news18-kannada Updated:February 23, 2021, 7:32 PM IST
uthappa
ಇಂಡಿಯನ್ ಪ್ರೀಮಿಯರ್ ಲೀಗ್ ಸಿದ್ದತೆಗಳು ಶುರುವಾಗಿದೆ. ಈಗಾಗಲೇ ಎಲ್ಲಾ ಫ್ರಾಂಚೈಸಿಗಳು ತಮ್ಮ ತಂಡಗಳನ್ನು ಘೋಷಿಸಿಕೊಂಡಿದ್ದು, ಈ ಬಾರಿ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಇಬ್ಬರು ಕನ್ನಡಿಗರು ಸ್ಥಾನ ಪಡೆದಿದ್ದಾರೆ. ಅದರಲ್ಲೂ ಅನುಭವಿ ಆಟಗಾರ ರಾಬಿನ್ ಉತ್ತಪ್ಪ ಅವರನ್ನು ಸಿಎಸ್ಕೆ ತಂಡವು ಹರಾಜಿಗೂ ಮುನ್ನ ಟ್ರೇಡಿಂಗ್ ಮೂಲಕ ಖರೀದಿಸಿತ್ತು. ಕಳೆದ ಸೀಸನ್ನಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆಡಿದ್ದ ಉತ್ತಪ್ಪ 12 ಪಂದ್ಯಗಳಿಂದ 196 ರನ್ಗಳಿಸಿದ್ದರು.
ಇದೀಗ ಧೋನಿ ಪಡೆಗೆ ಎಂಟ್ರಿ ಕೊಟ್ಟಿರುವ ಕೊಡಗಿನ ಕುವರ ತಮ್ಮ ಹಿಂದಿನ ಬ್ಯಾಟಿಂಗ್ ಫಾರ್ಮ್ನ್ನು ಮರಳಿ ಪಡೆಯುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಹೊಸ ತಂಡದ ಪರ ಆಡುತ್ತಿರುವ ಬಗ್ಗೆ ಮಾತನಾಡಿರುವ ಉತ್ತಪ್ಪ, ಚೆನ್ನೈ ಸೂಪರ್ ಕಿಂಗ್ಸ್ ಪರ ಆಡುವ ಬಯಕೆ ಈ ಬಾರಿ ಈಡೇರಲಿದೆ. ಜೊತೆಗೆ ಕ್ರಿಕೆಟ್ಗೆ ವಿದಾಯ ಘೋಷಿಸುವುದಕ್ಕೂ ಮುನ್ನ ಎಂಎಸ್ ಧೋನಿ ನಾಯಕತ್ವದಲ್ಲಿ ಮತ್ತೊಮ್ಮೆ ಟ್ರೋಫಿ ಗೆಲ್ಲುವ ಬಯಕೆಯನ್ನೂ ಹೊರಹಾಕಿದರು.
ಸಿಎಸ್ಕೆ ಪರ ಆಡುವುದು ನನ್ನ ಆಸೆಗಳಲ್ಲಿ ಒಂದಾಗಿತ್ತು. ಇದೀಗ 12 ರಿಂದ 13 ವರ್ಷಗಳ ಬಳಿಕ ಮತ್ತೆ ಧೋನಿ ನಾಯಕತ್ವದ ಅಡಿಯಲ್ಲಿ ಆಡುವ ಅವಕಾಶ ದೊರೆತಿದೆ. ವೃತ್ತಿ ಜೀವನಕ್ಕೆ ವಿದಾಯ ಹೇಳುವ ಮುನ್ನ ಧೋನಿ ಅವರೊಂದಿಗೆ ಐಪಿಎಲ್ ಟ್ರೋಫಿ ಗೆಲ್ಲಬೇಕು ಎಂದು ಉತ್ತಪ್ಪ ತಿಳಿಸಿದ್ದಾರೆ.
2007ರಲ್ಲಿ ಎಂಎಸ್ ಧೋನಿ ನಾಯಕತ್ವದಲ್ಲಿ ರಾಬಿನ್ ಉತ್ತಪ್ಪ, ಟಿ20 ವಿಶ್ವಕಪ್ ಆಡಿದ್ದರು. ಅಲ್ಲದೆ ಇದೇ ವೇಳೆ ಭಾರತ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತು. ಇದೀಗ ಉತ್ತಪ್ಪ ಹಾಗೂ ಧೋನಿ ಕ್ರಿಕೆಟ್ ಜೀವನಕ್ಕೆ ವಿದಾಯ ಹೇಳುವ ಹೊಸ್ತಿಲಲ್ಲಿದ್ದಾರೆ. ಹೀಗಾಗಿ ಧೋನಿ ಅವರೊಂದಿಗೆ ಮತ್ತೊಮ್ಮೆ ಟ್ರೋಫಿ ಗೆಲ್ಲುವ ಆಸೆಯನ್ನು ಉತ್ತಪ್ಪ ವ್ಯಕ್ತಪಡಿಸಿದ್ದಾರೆ.
Published by:
zahir
First published:
February 23, 2021, 7:32 PM IST