ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಶುಕ್ರವಾರ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಎದುರಿಸಲಿದೆ. ಇನ್ನು ಏಪ್ರಿಲ್ 12 ರಂದು ನಡೆಯಲಿರುವ ರಾಜಸ್ಥಾನ್ ರಾಯಲ್ಸ್ ವಿರುದ್ಧ ಪಂದ್ಯಕ್ಕಾಗಿ ಪಂಜಾಬ್ ಕಿಂಗ್ಸ್ ಕೂಡ ಕಠಿಣ ಅಭ್ಯಾಸದಲ್ಲಿ ತೊಡಗಿಸಿಕೊಂಡಿದೆ. ಈಗಾಗಲೇ ಟೂರ್ನಿಗಾಗಿ ಆಗಮಿಸಿರುವ ವೆಸ್ಟ್ ಇಂಡೀಸ್ ಸ್ಪೋಟಕ ಬ್ಯಾಟ್ಸ್ಮನ್ ಕ್ರಿಸ್ ಗೇಲ್ 7 ದಿನಗಳ ಕ್ವಾರಂಟೈನ್ ಮುಗಿಸಿ ತಂಡವನ್ನು ಕೂಡಿಕೊಂಡಿದ್ದಾರೆ
ಇನ್ನು ಕ್ವಾರಂಟೈನ್ನ್ನು ಜಾಲಿಯಾಗಿ ಕಳೆದಿರುವ ಗೇಲ್ ಮಾಡಿರುವ ವಿಡಿಯೋವೊಂದನ್ನು ಪಂಜಾಬ್ ಕಿಂಗ್ಸ್ ತಂಡದ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಯುನಿವರ್ಸ್ ಬಾಸ್ 'ಕಿಂಗ್ ಆಫ್ ಪಾಪ್' ಖ್ಯಾತಿಯ ಮೈಕಲ್ ಜಾಕ್ಸನ್ ಅವರ ಜನಪ್ರಿಯ ಗೀತೆ 'ಸ್ಮೂತ್ ಕ್ರಿಮಿನಲ್' ಹಾಡಿಗೆ ಸಖತ್ ಸ್ಟೆಪ್ಸ್ ಹಾಕಿದ್ದಾರೆ.
ಜಾಕ್ಸನ್ ಅವರಂತೆ ಟೋಪಿ ಹಾಕೊಂಡು ಮೂನ್ ವಾಕ್ ಮಾಡಿರುವ ಈ ವಿಡಿಯೋ ಇದೀಗ ಸಖತ್ ವೈರಲ್ ಆಗಿದೆ. ಅಲ್ಲದೆ ಒಳ್ಳೆ ಮೂಡ್ನೊಂದಿಗೆ ಕ್ರಿಸ್ ಗೇಲ್ ಕೂಡ ಪಂಜಾಬ್ ತಂಡವನ್ನು ಕೂಡಿಕೊಂಡಿದ್ದು, ಹೀಗಾಗಿ ಈ ಬಾರಿ ರನ್ ಮಳೆಯನ್ನು ನಿರೀಕ್ಷಿಸಬಹುದು. ಕಳೆದ ಸೀಸನ್ನಲ್ಲಿ ಅನಾರೋಗ್ಯದ ಕಾರಣ ಗೇಲ್ ಆರಂಭಿಕ ಪಂದ್ಯಗಳನ್ನು ಮಿಸ್ ಮಾಡಿಕೊಂಡಿದ್ದರು. ಆದರೆ ಈ ಸಲ ಸಂಪೂರ್ಣ ಟೂರ್ನಿ ಆಡುವ ವಿಶ್ವಾಸದಲ್ಲಿದ್ದಾರೆ ಗೇಲ್. ಹಾಗೆಯೇ ಪಂಜಾಬ್ ಕಿಂಗ್ಸ್ ತಂಡದ ಬ್ಯಾಟಿಂಗ್ ಕೋಚ್ ವಾಸಿಂ ಜಾಫರ್, ಈ ಬಾರಿ ಕೂಡ ಯುನಿವರ್ಸ್ ಬಾಸ್ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಇಳಿಯಲಿದ್ದಾರೆ ಎಂಬ ಸುಳಿವನ್ನೂ ನೀಡಿದ್ದಾರೆ.