IPL 2021 MI vs RCB: ಹರ್ಷಲ್ ಪಟೇಲ್ ದಾಳಿಗೆ ನಲುಗಿದ ಮುಂಬೈ: ಆರ್​ಸಿಬಿಗೆ ಸಾಧಾರಣ ಸವಾಲು

ಐಪಿಎಲ್ ಇತಿಹಾಸದಲ್ಲಿ ಉಭಯ ತಂಡಗಳು 29 ಬಾರಿ ಮುಖಾಮುಖಿಯಾಗಿದೆ. ಅದರಲ್ಲಿ ಮುಂಬೈ 19 ಗೆಲುವು ದಾಖಲಿಸಿದರೆ, ಆರ್​ಸಿಬಿ 10 ಪಂದ್ಯಗಳನ್ನು ಗೆದ್ದುಕೊಂಡಿದೆ.

Mi vs Rcb

Mi vs Rcb

  • Share this:
    ಚೆನ್ನೈನಲ್ಲಿ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್‌ 14 ನೇ ಸೀಸನ್​ನ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್​ ತಂಡವು ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡಕ್ಕೆ 1 60 ರನ್​ಗಳ ಟಾರ್ಗೆಟ್ ನೀಡಿದೆ. ಇದಕ್ಕೂ ಮುನ್ನ ಟಾಸ್ ಗೆದ್ದ ಆರ್​ಸಿಬಿ ನಾಯಕ ವಿರಾಟ್ ಕೊಹ್ಲಿ ಬೌಲಿಂಗ್ ಆಯ್ದುಕೊಂಡರು.

    ಅದರಂತೆ ಮೊಹಮ್ಮದ್ ಸಿರಾಜ್ 14ನೇ ಸೀಸನ್ ಐಪಿಎಲ್​ನ ಮೊದಲ ಓವರ್​ ಮಾಡಿದರೆ, ರೋಹಿತ್ ಶರ್ಮಾ ಮೊದಲ ಎಸೆತವನ್ನು ಎದುರಿಸಿದರು. ಈ ಓವರ್​ನಲ್ಲಿ ಕೇವಲ 5 ರನ್​ ನೀಡುವ ಮೂಲಕ ಸಿರಾಜ್ ಆರ್​ಸಿಬಿಗೆ ಉತ್ತಮ ಆರಂಭ ಒದಗಿಸಿದರು.

    ಇನ್ನು ಚೊಚ್ಚಲ ಐಪಿಎಲ್ ಪಂದ್ಯವಾಡುತ್ತಿರುವ ಕೈಲ್ ಜೇಮಿಸನ್ ತಮ್ಮ ಮೊದಲ ಓವರ್​ನಲ್ಲಿ ಕೇವಲ 1 ರನ್​ ನೀಡಿ ಗಮನ ಸೆಳೆದರು. ಹಾಗೆಯೇ ಮೂರನೇ ಓವರ್​ನಲ್ಲಿ ಸಿರಾಜ್ 6 ರನ್​ ನೀಡಿದರು. 3ನೇ ಓವರ್​ನಲ್ಲಿ ಫೋರ್ ಹಾಗೂ ಚಹಲ್ ಎಸೆದ ನಾಲ್ಕನೇ ಓವರ್​ನಲ್ಲಿ ಸಿಕ್ಸ್ ಸಿಡಿಸುವ ಮೂಲಕ 14ನೇ ಸೀಸನ್ ಐಪಿಎಲ್​ನಲ್ಲಿ ರೋಹಿತ್ ಶರ್ಮಾ ಬೌಂಡರಿಗಳ ಖಾತೆ ತೆರೆದರು. ಇದರ ಬೆನ್ನಲ್ಲೇ ಕ್ರಿಸ್ ಲಿನ್ ನೀಡಿದ ತಪ್ಪು ರನ್ ಕರೆಯಿಂದ ರೋಹಿತ್ ಶರ್ಮಾ (19) ರನೌಟ್ ಆದರು.

    ಈ ವೇಳೆ ಕ್ರೀಸ್​ಗೆ ಆಗಮಿಸಿದ ಸೂರ್ಯಕುಮಾರ್ ಯಾದವ್ ಜೇಮಿಸನ್ ಅವರ ಮೊದಲ ಎಸೆತದಲ್ಲೇ ಬೌಂಡರಿ ಬಾರಿಸಿ ಶುಭಾರಂಭ ಮಾಡಿದರು. ಅಲ್ಲದೆ ಪವರ್​ಪ್ಲೇ ಮುಕ್ತಾಯದ ವೇಳೆಗೆ ತಂಡದ ಮೊತ್ತವನ್ನು 41 ಕ್ಕೆ ತಂದು ನಿಲ್ಲಿಸಿದರು.

    ಪವರ್​ಪ್ಲೇ ಮುಕ್ತಾಯದ ಬೆನ್ನಲ್ಲೇ 7ನೇ ಓವರ್​ನಲ್ಲಿ ಫೋರ್-ಸಿಕ್ಸ್ ಸಿಡಿಸುವ ಮೂಲಕ ಕ್ರಿಸ್ ಲಿನ್ 14 ರನ್​ ಕಲೆಹಾಕಿದರು. ಅಲ್ಲದೆ ಸೂರ್ಯಕುಮಾರ್ ಜೊತೆಗೂಡಿ ರನ್​ ಗತಿ ಹೆಚ್ಚಿಸಿದ ಲಿನ್ ಹತ್ತು ಓವರ್​ ಮುಕ್ತಾಯದ ವೇಳೆಗೆ ತಂಡದ ಮೊತ್ತವನ್ನು 86 ಕ್ಕೆ ತಂದು ನಿಲ್ಲಿಸಿದರು.

    11ನೇ ಓವರ್​ನ ಕೊನೆಯ ಎಸೆತದಲ್ಲಿ ಸೂರ್ಯಕುಮಾರ್ ಯಾದವ್​ರನ್ನು (31) ಔಟ್​ ಮಾಡುವ ಮೂಲಕ ಆರ್​ಸಿಬಿ ತಂಡದ ಹೊಸ ವೇಗಿ ಕೈಲ್ ಜೇಮಿಸನ್ ತಮ್ಮ ಐಪಿಎಲ್ ವಿಕೆಟ್ ಖಾತೆ ತೆರೆದರು. 35 ಎಸೆತಗಳಲ್ಲಿ 4 ಬೌಂಡರಿ, 3 ಸಿಕ್ಸರ್​ ಸಿಡಿಸಿ ಅಪಾಯಕಾರಿಯಾಗಿ ಪರಿಣಮಿಸಿದ್ದ ಕ್ರಿಸ್ ಲಿನ್ (49) ಅವರನ್ನು ಅರ್ಧಶತಕ ಅಂಚಿನಲ್ಲಿ ಔಟ್ ಮಾಡುವಲ್ಲಿ ಸುಂದರ್ ಯಶಸ್ವಿಯಾದರು. ಈ ಹಂತದಲ್ಲಿ ಜೊತೆಗೂಡಿದ ಇಶಾನ್ ಕಿಶನ್ ಹಾಗೂ ಹಾರ್ದಿಕ್ ಪಾಂಡ್ಯ ಭರ್ಜರಿ ಬ್ಯಾಟಿಂಗ್ ನಡೆಸಿದರು. ಪರಿಣಾಮ 15 ಓವರ್ ಮುಕ್ತಾಯದ ವೇಳೆ ತಂಡದ ಮೊತ್ತ 130 ಗಡಿಗೆ ಬಂದು ನಿಂತಿತು.

    ಇನ್ನು 16ನೇ ಓವರ್​ನಲ್ಲಿ ಹರ್ಷಲ್ ಪಟೇಲ್ ಎಸೆದ ಸ್ಪೋ ಫುಲ್​ಟಾಸ್ ಬಾಲ್​ನ್ನು ಗುರುತಿಸುವಲ್ಲಿ ಎಡವಿದ ಹಾರ್ದಿಕ್ ಪಾಂಡ್ಯ (13) ಎಲ್​ಬಿಡಬ್ಲ್ಯೂ ಆಗಿ ಹೊರ ನಡೆದರು. ಇನ್ನು ಮೊಹಮ್ಮದ್ ಸಿರಾಜ್ 17ನೇ ಓವರ್​ನಲ್ಲಿ 7 ರನ್​ಗಳೊಂದಿಗೆ 4 ಓವರ್​ನಲ್ಲಿ ಕೇವಲ 22 ರನ್ ನೀಡಿ ಗಮನ ಸೆಳೆದರು.

    ಈ ನಡುವೆ ಇಶಾನ್ ಕಿಶನ್ ಎರಡು ಜೀವದಾನ ಪಡೆದರು. ಸಿರಾಜ್ ಓವರ್​ನಲ್ಲಿ ವಾಷಿಂಗ್ಟನ್ ಸುಂದರ್ ಇಶಾನ್ ಕಿಶನ್ ಕ್ಯಾಚ್ ಕೈ ಚೆಲ್ಲಿದರೆ, ಹರ್ಷಲ್ ಪಟೇಲ್ ಎಸೆದ 18ನೇ ಓವರ್​ನಲ್ಲಿ ಸಿರಾಜ್ ಸುಲಭ ಕ್ಯಾಚ್ ಬಿಟ್ಟರು. ಇದರ ಬೆನ್ನಲ್ಲೇ ಕಿಶನ್ (28) ಅವರನ್ನು ಎಲ್​ಬಿ ಬಲೆಗೆ ಬೀಳಿಸಿದ ಹರ್ಷಲ್ ಪಟೇಲ್ ಆರ್​ಸಿಬಿಗೆ ಮತ್ತೊಂದು ಯಶಸ್ಸು ತಂದುಕೊಟ್ಟರು.

    19ನೇ ಓವರ್​ನ ಮೊದಲ ಎಸೆತದಲ್ಲೇ ಕೃನಾಲ್ ಬಾರಿಸಿದ ಚೆಂಡು ವಿರಾಟ್ ಕೊಹ್ಲಿ ಕೈಗೆ ತಲುಪಿದರು ಹಿಡಿಯುವಲ್ಲಿ ಆರ್​ಸಿಬಿ ನಾಯಕ ಎಡವಿದರು. ಈ ಓವರ್​ನಲ್ಲಿ ಜೇಮಿಸನ್ 12 ರನ್ ನೀಡಿದರು. ಹರ್ಷಲ್ ಪಟೇಲ್ ಎಸೆದ ಅಂತಿಮ ಓವರ್​ನ ಮೊದಲ ಎಸೆತದಲ್ಲಿ ಕೃನಾಲ್ ಪಾಂಡ್ಯ (7) ಡೇನಿಯಲ್ ಕ್ರಿಶ್ಚಿಯನ್​ಗೆ ಕ್ಯಾಚ್ ನೀಡಿ ನಿರ್ಗಮಿಸಿದರು.  2ನೇ ಎಸೆತದಲ್ಲಿ ಪೊಲಾರ್ಡ್ (7) ಬಾರಿಸಿದ ಚೆಂಡನ್ನು ಬೌಂಡರಿ ಲೈನಲ್ಲಿ ವಾಷಿಂಗ್ಟನ್ ಸುಂದರ್ ಹಿಡಿದರು.

    3ನೇ ಎಸೆತದಲ್ಲಿ ಯಾವುದೇ ರನ್​ ಇಲ್ಲ. 4ನೇ ಎಸೆತದಲ್ಲಿ ಜಾನ್ಸನ್ ಕ್ಲೀನ್ ಬೌಲ್ಡ್, 5ನೇ ಎಸೆತದಲ್ಲೂ ಯಾವುದೇ ರನ್ ನೀಡಿದ ಹರ್ಷಲ್ ಪಟೇಲ್ ಕೊನೆಯ ಎಸೆತದಲ್ಲಿ 1 ರನ್​ ನೀಡಿ 20ನೇ ಓವರ್​ ಅಂತ್ಯಗೊಳಿಸಿದರು.  ಇತ್ತ ಮುಂಬೈ ಇಂಡಿಯನ್ಸ್​ 9 ವಿಕೆಟ್ ಕಳೆದುಕೊಂಡು 159 ರನ್​ಗಳಿಸಿತು. ಆರ್​ಸಿಬಿ ಪರ ಹರ್ಷಲ್ ಪಟೇಲ್ 4 ಓವರ್​ನಲ್ಲಿ 27 ರನ್​ ನೀಡಿ 5 ವಿಕೆಟ್ ಉರುಳಿಸಿ ಮಿಂಚಿದರು. ಹಾಗೆಯೇ ಚೊಚ್ಚಲ ಪಂದ್ಯವಾಡಿದ ಕೈಲ್ ಜೇಮಿಸನ್ 4 ಓವರ್​ನಲ್ಲಿ 27 ರನ್​ ನೀಡಿ 1 ವಿಕೆಟ್ ಪಡೆದರು.







    ಮುಂಬೈ ಇಂಡಿಯನ್ಸ್ ​ ಪ್ಲೇಯಿಂಗ್ ಇಲೆವೆನ್: ರೋಹಿತ್ ಶರ್ಮಾ, ಕ್ರಿಸ್ ಲಿನ್, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ಕೀರನ್ ಪೊಲಾರ್ಡ್, ಕೃನಾಲ್ ಪಾಂಡ್ಯ, ರಾಹುಲ್ ಚಹರ್, ಟ್ರೆಂಟ್ ಬೌಲ್ಟ್, ಜಸ್ಪ್ರಿತ್ ಬುಮ್ರಾ, ಮಾರ್ಕೊ ಜಾನ್ಸನ್

    ಆರ್​ಸಿಬಿ  ಪ್ಲೇಯಿಂಗ್ ಇಲೆವೆನ್:  ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಎಬಿ ಡಿವಿಲಿಯರ್ಸ್, ಗ್ಲೆನ್ ಮ್ಯಾಕ್ಸ್ ವೆಲ್, ಹರ್ಷಲ್ ಪಟೇಲ್, ಡೇನಿಯಲ್ ಕ್ರಿಶ್ಚಿಯನ್, ವಾಷಿಂಗ್ಟನ್ ಸುಂದರ್, ಕೈಲ್ ಜೇಮಿಸನ್, ಮೊಹಮ್ಮದ್ ಸಿರಾಜ್, ಯುಜ್ವೇಂದ್ರ ಚಹಲ್, ಶಬಾಜ್ ಅಹ್ಮದ್
    Published by:zahir
    First published: