ಭಾರತದಲ್ಲಿ ಕೊರೋನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಇತ್ತ ಇಂಡಿಯನ್ ಪ್ರೀಮಿಯರ್ ಲೀಗ್ ಆಯೋಜನೆಗೆ ಕೊರೋನಾ ತೊಡಕಾಗುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಏಕೆಂದರೆ ಮುಂಬೈನ ವಾಂಖೆಡೆ ಸ್ಟೇಡಿಯಂನ 10 ಕ್ಕೂ ಅಧಿಕ ಸಿಬ್ಬಂದಿಗಳು ಕೊರೋನಾ ಸೋಂಕಿಗೆ ಒಳಗಾಗಿದ್ದಾರೆ. ಹೀಗಾಗಿ ಈ ಮೈದಾನದಲ್ಲಿ ಪಂದ್ಯ ನಡೆಸುವುದು ಸವಾಲಾಗಿ ಪರಿಣಮಿಸಿದೆ. ಅಲ್ಲದೆ ಮುಂಬೈ ಪಂದ್ಯಗಳನ್ನು ಹೈದರಾಬಾದ್ ಅಥವಾ ಇಂದೋರ್ಗೆ ಸ್ಥಳಾಂತರ ಮಾಡಲಾಗುತ್ತದೆ ಎಂದು ವರದಿಯಾಗಿತ್ತು.
ಈ ಬಗ್ಗೆ ಮಾತನಾಡಿರುವ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಮುಂಬೈ ಪಂದ್ಯಗಳನ್ನು ಸ್ಥಳಾಂತರ ಸುದ್ದಿಗಳ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಮುಂಬೈನಲ್ಲಿ ಪಂದ್ಯಗಳನ್ನು ನಡೆಸಲು ನಮಗೆ ರಾಜ್ಯ ಸರ್ಕಾರದಿಂದ ಅಗತ್ಯ ಅನುಮತಿ ಮತ್ತು ಭರವಸೆ ಸಿಕ್ಕಿದೆ. ಏಪ್ರಿಲ್ 10 ರಿಂದ 25 ರ ನಡುವೆ ಮುಂಬೈನಲ್ಲೇ ಹತ್ತು ಪಂದ್ಯಗಳನ್ನು ಆಯೋಜಿಸಲಿದ್ದೇವೆ ಎಂದು ದಾದಾ ತಿಳಿಸಿದ್ದಾರೆ.
ಒಮ್ಮೆ ಆಟಗಾರರು ಬಯೋ ಬಬಲ್ಗೆ ಪ್ರವೇಶಿಸಿದರೆ ಚಿಂತಿಸುವ ಅಗ್ಯವಿಲ್ಲ. ಕಳೆದ ಸೀಸನ್ನಲ್ಲಿ ಯುಎಇನಲ್ಲೂ ಇಂಥದ್ದೇ ಸಂದರ್ಭಗಳು ಎದುರಾಗಿದ್ದವು. ಆದರೆ ಟೂರ್ನಿ ಆರಂಭಗೊಂಡ ಬಳಿಕ ಎಲ್ಲವೂ ಚೆನ್ನಾಗಿ ನಡೆಯಿತು. ಇದೀಗ ನಾವು ಉತ್ತಮ ಸುರಕ್ಷಿತ ಸೆಟಪ್ನಲ್ಲಿದ್ದೇವೆ. ಆಟಗಾರರು ಮತ್ತು ಸಹಾಯಕ ಸಿಬ್ಬಂದಿಗಳು ಸುರಕ್ಷಿತವಾಗಿರುತ್ತಾರೆ ಎಂದು ಬಿಸಿಸಿಐ ಅಧ್ಯಕ್ಷ ಗಂಗೂಲಿ ತಿಳಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ