RCB vs KKR- ಕೆಕೆಆರ್ ವಿರುದ್ಧದ ಪಂದ್ಯಕ್ಕೆ ಆರ್​ಸಿಬಿ ಆಟಗಾರರಿಗೆ ನೀಲಿ ಬಟ್ಟೆ; ಇದರ ಹಿಂದಿದೆ ಮಾನವೀಯತೆ

Blue Jersey- ಕೆಕೆಆರ್ ವಿರುದ್ದದ ಸೆ. 20ರಂದು ನಡೆಯಲಿರುವ ಪಂದ್ಯಕ್ಕೆ ಆರ್​ಸಿಬಿ ತಂಡ ನೀಲಿ ಬಣ್ಣದ ಜೆರ್ಸಿ ಧರಿಸಲಿದೆ. ಕೋವಿಡ್ ವಾರಿಯರ್ಗಳನ್ನ ಗೌರವಿಸುವ ದೃಷ್ಟಿಯಿಂದ ಪಿಪಿಇ ಕಿಟ್ನ ಬಣ್ಣವಿರುವ ದಿರಿಸನ್ನ ಆರ್ಸಿಬಿ ಆಟಗಾರರು ತೊಡಲಿದ್ದಾರೆ.

ಆರ್​ಸಿಬಿ ತಂಡ

ಆರ್​ಸಿಬಿ ತಂಡ

 • Cricketnext
 • Last Updated :
 • Share this:
  ಸೆಪ್ಟೆಂಬರ್ 20ರಂದು ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಪಂದ್ಯದಲ್ಲಿ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡದ ಆಟಗಾರರು ನೀಲಿ ಜೆರ್ಸಿ ಧರಿಸಿ ಆಡಲಿದ್ದಾರೆ. ಇದಕ್ಕೆ ಕಾರಣವೂ ಇದೆ. ರಾಜ್ಯ ಹಾಗೂ ಇಡೀ ದೇಶವನ್ನು ಬಾಧಿಸಿದ್ದ ಕೋವಿಡ್ ರೋಗದ ವಿರುದ್ಧ ತಮ್ಮ ಜೀವದ ಹಂಗು ತೊರೆದು ಹೋರಾಡಿದ ಫ್ರಂಟ್​ಲೈನ್ ಆರೋಗ್ಯ ಕಾರ್ಯಕರ್ತರಿಗೆ ನೈತಿಕ ಬೆಂಬಲವಾಗಿ ಆರ್​ಸಿಬಿ ಆಟಗಾರರು ಆ ಒಂದು ಪಂದ್ಯದಲ್ಲಿ ಬ್ಲೂ ಜೆರ್ಸಿ ಧರಿಸಲಿದ್ಧಾರೆ. ಫ್ರಂಟ್ ಲೈನ್ ವಾರಿಯರ್​ಗಳು ಧರಿಸುವ ಪಿಪಿಇ ಕಿಟ್ ಬಣ್ಣವನ್ನು ಹೋಲುವ ಬ್ಲೂ ಜೆರ್ಸಿಯಲ್ಲಿ ಆರ್​ಸಿಬಿ ಆಟಗಾರರು ಆವತ್ತು ಮಿಂಚಲಿದ್ಧಾರೆ. ಈ ವಿಷಯ ಸ್ವತಃ ಆರ್​ಸಿಬಿ ಫ್ರಾಂಚೈಸಿಯಿಂದಲೇ ಟ್ವೀಟ್ ಆಗಿದೆ.

  ಕೆಲ ವರ್ಷಗಳಿಂದಲೂ ಆರ್​ಸಿಬಿ ಐಪಿಎಲ್ ಟೂರ್ನಿಯ ಯಾವುದಾದರೂ ಒಂದು ಪಂದ್ಯದಲ್ಲಿ ಹಸಿರು ಜೆರ್ಸಿ ಧರಿಸುವ ಪರಿಪಾಟ ಬೆಳೆಸಿಕೊಂಡು ಬಂದಿತ್ತು. ಪರಿಸರಕ್ಕೆ ಕಾಳಜಿ ತೋರುವ ಉದ್ದೇಶದಿಂದ ಗ್ರೀನ್ ಜೆರ್ಸಿ ಧರಿಸಲಾಗುತ್ತಿತ್ತು. ಈ ವರ್ಷ ಕೋವಿಡ್ ಪಿಡುಗು ಮನುಕುಲವನ್ನು ಬಾಧಿಸುತ್ತಿರುವುದರಿಂದ ಅದರ ವಿರುದ್ಧ ಹೋರಾಡುತ್ತಿರುವ ಆರೋಗ್ಯ ಕಾರ್ಯಕರ್ತರಿಗೆ ಸಾಂಕೇತಿಕ ಬೆಂಬಲ ನೀಡಲು ರಾಯಲ್ ಚಾಲೆಂಜರ್ಸ್ ಬ್ಲೂ ಜೆರ್ಸಿಗೆ ನಿರ್ಧರಿಸಿದೆ. “ಕೋವಿಡ್ ಸಾಂಕ್ರಾಮಿಕ ಪಿಡುಗಿನ ವಿರುದ್ಧ ನಿಸ್ವಾರ್ಥತೆಯಿಂದ ಹಾಗೂ ಅವಿರತವಾಗಿ ಕೆಲಸ ಮಾಡಿರುವ ಫ್ರಂಟ್​ಲೈನ್ ವಾರಿಯರ್ಸ್​ಗೆ ಸಹಾಯ ಮಾಡಲು ಮತ್ತು ಬೆಂಬಲ ನೀಡಲು ನಾವು ಒಗ್ಗೂಡಿದ್ದೇವೆ” ಎಂದು #1Team1Fight! ಅಂತ ಹ್ಯಾಷ್ ಟ್ಯಾಗ್ ಹಾಕಿ ಆರ್​ಸಿಬಿ ಟ್ವೀಟ್ ಮಾಡಿದೆ.


  ಕೋವಿಡ್ ಕಾರಣಕ್ಕೆ ಈ ವರ್ಷ ಭಾರತದಲ್ಲಿ ಆರಂಭಗೊಂಡಿದ್ದ ಐಪಿಎಲ್ ಕ್ರಿಕೆಟ್ ಟೂರ್ನಿ ಅರ್ಧದಲ್ಲೇ ಸ್ಥಗಿತಗೊಂಡಿತ್ತು. ಬಳಿಕ ಯುಎಇಯ ದುಬೈ ಮೊದಲಾದ ನಗರಗಳಲ್ಲಿ ಟೂರ್ನಿಯ ಉಳಿದ ಪಂದ್ಯಗಳನ್ನ ಆಡಿಸಲು ನಿರ್ಧಾರವಾಗಿದೆ. ಇದೇ ಸೆ. 17ರಿಂದ ಪಂದ್ಯಗಳು ನಡೆಯಲಿವೆ. ಮುಂಬೈ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಈ ಎರಡನೇ ಲೆಗ್​ನ ಮೊದಲ ಪಂದ್ಯವನ್ನ ಆಡಲಿವೆ. ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವ ಬೆಂಗಳೂರು ರಾಯಲ್ ಚಾಲೆಂಜರ್ಸ್ ತನ್ನ ಮೊದಲ ಪಂದ್ಯವನ್ನು ಕೆಕೆಆರ್​ಗೆ ಸವಾಲು ಹಾಕುತ್ತಿದೆ.

  ಇದನ್ನೂ ಓದಿ: Uwe Hohn| ದೇಶದ ಕ್ರೀಡಾ ವ್ಯವಸ್ಥೆಯ ವಿರುದ್ಧ ಟೀಕೆ ಮಾಡಿದ್ದೇ ಮುಳುವಾಯ್ತೆ?; ಭಾರತದ ಜಾವೆಲಿನ್ ಕೋಚ್ ಉವೆ ಹಾನ್ ವಜಾ!

  ಆರ್​ಸಿಬಿ ತಂಡ ಕೆಲ ಸ್ಟಾರ್ ಆಟಗಾರರು ಅಲಭ್ಯರಿದ್ಧಾರೆ. ಅಡಂ ಝಂಪಾ, ಡೇನಿಯಲ್ ಸ್ಯಾಮ್ಸ್, ಫಿನ್ ಅಲನ್ ಮತ್ತು ಕೇನ್ ರಿಚರ್ಡ್ಸನ್ ಅವರು ಎರಡನೇ ಲೆಗ್​ನಲ್ಲಿ ಆಡುತ್ತಿಲ್ಲ. ವಾಷಿಂಗ್ಟನ್ ಸುಂದರ್ ಗಾಯದ ಕಾರಣ ಆಡುತ್ತಿಲ್ಲ. ಇವರಿಗೆ ಬದಲಾಗಿ ಬೆಂಗಳೂರು ತಂಡ ಕೆಲ ಉತ್ತಮ ಆಟಗಾರರನ್ನ ಸೆಳೆದುಕೊಂಡಿದೆ. ಟಿಮ್ ಡೇವಿಡ್, ಜಾರ್ಜ್ ಗಾರ್ಟನ್, ವನಿಂದು ಹಸರಂಗ, ದುಷ್ಮಂತ ಚಮೀರಾ, ಆಕಾಶ್ ದೀಪ್ ಅವರು ಆರ್​ಸಿಬಿ ಪಡೆಯನ್ನ ಸೇರಿರುವ ಪ್ರತಿಭಾವಂತರು.

  ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಸದ್ಯಕ್ಕೆ ಆರ್​ಸಿಬಿ ಬಲಶಾಲಿಯಾಗಿ ಕಾಣುತ್ತಿದೆ. ಕರ್ನಾಟಕದ ದೇವದತ್ ಪಡಿಕ್ಕಲ್ ಮತ್ತು ಪವನ್ ದೇಶಪಾಂಡೆ ಅವರು ತಂಡದಲ್ಲಿದ್ದಾರೆ. ಎಬಿ ಡೀವಿಲಿಯರ್ಸ್, ಗ್ಲೆನ್ ಮ್ಯಾಕ್ಸ್​ವೆಲ್, ಕೈಲೆ ಜೇಮೀಸನ್, ಮೊಹಮ್ಮದ್ ಸಿರಾಜ್, ಹರ್ಷಲ್ ಪಟೇಲ್, ಡೇನಿಯಲ್ ಕ್ರಿಸ್ಟಿಯನ್, ಟಿಮ್ ಡೇವಿಡ್ ಅವರು ಬೆಂಗಳೂರಿನ ಸ್ಟಾರ್ ಆಟಗಾರರೆನಿಸಿದ್ದಾರೆ.

  (ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ಕರ್ನಾಟಕ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಅನಗತ್ಯವಾಗಿ ಯಾರೂ ಮನೆಯಿಂದ ಹೊರಗೆ ಬಾರದೆ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕಿದೆ. ಹಾಗೂ ಗುಂಪುಗೂಡುವುದನ್ನು ಆದಷ್ಟು ನಿಯಂತ್ರಿಸಬೇಕಿದೆ. ಸರ್ಕಾರ ಕಾಲಕಾಲಕ್ಕೆ ಹೊರಡಿಸುತ್ತಿರುವ ಕೊರೋನಾ ಮಾರ್ಗಸೂಚಿಗಳನ್ನು ಪ್ರತಿಯೊಬ್ಬರೂ ಕಡ್ಡಾಯವಾಗಿ ಪಾಲಿಸಬೇಕಿದೆ.)
  Published by:Vijayasarthy SN
  First published: