IPL 2021: ಯಾರಾಗಲಿದ್ದಾರೆ RCB ತಂಡದ ಆರಂಭಿಕ ಜೋಡಿ..?

ಈ ಪಟ್ಟಿಯಲ್ಲಿ ಮೂವರ ಹೆಸರು ಮುಂಚೂಣಿಯಲ್ಲಿದೆ. ಇವರಲ್ಲಿ ಒಬ್ಬರು ದೇವದತ್ ಪಡಿಕ್ಕಲ್ ಸ್ಥಾನದಲ್ಲಿ ಆರ್​ಸಿಬಿ ಪರ ಆರಂಭಿಕರಾಗಿ ಕಣಕ್ಕಿಳಿಯಬಹುದು. ಅವರೆಂದರೆ...

rcb

rcb

 • Share this:
  ಐಪಿಎಲ್ ಆರಂಭಕ್ಕೆ ದಿನಗಳ ಮಾತ್ರ ಉಳಿದಿರುವಾಗ, ಆಟಗಾರರಲ್ಲಿ ಕೊರೋನಾ ಸೋಂಕು ಕಾಣಿಸಿಕೊಳ್ಳುತ್ತಿರುವುದು ಇದೀಗ ಐಪಿಎಲ್ ಆಯೋಜಕರ ಚಿಂತೆಗೆ ಕಾರಣವಾಗಿದೆ. ಈ ಮೊದಲು ಕೊಲ್ಕತ್ತಾ ನೈಟ್​ ರೈಡರ್ಸ್​ ತಂಡದ ಆಟಗಾರ ನಿತೀಶ್ ರಾಣಾ ಅವರಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಅವರು ಗುಣಮುಖರಾದ ಬೆನ್ನಲ್ಲೇ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆಟಗಾರ ಅಕ್ಷರ್ ಪಟೇಲ್​ ಅವರಲ್ಲೂ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿದ್ದವು. ಇದರ ಬೆನ್ನಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರ ದೇವದತ್ ಪಡಿಕ್ಕಲ್ ಅವರ ಕೋವಿಡ್ ಟೆಸ್ಟ್ ರಿಪೋರ್ಟ್ ಕೂಡ ಕೊರೋನಾ ಪಾಸಿಟಿವ್ ಬಂದಿದೆ.

  ಇದೀಗ ಕೊರೋನಾ ಸೋಂಕು ತಗುಲಿರುವ ಆಟಗಾರರನ್ನು 10 ದಿನಗಳ ಕಾಲ ಐಸೊಲೇಟೆಡ್ ಮಾಡಲಾಗಿದೆ. ಹಾಗೆಯೇ ಇವರ ಮೇಲೆ ವೈದ್ಯರ ತಂಡ ತೀವ್ರ ನಿಗಾಯಿಡಲಾಗಿದೆ. ಅಲ್ಲದೆ ಸಂಪೂರ್ಣ ಗುಣಮುಖರಾದ ಬಳಿಕವಷ್ಟೇ ಇವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗುತ್ತದೆ. ಆದರೆ ಮೊದಲ ಪಂದ್ಯಕ್ಕೆ ಕೇವಲ 5 ದಿನಗಳು ಮಾತ್ರ ಉಳಿದಿರುವಾಗ ದೇವದತ್ ಪಡಿಕ್ಕಲ್ ಕೊರೋನಾ ಸೋಂಕಿಗೆ ತುತ್ತಾಗಿರುವುದು ಆರ್​ಸಿಬಿ ತಂಡದ ಚಿಂತೆಗೆ ಕಾರಣವಾಗಿದೆ.

  ಏಕೆಂದರೆ ಈ ಬಾರಿ ಆರ್​ಸಿಬಿ ಪರ ಆರಂಭಿಕರಾಗಿ ಪಡಿಕ್ಕಲ್ ಕಣಕ್ಕಿಳಿಯುವುದು ಖಚಿತವಾಗಿತ್ತು. ಅಲ್ಲದೆ ಎಡಗೈ ದಾಂಡಿಗನಿಗೆ ಸಾಥ್ ನೀಡಲು ನಾಯಕ ವಿರಾಟ್ ಕೊಹ್ಲಿ ಕೂಡ ಓಪನರ್ ಆಗಿ ಈ ಬಾರಿ ಕಣಕ್ಕಿಳಿಯುವುದಾಗಿ ತಿಳಿಸಿದ್ದರು. ಇದೀಗ ದೇವದತ್ ಪಡಿಕ್ಕಲ್ ಮುಂಬೈ ಇಂಡಿಯನ್ಸ್ ವಿರುದ್ಧದ ಮೊದಲ ಪಂದ್ಯಕ್ಕೆ ಅಲಭ್ಯರಾಗುವುದು ಬಹುತೇಕ ಖಚಿತ. ಹೀಗಾಗಿ ಮತ್ತೋರ್ವ ಆರಂಭಿಕನೊಂದಿಗೆ ವಿರಾಟ್ ಕೊಹ್ಲಿ ಇನಿಂಗ್ಸ್ ಆರಂಭಿಸುವ ಸಾಧ್ಯತೆಯಿದೆ.

  ಈ ಪಟ್ಟಿಯಲ್ಲಿ ಮೂವರ ಹೆಸರು ಮುಂಚೂಣಿಯಲ್ಲಿದೆ. ಇವರಲ್ಲಿ ಒಬ್ಬರು ದೇವದತ್ ಪಡಿಕ್ಕಲ್ ಸ್ಥಾನದಲ್ಲಿ ಆರ್​ಸಿಬಿ ಪರ ಆರಂಭಿಕರಾಗಿ ಕಣಕ್ಕಿಳಿಯಬಹುದು. ಅವರೆಂದರೆ...

  ಫಿನ್ ಅಲೆನ್: ಆರ್​ಸಿಬಿ ತಂಡ ವಿದೇಶಿ ಆಟಗಾರನನ್ನು ಆರಂಭಿಕನಾಗಿ ಕಣಕ್ಕಿಳಿಸಲು ಬಯಸಿದರೆ ಸದ್ಯ ಇರುವ ಏಕೈಕ ಆಯ್ಕೆ ಫಿನ್ ಅಲೆನ್. ಪ್ರಸ್ತುತ ಉತ್ತಮ ಫಾರ್ಮ್​ನಲ್ಲಿರುವ ಅಲೆನ್​ರನ್ನೇ ಕಣಕ್ಕಿಳಿಸಬಹುದು. ಏಕೆಂದರೆ ಕೆಲ ದಿನಗಳ ಹಿಂದೆಯಷ್ಟೇ ಬಾಂಗ್ಲಾದೇಶ ವಿರುದ್ಧ ನಡೆದ ಪಂದ್ಯದಲ್ಲಿ ಅಲೆನ್ ಕೇವಲ 29 ಎಸೆತಗಳಲ್ಲಿ 71 ರನ್ ಸಿಡಿಸಿದ್ದರು. ಅಲ್ಲದೆ ಕೇವಲ 18 ಎಸೆತಗಳಲ್ಲಿ ತಮ್ಮ ಮೊದಲ ಅರ್ಧಶತಕವನ್ನು ಪೂರೈಸಿದ್ದರು. ಅತ್ತ ಭರ್ಜರಿ ಹಾಫ್ ಸೆಂಚುರಿ ಬಾರಿಸಿ ಆತ್ಮ ವಿಶ್ವಾಸ ಹೆಚ್ಚಿಸಿಕೊಂಡ ಬೆನ್ನಲ್ಲೇ ಅಲೆನ್ ಆರ್​ಸಿಬಿ ಸೇರಿಕೊಂಡಿದ್ದಾರೆ. ಹೀಗಾಗಿ ಇದೇ ಫಾರ್ಮ್​ನ್ನು ಆರ್​ಸಿಬಿಯಲ್ಲೂ ಮುಂದುವರೆಸುವ ನಿರೀಕ್ಷೆಯಲ್ಲಿ ಫಿನ್ ಅಲೆನ್​ರನ್ನೇ ಆರಂಭಿಕರಾಗಿ ಕಣಕ್ಕಿಳಿಸಬಹುದು.

  ರಜತ್ ಪಾಟಿಧಾರ್: ಆರ್​ಸಿಬಿ ತಂಡದ ಅಭ್ಯಾಸ ಪಂದ್ಯದಲ್ಲಿ ಕೇವಲ 35 ಎಸೆತಗಳಲ್ಲಿ 54 ರನ್ ಬಾರಿಸುವ ಮೂಲಕ ರಜತ್ ಗಮನ ಸೆಳೆದಿದ್ದಾರೆ. ಅಲ್ಲದೆ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲೂ ಕೇವಲ 29 ಎಸೆತಗಳಲ್ಲಿ ಅಜೇಯ 68 ರನ್ ಸಿಡಿಸಿದ್ದರು. ಮಧ್ಯಪ್ರದೇಶದ ಪರ ಆರಂಭಿಕರಾಗಿ ಕಣಕ್ಕಿಳಿದು ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸುವ ರಜತ್, ದೇವದತ್ ಪಡಿಕ್ಕಲ್ ಸ್ಥಾನದಲ್ಲಿ ಕಣಕ್ಕಿಳಿದರೂ ಅಚ್ಚರಿಪಡಬೇಕಿಲ್ಲ.

  ಮೊಹಮ್ಮದ್ ಅಜರುದ್ದೀನ್: ಕೇರಳ ಯುವ ಬ್ಯಾಟ್ಸ್​ಮನ್​ ಅಜರುದ್ದೀನ್, ಈಗಾಗಲೇ ತಾನೆಂತ ಸ್ಪೋಟಕ ಬ್ಯಾಟ್ಸ್​ಮನ್ ಎಂಬುದನ್ನು ನಿರೂಪಿಸಿದ್ದಾರೆ. ಸೈಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಮುಂಬೈ ವಿರುದ್ಧ ಕೇವಲ 54 ಎಸೆತಗಳಲ್ಲಿ 137 ರನ್​ ಸಿಡಿಸಿ ಕೇರಳ ಪರ ಮೊದಲ ಟಿ20 ಶತಕ ಬಾರಿಸಿದ ದಾಖಲೆ ಬರೆದಿದ್ದರು. ಅಲ್ಲದೆ 5 ಪಂದ್ಯಗಳಿಂದ 194.54 ಸ್ಟ್ರೈಕ್​ರೇಟ್​ನಲ್ಲಿ 214 ರನ್ ಕಲೆಹಾಕಿದ್ದರು.

  ಕೇರಳ ಪರ ಟಿ20 ಕ್ರಿಕೆಟ್​ನಲ್ಲಿ ಆರಂಭಿಕನಾಗಿ ಕಣಕ್ಕಿಳಿಯುವ ಅಜರ್ ಬಿಗ್ ಹಿಟ್ಟರ್. ಹೀಗಾಗಿ ಪವರ್​ಪ್ಲೇ ಅನ್ನು ಸಂಪೂರ್ಣ ಸದುಪಯೋಗಪಡಿಸಿಕೊಳ್ಳುವ ಸಾಮರ್ಥ್ಯ ಈತನಿಗಿದೆ. ಹೀಗಾಗಿ ಕೊಹ್ಲಿ ಯುವ ದಾಂಡಿಗನ ಜೊತೆ ಇನಿಂಗ್ಸ್ ಆರಂಭಿಸುವ ಸಾಧ್ಯತೆ ಕೂಡ ಇದೆ. ಇದಲ್ಲದೆ ತಂಡದಲ್ಲಿರುವ ಮತ್ತೋರ್ವ ಆಟಗಾರ ಸಚಿನ್ ಬೇಬಿ ಕೂಡ ಆರಂಭಿಕನಾಗಿ ಕಣಕ್ಕಿಳಿಯುತ್ತಾರೆ. ಹೀಗಾಗಿ ಅನುಭವಿ ಆಟಗಾರನನ್ನು ಆರ್​ಸಿಬಿಗೆ ಬಳಸಿಕೊಳ್ಳುವ ಅವಕಾಶವಿದೆ. ಒಟ್ಟಿನಲ್ಲಿ ಅದ್ಭುತ ಫಾರ್ಮ್​ನಲ್ಲಿದ್ದ ದೇವದತ್ ಪಡಿಕ್ಕಲ್ ಮೊದಲ ಪಂದ್ಯದಿಂದ ಹೊರಗುಳಿಯುತ್ತಿರುವುದು ಆರ್​ಸಿಬಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಇದಾಗ್ಯೂ ಹಲವು ಅತ್ಯುತ್ತಮ ಓಪನಿಂಗ್ ಬ್ಯಾಟ್ಸ್​ಮನ್​ಗಳ ಆಯ್ಕೆ ಇರುವುದು ತುಸು ಸಮಾಧಾನಕರ ಎನ್ನಬಹುದು.
  Published by:zahir
  First published: