HOME » NEWS » Sports » CRICKET IPL 2021 LIVE SCORE MI VS RCB LIVE CRICKET SCORE RCB WON BY 2 WICKETS ZP

IPL 2021MI vs RCB: ಹರ್ಷಲ್ ಪರಾಕ್ರಮ: ಎಬಿಡಿ ಅಬ್ಬರ: ಬಲಿಷ್ಠ ಮುಂಬೈಗೆ ಸೋಲುಣಿಸಿದ RCB

ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಎಬಿ ಡಿವಿಲಿಯರ್ಸ್, ಗ್ಲೆನ್ ಮ್ಯಾಕ್ಸ್ ವೆಲ್, ಹರ್ಷಲ್ ಪಟೇಲ್, ಡೇನಿಯಲ್ ಕ್ರಿಶ್ಚಿಯನ್, ವಾಷಿಂಗ್ಟನ್ ಸುಂದರ್, ಕೈಲ್ ಜೇಮಿಸನ್, ಮೊಹಮ್ಮದ್ ಸಿರಾಜ್, ಯುಜ್ವೇಂದ್ರ ಚಹಲ್, ಶಬಾಜ್ ಅಹ್ಮದ್

news18-kannada
Updated:April 9, 2021, 11:30 PM IST
IPL 2021MI vs RCB: ಹರ್ಷಲ್ ಪರಾಕ್ರಮ: ಎಬಿಡಿ ಅಬ್ಬರ: ಬಲಿಷ್ಠ ಮುಂಬೈಗೆ ಸೋಲುಣಿಸಿದ RCB
AB de Villiers
  • Share this:
ಚೆನ್ನೈನಲ್ಲಿ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್‌ 14 ನೇ ಸೀಸನ್​ನ ಮೊದಲ ಪಂದ್ಯದಲ್ಲಿ  ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ 2 ವಿಕೆಟ್​ಗಳ ರೋಚಕ ಜಯ ಸಾಧಿಸಿದೆ. ಮುಂಬೈ ನೀಡಿದ 160 ರನ್​ಗಳ ಟಾರ್ಗೆಟ್​ನ್ನು ಬೆನ್ನತ್ತಿದ ಆರ್​ಸಿಬಿ ಕೊನೆಯ ಓವರ್​ನ 6ನೇ ಎಸೆತದಲ್ಲಿ ಗುರಿ ಮುಟ್ಟುವ ಸೀಸನ್​ನ ಮೊದಲ ಜಯ ತನ್ನದಾಗಿಸಿತು.

ಇದಕ್ಕೂ ಮುನ್ನ ಮುಂಬೈ ನೀಡಿದ ಸಾಧಾರಣ  ಗುರಿಯನ್ನು ಬೆನ್ನತ್ತುತ್ತಿರುವ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡಕ್ಕೆ ಆರಂಭಿಕರಾಗಿ ಕಣಕ್ಕಿಳಿದ ವಾಷಿಂಗ್ಟನ್ ಸುಂದರ್ ಹಾಗೂ ವಿರಾಟ್ ಕೊಹ್ಲಿ ಬಿರುಸಿನ ಆರಂಭ ಒದಗಿಸಿದರು. ಮೊದಲ ಮೂರು ಓವರ್​ನಲ್ಲೇ ತಂಡದ ಮೊತ್ತವನ್ನು 35 ಕ್ಕೇರಿಸಿದರು. ಆದರೆ ಕೃನಾಲ್ ಪಾಂಡ್ಯ ಎಸೆದ ನಾಲ್ಕನೇ ಓವರ್​ನ 2ನೇ ಎಸೆತದಲ್ಲಿ ಸುಲಭ ಕ್ಯಾಚ್ ನೀಡಿದ ಸುಂದರ್ (10) ಹೊರ ನಡೆದರು.

ಇದರ ಬೆನ್ನಲ್ಲೇ ಚೊಚ್ಚಲ ಪಂದ್ಯವಾಡುತ್ತಿರುವ ರಜತ್ ಪಾಟಿದಾರ್ (8) ಟ್ರೆಂಟ್ ಬೌಲ್ಟ್ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆಗಿ ಪೆವಿಲಿಯನ್ ಕಡೆ ಹೆಜ್ಜೆ ಹಾಕಿದರು. ಈ ಹಂತದಲ್ಲಿ ಜೊತೆಗೂಡಿದ ವಿರಾಟ್ ಕೊಹ್ಲಿ-ಗ್ಲೆನ್ ಮ್ಯಾಕ್ಸ್​ವೆಲ್ ಎಚ್ಚರಿಕೆಯ ಆಟವಾಡಿದರು. ಪರಿಣಾಮ 40 ಎಸೆತಗಳಲ್ಲಿ 50 ರನ್​ಗಳ ಜೊತೆಯಾಟ ಮೂಡಿಬಂತು.

ಈ ವೇಳೆ ಜಸ್​ಪ್ರೀತ್ ಬುಮ್ರಾ ಎಸೆತದಲ್ಲಿ ಆರ್​ಸಿಬಿ ನಾಯಕ ವಿರಾಟ್ ಕೊಹ್ಲಿ (33) ಎಲ್​ಬಿಡಬ್ಲ್ಯೂ ಆಗಿ ಹೊರನಡೆದರು. ಇನ್ನು 14ನೇ ಓವರ್​ನಲ್ಲಿ ತಂಡದ ಮೊತ್ತವನ್ನು 100ರ ಗಡಿದಾಟಿಸಿದ ಗ್ಲೆನ್ ಮ್ಯಾಕ್ಸ್​ವೆಲ್ ಅಪಾಯಕಾರಿಯಾಗುವ ಸೂಚನೆ ನೀಡಿದ್ದರು. ಆದರೆ ಈ ವೇಳೆ ಕ್ರಿಸ್ ಲಿನ್ ಹಿಡಿದ ಉತ್ತಮ ಕ್ಯಾಚ್​​ಗೆ 28 ಎಸೆತಗಳಲ್ಲಿ 39 ರನ್ ಬಾರಿಸಿದ್ದ ಮ್ಯಾಕ್ಸ್​ವೆಲ್ ಬಲಿಯಾದರು. ಇದರ ಬೆನ್ನಲ್ಲೇ ಶಬಾಜ್ ಅಹ್ಮದ್ (1) ವಿಕೆಟ್ ಪಡೆಯುವ ಮೂಲಕ 15ನೇ ಓವರ್​ನಲ್ಲಿ ಜಾನ್ಸನ್ ಮುಂಬೈಗೆ ಎರಡು ಯಶಸ್ಸು ತಂದುಕೊಟ್ಟರು.

ಕೊನೆಯ ನಾಲ್ಕು ಓವರ್​ನಲ್ಲಿ ಆರ್​ಸಿಬಿಗೆ ಗೆಲ್ಲಲು 39 ರನ್​ಗಳ ಅವಶ್ಯಕತೆಯಿತ್ತು. ಈ ಹಂತದಲ್ಲಿ ರೋಹಿತ್ ಶರ್ಮಾ ಚೆಂಡನ್ನು ಜಸ್​ಪ್ರೀತ್ ಬುಮ್ರಾ ಕೈಗೆ ನೀಡಿದರು. 17ನೇ ಓವರ್​ನ ಮೂರನೇ ಎಸೆತದಲ್ಲಿ ಡೇನಿಯಲ್ ಕ್ರಿಶ್ಚಿಯನ್ ಬಾರಿಸಿದ ಚೆಂಡನ್ನು ರಾಹುಲ್ ಚಹರ್ ಅದ್ಭುತವಾಗಿ ಹಿಡಿಯುವ ಮೂರನೇ ಮತ್ತೊಂದು ವಿಕೆಟ್ ಪತನಕ್ಕೆ ಕಾರಣದರು. ಈ ಓವರ್​ನಲ್ಲಿ ಬುಮ್ರಾ ನೀಡಿದ್ದು ಕೇವಲ 5 ರನ್ ಮಾತ್ರ.

ಪರಿಣಾಮ ಕೊನೆಯ ಮೂರು ಓವರ್​ನಲ್ಲಿ ಆರ್​ಸಿಬಿಗೆ ಗೆಲ್ಲಲು  34 ರನ್​ಗಳು ಬೇಕಿತ್ತು.  ಟ್ರೆಂಟ್ ಬೌಲ್ಟ್ ಎಸೆದ 18ನೇ ಓವರ್​ನ ಮೊದಲ ಎಸೆತವನ್ನು ಎಬಿಡಿ ಸಿಕ್ಸರ್​ಗೆ ಅಟ್ಟಿದರು. 4ನೇ ಎಸೆತದಲ್ಲಿ ಬೌಂಡರಿ ಬಾರಿಸುವ ಮೂಲಕ ಗೆಲುವಿನ ಅಂತರವನ್ನು ತಗ್ಗಿಸಿದರು. ಅಲ್ಲದೆ ಬೌಲ್ಟ್ ಓವರ್​ನಲ್ಲಿ 15 ರನ್ ಕಲೆಹಾಕಿದರು. ಅದರಂತೆ ಕೊನೆಯ ಓವರ್​ನಲ್ಲಿ ಆರ್​ಸಿಬಿ ಜಯಗಳಿಸಲು 19 ರನ್​ ಕಲೆಹಾಕಬೇಕಿತ್ತು.

ಬುಮ್ರಾ ಎಸೆದ 19ನೇ ಓವರ್​ನ ಮೊದಲ ಎಸೆತದಲ್ಲೇ  ಎಬಿಡಿ ಬೌಂಡರಿ ಉತ್ತರ ನೀಡಿದರು. 2ನೇ ಎಸೆತದಲ್ಲಿ 2 ರನ್ ಓಡಿದರು. 3ನೇ ಎಸೆತದಲ್ಲಿ ಮತ್ತೊಂದು ಬೌಂಡರಿ. 4ನೇ ಎಸೆತದಲ್ಲಿ ಎಬಿಡಿ 1 ರನ್. ಐದನೇ ಎಸೆತದಲ್ಲಿ ಕೈಲ್ ಜೇಮಿಸನ್ (4) ರನೌಟ್ ಆದರು.ಕೊನೆಯ ಓವರ್​ನಲ್ಲಿ ಆರ್​ಸಿಬಿ 7 ರನ್​ಗಳ ಗುರಿ ಪಡೆಯಿತು. ಜಾನ್ಸನ್​ ಎಸೆದ ಅಂತಿಮ ಓವರ್​ನ ಮೊದಲ ಎಸೆತದಲ್ಲಿ ಎಬಿಡಿ 1 ರನ್​ಗಳಿಸಿದರೆ, 2ನೇ ಎಸೆತದಲ್ಲಿ ಹರ್ಷಲ್ ಪಟೇಲ್ 2 ರನ್ ಕಲೆಹಾಕಿದರು. 3ನೇ ಎಸೆತದಲ್ಲಿ 1 ರನ್ ತೆಗೆದು ಎಬಿಡಿಗೆ ಸ್ಟ್ರೈಕ್  ನೀಡಿದರು. 4ನೇ ಎಸೆತದಲ್ಲಿ 2 ರನ್​ ಕದಿಯುವ ತವಕದಲ್ಲಿದ್ದ ಎಬಿಡಿ (48) ರನೌಟ್​ಗೆ ಬಲಿಯಾದರು. ಕೊನೆಯ 2 ಎಸೆತಗಳಲ್ಲಿ 2 ರನ್​ಗಳ ಅವಶ್ಯಕತೆಯಿತ್ತು. 5ನೇ ಸಿರಾಜ್ 1 ರನ್ ತೆಗೆದರೆ, ಅಂತಿಮ ಎಸೆತದಲ್ಲಿ 1 ರನ್​ ಕಲೆಹಾಕುವ ಹರ್ಷಲ್ ಪಟೇಲ್ ಆರ್​ಸಿಬಿಗೆ ರೋಚಕ ಜಯ ತಂದುಕೊಟ್ಟರು.

ಆರ್​ಸಿಬಿ ಪರ  ಎಬಿ ಡಿವಿಲಿಯರ್ಸ್​ 27 ಎಸೆತಗಳಲ್ಲಿ 2 ಸಿಕ್ಸರ್​ ಹಾಗೂ 4 ಬೌಂಡರಿಗಳೊಂದಿಗೆ 48 ರನ್​ ಬಾರಿಸಿ ಗೆಲುವಿಗೆ ಪ್ರಮುಖ ಕಾರಣರಾದರು. ಇನ್ನು ಮುಂಬೈ ಪರ ಮಾರ್ಕೊ ಜಾನ್ಸನ್ ಹಾಗೂ ಜಸ್​ಪ್ರೀತ್ ಬುಮ್ರಾ ತಲಾ 1 ವಿಕೆಟ್ ಪಡೆದು ಗಮನ ಸೆಳೆದರು.

ಇದಕ್ಕೂ ಮುನ್ನ ಟಾಸ್ ಗೆದ್ದ ಆರ್​ಸಿಬಿ ನಾಯಕ ವಿರಾಟ್ ಕೊಹ್ಲಿ ಬೌಲಿಂಗ್ ಆಯ್ದುಕೊಂಡರು. ಅದರಂತೆ ಮೊಹಮ್ಮದ್ ಸಿರಾಜ್ 14ನೇ ಸೀಸನ್ ಐಪಿಎಲ್​ನ ಮೊದಲ ಓವರ್​ ಮಾಡಿದರೆ, ರೋಹಿತ್ ಶರ್ಮಾ ಮೊದಲ ಎಸೆತವನ್ನು ಎದುರಿಸಿದರು. ಈ ಓವರ್​ನಲ್ಲಿ ಕೇವಲ 5 ರನ್​ ನೀಡುವ ಮೂಲಕ ಸಿರಾಜ್ ಆರ್​ಸಿಬಿಗೆ ಉತ್ತಮ ಆರಂಭ ಒದಗಿಸಿದರು.

ಇನ್ನು ಚೊಚ್ಚಲ ಐಪಿಎಲ್ ಪಂದ್ಯವಾಡುತ್ತಿರುವ ಕೈಲ್ ಜೇಮಿಸನ್ ತಮ್ಮ ಮೊದಲ ಓವರ್​ನಲ್ಲಿ ಕೇವಲ 1 ರನ್​ ನೀಡಿ ಗಮನ ಸೆಳೆದರು. ಹಾಗೆಯೇ ಮೂರನೇ ಓವರ್​ನಲ್ಲಿ ಸಿರಾಜ್ 6 ರನ್​ ನೀಡಿದರು. 3ನೇ ಓವರ್​ನಲ್ಲಿ ಫೋರ್ ಹಾಗೂ ಚಹಲ್ ಎಸೆದ ನಾಲ್ಕನೇ ಓವರ್​ನಲ್ಲಿ ಸಿಕ್ಸ್ ಸಿಡಿಸುವ ಮೂಲಕ 14ನೇ ಸೀಸನ್ ಐಪಿಎಲ್​ನಲ್ಲಿ ರೋಹಿತ್ ಶರ್ಮಾ ಬೌಂಡರಿಗಳ ಖಾತೆ ತೆರೆದರು. ಇದರ ಬೆನ್ನಲ್ಲೇ ಕ್ರಿಸ್ ಲಿನ್ ನೀಡಿದ ತಪ್ಪು ರನ್ ಕರೆಯಿಂದ ರೋಹಿತ್ ಶರ್ಮಾ (19) ರನೌಟ್ ಆದರು.

ಈ ವೇಳೆ ಕ್ರೀಸ್​ಗೆ ಆಗಮಿಸಿದ ಸೂರ್ಯಕುಮಾರ್ ಯಾದವ್ ಜೇಮಿಸನ್ ಅವರ ಮೊದಲ ಎಸೆತದಲ್ಲೇ ಬೌಂಡರಿ ಬಾರಿಸಿ ಶುಭಾರಂಭ ಮಾಡಿದರು. ಅಲ್ಲದೆ ಪವರ್​ಪ್ಲೇ ಮುಕ್ತಾಯದ ವೇಳೆಗೆ ತಂಡದ ಮೊತ್ತವನ್ನು 41 ಕ್ಕೆ ತಂದು ನಿಲ್ಲಿಸಿದರು.

ಪವರ್​ಪ್ಲೇ ಮುಕ್ತಾಯದ ಬೆನ್ನಲ್ಲೇ 7ನೇ ಓವರ್​ನಲ್ಲಿ ಫೋರ್-ಸಿಕ್ಸ್ ಸಿಡಿಸುವ ಮೂಲಕ ಕ್ರಿಸ್ ಲಿನ್ 14 ರನ್​ ಕಲೆಹಾಕಿದರು. ಅಲ್ಲದೆ ಸೂರ್ಯಕುಮಾರ್ ಜೊತೆಗೂಡಿ ರನ್​ ಗತಿ ಹೆಚ್ಚಿಸಿದ ಲಿನ್ ಹತ್ತು ಓವರ್​ ಮುಕ್ತಾಯದ ವೇಳೆಗೆ ತಂಡದ ಮೊತ್ತವನ್ನು 86 ಕ್ಕೆ ತಂದು ನಿಲ್ಲಿಸಿದರು.

11ನೇ ಓವರ್​ನ ಕೊನೆಯ ಎಸೆತದಲ್ಲಿ ಸೂರ್ಯಕುಮಾರ್ ಯಾದವ್​ರನ್ನು (31) ಔಟ್​ ಮಾಡುವ ಮೂಲಕ ಆರ್​ಸಿಬಿ ತಂಡದ ಹೊಸ ವೇಗಿ ಕೈಲ್ ಜೇಮಿಸನ್ ತಮ್ಮ ಐಪಿಎಲ್ ವಿಕೆಟ್ ಖಾತೆ ತೆರೆದರು. 35 ಎಸೆತಗಳಲ್ಲಿ 4 ಬೌಂಡರಿ, 3 ಸಿಕ್ಸರ್​ ಸಿಡಿಸಿ ಅಪಾಯಕಾರಿಯಾಗಿ ಪರಿಣಮಿಸಿದ್ದ ಕ್ರಿಸ್ ಲಿನ್ (49) ಅವರನ್ನು ಅರ್ಧಶತಕ ಅಂಚಿನಲ್ಲಿ ಔಟ್ ಮಾಡುವಲ್ಲಿ ಸುಂದರ್ ಯಶಸ್ವಿಯಾದರು. ಈ ಹಂತದಲ್ಲಿ ಜೊತೆಗೂಡಿದ ಇಶಾನ್ ಕಿಶನ್ ಹಾಗೂ ಹಾರ್ದಿಕ್ ಪಾಂಡ್ಯ ಭರ್ಜರಿ ಬ್ಯಾಟಿಂಗ್ ನಡೆಸಿದರು. ಪರಿಣಾಮ 15 ಓವರ್ ಮುಕ್ತಾಯದ ವೇಳೆ ತಂಡದ ಮೊತ್ತ 130 ಗಡಿಗೆ ಬಂದು ನಿಂತಿತು.

ಇನ್ನು 16ನೇ ಓವರ್​ನಲ್ಲಿ ಹರ್ಷಲ್ ಪಟೇಲ್ ಎಸೆದ ಸ್ಪೋ ಫುಲ್​ಟಾಸ್ ಬಾಲ್​ನ್ನು ಗುರುತಿಸುವಲ್ಲಿ ಎಡವಿದ ಹಾರ್ದಿಕ್ ಪಾಂಡ್ಯ (13) ಎಲ್​ಬಿಡಬ್ಲ್ಯೂ ಆಗಿ ಹೊರ ನಡೆದರು. ಇನ್ನು ಮೊಹಮ್ಮದ್ ಸಿರಾಜ್ 17ನೇ ಓವರ್​ನಲ್ಲಿ 7 ರನ್​ಗಳೊಂದಿಗೆ 4 ಓವರ್​ನಲ್ಲಿ ಕೇವಲ 22 ರನ್ ನೀಡಿ ಗಮನ ಸೆಳೆದರು.

ಈ ನಡುವೆ ಇಶಾನ್ ಕಿಶನ್ ಎರಡು ಜೀವದಾನ ಪಡೆದರು. ಸಿರಾಜ್ ಓವರ್​ನಲ್ಲಿ ವಾಷಿಂಗ್ಟನ್ ಸುಂದರ್ ಇಶಾನ್ ಕಿಶನ್ ಕ್ಯಾಚ್ ಕೈ ಚೆಲ್ಲಿದರೆ, ಹರ್ಷಲ್ ಪಟೇಲ್ ಎಸೆದ 18ನೇ ಓವರ್​ನಲ್ಲಿ ಸಿರಾಜ್ ಸುಲಭ ಕ್ಯಾಚ್ ಬಿಟ್ಟರು. ಇದರ ಬೆನ್ನಲ್ಲೇ ಕಿಶನ್ (28) ಅವರನ್ನು ಎಲ್​ಬಿ ಬಲೆಗೆ ಬೀಳಿಸಿದ ಹರ್ಷಲ್ ಪಟೇಲ್ ಆರ್​ಸಿಬಿಗೆ ಮತ್ತೊಂದು ಯಶಸ್ಸು ತಂದುಕೊಟ್ಟರು.

19ನೇ ಓವರ್​ನ ಮೊದಲ ಎಸೆತದಲ್ಲೇ ಕೃನಾಲ್ ಬಾರಿಸಿದ ಚೆಂಡು ವಿರಾಟ್ ಕೊಹ್ಲಿ ಕೈಗೆ ತಲುಪಿದರು ಹಿಡಿಯುವಲ್ಲಿ ಆರ್​ಸಿಬಿ ನಾಯಕ ಎಡವಿದರು. ಈ ಓವರ್​ನಲ್ಲಿ ಜೇಮಿಸನ್ 12 ರನ್ ನೀಡಿದರು. ಹರ್ಷಲ್ ಪಟೇಲ್ ಎಸೆದ ಅಂತಿಮ ಓವರ್​ನ ಮೊದಲ ಎಸೆತದಲ್ಲಿ ಕೃನಾಲ್ ಪಾಂಡ್ಯ (7) ಡೇನಿಯಲ್ ಕ್ರಿಶ್ಚಿಯನ್​ಗೆ ಕ್ಯಾಚ್ ನೀಡಿ ನಿರ್ಗಮಿಸಿದರು.  2ನೇ ಎಸೆತದಲ್ಲಿ ಪೊಲಾರ್ಡ್ (7) ಬಾರಿಸಿದ ಚೆಂಡನ್ನು ಬೌಂಡರಿ ಲೈನಲ್ಲಿ ವಾಷಿಂಗ್ಟನ್ ಸುಂದರ್ ಹಿಡಿದರು.

3ನೇ ಎಸೆತದಲ್ಲಿ ಯಾವುದೇ ರನ್​ ಇಲ್ಲ. 4ನೇ ಎಸೆತದಲ್ಲಿ ಜಾನ್ಸನ್ ಕ್ಲೀನ್ ಬೌಲ್ಡ್, 5ನೇ ಎಸೆತದಲ್ಲೂ ಯಾವುದೇ ರನ್ ನೀಡಿದ ಹರ್ಷಲ್ ಪಟೇಲ್ ಕೊನೆಯ ಎಸೆತದಲ್ಲಿ 1 ರನ್​ ನೀಡಿ 20ನೇ ಓವರ್​ ಅಂತ್ಯಗೊಳಿಸಿದರು.  ಇತ್ತ ಮುಂಬೈ ಇಂಡಿಯನ್ಸ್​ 9 ವಿಕೆಟ್ ಕಳೆದುಕೊಂಡು 159 ರನ್​ಗಳಿಸಿತು. ಆರ್​ಸಿಬಿ ಪರ ಹರ್ಷಲ್ ಪಟೇಲ್ 4 ಓವರ್​ನಲ್ಲಿ 27 ರನ್​ ನೀಡಿ 5 ವಿಕೆಟ್ ಉರುಳಿಸಿ ಮಿಂಚಿದರು. ಹಾಗೆಯೇ ಚೊಚ್ಚಲ ಪಂದ್ಯವಾಡಿದ ಕೈಲ್ ಜೇಮಿಸನ್ 4 ಓವರ್​ನಲ್ಲಿ 27 ರನ್​ ನೀಡಿ 1 ವಿಕೆಟ್ ಪಡೆದರು.







ಮುಂಬೈ ಇಂಡಿಯನ್ಸ್ ​ ಪ್ಲೇಯಿಂಗ್ ಇಲೆವೆನ್: ರೋಹಿತ್ ಶರ್ಮಾ, ಕ್ರಿಸ್ ಲಿನ್, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ಕೀರನ್ ಪೊಲಾರ್ಡ್, ಕೃನಾಲ್ ಪಾಂಡ್ಯ, ರಾಹುಲ್ ಚಹರ್, ಟ್ರೆಂಟ್ ಬೌಲ್ಟ್, ಜಸ್ಪ್ರಿತ್ ಬುಮ್ರಾ, ಮಾರ್ಕೊ ಜಾನ್ಸನ್

ಆರ್​ಸಿಬಿ  ಪ್ಲೇಯಿಂಗ್ ಇಲೆವೆನ್:  ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಎಬಿ ಡಿವಿಲಿಯರ್ಸ್, ಗ್ಲೆನ್ ಮ್ಯಾಕ್ಸ್ ವೆಲ್, ಹರ್ಷಲ್ ಪಟೇಲ್, ಡೇನಿಯಲ್ ಕ್ರಿಶ್ಚಿಯನ್, ವಾಷಿಂಗ್ಟನ್ ಸುಂದರ್, ಕೈಲ್ ಜೇಮಿಸನ್, ಮೊಹಮ್ಮದ್ ಸಿರಾಜ್, ಯುಜ್ವೇಂದ್ರ ಚಹಲ್, ಶಬಾಜ್ ಅಹ್ಮದ್
Published by: zahir
First published: April 9, 2021, 9:37 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories