ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್ ಐಪಿಎಲ್ನ 13ನೇ ಆವೃತ್ತಿಗೆ ಕ್ಷಣಗಣನೆ ಶುರುವಾಗಿದೆ. ಈ ಬಾರಿ ಕೊರೋನಾ ಕಾರಣದಿಂದ ಖಾಲಿ ಮೈದಾನದಲ್ಲಿ ಟೂರ್ನಿಯನ್ನು ಆಯೋಜಿಸಲಾಗುತ್ತಿದೆ. ಇಂದು ಸಂಜೆ ಚೆನ್ನೈನ ಚೆಪಕ್ ಸ್ಟೇಡಿಯಂ ನಲ್ಲಿ ರಂಗೀನ್ ಕ್ರಿಕೆಟ್ ಟೂರ್ನಿಗೆ ಇಂದು ಚಾಲನೆ ಸಿಗಲಿದ್ದು, 6 ನಗರಗಳಲ್ಲಿ 8 ತಂಡಗಳ ನಡುವೆ ಚುಟುಕು ಕದನ ಏರ್ಪಡಲಿದೆ. ಪ್ರೇಕ್ಷಕರಿಲ್ಲದೆ ಭಾರತದಲ್ಲಿ ಇದೇ ಮೊದಲ ಬಾರಿ ಐಪಿಎಲ್ ನಡೆಯುತ್ತಿದ್ದು, ಕೊರೋನಾ ಕಾರಣದಿಂದ ಉದ್ಘಾಟನಾ ಸಮಾರಂಭದಲ್ಲಿ ಈ ಬಾರಿ ರಂಗೀನ್ ದುನಿಯಾದ ಸ್ಟಾರ್ ನಟ-ನಟಿಯರು ಕೂಡ ಕಾಣಿಸಿಕೊಳ್ಳುವುದಿಲ್ಲ.
ಮೊದಲ ಪಂದ್ಯದಲ್ಲಿ ಐಪಿಎಲ್ನ ಬಲಿಷ್ಠ ತಂಡಗಳೆಂದು ಬಿಂಬಿತವಾಗಿರುವ ಮುಂಬೈ ಇಂಡಿಯನ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮುಖಾಮುಖಿಯಾಗಲಿರುವುದು ವಿಶೇಷ. ಮೊದಲ ಪಂದ್ಯದಲ್ಲಿ ಜಯಭೇರಿಯೊಂದಿಗೆ 14ನೇ ಆವೃತ್ತಿಯನ್ನು ಭರ್ಜರಿಯಾಗಿ ಪ್ರಾರಂಭಿಸಲು ಉಭಯ ತಂಡಗಳು ಸನ್ನದ್ಧವಾಗಿದೆ.
ಚೆನ್ನೈ ಪಿಚ್ ಸ್ಪಿನ್ ಬೌಲರುಗಳಿಗೆ ಹೆಚ್ಚು ಸಹಕಾರಿ ಆಗಿರುವುದರಿಂದ ಇಂದಿನ ಪಂದ್ಯದಲ್ಲಿ ರೋಚಕ ಹೋರಾಟವನ್ನು ನಿರೀಕ್ಷಿಸಬಹುದು. ಮುಖ್ಯವಾಗಿ ಆರ್ಸಿಬಿ ತಂಡದಲ್ಲಿ ಸುಂದರ್, ಚಹಲ್ ಅವರಂತಹ ಉತ್ತಮ ಸ್ಪಿನ್ ಬೌಲರುಗಳಿರುವುದು ಕೊಹ್ಲಿ ಪಡೆಯ ಆತ್ಮ ವಿಶ್ವಾಸವನ್ನು ಹೆಚ್ಚಿಸಿದೆ. ಇತ್ತ ಮುಂಬೈ ಇಂಡಿಯನ್ಸ್ ತಂಡದ ಬೌಲಿಂಗ್ ವಿಭಾಗವನ್ನು ವಿಶ್ವದ ನಂಬರ್ 1 ಏಕದಿನ ಬೌಲರ್ ಟ್ರೆಂಟ್ ಬೌಲ್ಟ್ ಹಾಗೂ ನಂಬರ್ 2 ವೇಗಿ ಜಸ್ಪ್ರೀತ್ ಬುಮ್ರಾ ಮುನ್ನಡೆಸುತ್ತಿರುವುದು ಆರ್ಸಿಬಿ ತಂಡದ ಚಿಂತೆಗೆ ಕಾರಣ.
5 ಬಾರಿ ಐಪಿಎಲ್ ಕಿರೀಟ ಮುಡಿಗೇರಿಸಿರುವ ಮುಂಬೈ ಇಂಡಿಯನ್ಸ್ ತಂಡವನ್ನು ಯಾವತ್ತೂ ಹಗುರವಾಗಿ ಪರಿಗಣಿಸಲಾಗುವುದಿಲ್ಲ. ಈ ತಂಡದ ಪ್ರಮುಖ ಅಸ್ತ್ರವೆ ಓಪನಿಂಗ್ ಜೋಡಿ. ಆದರೆ ಮೊದಲ ಪಂದ್ಯದಲ್ಲಿ ಡಿಕಾಕ್ ಕಣಕ್ಕಿಳಿಯುವುದಿಲ್ಲ. ಬದಲಾಗಿ ರೋಹಿತ್ ಶರ್ಮಾ ಅವರೊಂದಿಗೆ ಮತ್ತೋರ್ವ ಸ್ಪೋಟಕ ದಾಂಡಿಗ ಕ್ರಿಸ್ ಲಿನ್ ಇನಿಂಗ್ಸ್ ಆರಂಭಿಸಲಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಪೊಲಾರ್ಡ್, ಪಾಂಡ್ಯರಂತಹ ಅಪಾಯಕಾರಿ ಆಟಗಾರರ ದಂಡೆಯಿದೆ. ಇನ್ನು ಹೊಡಿಬಡಿ ದಾಂಡಿಗ ಇಶಾನ್ ಕಿಶನ್ ಕೂಡ ಮುಂಬೈ ತಂಡದಲ್ಲಿದ್ದಾರೆ.
ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್ ಈ ಬಾರಿ ಪ್ರಶಸ್ತಿಯನ್ನು ಮುಡಿಗೇರಿಸಿ 6ನೇ ಬಾರಿ ಚಾಂಪಿಯನ್ ಆಗುವ ತವಕದಲ್ಲಿದೆ. ಪಾಂಡ್ಯ ಸಹೋದರರು ಹಾಗೂ ಜಸ್ಪ್ರೀತ್ ಬುಮ್ರಾ ತಂಡ ಟ್ರಂಪ್ ಕಾರ್ಡ್ ಆಗಿದ್ದು, ಇವರೊಂದಿಗೆ ಎಡಗೈ ವೇಗಿ ಬೌಲ್ಟ್ ಸಹ ಮೋಡಿ ಮಾಡಲಿದ್ದಾರೆ. ಬ್ಯಾಟಿಂಗ್ ವಿಭಾಗದಲ್ಲಿ ಕಿರೋನ್ ಪೋಲಾರ್ಡ್ಗೆ ಶಕ್ತಿ ತುಂಬಲು ಆಲ್ರೌಂಡರ್ ಆಗಿ ಹಾರ್ದಿಕ್ ಪಾಂಡ್ಯ ಕೂಡ ಇರುವುದು ಮುಂಬೈ ಟೀಮ್ನ ಆತ್ಮವಿಶ್ವಾಸ ಹೆಚ್ಚಿಸಿದೆ.
ಇತ್ತ ಈ ಬಾರಿ ಕಪ್ ನಮ್ದೆ ವಿಶ್ವಾಸದಲ್ಲಿರುವ ಕೊಹ್ಲಿ ಪಡೆ ಕೂಡ ಭರ್ಜರಿ ಸಿದ್ದತೆಯಲ್ಲಿದ್ದು, ಕಳೆದ 13 ಸೀಸನ್ಗಳಿಂದ ಮರೀಚಿಕೆಯಾಗಿರುವ ಟ್ರೋಫಿ ಈ ಬಾರಿ ಆರ್ಸಿಬಿ ಮುಡಿಗೇರಲಿದೆ ಎಂಬ ವಿಶ್ವಾಸದಲ್ಲಿ ಅಭಿಮಾನಿಗಳು ಕೂಡ ಇದ್ದಾರೆ. ಏಕೆಂದರೆ ತಂಡದ ಬೌಲಿಂಗ್ ವಿಭಾಗಕ್ಕೆ ಮಾರಕ ವೇಗಿ ಕೈಲ್ ಜೇಮಿಸನ್ ಎಂಟ್ರಿ ಕೊಟ್ಟಿದ್ರೆ, ಆರಂಭಿಕ ವೈಫಲ್ಯವನ್ನು ಹೋಗಲಾಡಿಸಲು ವಿರಾಟ್ ಕೊಹ್ಲಿಯೇ ಕಣಕ್ಕಿಳಿಯುತ್ತಿದ್ದಾರೆ. ಇನ್ನು ಆಲ್ರೌಂಡರ್ಗಳಾಗಿ ಡೇನಿಯಲ್ ಕ್ರಿಶ್ಚಿಯನ್, ಡೇನಿಯಲ್ ಸ್ಯಾಮ್ಸ್, ವಾಷಿಂಗ್ಟನ್ ಸುಂದರ್ ಸಹ ಕೊಹ್ಲಿ ಪಡೆಯಲ್ಲಿದೆ. ಹಾಗೆಯೇ ಸ್ಪಿನ್ ಬೌಲರ್ಗಳಾಗಿ ಯಜುವೇಂದ್ರ ಚಹಲ್ ಜೊತೆ ಈ ಬಾರಿ ಆಸ್ಟ್ರೇಲಿಯಾದ ಖ್ಯಾತ ಸ್ಪಿನ್ನರ್ ಆ್ಯಡಂ ಜಂಪಾ ಕೂಡ ತಂಡದಲ್ಲಿದ್ದಾರೆ. ಇನ್ನು ಕಳೆದ ಆರ್ಸಿಬಿ ತಂಡದ ಆಧಾರ ಸ್ತಂಭಗಳಾದ ನಾಯಕ ವಿರಾಟ್ ಕೊಹ್ಲಿ ಹಾಗೂ ಎಬಿ ಡಿವಿಲಿಯರ್ಸ್ ಈ ಬಾರಿ ಕಪ್ ಗೆಲ್ಲಲೇ ಬೇಕು ಎಂದು ಪಣತೊಟ್ಟಿದ್ದಾರೆ. ಒಟ್ಟಿನಲ್ಲಿ ಆರ್ಸಿಬಿ ತಂಡ ಈ ಹಿಂದೆಗಿಂತಲೂ ಹೆಚ್ಚು ಸಮತೋಲನದಿಂದ ಕೂಡಿದ್ದು, ಪ್ರಶಸ್ತಿ ಜಯಿಸುವ ಟಾಪ್ ತಂಡಗಳ ಪಟ್ಟಿಯಲ್ಲಿ ಗುರುತಿಸಿಕೊಂಡಿದೆ.
ಕಳೆದ ಸೀಸನ್ನಲ್ಲಿ ವಿಫಲತೆಯಿಂದ ನಲುಗಿದ್ದ ಕೊಲ್ಕತ್ತಾ ನೈಟ್ರೈಡರ್ಸ್ ತಂಡ ಈ ಬಾರಿ ತಮ್ಮ ಎಂದಿನ ಲಯಕ್ಕೆ ಮರಳುವ ವಿಶ್ವಾಸದಲ್ಲಿದೆ. ಇಯಾನ್ ಮೋರ್ಗನ್ ಮುನ್ನಡೆಸಲಿರುವ ನೈಟ್ರೈಡರ್ಸ್ ತಂಡದ ಪ್ರಮುಖ ಪ್ಲೇಯರ್ ಆಗಿ ದಿನೇಶ್ ಕಾರ್ತಿಕ್ ಮತ್ತು ಸುನೀಲ್ ನರೇನ್ ಮಿಂಚುವ ಭರವಸೆಯಲ್ಲಿದ್ದಾರೆ. ಯಾವುದೇ ಸಂದರ್ಭದಲ್ಲೂ ಸ್ಪೋಟಗೊಳ್ಳುವ ಆಟಗಾರನಾಗಿ ಆ್ಯಂಡ್ರೆ ರಸೆಲ್ ಕೂಡ ಕೊಲ್ಕತ್ತಾ ಪಡೆಯಲ್ಲಿರುವುದು ಪ್ಲಸ್ ಪಾಯಿಂಟ್.
ಕಳೆದ ಸೀಸನ್ನಲ್ಲಿ ರೋಚಕ ಹೋರಾಟದೊಂದಿಗೆ ಚುಟುಕು ಕ್ರಿಕೆಟ್ನ ರಸದೌತಣ ಒದಗಿಸಿದ್ದ ಸನ್ ರೈಸರ್ಸ್ ಹೈದರಾಬಾದ್ ಈ ಬಾರಿ ಚಾಂಪಿಯನ್ ಪಟ್ಟದ ಮೇಲೆ ಕಣ್ಣಿಟ್ಟಿದೆ ಎಂದರೆ ತಪ್ಪಾಗಲಾರದು. ಕಳೆದ ಬಾರಿ ಪ್ಲೇ ಆಫ್ ಪ್ರವೇಶಿಸಿದ್ದ ಸನ್ರೈಸರ್ಸ್ ಈ ಬಾರಿ ಹೆಚ್ಚಿನ ಬದಲಾವಣೆ ಮಾಡಿಕೊಂಡಿಲ್ಲ. ತಂಡದಲ್ಲಿ ಅತ್ಯುತ್ತಮ ಫಾರ್ಮ್ನಲ್ಲಿರುವ ಕೇನ್ ವಿಲಿಯಮ್ಸನ್, ಡೇವಿಡ್ ವಾರ್ನರ್ರಂತಹ ಘಟಾನುಘಟಿಗಳಿದ್ದರೆ, ಮನೀಷ್ ಪಾಂಡೆ ಹಾಗೂ ಭರ್ಜರಿ ಫಾರ್ಮ್ನಲ್ಲಿರುವ ಜಾನಿ ಬೈರ್ಸ್ಟೋವ್ ತಂಡಕ್ಕೆ ಆಸರೆಯಾಗುವ ನಿರೀಕ್ಷೆಯಿದೆ. ಇನ್ನು ಬೌಲಿಂಗ್ ವಿಭಾಗದಲ್ಲಿ ರಶೀದ್ ಖಾನ್, ಭುವನೇಶ್ವರ್ ಕುಮಾರ್ ಇದ್ದು, ಮತ್ತೊಮ್ಮೆ ಮೋಡಿ ಮೂಲಕ ಪಂದ್ಯದ ಗತಿಯನ್ನೇ ಬದಲಿಸುವ ಹುಮ್ಮಸ್ಸಿನಲ್ಲಿದ್ದಾರೆ.
ಕಳೆದ ಬಾರಿ ಫೈನಲ್ಗೆ ಎಂಟ್ರಿ ಕೊಟ್ಟಿದ್ದ ಡೆಲ್ಲಿ ಕ್ಯಾಪಿಟಲ್ಸ್ ಈ ಬಾರಿ ಕೂಡ ಫೇವರೆಟ್ ತಂಡಗಳಲ್ಲಿ ಗುರುತಿಸಿಕೊಂಡಿದೆ. ತಂಡವನ್ನು ಶ್ರೇಯಸ್ ಅಯ್ಯರ್ ಅನುಪಸ್ಥಿತಿಯಲ್ಲಿ ರಿಷಭ್ ಪಂತ್ ಮುನ್ನಡೆಸಲಿದ್ದು, ಭಾರತದ ಯುವ ಆಟಗಾರರೇ ತಂಡದ ಪ್ಲಸ್ ಪಾಯಿಂಟ್ ಆಗಿದ್ದಾರೆ. ರಿಷಭ್ ಪಂತ್ ಹಾಗೂ ಪೃಥ್ವಿ ಶಾ ಕ್ಯಾಪಿಟಲ್ಸ್ನ ಆಧಾರ ಸ್ತಂಭಗಳಾಗಿದ್ದಾರೆ. ಇವರಿಗೆ ಸ್ಟೊಯಿನಿಸ್ ಹಾಗೂ ಹೆಟ್ಮೆಯರ್ ಅವರ ನೆರವು ಸಿಕ್ಕರೆ ಡೆಲ್ಲಿ ಕ್ಯಾಪಿಟಲ್ಸ್ ಈ ಬಾರಿ ಹೊಸ ಪ್ರದರ್ಶನ ನೀಡುವುದರಲ್ಲಿ ಸಂಶಯವೇ ಇಲ್ಲ.
ಪಿಂಕ್ ಸಿಟಿಯನ್ನು ಪ್ರತಿನಿಧಿಸಲಿರುವ ಪಿಂಕ್ ಜೆರ್ಸಿಯ ರಾಜಸ್ಥಾನ್ ರಾಯಲ್ಸ್ ತಂಡವನ್ನು ಈ ಬಾರಿ ಸಂಜು ಸ್ಯಾಮ್ಸನ್ ಮುನ್ನಡೆಸಲಿದ್ದಾರೆ. ಜೋಸ್ ಬಟ್ಲರ್, ಬೆನ್ ಸ್ಟೋಕ್ಸ್ ರಂತಹ ಸ್ಟಾರ್ ಆಟಗಾರರು ತಂಡದಲ್ಲಿರುವುದು ಪ್ಲಸ್ ಪಾಯಿಂಟ್. ಇವರೊಂದಿಗೆ ಯುವ ಪಡೆಯನ್ನು ಕಣಕ್ಕಿಳಿಸಲಿರುವ ರಾಜಸ್ಥಾನ್ ತಂಡ ಎದುರಾಳಿಗಳಿಗೆ ಕಬ್ಬಿಣದ ಕಡಲೆಯಾಗಬಹುದು.
ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಪವರ್ ಎಂದರೆ ಕ್ರಿಸ್ ಗೇಲ್. ಸ್ಪೋಟಕ ಆರಂಭವನ್ನು ಒದಗಿಸುವ ತಾಕತ್ತು ಹೊಂದಿರುವ ಕ್ರಿಸ್ ಗೇಲ್ ಮೇಲೆ ಪಂಜಾಬ್ ತಂಡ ಅಪಾರ ಭರವಸೆಯನ್ನಿಟ್ಟುಕೊಂಡಿದೆ. ಗೇಲ್ಗೆ ಬೆಂಬಲವಾಗಿ ನಾಯಕ ಕೆ.ಎಲ್ ರಾಹುಲ್ ಕೂಡ ಆತ್ಮ ವಿಶ್ವಾಸದಲ್ಲಿದ್ದಾರೆ. ಇವರ ಜೊತೆ ಮಯಾಂಕ್ ಅರ್ಗವಾಲ್, ನಿಕೋಲಸ್ ಪೂರನ್, ಸರ್ಫರಾಜ್ ಖಾನ್, ಕರುಣ್ ನಾಯರ್ ಅವರಂತಹ ಹೊಡಿಬಡಿ ದಾಂಡಿಗರು ಸಹ ತಂಡದಲ್ಲಿದ್ದಾರೆ. ಹಾಗೆಯೇ ಈ ಬಾರಿ ತಂಡಕ್ಕೆ ಡೇವಿಡ್ ಮಲಾನ್ ಕೂಡ ಎಂಟ್ರಿ ಕೊಟ್ಟಿದ್ದಾರೆ. ಹಾಗೆಯೇ ವೇಗದ ಅಸ್ತ್ರವಾಗಿ ಮೊಹಮ್ಮದ್ ಶಮಿ ಸಹ ಕಿಂಗ್ಸ್ ಇಲೆವೆನ್ ತಂಡದಲ್ಲಿದ್ದಾರೆ. ಇವೆಲ್ಲಕ್ಕಿಂತ ಮುಖ್ಯವಾಗಿ ಕೋಚ್ ಆಗಿ ಅನಿಲ್ ಕುಂಬ್ಳೆ ಪಂಜಾಬ್ ತಂಡದಲ್ಲಿದ್ದಾರೆ. ಹೀಗಾಗಿ ಈ ಬಾರಿ ಕಿಂಗ್ಸ್ ಇಲೆವೆನ್ ಪಂಜಾಬ್ ಟೀಮ್ನಿಂದ ಉತ್ತಮ ಪ್ರದರ್ಶನ ಹೊರಬೀಳುವ ನಿರೀಕ್ಷೆಯಿದೆ.
ಸಿಎಸ್ಕೆ ತಂಡಕ್ಕೆ ಸುರೇಶ್ ರೈನಾ ಎಂಟ್ರಿ ಕೊಟ್ಟಿರುವುದು ನಾಯಕ ಎಂಎಸ್ ಧೋನಿಯ ಆತ್ಮ ವಿಶ್ವಾಸ ಹೆಚ್ಚಿಸಿದೆ. ಹಾಗೆಯೇ ಫಾಫ್ ಡುಪ್ಲೆಸಿಸ್ ಹಾಗೂ ರಾಬಿನ್ ಉತ್ತಪ್ಪ, ಸ್ಯಾಮ್ ಕರನ್ ತಂಡದಲ್ಲಿರುವುದೇ ದೊಡ್ಡ ಬಲ. ಇನ್ನು ತಮ್ಮ ಆಲ್ರೌಂಡರ್ ಪ್ರದರ್ಶನ ಮೂಲಕ ಪಂದ್ಯದ ಗತಿಯನ್ನೇ ಬದಲಿಸಬಲ್ಲ ಡ್ವೇನ್ ಬ್ರಾವ್ರೊ, ರವೀಂದ್ರ ಜಡೇಜಾ ಸಿಎಸ್ಕೆ ತಂಡದ ವಿಭಿನ್ನ ಅಸ್ತ್ರ. ಹಾಗೆಯೇ ಸ್ಪಿನ್ ಜೋಡಿಯಾಗಿ ಇಮ್ರಾನ್ ತಾಹಿರ್, ಸ್ಯಾಂಟ್ನರ್ ಕೂಡ ಸೂಪರ್ ಕಿಂಗ್ಸ್ ತಂಡದಲ್ಲಿದ್ದಾರೆ. ಇವೆಲ್ಲಕ್ಕಿಂತ ಮುಖ್ಯವಾಗಿ ಮಹೇಂದ್ರ ಸಿಂಗ್ ಧೋನಿಯ ನಾಯಕತ್ವ ಚೆನ್ನೈಯನ್ನು ಮತ್ತೊಮ್ಮೆ ವಿಸಿಲ್ ಹೊಡೆಯುವಂತೆ ಮಾಡುವುದರಲ್ಲಿ ಅನುಮಾನವಿಲ್ಲ.
ಇಲ್ಲಿಯವರೆಗೂ ಐಪಿಎಲ್ನಲ್ಲಿ ಕಿರೀಟ ಮುಡಿಗೇರಿಸಿದ ತಂಡಗಳ ಪಟ್ಟಿ:
2008
ಚಾಂಪಿಯನ್ - ರಾಜಸ್ಥಾನ್ ರಾಯಲ್ಸ್
ರನ್ನರ್ ಅಪ್ - ಚೆನ್ನೈ ಸೂಪರ್ ಕಿಂಗ್ಸ್
2009
ಚಾಂಪಿಯನ್- ಡೆಕ್ಕನ್ ಚಾರ್ಜರ್ಸ್
ರನ್ನರ್ ಅಪ್- ರಾಯಲ್ ಚಾಲೆಂಜರ್ಸ್ ಬೆಂಗಳೂರು
2010
ಚಾಂಪಿಯನ್- ಚೆನ್ನೈ ಸೂಪರ್ ಕಿಂಗ್ಸ್
ರನ್ನರ್ ಅಪ್- ಮುಂಬೈ ಇಂಡಿಯನ್ಸ್
2011
ಚಾಂಪಿಯನ್- ಚೆನ್ನೈ ಸೂಪರ್ ಕಿಂಗ್ಸ್
ರನ್ನರ್ ಅಪ್- ರಾಯಲ್ ಚಾಲೆಂಜರ್ಸ್ ಬೆಂಗಳೂರು
2012
ಚಾಂಪಿಯನ್- ಕೋಲ್ಕತಾ ನೈಟ್ ರೈಡರ್ಸ್
ರನ್ನರ್ ಅಪ್- ಚೆನ್ನೈ ಸೂಪರ್ ಕಿಂಗ್ಸ್
2013
ಚಾಂಪಿಯನ್- ಮುಂಬಯಿ ಇಂಡಿಯನ್ಸ್
ರನ್ನರ್ ಅಪ್- ಚೆನ್ನೈ ಸೂಪರ್ ಕಿಂಗ್ಸ್
2014
ಚಾಂಪಿಯನ್- ಕೊಲ್ಕತ್ತಾ ನೈಟ್ ರೈಡರ್ಸ್
ರನ್ನರ್ ಅಪ್- ಕಿಂಗ್ಸ್ ಇಲೆವೆನ್ ಪಂಜಾಬ್
2015
ಚಾಂಪಿಯನ್- ಮುಂಬೈ ಇಂಡಿಯನ್ಸ್
ರನ್ನರ್ ಅಪ್- ಚೆನ್ನೈ ಸೂಪರ್ ಕಿಂಗ್ಸ್
2016
ಚಾಂಪಿಯನ್- ಸನ್ರೈಸರ್ಸ್ ಹೈದರಾಬಾದ್
ರನ್ನರ್ ಅಪ್- ರಾಯಲ್ ಚಾಲೆಂಜರ್ಸ್
2017
ಚಾಂಪಿಯನ್- ಮುಂಬಯಿ ಇಂಡಿಯನ್ಸ್
ರನ್ನರ್ ಅಪ್- ಪುಣೆ ಸೂಪರ್ಜೈಂಟ್ಸ್
2018
ಚಾಂಪಿಯನ್- ಚೆನ್ನೈ ಸೂಪರ್ ಕಿಂಗ್ಸ್
ರನ್ನರ್ ಅಪ್- ಸನ್ರೈಸರ್ಸ್ ಹೈದರಾಬಾದ್
2019
ಚಾಂಪಿಯನ್- ಮುಂಬೈ ಇಂಡಿಯನ್ಸ್
ರನ್ನರ್ ಅಪ್- ಚೆನ್ನೈ ಸೂಪರ್ ಕಿಂಗ್ಸ್
2020
ಚಾಂಪಿಯನ್- ಮುಂಬೈ ಇಂಡಿಯನ್ಸ್
ರನ್ನರ್ ಅಪ್- ಡೆಲ್ಲಿ ಕ್ಯಾಪಿಟಲ್ಸ್
ಐಪಿಎಲ್ನ ಪ್ರಮುಖ ಪ್ರಶಸ್ತಿಗಳ ಪಟ್ಟಿ( ಕಳೆದ ಬಾರಿಯ ಅಂಕಿ ಅಂಶದಂತೆ)
ಚಾಂಪಿಯನ್ಸ್ : 15 ಕೋಟಿ ರೂ.
ರನ್ನರ್ ಅಪ್ : 10 ಕೋಟಿ ರೂ.
ಆರೆಂಜ್ ಕ್ಯಾಪ್ (ಅತಿ ಹೆಚ್ಚು ರನ್ )
ಪರ್ಪಲ್ ಕ್ಯಾಪ್ (ಅತಿ ಹೆಚ್ಚು ವಿಕೆಟ್)
ಎಫ್ ಬಿಬಿ ಸ್ಟೈಲಿಶ್ ಆಟಗಾರ
ಸ್ಟಾರ್ ಪ್ಲಸ್ ಪ್ರಶಸ್ತಿ
ಫ್ಲೇರ್ ಪ್ಲೇ ಪ್ರಶಸ್ತಿ
ಉದಯೋನ್ಮುಖ ಆಟಗಾರ
ಅತ್ಯುತ್ತಮ ಕ್ಯಾಚ್
ಅತ್ಯಂತ ಮೌಲ್ಯಯುತ ಆಟಗಾರ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ