• Home
  • »
  • News
  • »
  • sports
  • »
  • IPL 2021: ಸ್ಟೇಡಿಯಂನಲ್ಲೇ ಐಪಿಎಲ್​ ವೀಕ್ಷಿಸಲು ಅವಕಾಶವಿದೆಯೇ? ಈ ಬಗ್ಗೆ ಗಂಗೂಲಿ ಹೇಳಿದ್ದೇನು?

IPL 2021: ಸ್ಟೇಡಿಯಂನಲ್ಲೇ ಐಪಿಎಲ್​ ವೀಕ್ಷಿಸಲು ಅವಕಾಶವಿದೆಯೇ? ಈ ಬಗ್ಗೆ ಗಂಗೂಲಿ ಹೇಳಿದ್ದೇನು?

sourav ganguly

sourav ganguly

ಈ ಬಾರಿ ಟೂರ್ನಿಯನ್ನು ಆರು ನಗರಗಳಲ್ಲಿ ಮಾತ್ರ ಆಯೋಜಿಸಲಾಗುತ್ತಿದ್ದು, ಅದರಂತೆ ಅಹ್ಮದಾಬಾದ್, ಬೆಂಗಳೂರು, ಚೆನ್ನೈ, ದಿಲ್ಲಿ, ಮುಂಬೈ ಮತ್ತು ಕೊಲ್ಕತ್ತಾದ ಸ್ಟೇಡಿಯಂಗಳನ್ನು ಆಯ್ಕೆ ಮಾಡಲಾಗಿದೆ.

  • Share this:

    ಬಹುನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್​ 2021 ರ ವೇಳಾಪಟ್ಟಿ ಘೋಷಣೆಯಾಗಿದೆ. ಏಪ್ರಿಲ್ 9 ರಿಂದ ಟೂರ್ನಿ ಆರಂಭವಾಗಲಿದ್ದು, ಚೆನ್ನೈನಲ್ಲಿ ನಡೆಯಲಿರುವ ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಮುಂಬೈ ಇಂಡಿಯನ್ಸ್​ ತಂಡಗಳು ಸೆಣಸಲಿದೆ. ಇನ್ನು 60 ಪಂದ್ಯಗಳ ಟೂರ್ನಿಯು ಮೇ 30 ರಂದು ಅಂತ್ಯವಾಗಲಿದ್ದು, ಫೈನಲ್ ಪಂದ್ಯವು ವಿಶ್ವದ ಅತೀ ದೊಡ್ಡ ಕ್ರಿಕೆಟ್ ಸ್ಟೇಡಿಯಂ ಅಹ್ಮದಾಬಾದ್​ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಇನ್ನು ಈ ಬಾರಿ ಟೂರ್ನಿಯನ್ನು ಆರು ನಗರಗಳಲ್ಲಿ ಮಾತ್ರ ಆಯೋಜಿಸಲಾಗುತ್ತಿದ್ದು, ಅದರಂತೆ ಅಹ್ಮದಾಬಾದ್, ಬೆಂಗಳೂರು, ಚೆನ್ನೈ, ದಿಲ್ಲಿ, ಮುಂಬೈ ಮತ್ತು ಕೊಲ್ಕತ್ತಾದ ಸ್ಟೇಡಿಯಂಗಳನ್ನು ಆಯ್ಕೆ ಮಾಡಲಾಗಿದೆ.


    ಹಾಗೆಯೇ ಈ ಬಾರಿ ತವರು ಮೈದಾನದಲ್ಲಿ ಯಾವುದೇ ತಂಡಗಳಿಗೂ ಪಂದ್ಯಗಳಿರುವುದಿಲ್ಲ ಎಂದು ಬಿಸಿಸಿಐ ಘೋಷಿಸಿದೆ. ಇದಾಗ್ಯೂ ಐಪಿಎಲ್​ ಪಂದ್ಯಗಳನ್ನು ಸ್ಟೇಡಿಯಂನಲ್ಲೇ ವೀಕ್ಷಿಸುವ ಅವಕಾಶ ದೊರೆಯಲಿದೆ ಎಂಬ ನಿರೀಕ್ಷೆಯಲ್ಲಿದ್ದ ಕ್ರಿಕೆಟ್ ಪ್ರೇಮಿಗಳಿ ಐಪಿಎಲ್ ಆಡಳಿತ ಮಂಡಳಿ ಶಾಕ್ ನೀಡಿದೆ. ಹೌದು, ಐಪಿಎಲ್ ಸೀಸನ್ 14 ಭಾರತದಲ್ಲೇ ನಡೆಯುತ್ತಿದ್ದರೂ ಸ್ಟೇಡಿಯಂಗೆ ತೆರಳಿ ಪಂದ್ಯ ವೀಕ್ಷಿಸಲು ಅವಕಾಶವಿಲ್ಲ. ಕೊರೋನಾ ಕಾರಣದಿಂದ ಪ್ರೇಕ್ಷಕರಿಲ್ಲದೇ ಐಪಿಎಲ್ ನಡೆಸಲು ಬಿಸಿಸಿಐ ನಿರ್ಧರಿಸಿದೆ.


    ಈ ಬಗ್ಗೆ ಮಾತನಾಡಿರುವ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಈ ಬಾರಿಯ ಐಪಿಎಲ್ ದ್ವಿಪಕ್ಷೀಯ ಸರಣಿಗಿಂತ ಸ್ವಲ್ಪ ಭಿನ್ನವಾಗಿರುತ್ತದೆ. ಜನಸಂದಣಿಯೊಂದಿಗೆ ಟೂರ್ನಿ ನಡೆಸುವುದು ಕಷ್ಟಕರ. ಏಕೆಂದರೆ ಕೆಲವು ತಂಡಗಳು ಹೊರಗೆ ಅಭ್ಯಾಸ ಮಾಡುತ್ತಿರುತ್ತವೆ. ಅನೇಕ ಕ್ರೀಡಾಂಗಣದಲ್ಲಿ ಹೊರಗೆ ಅಭ್ಯಾಸ ಪಿಚ್​ಗಳಿವೆ. ಪ್ರೇಕ್ಷಕರಿಗೆ ಅವಕಾಶ ನೀಡುವುದರಿಂದ ಅವರು ಆಟಗಾರರನ್ನು ಸಮೀಪಿಸುತ್ತಾರೆ. ಇದರಿಂದ ತೊಂದರೆಗೀಡಾಗುವ ಸಾಧ್ಯತೆ ಹೆಚ್ಚು. ಹೀಗಾಗಿ ಪ್ರೇಕ್ಷಕರಿಲ್ಲದೆ ಟೂರ್ನಿಯನ್ನು ನಡೆಸಲು ತೀರ್ಮಾನಿಸಲಾಗಿದೆ ಎಂದು ದಾದಾ ತಿಳಿಸಿದ್ದಾರೆ.


    'ನಾವು ಗುಂಪುಗಳಾಗಿ ಸಂಘಟಿಸಿದ್ದೇವೆ. ಪ್ರತಿ ತಂಡಕ್ಕೆ ಮೂರು ವಿಮಾನಗಳು ಇರಲಿವೆ. ಏಕೆಂದರೆ ಭಾರತದ ತಂಡವು ಇಂಗ್ಲೆಂಡ್ ವಿರುದ್ಧದ ಸರಣಿಗೆ ಅಹಮದಾಬಾದ್‌ಗೆ ಹೋಗಿದೆ. ಇದರ ಬಳಿಕ ಪುಣೆಗೆ ಬರಲಿದೆ. ಇದಕ್ಕೆಲ್ಲಾ ವ್ಯವಸ್ಥೆಗಳನ್ನು ರೂಪಿಸಬೇಕು. ಹಾಗೆಯೇ ಐಪಿಎಲ್ ದೊಡ್ಡ ಟೂರ್ನಿ. ನಾವು ದುಬೈನಲ್ಲಿ ಯಶಸ್ವಿಯಾಗಿ ಆಯೋಜಿಸಿದ್ದಂತೆ ಇಲ್ಲೂ ಕೂಡ ಐಪಿಎಲ್ ನಡೆಸಲಿದ್ದೇವೆ ಎಂದು ಗಂಗೂಲಿ ತಿಳಿಸಿದ್ದಾರೆ.


    ಇನ್ನು ಎರಡನೇ ಹಂತದಲ್ಲಿ ಪ್ರೇಕ್ಷಕರು ಅವಕಾಶ ಸಿಗಲಿದೆಯಾ? ಎಂಬ ಪ್ರಶ್ನೆಗೆ ಉತ್ತರಿಸಿದ ಗಂಗೂಲಿ, ' ಈ ಬಗ್ಗೆ ಸದ್ಯ ನಾನು ಏನನ್ನೂ ಹೇಳಲಾರೆ. ಇದು ಮುಂದಿನ ಎಲ್ಲಾ ಪರಿಸ್ಥಿತಿಗಳ ಮೇಲೆ ಅವಲಂಬಿತವಾಗಿರುತ್ತದೆ ಎಂದು ತಿಳಿಸಿದರು.


    ಈ ಹಿಂದೆ ಮೊದಲಾರ್ಧದ ಟೂರ್ನಿಯವರೆಗೂ ಪ್ರೇಕ್ಷಕರಿಗೆ ಅವಕಾಶವಿಲ್ಲ. ಬಳಿಕ ಪರಿಸ್ಥಿತಿಯನ್ನು ಗಣನೆಗೆ ತೆಗೆದುಕೊಂಡು ಅವಕಾಶ ಕಲ್ಪಿಸುವ ಬಗ್ಗೆ ಸಮಾಲೋಚಿಸುವುದಾಗಿ ಐಪಿಎಲ್ ಆಡಳಿತ ಮಂಡಳಿ ತಿಳಿಸಿತ್ತು. ಇದೀಗ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಖಾಲಿ ಕ್ರೀಡಾಂಗಣದಲ್ಲೇ ಐಪಿಎಲ್ ಸೀಸನ್​ 14 ನಡೆಸಲು ಬಿಸಿಸಿಐ ಯೋಜನೆ ರೂಪಿಸಿದ್ದಾರೆ.

    Published by:zahir
    First published: