಇನಿಂಗ್ಸ್​ನಲ್ಲಿ 7 ಭರ್ಜರಿ ಸಿಕ್ಸ್ ಹಾಗೂ 12 ಬೌಂಡರಿ ಒಳಗೊಂಡಿತ್ತು. ಪಂಜಾಬ್ ಪರ ಅರ್ಷದೀಪ್ ಸಿಂಗ್ 4 ಓವರ್​ನಲ್ಲಿ 35 ರನ್​ ನೀಡಿ 3 ವಿಕೆಟ್ ಕಬಳಿಸಿ ಮಿಂಚಿದರು.



ಇದಕ್ಕೂ ಮುನ್ನ ಟಾಸ್ ಗೆದ್ದ ಆರ್​ಆರ್​ ತಂಡದ ನಾಯಕ ಸಂಜು ಸ್ಯಾಮ್ಸನ್ ಬೌಲಿಂಗ್ ಆಯ್ದುಕೊಂಡರು.

ಅದರಂತೆ ಇನಿಂಗ್ಸ್ ಆರಂಭಿಸಿದ ಪಂಜಾಬ್ ಆರಂಭಿಕರಾದ ಕೆಎಲ್ ರಾಹುಲ್ ಹಾಗೂ ಮಯಾಂಕ್ ಅಗರ್ವಾಲ್ ಮೊದಲ ಓವರ್​ನಲ್ಲೇ 10 ರನ್​ ಕಲೆಹಾಕುವ ಮೂಲಕ ಉತ್ತಮ ಆರಂಭ ಪಡೆದುಕೊಂಡರು. ಇನ್ನು 2ನೇ ಓವರ್​ ಮುಕ್ತಾಯದ ವೇಳೆ 21 ರನ್ ಪೇರಿಸಿದ್ದ ಈ ಜೋಡಿಯನ್ನು 3ನೇ ಓವರ್​ನಲ್ಲಿ ಬೇರ್ಪಡಿಸಲು ಯುವ ವೇಗಿ ಚೇತನ್ ಸಕರಿಯಾ ಯಶಸ್ಸಿಯಾದರು.

ಸಕರಿಯಾ ಎಸೆದ ಮೂರನೇ ಓವರ್​ನ 4ನೇ ಎಸೆತದಲ್ಲಿ ಮಯಾಂಕ್ ಅರ್ಗವಾಲ್ (14) ಕೀಪರ್​ ಸಂಜು ಸ್ಯಾಮ್ಸನ್​ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಇನ್ನು 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಕ್ರಿಸ್ ಗೇಲ್ ಎಚ್ಚರಿಕೆಯ ಆಟಕ್ಕೆ ಒತ್ತು ನೀಡಿದರು. ಪರಿಣಾಮ ಪವರ್​ಪ್ಲೇ ಮುಕ್ತಾಯದ ವೇಳೆ ಪಂಜಾಬ್ ಕಿಂಗ್ಸ್ ಗಳಿಸಿದ್ದು 46 ರನ್​ಗಳು.

ಪವರ್​ಪ್ಲೇ ಬಳಿಕ ಬ್ಯಾಟಿಂಗ್ ಗೇರ್ ಬದಲಿಸಿದ ಕ್ರಿಸ್ ಗೇಲ್ ತಮ್ಮ ಹಿಂದಿನ ಆಟದತ್ತ ವಾಲಿದರು. ಪರಿಣಾಮ 2 ಸಿಕ್ಸ್ ಹಾಗೂ 4 ಭರ್ಜರಿಗಳು ಮೂಡಿಬಂದವು. ಅತ್ತ ಗೇಲ್​ಗೆ ಸಾಥ್ ನೀಡಿದ ಕೆಎಲ್ ರಾಹುಲ್ ಕೂಡ 5 ಭರ್ಜರಿ ಬೌಂಡರಿ ಬಾರಿಸಿದರು. ಅದರಂತೆ 10 ಓವರ್​ ಮುಕ್ತಾಯದ ವೇಳೆಗೆ ಪಂಜಾಬ್ ಕಿಂಗ್ಸ್ ತಂಡದ ಮೊತ್ತವು 89ಕ್ಕೆ ಬಂದು ನಿಂತಿತು.  ಆದರೆ ಇದೇ ಓವರ್​ನ 5ನೇ ಎಸೆತದಲ್ಲಿ ಬೆನ್​ ಸ್ಟೋಕ್ಸ್​ ಹಿಡಿದ ಅದ್ಭುತ ಕ್ಯಾಚ್​ಗೆ ಕ್ರಿಸ್ ಗೇಲ್ ಬಲಿಯಾದರು. ಇದರೊಂದಿಗೆ 28 ಎಸೆತಗಳಲ್ಲಿ 40 ರನ್​ಗಳ ಗೇಲ್ ಇನಿಂಗ್ಸ್ ಅಂತ್ಯವಾಯಿತು.

ಆದರೆ ಮತ್ತೊಂದೆಡೆ ಅಬ್ಬರಿಸಲಾರಂಭಿಸಿದ ಕೆಎಲ್ ರಾಹುಲ್ ಭರ್ಜರಿ ಸಿಕ್ಸ್ ಸಿಡಿಸುವ ಮೂಲಕ 11ನೇ ಓವರ್​ನಲ್ಲಿ ತಂಡದ ಮೊತ್ತವನ್ನು 100ರ ಗಡಿದಾಟಿಸಿದರು. ಅಲ್ಲದೆ ಕೇವಲ 30 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ದೀಪಕ್ ಹೂಡಾ ರಾಹುಲ್​ ಜೊತೆಗೂಡಿ ಕೇವಲ 22 ಎಸೆತಗಳಲ್ಲಿ ಅರ್ಧಶತಕಗಳ ಜೊತೆಯಾಟವಾಡಿದರು. ಈ ಮೂಲಕ 14 ಓವರ್ ಮುಕ್ತಾಯದ ವೇಳೆಗೆ ತಂಡದ ಮೊತ್ತವನ್ನು 150ಕ್ಕೇರಿಸಿದರು.

ಅಲ್ಲದೆ 6 ಭರ್ಜರಿ ಸಿಕ್ಸರ್​ಗಳೊಂದಿಗೆ ದೀಪಕ್ ಹೂಡಾ ಕೇವಲ 20 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಇದರೊಂದಿಗೆ ಪಂಜಾಬ್ ಮೊತ್ತವು 16 ಓವರ್​ ಮುಕ್ತಾಯದ ವೇಳೆಗೆ 172 ಆಗಿತ್ತು. ಇನ್ನು ಹೂಡಾ-ರಾಹುಲ್ ಸಿಡಿಲಬ್ಬರದಿಂದ ಕೇವಲ 47 ಎಸೆತಗಳಲ್ಲಿ 105 ರನ್​ಗಳು ಮೂಡಿಬಂದವು. ಈ ಹಂತದಲ್ಲಿ 28 ಎಸೆತಗಳಲ್ಲಿ 6 ಸಿಕ್ಸರ್, 4 ಬೌಂಡರಿಗಳೊಂದಿಗೆ 64 ರನ್ ಬಾರಿಸಿದ್ದ ಹೂಡಾ ಬೌಂಡರಿ ಲೈನ್​ನಲ್ಲಿ ಕ್ಯಾಚ್ ನೀಡಿ ನಿರ್ಗಮಿಸಿದರು.

ಆದರೆ ಮತ್ತೊಂದೆಡೆ ರಾಹುಲ್ ಅಬ್ಬರ ಶುರುವಾಗಿತ್ತು. ಪರಿಣಾಮ 18ನೇ ಓವರ್​ ವೇಳೆಗೆ ಪಂಜಾಬ್ ಕಿಂಗ್ಸ್ ತಂಡದ ಮೊತ್ತವು 200ರ ಗಡಿದಾಟಿತು. ಈ ವೇಳೆ ಕ್ರೀಸ್​ಗಿಳಿದ ನಿಕೋಲಸ್ ಪೂರನ್ ಶೂನ್ಯಕ್ಕೆ ಔಟಾಗುವ ಮೂಲಕ ನಿರಾಸೆ ಮೂಡಿಸಿದರು.

ಕೊನೆಯ ಎರಡು ಓವರ್​ಗಳಿರುವಾಗ ರಾಹುಲ್ ಜೊತೆಗೂಡಿದ ಶಾರುಖ್ ಖಾನ್ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. ಈ ಜೋಡಿ 19ನೇ ಓವರ್​ನಲ್ಲಿ 15 ರನ್​ ಕಲೆಹಾಕಿತು. ಚೇತನ್ ಸಕರಿಯಾ ಎಸೆದ ಅಂತಿಮ ಓವರ್​ನ ಮೊದಲ ಎಸೆತದಲ್ಲಿ ರಾಹುಲ್ ಬೌಂಡರಿ ಬಾರಿಸಿದರು. 2ನೇ ಎಸೆತದಲ್ಲಿ ಬೌಂಡರಿ ಲೈನ್​ನಲ್ಲಿ ರಾಹುಲ್ ತೆವಾಠಿಯಾ ಹಿಡಿದ ಅತ್ಯುತ್ತಮ ಕ್ಯಾಚ್​ನಿಂದ ಕೆಎಲ್ ರಾಹುಲ್ ಔಟಾದರು. 50 ಎಸೆತಗಳನ್ನು ಎದುರಿಸಿದ್ದ ರಾಹುಲ್ 5 ಭರ್ಜರಿ ಸಿಕ್ಸ್​ ಹಾಗೂ 7 ಬೌಂಡರಿಗಳೊಂದಿಗೆ 91 ರನ್​ ಬಾರಿಸಿ ಮಿಂಚಿದರು.

ಕೊನೆಯ ಓವರ್​ನಲ್ಲಿ ಕೇವಲ 5 ರನ್​ಗಳಿಸುವುದರೊಂದಿಗೆ ಪಂಜಾಬ್ ಕಿಂಗ್ಸ್ ತಂಡವು ನಿಗದಿತ 20 ಓವರ್​ನಲ್ಲಿ 6 ವಿಕೆಟ್ ನಷ್ಟಕ್ಕೆ 221 ರನ್​ಗಳನ್ನು ಪೇರಿಸಿತು. RR ಪರ 4 ಓವರ್​ನಲ್ಲಿ 31 ರನ್​ ನೀಡಿ 3 ವಿಕೆಟ್ ಕಬಳಿಸಿದ ಯುವ ವೇಗಿ ಚೇತನ್ ಸಕರಿಯಾ ಯಶಸ್ವಿ ಬೌಲರ್​ ಎನಿಸಿಕೊಂಡರು.
Published by: zahir
First published: April 12, 2021, 9:37 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories