IPL 2021 - ಸತತ ಒಂಬತ್ತನೇ ವರ್ಷಕ್ಕೆ ಕಾಲಿಟ್ಟಿತು ಮುಂಬೈನ ‘ಮೊದಲ’ ಸೋಲಿನ ಪರಂಪರೆ
2014ರಿಂದ ಪ್ರಾರಂಭವಾಗಿ ಈ ವರ್ಷವೂ ಒಳಗೊಂಡಂತೆ ಸತತ 9 ಸೀಸನ್ನ ಐಪಿಎಲ್ ಟೂರ್ನಿಗಳಲ್ಲಿ ಮುಂಬೈ ಇಂಡಿಯನ್ಸ್ ತಂಡ ತನ್ನ ಮೊದಲ ಪಂದ್ಯವನ್ನ ಸೋಲುತ್ತಾ ಬಂದಿದೆ. ಈ ಹಂತದಲ್ಲಿ ಐದು ಬಾರಿ ಪ್ರಶಸ್ತಿಯನ್ನೂ ಜಯಿಸಿದೆ.
ಬೆಂಗಳೂರು: ನಿನ್ನೆ ರಾತ್ರಿ ಚೆನ್ನೈನ ಚೇಪಾಕ್ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಬೆಂಗಳೂರು ರಾಯಲ್ ಚಾಲೆಂಜರ್ಸ್ ಎದುರು ಮುಂಬೈ ಇಂಡಿಯನ್ಸ್ ಮಂಡಿಯೂರಿತು. ಹಲವು ಏರಿಳಿತಗಳನ್ನ ಕಂಡ ಈ ಪಂದ್ಯದಲ್ಲಿ ಆರ್ಸಿಬಿ ರೋಚಕ ಹೋರಾಟ ತೋರಿ 2 ವಿಕೆಟ್ಗಳಿಂದ ಜಯ ಗಳಿಸಿತು. ಆದರೆ, ಐದು ಬಾರಿ ಚಾಂಪಿಯನ್ ಆಗಿರುವ ಮುಂಬೈ ಇಂಡಿಯನ್ಸ್ ಈ ಸೋಲಿನಲ್ಲೂ ತನ್ನ ಒಂದು ವಿನೂತನ ದಾಖಲೆಯನ್ನ ಅಬಾಧಿತವಾಗಿ ಮುಂದುವರಿಸಿದೆ. ಕಳೆದ ಎಂಟು ಐಪಿಎಲ್ ಸೀಸನ್ಗಳಿಂದ ಮುಂಬೈ ಇಂಡಿಯನ್ಸ್ ತಂಡ ಟೂರ್ನಿಯ ತನ್ನ ಮೊದಲ ಪಂದ್ಯದಲ್ಲಿ ಸೋಲುತ್ತಾ ಬಂದಿದೆ. ಅದೀಗ ಒಂಬತ್ತನೇ ಸೀಸನ್ನಲ್ಲೂ ಮುಂದುವರಿದಿದೆ.
2014ರಲ್ಲಿ ಮುಂಬೈ ಇಂಡಿಯನ್ಸ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೋತಿತ್ತು. ಅಲ್ಲಿಂದ ಮುಂಬೈನ ಮೊದಲ ಪಂದ್ಯದ ಸೋಲಿನ ಪರಂಪರೆ ಅಬಾಧಿತವಾಗಿ ಸಾಗುತ್ತಾ ಬಂದಿದೆ. ಇಲ್ಲಿ ಗಮನಿಸಬೇಕಾದ ಇನ್ನೊಂದು ಸಂಗತಿ ಎಂದರೆ ಮುಂಬೈ ಇಂಡಿಯನ್ಸ್ ಕಳೆದ ಎಂಟು ಸೀಸನ್ನಲ್ಲಿ ಮೊದಲ ಪಂದ್ಯಗಳಲ್ಲಿ ಸೋಲಿನ ಹೊರತಾಗಿಯೂ ಐದು ಬಾರಿ ಟ್ರೋಫಿ ಎತ್ತಿಹಿಡಿದಿದೆ. ನಿನ್ನೆ ಆರ್ಸಿಬಿ ಎದುರು ಪಂದ್ಯ ಸೋತ ಬಳಿಕ ಪಂದ್ಯೋತ್ತರ ಸಂವಾದದ ವೇಳೆ ಮಾತನಾಡುವಾಗ ರೋಹಿತ್ ಶರ್ಮಾ ಕೂಡ ಇದೇ ವಿಚಾರವನ್ನು ಪ್ರಸ್ತಾಪಿಸಿದರು. ಮೊದಲ ಪಂದ್ಯವನ್ನ ಗೆಲ್ಲುವುದಕ್ಕಿಂತ ಚಾಂಪಿಯನ್ಶಿಪ್ ಗೆಲ್ಲುವುದು ಹೆಚ್ಚು ಮಹತ್ವದ್ದು ಎಂದು ಅವರು ಹೇಳಿದರು.
ಅವರ ಪ್ರಕಾರ ಟೂರ್ನಿಯಲ್ಲಿ ಪೂರ್ಣಪ್ರಮಾಣದಲ್ಲಿ ಆಟಗಾರರು ಕುದುರಿಕೊಳ್ಳಲು ಒಂದಷ್ಟು ಸಮಯ ಬೇಕು. ಹೀಗಾಗಿ, ಆರಂಭಿಕ ಪಂದ್ಯಗಳಲ್ಲಿ ಕೆಲ ಸೋಲು ಕಾಣುವುದು ಸಹಜ. ಮೇಲಾಗಿ ಈ ಟೂರ್ನಿಯಲ್ಲಿ ಆಡುತ್ತಿರುವ ಮುಂಬೈ ಇಂಡಿಯನ್ಸ್ ತಂಡದಲ್ಲಿ ಕೆಲ ಹೊಸಬರಿದ್ದಾರೆ. ಹಲವು ಆಟಗಾರರು ದೀರ್ಘ ಕಾಲದಿಂದ ಅಂತರರಾಷ್ಟ್ರೀಯ ಕ್ರಿಕೆಟ್ ಆಡುತ್ತಿದ್ಧಾರೆ. ತಂಡದೊಳಗೆ ಇವರು ಪರಸ್ಪರ ಅರಿಯಲು ನಮಗೆ ಸಮಯಾವಕಾಶ ಕಡಿಮೆ ಇತ್ತು ಎಂದು ರೋಹಿತ್ ಶರ್ಮಾ ಅಭಿಪ್ರಾಯಪಟ್ಟರು.
ನಿನ್ನೆಯ ಪಂದ್ಯದಲ್ಲಿ ಹರ್ಷಲ್ ಪಟೇಲ್ ಅವರ ಅಮೋಘ ಬೌಲಿಂಗ್ ಪ್ರದರ್ಶನ ಹಾಗೂ ಎಬಿ ಡೀವಿಲಿಯರ್ಸ್ ಅವರ ಅದ್ಭುತ ಬ್ಯಾಟಿಂಗ್ ಪ್ರದರ್ಶನದ ಸಹಾಯದಿಂದ ಮುಂಬೈ ಇಂಡಿಯನ್ಸ್ ವಿರುದ್ಧ ಆರ್ಸಿಬಿ ಗೆಲುವು ಸಾಧಿಸಿ ಬೀಗಿತ್ತು. ಮುಂಬೈ ಇಂಡಿಯನ್ಸ್ ಮೊದಲು ಬ್ಯಾಟ್ ಮಾಡಿ 159 ರನ್ ಗಳಿಸಿತು. ದೊಡ್ಡ ಮೊತ್ತ ಕಲೆಹಾಕುವ ಸನ್ನಾಹದಲ್ಲಿದ್ದ ಮುಂಬೈಗೆ ಮೂಗುದಾರ ಹಾಕಿದವರು ಹರ್ಷಲ್ ಪಟೇಲ್. ಇವರು ಮೊದಲ ಬಾರಿಗೆ 5 ವಿಕೆಟ್ ಪಡೆದು ದಾಖಲೆ ಬರೆದರು. ವೇಗಿ ಮೊಹಮ್ಮದ್ ಸಿರಾಜ್ ವಿಕೆಟ್ ಗಳಿಸದಿದ್ದರೂ ಕೇವಲ 22 ರನ್ನಿತ್ತು ಬ್ಯಾಟ್ಸ್ಮನ್ಗಳ ಮೇಲೆ ಒತ್ತಡ ತಂದರು.
ಇನ್ನು, ಗೆಲ್ಲಲು 160 ರನ್ ಗುರಿ ಹೊತ್ತ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇನ್ನೇನು ಗೆದ್ದೇ ಬಿಡುತ್ತದೆ ಎಂದು ಭಾವಿಸುವಷ್ಟರಲ್ಲಿ ಮಿಂಚಿನಂತೆ ವಿಕೆಟ್ ಕಳೆದುಕೊಂಡು ಸೋಲಿನ ಅಂಚಿಗೂ ಬಂದಿತ್ತು. ಆದರೆ, ಎಬಿ ಡೀವಿಲಿಯರ್ಸ್ ಎಂದಿನಂತೆ ಆರ್ಸಿಬಿಗೆ ಮತ್ತೊಮ್ಮೆ ಆಪದ್ಬಾಂಧವ ಎನಿಸಿದರು. ಬಹುತೇಕ ಗೆಲುವಿನ ದಡದ ಬಳಿ ಬಂದು ರನ್ನೌಟ್ ಆದಾಗಲೂ ಆರ್ಸಿಬಿ ಸೋಲಿನ ದವಡೆಯಲ್ಲೇ ಇತ್ತು. ಆದರೆ, ಅಂತಿಮವಾಗಿ ಹೇಗೋ ಈಜಿ ದಡ ಸೇರಿ ಬೆಂಗಳೂರಿಗರು ಸಂಭ್ರಮಿಸಿದರು.
Published by:Vijayasarthy SN
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ