IPL- ರಾಯಲ್ಸ್ ತಂಡಕ್ಕೆ ವಿಶ್ವದ ನಂ. 1 ಬೌಲರ್ ಸೇರ್ಪಡೆ; ಆರ್​ಸಿಬಿಗೆ ಗಾರ್ಟನ್ ಶಕ್ತಿ

ದಕ್ಷಿಣ ಆಫ್ರಿಕಾದ ಸ್ಪಿನ್ ಮಾಂತ್ರಿಕ ತಬ್ರೇಜ್ ಶಮ್ಸಿ (Tabraiz Shamsi) ಅವರು ರಾಜಸ್ಥಾನ್ ರಾಯಲ್ಸ್ ತಂಡ ಸೇರಿಕೊಂಡಿದ್ಧಾರೆ. ಇಂಗ್ಲೆಂಡ್ನ ಆಲ್ರೌಂಡರ್ ಜಾರ್ಜ್ ಗಾರ್ಟನ್ (George Garton) ಅವರನ್ನ ಆರ್ಸಿಬಿ ಸೆಳೆದುಕೊಂಡಿದೆ.

ತಬ್ರೇಜ್ ಶಮ್ಸಿ

ತಬ್ರೇಜ್ ಶಮ್ಸಿ

 • Share this:
  ಬೆಂಗಳೂರು: ಟಿ20 ಕ್ರಿಕೆಟ್​ನ ವಿಶ್ವ ನಂಬರ್ ಒನ್ ಬ್ಯಾಟ್ಸ್​ಮನ್ ತಬ್ರೇಜ್ ಶಮ್ಸಿ (Tabraiz Shamsi) ಅವರನ್ನು ಇಂಡಿಯನ್ ಪ್ರೀಮಿಯರ್ ಲೀಗ್ ತಂಡ ರಾಜಸ್ಥಾನ್ ರಾಯಲ್ಸ್ (IPL team Rajasthan Royals) ಸೇರಿಸಿಕೊಂಡಿದೆ. ತಂಡದಲ್ಲಿ ಕೆಲವು ವಿದೇಶೀ ಆಟಗಾರರು ಅಲಭ್ಯರಾಗಿರುವ ಕಾರಣಕ್ಕೆ ದಕ್ಷಿಣ ಆಫ್ರಿಕಾದ ಶಂಸಿಯನ್ನ ಸೇರಿಸಿಕೊಳ್ಳಲಾಗಿದೆ. ರಾಜಸ್ಥಾನ್ ರಾಯಲ್ಸ್ ತಂಡದ ಪ್ರಮುಖ ಆಟಗಾರರಾದ ಜೋಫ್ರಾ ಆರ್ಚರ್, ಜೋಸ್ ಬಟ್ಲರ್ ಮತ್ತು ಆಂಡ್ರ್ಯೂ ಟೈ ಅವರು ಈ ಸೀಸನ್​ನ ಐಪಿಎಲ್​ನಲ್ಲಿ ಆಡಲಾಗುತ್ತಿಲ್ಲ. ಬೆನ್ ಸ್ಟೋಕ್ಸ್ ಕೂಡ ಆಡುವ ಸಾಧ್ಯತೆ ಇಲ್ಲ. ಹೀಗಾಗಿ, ಗ್ಲೆನ್ ಫಿಲಿಪ್ಸ್ ಅವರನ್ನ ಸೆಳೆದಿದ್ದ ರಾಯಲ್ಸ್ ತಂಡ ಇದೀಗ ಸ್ಪಿನ್ನರ್ ತಬ್ರೇಜ್ ಶಮ್ಸಿ ಅವರನ್ನ ಬರಮಾಡಿಕೊಂಡಿದೆ. ಇವರಿಬ್ಬರ ಜೊತೆ ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ ಇರುವ ವಿದೇಶೀ ಆಟಗಾರರೆಂದರೆ ಡೇವಿಡ್ ಮಿಲ್ಲರ್, ಕ್ರಿಸ್ ಮಾರಿಸ್, ಲಿಯಾಮ್ ಲಿವಿಂಗ್​ಸ್ಟೋನ್ ಮತ್ತು ಮುಸ್ತಾಫಿಜುರ್ ರಹಮಾನ್.

  ದಕ್ಷಿಣ ಆಫ್ರಿಕಾದ ತಬ್ರೇಜ್ ಶಮ್ಸಿ ಅವರು ಐಪಿಎಲ್​ನಲ್ಲಿ ಆಡುತ್ತಿರುವುದು ಇದು ಎರಡನೇ ಬಾರಿ. 2016ರ ಸೀಸನ್​ನಲ್ಲಿ ಅವರು ಬೆಂಗಳೂರು ರಾಯಲ್ ಚಾಲೆಂಜರ್ಸ್ (Royal Challengers Bengaluru) ತಂಡದಲ್ಲಿದ್ದರು. ಆಗ ಅಷ್ಟೇನೂ ಪ್ರಭಾವಶಾಲಿಯಾಗದ ಅವರು ಆ ಬಳಿಕ ಸಾಕಷ್ಟು ಮಿಂಚಿದ್ದಾರೆ. ಒಟ್ಟಾರೆ 163 ಟಿ20 ಪಂದ್ಯಗಳನ್ನ ಆಡಿರುವ ಅವರು 183 ವಿಕೆಟ್ ಪಡೆದಿದ್ದಾರೆ. ಇವರ ಆಗಮನವು ರಾಯಲ್ಸ್​ಗೆ ಹೆಚ್ಚಿನ ಆಪ್ಷನ್ಸ್ ಸಿಕ್ಕಂತಾಗಲಿದೆ.

  ಇದನ್ನೂ ಓದಿ: RCB- ಚೊಚ್ಚಲ ಪಂದ್ಯದಲ್ಲಿ ಹ್ಯಾಟ್ರಿಕ್ ಪಡೆದ ವಿಶ್ವದ ಅತಿಕಿರಿಯ ಬೌಲರ್ ಈಗ ಆರ್​ಸಿಬಿ ತಂಡಕ್ಕೆ

  ಆರ್​ಸಿಬಿ ತಂಡಕ್ಕೆ ಜಾರ್ಜ್ ಗಾರ್ಟನ್ (George Garton):

  ಕೆಲ ದಿನಗಳ ಹಿಂದೆ ಪ್ರತಿಭಾನ್ವಿತ ಕ್ರಿಕೆಟಿಗರಾದ ಶ್ರೀಲಂಕಾದ ವನಿಂದು ಹಸರಂಗ ಮತ್ತು ದುಷ್ಯಂತಾ ಚಮೀರಾ ಹಾಗೂ ಆಸ್ಟ್ರೇಲಿಯಾದ ಟಿಮ್ ಡೇವಿಡ್ ಅವರನ್ನ ತಂಡಕ್ಕೆ ಸೇರಿಸಿಕೊಂಡಿದ್ದ ಆರ್​ಸಿಬಿ ಇದೀಗ ಮತ್ತೊಬ್ಬ ಕ್ರಿಕೆಟ್ ಪ್ರತಿಭೆ ಜಾರ್ಜ್ ಗಾರ್ಟನ್ ಅವರನ್ನ ಸೇರಿಸಿಕೊಂಡಿದೆ. ಐಪಿಎಲ್​ನಿಂದ ಹೊರಹೋಗಿರುವ ಕೇನ್ ರಿಚರ್ಡ್ಸನ್ ಅವರ ಸ್ಥಾನಕ್ಕೆ ಬೌಲಿಂಗ್ ಆಲ್​ರೌಂಡರ್ ಗಾರ್ಟನ್ ಅವರನ್ನ ಕರೆತರಲಾಗಿದೆ. ಇಂಗ್ಲೆಂಡ್​ನ ಎಡಗೈ ವೇಗದ ಗೌಲರ್ ಜಾರ್ಜ್ ಗಾರ್ಟನ್ ಅವರಿಗೆ ಇದು ಮೊದಲ ಐಪಿಎಲ್ ಸೀಸನ್ ಆಗಿದೆ. ಒಳ್ಳೆಯ ಬೌಲರ್ ಆಗಿರುವ ಅವರು ಉತ್ತಮ ಬ್ಯಾಟಿಂಗ್ ಕೂಡ ಮಾಡಬಲ್ಲರು. ಸದ್ಯ ಇಂಗ್ಲೆಂಡ್​ನ ಸ್ಥಳೀಯ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಆಡುತ್ತಿರುವ ಅವರು ಸೆಪ್ಟೆಂಬರ್ 18ರ ಬಳಿಕ ಆರ್​ಸಿಬಿಗೆ ಲಭ್ಯ ಇರಲಿದ್ದಾರೆ. ಕೊರೋನಾ ಕಾರಣದಿಂದ ಅರ್ಧಕ್ಕೆ ಸ್ಥಗಿತಗೊಂಡಿದ್ದ ಇಂಡಿಯನ್ ಪ್ರೀಮಿಯರ್ ಲೀಗ್ ಮುಂದಿನ ತಿಂಗಳು ದುಬೈನಲ್ಲಿ ಮುಂದುವರಿಯಲಿದೆ. ಆರ್​ಸಿಬಿಯ ಪಂದ್ಯ ಸೆ. 20ರಂದು ಕೆಕೆಆರ್ ವಿರುದ್ಧ ಇದೆ.

  ಸೆ. 24 ಚೆನ್ನೈ ಸೂಪರ್ ಕಿಂಗ್ಸ್, ಸೆ. 26 ರಾಜಸ್ಥಾನ್ ರಾಯಲ್ಸ್, ಅ. 3 ಪಂಜಾಬ್ ಕಿಂಗ್ಸ್, ಅ. 6 ಹೈದರಾಬಾದ್ ಸನ್ ರೈಸರ್ಸ್, ಅ. 8 ಡೆಲ್ಲಿ ಕ್ಯಾಪಿಟಲ್ಸ್ ತಂಡಗಳ ವಿರುದ್ಧ ಬೆಂಗಳೂರು ಆಡಲಿದೆ. ಈವರೆಗೆ ಏಳು ಪಂದ್ಯಗಳನ್ನಾಡಿರುವ ರಾಯಲ್ ಚಾಲೆಂಜರ್ಸ್ ಪಡೆ ಅಂಕಪಟ್ಟಿಯಲ್ಲಿ 10 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ಹಿಂದಿನ ಬಹುತೇಕ ಋತುಗಳಿಗಿಂತ ಈ ಬಾರಿ ಆರ್​​ಸಿಬಿ ಬಲಿಷ್ಠವಾಗಿ ತೋರುತ್ತಿದೆ. ಇದೂವರೆಗೂ ನನಸಾಗದ ಪ್ರಶಸ್ತಿಯ ಕನಸು ಈ ಬಾರಿ ಈಡೇರುವ ಸಾಧ್ಯತೆಯಂತೂ ತುಸು ದಟ್ಟವಾಗಿದೆ.

  ಇದನ್ನೂ ಓದಿ: ಕೊಹ್ಲಿ ಬ್ಯಾಟಿಂಗ್​ನಲ್ಲಿದೆ ಈ ಹುಳುಕು; ಸಚಿನ್ ನೆರವು ಪಡೆಯಲು ಸುನೀಲ್ ಗವಾಸ್ಕರ್ ಸಲಹೆ

  (ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.)
  Published by:Vijayasarthy SN
  First published: